ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ

ಮಕ್ಕಳು ದೇವಲೋಕದ ಪುಷ್ಪಗಳಿದ್ದಂತೆ”ಎಂಬ ಮಾತಿದೆ.ಮುಗ್ಧ ಮನಸಿನ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಆಗಿರುತ್ತಾಳೆ.ಮಕ್ಕಳು ದೇವರಿಗೆ ಸಮಾನ ಯಾಕೆಂದರೆ ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಮೋಸ, ದ್ವೇಷ ಅರಿಯದ ತಿಳಿನೀರಿನಂತೆ ಶುದ್ಧ ಭಾವನೆಗಳಿರುತ್ತವೆ.
ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಜಂಗಮವಾಣಿ(ಮೊಬೈಲ) ಒಂದಿದ್ದರೇ ಏನೂ ಬೇಡ,ಯಾರೂ ಬೇಡ ಎಂಬ ಸಂಗತಿಯನ್ನು ನೆನೆದಾಗ ಪಾಲಕರಾದ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕೊಂಚ ಶ್ರಮ ಪಡುವ ಅನಿವಾರ್ಯತೆ ಅವಶ್ಯಕತೆ ತುಂಬಾ ಇದೆ.ಚಿಕ್ಕಮಕ್ಕಳು ಗಿಲಿಗಿಂಚಿ ಹಿಡಿವ ಬದಲು ಈ ಜಂಗಮವಾಣಿಯ ಗಾನಕ್ಕೆ ಮನಸೋತು ತಾಯಂದಿರ ಲಾಲಿ ಹಾಡಿನ ಶ್ರಮವನ್ನು ಕಡಿಮೆ ಮಾಡಿದ್ದಾರೆ. ಚಂದಮಾಮನ ತೋರಿಸಿ ಊಟ ಮಾಡಿಸುವ ಬದಲು ಜಂಗಮವಾಣಿಯನ್ನು ತೋರಿಸುತ್ತ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಯಾರಾದರೂ ನೆಂಟರು ಊರಿನಿಂದ ಬಂದಾಗ ಉಭಯ ಕುಶಲೋಪರಿ ವಿಚಾರಿಸುವ ಬದಲು ಜಂಗಮವಾಣಿಯಲ್ಲಿ ನೋಡಿ ಕಲಿತ ಇಂಗ್ಲೀಷ ಶಿಶುಗೀತೆಗಳ ಬಣ್ಣಗಳ ಹೆಸರು ಹೇಳಿ ತಮ್ಮ ಮಕ್ಕಳ ಪಾಂಡಿತ್ಯ ಪ್ರದರ್ಶಿಸುವ ಅದ್ಭುತ ಸನ್ನಿವೇಶಗಳು ಸಹಜವಾಗಿವೆ.ಆಗತಾನೆ ಆನ್ಲೈನ ತರಗತಿ ಮುಗಿಸಿದ ಎರಡನೇ ತರಗತಿಯ ಬಾಲಕಿ ಈಗ ನನ್ನ ತರಗತಿ ಮುಗಿಯಿತು. “ನೀನೆ ಹೇಳಿದ್ದಿಯಲ್ಲ ಅಮ್ಮ, ಮೊದಲು ನಿನ್ನ ತರಗತಿ ಮುಗಿಯಲಿ ಆಮೇಲೆ ಗೇಮ್ ಅಂದಿದ್ದೆ.. ಎಂದು ನೆನಪಿಸುತ್ತ ಜಂಗಮವಾಣಿಯನ್ನುತನ್ನ ಕೈಗೆ ತೆಗೆದುಕೊಂಡಳು‌.


” ಒಂದು ಮನೆಯಲ್ಲಿ ಎರಡು ಮಕ್ಕಳಿದ್ದರೆ ತಂದೆಯ ಜಂಗಮ ವಾಣಿಯನ್ನು ಸರದಿ ಪ್ರಕಾರ ಕಾಡಿಸಿ ಪಡೆದು ಆಟವಾಡುವ ಮಕ್ಕಳಿಗೆ ತುಂಬಾ ಸಂತಸ.
ಆಗತಾನೇ ಆನ್ಲೈನ ತರಗತಿ ಮುಗಿಸಿದ ನನ್ನ ತಂಗಿಯ ಮಗಳು ಕೂಡಾ ಅದರಲ್ಲಿ ಆಟವಾಡುವುದಾಗಿ ಹೇಳಿದಾಗ ಇದರ ಬಗ್ಗೆ ಮುಂಚೆ ನನ್ನ ತಂಗಿ ಈ ವಿಷಯವನ್ನು ಹಲವಾರು ಬಾರಿ ಪ್ರಸ್ತಾಪಿಸಿದ್ದರಿಂದ ಆಗ ನಾನು ಅವಳಿಗೆ ಪಂಚತಂತ್ರ ಕಥೆಗಳ ಕೆಲವು ಪುಸ್ತಕಗಳನ್ನು ನೀಡಿ,”ನೋಡು ಪುಟ್ಟಿ ಈ ಪುಸ್ತಕ ಓದಿ ನನಗೆ ಇನ್ನೊಮ್ಮೆ ಬಂದಾಗ ನನಗೆ ಕಥೆಹೇಳಬೇಕು “ಎಂದಾಗ ಅವಳಿಗೆ ತುಂಬ ಖುಷಿಯಾಗಿ ಅದರಲ್ಲಿನ ಆಕರ್ಷಕ ಚಿತ್ರಗಳನ್ನು ನೋಡಿ ಸಂತೋಷ ಪಟ್ಟಳು.ಮತ್ತೊಮ್ಮೆ ಅವರ ಮನೆಗೆ ಹೋದಾಗ ನನ್ನನ್ನು ನೋಡಿ ಓಡಿಬಂದು ಕಥೆಯನ್ನು ಹೇಳಿ ತನಗೆ ಮತ್ತೆ ಕಥೆಪುಸ್ತಕಗಳು ಬೇಕೆಂದಾಗ ಅವಳ ತಾಯಿಯ ಮೊಗದಲ್ಲಾದ ಸಂತೋಷ ಅಷ್ಟಿಷ್ಟಲ್ಲ .ಜಂಗಮವಾಣಿಯ ಜಪ ಬಿಟ್ಟು ಓದುವ ಹವ್ಯಾಸದೊಂದಿಗೆ ಆ ಪುಸ್ತಕದಲ್ಲಿರುವ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸಿ ಬಣ್ಣ ಕೂಡ ತುಂಬಿದ್ದಳು.ಆದ್ದರಿಂದ ನಾವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಾಗಿದೆ.ಮೊದಲೆಲ್ಲ ರಜಾ ದಿನಗಳಲ್ಲಿ ಊರಿಗೆ ಹೋದಾಗ ಅಜ್ಜ-ಅಜ್ಜಿಹೇಳಿದ ಕಥೆಗಳು ನಮಗೆ ಇನ್ನೂ ನೆನಪಿವೆ ಅಲ್ವಾ?ಕಥೆಯ ಮಧ್ಯೆ ಮುಂದೇನಾಯ್ತು?ಹಾಗೇಕಾಯ್ತು? ಎಂಬ ಕೌತುಕಭರಿತಪ್ರಶ್ನೆಗಳು ಮಕ್ಕಳಲ್ಲಿ ಆಲೋಚನಾ ಶಕ್ತಿ ಕಲ್ಪನಾಶಕ್ತಿ ಹೆಚ್ಚಿಸಿ ಆಲಿಸಿದ ಕಥೆಯನ್ನು ತನ್ನ ತೊದಲು ಮುಗ್ಧ ಭಾಷೆಯಲ್ಲಿ ಹೇಳುತ್ತದೆ.ಇದರಿಂದ ಮಕ್ಕಳ ಅಭಿವ್ಯಕ್ತಿಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ.ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬಂತೆ ಮಕ್ಕಳ ಭಾವಭಿತ್ತಿಯಲಿ ಓದುವ ಚಿತ್ತವನ್ನು ಅವರಿಗೆ ಇಷ್ಟವಾದ ರಿತಿಯಲ್ಲಿ ಬೆಳೆಸಬಹುದು.ಇದರಿಂದ ಮಕ್ಕಳಲ್ಲಿ ಸಂವಹನಾ ಕೌಶಲ್ಯ ಕೂಡ ವೃದ್ಧಿಯಾಗತ್ತದೆ.ಯಾರಾದರೂ ಅತಿಥಿಗಳು ಮನೆಗೆ ಬಂದರೆ ಅಮ್ಮ ಯಾರೋ ಬಂದಿದ್ದಾರೆ ಎನ್ನುವ ಮಕ್ಕಳಿಗೆ ಬಂದವರನ್ನು “ಒಳಗೆ ಬನ್ನಿ ಕುಳಿತುಕೊಳ್ಳಿ”ಎಂಬ ಸೌಜನ್ಯದ ಪಾಠ ಕಲಿಸುವದು ಕೂಡ ಇಂದು ತುಂಬ ಅನಿವಾರ್ಯವಾಗಿದೆ.
ಪ್ರಸ್ತುತ ಸನಿವೇಶದಲ್ಲಿ ನಗರೀಕರಣ,ಔದ್ಯೋಗಿಕರಣದಿಂದ ಪಟ್ಟಣಕ್ಕೆ ವಲಸೆಹೋದ ಕುಟುಂಬಗಳ ಮಕ್ಕಳು ಪಂಜರದ ಪಕ್ಷಿಗಳಂತೆ ಜಂಗಮವಾಣಿಯ ಜೊತೆ ಬೆಳೆಯುವ ಮಕ್ಕಳಿಗೆ ಮನೆ ಬಿಟ್ಟು ಹೊರ ಪ್ರಪಂಚದೊಡನೆ ವ್ಯವಹರಿಸುವ ಕೌಶಲಗಳು ಅವಶ್ಯವಾಗಿಬೇಕು.ಕೇವಲ ಅಂಕಗಳಿಗೆ ಬೆನ್ನು ಹತ್ತಿ ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸದೇ ಮಕ್ಕಳೊಡನೆ ಪಾಲಕರು ಬಿಡುವಿನ ವೇಳೆಯಲ್ಲಿ ಅವರ ಸ್ನೇಹಿತರಂತೆನಡೆದುಕೊಳ್ಳಬೇಕು.ತಮಗೆ ಬಿಡುವಿದ್ದಾಗ ತೋಟದಲ್ಲಿ ಸಸಿನೆಟ್ಟು ಬೆಳೆಸುವ ಚಿತ್ರ ಬಿಡಿಸುವ ವಿವಿಧ ವಸ್ತುಗಳನ್ನು ಸಂಗ್ರಹಿಸುವ ಪುಸ್ತಕ ಓದುವ ಹಾಡು,ನೃತ್ಯ,ಕರಾಟೆ,ಆಟ ಹೀಗೆ ಹಲವಾರು ಹವ್ಯಾಸಗಳ ಬಗ್ಗೆ ತಿಳಿಸಿ ಪ್ರೋತ್ಸಾಹಿಸಬೇಕು.ಇದರಿಂದ ಮಗು ತನ್ನ ಬಿಡುವಿನ ವೇಳೆಯಲ್ಲಿ ತನಗಿಷ್ಟವಾದ ಹವ್ಯಾಸವನ್ನು ಮೈಗೂಡಿಸಿಕೊಂಡು ಅದರಲ್ಲಿ ವಿಶೇಷವಾಗಿ ಪ್ರತಿಭೆಯನ್ನು ಹೊಂದುತ್ತದೆ ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸ, ಛಲ ,ತಾಳ್ಮೆ ,ಕ್ರಿಯಾಶೀಲತೆಯಿಂದ ಸೃಜನ ಶೀಲ ಮಗುವಾಗಿ ಸಮಾಜದಲ್ಲಿ ಉತ್ತಮ

ನಾಗರೀಕನಾಗುವದರೊಂದಿಗೆ ದೇಶದ ಪ್ರಗತಿಗೆ ಅತ್ಯುತ್ತಮ ಮಾನವಸಂಪನ್ಮೂಲವಾಗಲು ಸಾಧ್ಯ.ಇದರೊಂದಿಗೆ ಕರುಣೆ ತನ್ನ ಶಾಲೆ,ಊರು,ದೇಶದ ಬಗ್ಗೆ ಅಭಿಮಾನ ಪರೋಪಕಾರದಂತ ಮೌಲ್ಯಗಳು ಮೇಳೈಸಿ ಮನುಜ ಮತ ವಿಶ್ವ ಪಥದೆಡೆಗೆ ಸಾಗುವಲ್ಲಿ ಸಂಶಯವಿಲ್ಲ.

ಆದ್ದರಿಂದ ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ನಾಳಿನ ನಾಗರೀಕರಾಗುವ ಮಕ್ಕಳಲ್ಲಿ ಉತ್ತಮ ಹವ್ಯಾಸಗಳ ಸಂಸ್ಕಾರ ಅತಿ ಅವಶ್ಯವಾಗಿದೆ.ಶಾಲೆಯನ್ನು ಸಮಾಜದ ಪ್ರತಿಬಿಂಬ ಎನ್ನುತ್ತಾರೆ ಕುಟುಂಬದಲ್ಲಿ ಚಿಗುರೊಡೆದ ಮೌಲ್ಯದ ಬೇರುಗಳು ಉತ್ತಮವಾಗಿ ಬೆಳೆಯುವಂತೆ ಅವಕಾಶ ಕಲ್ಪಿಸಲಾಗುತ್ತಿದೆ,”The change of the work is rest”ಎಂಬುವಂತೆ ಮಕ್ಕಳು ಬಿಡುವಿನ ವೇಳೆ ಉತ್ತಮ ಹವ್ಯಾಸಗಳಲ್ಲಿ ತಲ್ಲೀನರಾಗುವಂತೆ ಮಾಡುವಲ್ಲಿ ಪಾಲಕರ ಜವಾಬ್ದಾರಿ ಗುರುತರವಾಗಿದೆ.

——-

ಭಾರತಿ ಕೇ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

2 thoughts on “

Leave a Reply

Back To Top