ಮಕಮಲ್ ಶಾವಿಗೆ ಮತ್ತು‌ ಊರ ಉಸಾಬರಿ!ಜಯಶ್ರೀದೇಶಪಾಂಡೆಯವರ ಲಲಿತ ಪ್ರಬಂಧ

ಪ್ರಬಂಧ ಸಂಗಾತಿ

ಜಯಶ್ರೀದೇಶಪಾಂಡೆ

ಮಕಮಲ್ ಶಾವಿಗೆ ಮತ್ತು‌ ಊರ ಉಸಾಬರಿ!

(ನೆನಪು ಒದ್ದುಕೊಂಡು ಬರ್ತದೆ ಅಂತೆಲ್ಲ ಹೇಳಿದ್ದು, ಬರ್ದಿದ್ದು ಕಂಡಿದ್ದೆ ಓದಿದ್ದೆ, ಸಂಬಂಧ-ಸೂತ್ರವೇ ಇಲ್ಲದ ಹೊತ್ತು, ಯಾವುದೋ ಗೋಲಾರ್ಧದಲ್ಲಿನ ಅರಿಯದ ಜಾಗ, ಮುಂದೆ ಕೂತಿದ್ದ ಆಹಾರದ ಬಗ್ಗೆ ಕೊಂಚ ಅನುಮಾನ..ಎಲ್ಲಾ ಕುಣಿದು ಇದು ಕಾಡಿದ್ದರ ಬಗ್ಗೆ ಹೇಳಬೇಕು..ಅಂದರೆ)

‘ಹೇರ್ ಲೈನ್ ಸ್ಫೆಗೆಟಿ..ನೋಡು ನಮ್ಮ ಶಾವಿಂಗೀ ಥರನೆ ಇರ್ತಾವ’ ಮಗಳು ಹೇಳಿದ್ಲು. ಸ್ಪಾನಿಶ್ ರೆಸ್ಟುರಾ, ಗೋಡೆಗೋಡೆಗಳೊಳಗಿಂದ ರಿಕಿ ಮಾರ್ಟಿನ್ ಕಂಠದೊಳಗೆ ಪ್ರಪಂಚ ಇಡೀ ಹುಚ್ಚೆಬ್ಬಿಸಿದ್ದ ‘ಊನ್ ದೋಸ್ ತ್ರೇಸ್ ಪಾಸಿತೋಬಾಲಾ ತೇ ಮರೀಯಾ..’ ಹಾಡಿಸುತ್ತ ದೊಡ್ಡ ತಟ್ಟೆತುಂಬ ಮೇಕಪ್ ಮಾಡ್ಕೊಂಡಂಥಾ ಸ್ಫೆಗೆಟಿ ತಂದು ನನ್ನ ಮುಂದೆ ಇಟ್ಟಿತ್ತು..‌
ಅದು ಎಲ್ಲಿ ಕರ್ಕೊಂಡು ಹೋಗಬೇಕು ನನ್ನ?
ಮೂಲಬೇರುಗಳ ಕಾಲಬುಡಕ್ಕೆ!
**
” ಎರಡು ಸೊಲಿಗಿ ಸಜ್ಜಿಗೀ ಪಿಟ್ಟೆ ತಯಾರ ಮಾಡಿಟ್ಟಾತು ಮಾಯೀ, ನೇವೇದ್ಯಾಕ್ಕಿಡೂ ಶಾಂವಿಗೀ ಯಾವಾಗ ಮಾಡೂಣಂತೀರಿ ಹೇಳ್ರಿ..”
ಮೂರು ಸೊಲಿಗಿ ಅಳತೆಯ ಹಿತ್ತಾಳೆ ತಪ್ಪೇಲಿ ಗಂಗಕ್ಕನ ಬಗಲೊಳಗೆ ಕೂತು ನಮ್ಮನೆ ಕಡೆ ಪ್ರಯಾಣ ಹೊರಟಿತ್ತು. ಜೊತಿಜೊತೀಗೇ ಅವರ ಕಂಚು ತೀಡಿದ ಧ್ವನಿಯ ಉದ್ಘೋಷ…ತಪ್ಪೇಲಿಯೊಳಗೆ ಬೆಳದಿಂಗಳಂಥಾ ಸಜ್ಜಿಗೀ ಪಿಟ್ಟೆ. ಅಂತಿಂಥಾ ಗೋದಿ ಅಲ್ಲ, ಪಕ್ಕಾ ತೊನಶಾಳ ಹೊಲದ ಗೋದಿ, ಡೋಣಿ ನದಿ ನೀರು ಕುಡಿದ ಗೋದಿ… ಸಜ್ಜಿಗೀ ಪಿಟ್ಟೆ ಅರ್ಥಾತ್ ಗೋಧಿಗೆ ನೀರು ಹಚ್ಚಿ ತೊಳೆದು ಒಣಗಿಸಿ, ಬೀಸುವ ಕಲ್ಲಿನೊಳಗೆ ರವಾ ಬೀಸಿ ಒಡೆದು ವಸ್ತ್ರಗಾಳ (ದೊಡ್ಡ ಪ್ರಮಾಣದ ಪಾತ್ರೆಗೆ ತೆಳುವಾದ ಸೀರೆ ಅಥವಾ ಧೋತರ ಸುತ್ತಿಕಟ್ಟಿ ಅದರೊಳಗೆ ಬೀಸಿದ ಪುಡಿ ಹಾಕಿ ಕೈಯಿಂದ ಗಿರಗಿರನೇ ತೀಡುತ್ತ ರವೆ ಮತ್ತು ಅತ್ಯಂತ ನುಣ್ಣಗಿನ ಹಿಟ್ಟನ್ನು ಬೇರ್ಪಡಿಸೋದು) ಇದು ಸುಲಭ ಅಲ್ಲ, ಬಹಳ ಪರಿಶ್ರಮ, ಕಾಳಜೀಪೂರ್ವಕ ತಯಾರು ಮಾಡಬೇಕಾದ ಕಚ್ಚಾ ಸಾಮಗ್ರಿ. ಈಗಿನ ಥರ ಅಂಗಡಿಗೆ ಹೋಗಿ ಒಂದಿಷ್ಟು ಬಿಳೀ ಬ್ಲೀಚ್ ಸ್ನಾನ ಮಾಡ್ಕೊಂಡ ರವಾ, ಅದಕಿಂತಾ ಹೆಚ್ಚು ಬ್ಲೀಚ್ ಸುರ್ಕೊಂಡ ಮೈದಾ ತಂದು ಕಲಿಸಿ ಯಂತ್ರದೊಳಗೆ ಪಿಸಿಪಿಸಿ ಅಂತ ಒತ್ತಿ ಇನ್ಸ್ಟಂಟ್ ಒಣಗಿಸಿ ಕುದಿಸಿ ತಿಂದು ಹಾಕುವ ಶಾವಿಗೆ ಅಲ್ಲ ಅವು..

ಹಾಲಿನೊಳಗೆ ಕಲಿಸಿಕೊಂಡ ಸಜ್ಜಿಗೀ ಪಿಟ್ಟೆ ಗಂಗಕ್ಕ, ಸೋನಕ್ಕರ ಎಕ್ಸ್ ಪೀರಿಯನ್ಸ್್ಡ ಕೈಯೊಳಗೆ , ತುಪ್ಪದೊಳಗೆ ಹೊರಳಾಡಿಕೋತ ಕಲ್ ಬತ್ತಾದ ಮೇಲೆ ದಬಾ ದಬಾ ಮೈ ಗುದ್ದಿಸಿಕೊಂಡು ಮೆತ್ತಗಾಗಿ-ಮೊದಲಿನ ಉಳ್ಳಿ ಹೆಬ್ಬಟ್ಟಿನಷ್ಟು,-ಯಾಕೋ ಅದು ಚಿಣಿಗೀ ಹಾವು ಸುತ್ತಿಟ್ಟಂಗ ಕಾಣಸ್ತಿತ್ತು ನನಗೆ, ಒಮ್ಮೆ ಆ ಮಾತು ಆಡಿ ಬೈಸಿಕೊಂಡಿದ್ದೆ! ಅದರಿಂದ ಕೆಳಗೆ ನಡುಬಟ್ಟಿನಷ್ಟು, ಅದರಕಿಂತಾ ಕೆಳಗೆ ಕಿರುಬಟ್ಟು ಮತ್ತು ಕಡೇದು ಊದುಬತ್ತಿಯಷ್ಟು ದಪ್ಪದ ಉಳ್ಳಿ.‌ ಬಿಚ್ಚಿಟ್ಟ್ರೆ ಒಂದೊಂದೂ ಹತ್ತು ಫೂಟಿಗಿಂತ ಕಮ್ಮಿ ಇಲ್ಲದ ಹಸಿ ಹಿಟ್ಟಿನ ಚಕ್ರಗಳು.. ಎಷ್ಟು ಇಂಥಾವು? ಕನಿಷ್ಟಪಕ್ಷ ನೂರು!
ಹಂಡೇ ಗಾತ್ರದ ತಾಬಾಣ, ಪರಾತ, ಸ್ಟೀಲಿನ ಬುಟ್ಟಿ ತುಂಬಿಕೊಂಡು, ಮೈ ಮೇಲೆ ತೆಳ್ಳನ್ನ ಆರುಗಜದ ವಾಯಿಲ್ ಪತ್ತಲದ ಒಗೆದು ಹಿಂಡಿಸಿಕೊಂಡ ಒದ್ದೆಯನ್ನು ಹೊದ್ದುಕೊಂಡು ಹಿತ್ತಲ ಪಡಸಾಲೆ ಅರ್ಧಾ ಜಾಗ ಹಿಡ್ಕೊಂಡು ಕೂತರ ಒಂದಿಡೀ ದಿನದ ಕಾರ್ಖಾನೆ ಎದ್ದ ಲೆಕ್ಕ!
ಇನ್ನು ಶಾಂವಿಗೆ ಟೀಮಿನಲ್ಲಿ ಹಿಟ್ಟಿಗೆ ಕೈ ಹಚ್ಚುವ ಹಲವರು, ಪದ್ಮಾವತಿ ಅಥವಾ ಪದ್ದಿ, ಹಿಂದಿನ ಓಣಿಯ ಕಮಲಾಬಾಯಿ… ದೊಡ್ಡ ಬಂಗ್ಲೆಯ ಅರುಂಧತಿ, ಉಷಾಕಾಕೂ- ಇವರ ಬಳಿ ಲಕ್ಷಾವಧಿ ಮುಂಬೈ ಸುದ್ದಿಗಳಿರ್ತಿದ್ವು ಎಂದು ನೆನಪು, ತವರು ಮನಿ ಅಂದರೆ ಗೊತ್ತಲ್ಲ? 😊 ಸುಲಭಾವೈನೀ, ಮನೋರಮಾ ಮಾಮಿ, ಪಡಗಾನೂರ ಸೀತಾಕಕ್ಕಿ, ಶಾಂತಕ್ಕ… ಎಲ್ಲರ ಜೋಡಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ನಾನು! ಇಡೀ ಟೀಮಿಗೆ ಮುಖಂಡರಾಗಿ ಶಾಂವಿಗೆ ಯಜ್ಞದ ಅಧ್ವೈರ್ಯರುಗಳಾಗಿ ಗಂಗಕ್ಕ, ಸೋನಕ್ಕ..

ಗಂಗಕ್ಕ ತಪ್ಪೇಲಿ ಹಿಡಿದು ಬಂದಾಗ ಹಿಂದೇನೇ ಸೋನಕ್ಕ, “ಮಾಯೀ, ಮೂರು ಸೊಲಿಗಿ ನಂದೂ ತಯಾರಾಗೇದ, ನೀವು ಸಹೀ ಹಾಕಿದ ದಿನಾ ಟೀಂ ಹಜರ್ ಶಾಂವಿಗಿಗೆ”
ಮಾಯಿ ನಗ್ತಾರ. ಇವರೆಲ್ಲಾ ಇದ್ದದ್ದಕ್ಕೇ ಐದಾರು ಸೊಲಿಗಿ ಶಾಂವಿಗೆ ಆಡಾಡ್ತ ಆಗಿ ಹೋಗ್ತದ.
ನೇವಿದ್ಯಾ ಶಾವಿಗಿ ಅಂದ್ರ ಇನ್ನೊಂದು ಪುರಾಣಪುಠ್ಠೇನೇ.. ಹಸ್ತ ಮಡೀ ಇರಬೇಕು ಅಥವಾ ಏಕಾದಶಿ ಬರಬೇಕು, ‘ಶಾವಿಗೀ ಕಣಕಾ ಕಲಸ್ಲಿಕ್ಕೆ ನಸುಕಿನೊಳಗ ಎದ್ದು ಧಾಬಳೀ ಉಟ್ಗೊಂಡು ಕೊಡಾ ತುಂಬತೀನಿ ತಡ್ರಿ..’ ಅಂತ ಗಂಗಕ್ಕನ ಘೋಷಣಾ ಆಗಬೇಕು. ‘ಹಶೀ ಹಾಲು ಎತ್ತಿಡೋ ಬಾಬ್ಯಾ’ ಎಂದು ಆಕಳ ಹಿಂಡಿ ಕೊಡುವ ಬಾಬಣ್ಣನಿಗೆ ತಾಕೀತು ಮಾಡಬೇಕು. “ಕಡಿಗಿ ಮುಟ್ಟಿನವರು ನಮ್ಮನ್ಯಾಗ ಬಂದು ಮಲಗ್ರಿ” ಎಂದು ಹದಿನಾಲ್ಕರಿಂದ ನಲವತ್ತೈದರ ವರೆಗಿನ ಜಡೆ, ತುರುಬು, ಹೇರ್ ಕಟ್ಟಿನ ‘ಮಂಥ್ಲೀ ಕೋರ್ಸ್’ ಕೂಡುವ ಕೆಟೆಗರಿಯ ಹೆಣ್ಣು ತಂಡಕ್ಕೆ ಖಡಕ್ ಆಹ್ವಾನ ಕೊಟ್ಟರೆ ನೇವೇದ್ಯಾ ಶಾಂವಿಗೀ ಮಾಡುವ ಟೈಮ್ ಟೇಬಲ್ ತಯಾರಾಯ್ತು ಅಂತ ಲೆಕ್ಕ. ಹಾಂ, ತಿಂಗಳ ಮುಟ್ಟಿನ ದೋಷ ಅಂತಲ್ಲ, ಆ ಸಮಯದಲ್ಲಿ ಸಿಗ್ತಾ ಇದ್ದ ಟ್ವೆಂಟಿಫೋರ್ ಸೆವೆನ್ ಇಂಟು ಥ್ರೀ ಸಂಪೂರ್ಣ ರಜಾ, ಕೂತಲ್ಲಿ ಊಟ ಉಪಚಾರ, ರೇಡಿಯೋ, ಕಾದಂಬರಿ!
ಸುಖದ ಪರಿಭಾಷೆಗಳು‌ ವಿವಿಧ ಬಗೆ..

ವರ್ಷಕ್ಕೆ ಛಪ್ಪನ್ನೈವತ್ತಾರು ಹಬ್ಬ, ಆ ನಿಮಿತ್ತ ಮಾಡಿಕೊಂಡು ವರ್ಷಕ್ಕೆ ಎರಡು ಸರ್ತೆಯಾದರೂ ಕೃಷ್ಣಾಜಿನದ ಪೆಟ್ಟಿಗೆಯಲ್ಲಿ ಬೆಚ್ಚಗೆ ಕೆಂಪು ಹಳದೀ ರೇಷ್ಮೆ ವಸ್ತ್ರದೊಳಗೆ ಸುತ್ತಿಕೊಂಡು ಮಲಗಿದ್ದ ಧೊಡ್ದೇವರುಗಳು ಎದ್ದು ಶಂಖ, ಚಕ್ರ ಗದಾ, ಪದ್ಮಸಹಿತ ಪತಾಕೆ, ಕೀರ್ತಿ, ಕಿರೀಟ, ಕಿನ್ನಾರ ಎಬ್ಬಿಸಿಕೊಂಡು ಬಂದು ಸೇವೆಗೊಳ್ಳುತ್ತಾರೆ. ಆ ಎಲ್ಲಾ ಹೊತ್ತಿಗೆ ಬೇಕು ಈ ಶಾವಿಗೆ! ಆಶ್ರಿತ ಆಚಾರ್ರು, ಮನೆ ಪುರೋಹಿತರು “ಮಾಯೀ ನಿಮ್ಮನಿ ಶಾಂವಿಗಿ ಮಖಮಲ್ ಇದ್ದಂಗಿರ್ತಾವ.. ಸಾಕನ್ನೂದೇ ಇಲ್ಲ ದೇವ್ರು, ‘ಅನ್ಕೋತ ಶೋಡಷೋಪಚಾರ ಪೂಜೆ ಮುಗಿಸಿ ಊಟಕ್ಕೆ ಕೂತು ಎಲೆ ಮ್ಯಾಲೆ ಬಡಿಸಿದ ಶಾವಿಗೆ ಪಾಯಸಕ್ಕೆ ಅವರೆಲ್ಲರ ಪರವಾಗಿ ಸಂಪೂರ್ಣ ನ್ಯಾಯ ದಯಪಾಲಿಸಿಕೊಂಡಿದ್ರು.
” ಇಂದ್ರಕ್ಕಾ ನಿಮ್ಮ ಕೈ ಹತ್ತೇದಲಾ ಶಾಂವಿಗೀಗೇ? ಮತ್ತಿನ್ನೇನು…ಕೂದಲೆಳಿಯಷ್ಟು ಸಣ್ಣವ ತೊಗೋರಿ. “ಅಂದು ದೊನ್ನೆ ತುಂಬಿ ತುಂಬಿ ಹಾಕಿಸಿಕೊಂಡು ಸುರ್ರಂತ ಒಳಗ ಕಳಿಸಿ.. ತೃಪ್ತಿಯಿಂದ ತೀಡಿ ತೀಡಿ ಉಂಡರೆ ಅಂದಿನ ಹೆಣ್ಮಕ್ಕಳಿಗೆ ಶ್ರೀಕೃಷ್ಣ ನೇ ದ್ರೌಪದಿಯ ಅಕ್ಷಯಪಾತ್ರೆಯೊಳಗಿಂದ ಅನ್ನದಗುಳು ಸ್ವೀಕಾರ ಮಾಡಿದಷ್ಟು ಹಿಗ್ಗು..

‌ಅಡಿಗೆ ಮಾಡಿ ಎಂದೂ ದಣಿದವರಲ್ಲ ಇಂದ್ರಕ್ಕ.‌ “ಕೈ ಕಾಲು ಬೀಳೂತನಕಾ ನಿಮ್ಮನಿ‌ ಅಡಿಗಿ ಬಿಡಂಗಿಲ್ಲ ಮಾಯೀ ‘ ಅಂತಂದು ಅದನ್ನು ಖರೇ ಮಾಡಿ ತೋರಿಸಿದ ಜೀವ ಇಂದ್ರಕ್ಕ. ಆಚಾರ್ರ ಹೊಗಳಿಕಿಗೆ ಮನಸ್ಸು ಸ್ವಲ್ಪನರೇ ಉಬ್ಬಿರಲೇ ಬೇಕು..ಸಹಜ ಅಲ್ಲಾ?
“ಅಲ್ಲಿದ್ದಾಳ ನೋಡ್ರಿ, ಗೋಮಾತಾ ಅಕೀ ಹಾಲಿನ ಮಹಿಮಾ, ಕೈ ಬಿಚ್ಚಿ ಅಡಿಗೀ ಪದಾರ್ಥ ತಂದಿಡ್ತಾರಲ್ಲ ಈ ಮಾತಾ..” ಅದು ಅವರ ಮುಗ್ಧಮನಸಿನ ಒಂದು ಪದರ ಅಷ್ಟೇ.

ಏಕಾದಶಿಯ ಉಪ’ವಾಸ’ದ ಅಮೃತ ಗಳಿಗೆಗಳಲ್ಲಿ ಮುಂಜಾನೆ ಎಂಟರಿಂದ ‌ಮೊದಲುಗೊಂಡು ಸಂಜೆಯತನಕಾ ನಡೆದ ಕೈಂಕರ್ಯದಲ್ಲಿ ಮನೆಯ ಸಮಸ್ತರಿಗೂ ಉಣಿಸುವ ಪಾಯಸದ ಶಾವಿಗೆ ತಯಾರಾಗ್ತಿದ್ದುವು.‌ (ಶಾವಿಗೀ ಉಪ್ಪಿಟ್ಟು ಗಿಪ್ಪಿಟ್ಟು ಸ್ವಲ್ಪ ಕಡಿಮೆಯೇ.).
ಸಾಲು ಸಾಲು ನಿಂತ ಶಾವಿಗಿ‌ ಕೋಲಿನ ಅಡ್ಡ ಗಳದ ಮೇಲೆ ಮಕಮಲ್ ಪಡದೆ ಹಾಸಿದಂಥ ಶಾವಿಗೆ ಆರೆಂಟು ತಾಸಿನೊಳಗೆ ಒಣಗಿ ನಿಗಿನಿಗಿ ಅಂತ ನಿಗುರಿ ನಿಲ್ತಿತ್ತು. ಇದು ನಮ್ಮನೆ ಒಂದರದೇ ಕತೆ ಅಲ್ಲ, ಯಾರ ಮನೆಯೊಳಗೆ ಶಾವಿಗೆ ಮಾಡಿದರೂ ಇಷ್ಟೇ ಟೀಮು ಹೋಗಿ ಕೈ ಹಚ್ಚುವ ಅಘೋಷಿತ ಸಹಕಾರದ ಕಥನವಿದು..ಹೇಳಲು ಮರೆತೆ, ಶಾವಿಗೆ ಏರೇರಿ ಇಳಿಯುವಾಗ ತಪ್ಪದೇ ನಡೀತಿದ್ದದ್ದು ಊರುಸಾಬರಿಯ ಲಘು ಹರಟೆ..ಎಲ್ಲರ ಮನೆಯ ದೋಸೆಯ ಚರ್ಚೆ.. ಜೀವದ ಜೋಡಿ ದೇವರು ಹಚ್ಚಿ ಕಳಿಸಿದ ನೋವು, ನಲಿವಿನ ಸುದ್ದಿ. ಕೆಲವರು ಹಾಡ್ತಿದ್ದರು, ಅದು ಕೈಶಾವಿಗೆ ರುಚಿ ಹೆಚ್ಚು ಮಾಡ್ತದಾ? ಇರಬಹುದೇನೋ… ಕಕಮಕ ನೋಡುವ ನನಗೆ ಅದೆಲ್ಲ ತಿಳಿಯದಿದ್ದದ್ದೇ ಹೆಚ್ಚು.

ನಡುವೆಯೆ ನಾಟ್ಯಸಂಗೀತದ ಲಯ ಎಬ್ಬಿಸುವ ಮನೋರಮಾ ಮಾಮೀ “ನ ಚ ಸುಂದರೀ ಕರು ಕೋಪಾಆಆಆss ಮಜವರಿ ಕರೀ ಅನುಕಂಪಾss” ಅಂತ ದನಿಯ ಪೆಟ್ಟಿಗೆ ಬಿಚ್ಚಿದರೆ ಮಾಯಿಯ ಮುಖವೂ ಒಮ್ಮೊಮ್ಮೆ ಯಾವುದೋ ನೆನಪಿನಿಂದ ಕೆಂಪಡರಿದ್ದು ಕಂಡೆ.

ಸಂಜೆಯ ಐದು ಹೊಡೀತು ಅಂದರೆ ಪತಿ ಮತ್ತು ಮಾವ ಇಬ್ಬರೂ ಕೋರ್ಟ್ ಮುಗಿಸಿಕೊಂಡು ಬಂದಿಳಿವರು.
ಶಾವಿಂಗೆ ಟೀಮಿನಲ್ಲಿ ಕೂತು ನೆಟ್ಟಗೆ ಉಳ್ಳಿ‌ತೀಡಲು ಬಾರದೆ ವೃಥಾ ಕಾಲಹರಣ ಮಾಡ್ತಿದ್ದ ನನ್ನ ಎಬ್ಬಿಸಿ.
” ಹೋಗವಾ, ಅಂವ ಬಂದ ನೋಡು.. ಚಹಾ ಪಹಾ ಏನರೆ ಬೇಕೇನು ನೋಡು” ಅನ್ನುವರು.
ನಾ ಎದ್ದು ಮಹಡಿಯ ಮೆಟ್ಟಿಲ ಬಳಿ ಹೊರಟರೆ ಹಿಂದಿನಿಂದ ಅವರ ಕುಲುಕುಲು ನಗಿ ಕಿವಿಗೆ ಬೀಳ್ತಿತ್ತು!

ನೈಂಟೀನ್ ಸೆವೆಂಟೀಸ್!

ಜಾನೇಕಂಹಾಗಯೇವೋದಿನ್_??


2 thoughts on “ಮಕಮಲ್ ಶಾವಿಗೆ ಮತ್ತು‌ ಊರ ಉಸಾಬರಿ!ಜಯಶ್ರೀದೇಶಪಾಂಡೆಯವರ ಲಲಿತ ಪ್ರಬಂಧ

Leave a Reply

Back To Top