ನಾವೆಲ್ಲರೂ ಮನೆಯಲ್ಲೇ ಇದ್ದೇವೆ
ರೇಖಾಭಟ್
ನಾವೆಲ್ಲರೂ ಮನೆಯಲ್ಲೇ ಇದ್ದೇವೆ
ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ
ಅಡುಗೆಮನೆ ಈಗ ಕೇಂದ್ರ ಸ್ಥಾನ
ಟಿ.ವಿ ಹಾಲ್ ನಮ್ಮ ಆಸ್ಥಾನ
ಬೀದಿಗಂತೂ ಹೋಗೋದಿಲ್ಲ
ಅದಂತೂ ಈಗ –
ಖಬರಸ್ಥಾನ!
ಮಾವನ ವಾಕಿಂಗ್ ಸ್ಟಿಕ್ ಗೋಡೆ
ಮೂಲೆಯಲ್ಲೆ ನಿದ್ರೆಗೆ ಜಾರಿದೆ!
ಅತ್ತೆಯ ಹೂವಿನ ಚೊಬ್ಬೆ
ದೇವಸ್ಥಾನ ಮರೆತು ಬೊರಲು ಬಿದ್ದಿದೆ!
ಪುಟ್ಟ ಪಿಂಕ್ ಸೈಕಲ್
ಮರದ ಬುಡದಲಿ ಒರಗಿ ನಿಂತು
ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ!
ಕೊರೊನಾ ಬೂತದ ಚಿತ್ರ ಬಿಡಿಸಿ
ಅದಕ್ಕೆ ಕ್ರಾಸ್ ಮಾರ್ಕ್ ಹಾಕಿ
ಆಗಾಗ ಕಿಟಕಿಯಲ್ಲಿ ಹಣಕುವ
ಮಗಳ ಕಣ್ಣೊಳಗಿನ
ಬಣ್ಣವೂ ತುಸು ಕಡಿಮೆಯೇ ಆಗಿದೆ
ಕಂಪ್ಯೂಟರೊಳಗೆ ಹೊಕ್ಕು
ಇ ಪೇಪರ್ ಓದುತ್ತ
ಆಗಾಗ ಕೊರಾನಾ ಅಂಕಿ ಅಂಶ
ವರದಿ ಮಾಡುವ ಅವಳಪ್ಪನೋ
ಬಂಧಿತ- ಕಾಲು ಸುಟ್ಟ ಬೆಕ್ಕು-
ಆದರೂ ಹೊತ್ತು ಸರಿಯುತ್ತಿದೆ
ಅದಕೆ ಕಾರಣ ಇಂಟರ್ ನೆಟ್ಟು!!
ಒಮ್ಮೆ ಗ್ರೀನ್ ಟೀ
ಮತ್ತೊಮ್ಮೆ ಕಷಾಯ
ತುಸು ಹೊತ್ತಿಗೆ ಚಹಾ
ಬಿಸಿಲೇರಲು ಮಜ್ಜಿಗೆ ಬೆಲ್ಲ
ಈ ದಾಹ ಹೆಚ್ಚುತ್ತಿರುವುದು
ಬಿಸಿಲಿಗೊ, ಆತಂಕಕ್ಕೊ
ಅರ್ಥವಾಗುತ್ತಿಲ್ಲ
ಮನೆಯೊಳಗಿನ ಬಿಸಿಯ
ಹೊರಹಾಕಲು ಫ್ಯಾನ್
ಇಪ್ಪತ್ತ್ನಾಲ್ಕು ಗಂಟೆ ತಿರುಗುತ್ತಿದೆ
ಒಳಗುದಿಯ ಹೊರಹಾಕಲಾರದ ನಾನು
ಯಾವ ಕವಿತೆಯನ್ನು ಪೂರ್ತಿ
ಬರೆಯಲಾಗದೇ
ಪೂರ್ಣವಿರಾಮ ಇಡುತ್ತಿದ್ದೇನೆ!
*******************
ಧನ್ಯವಾದಗಳು ..
ಪ್ರಚಲಿದಲ್ಲಿನ ವಿಲಕ್ಷಣ ದಿನಚರಿಯ ಚಿತ್ರಣ.