ಗಝಲ್
ಡಾ.ಗೋವಿಂದ ಹೆಗಡೆ
ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ
ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ
ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು
ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ
ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ
ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ
ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ
ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ
ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು
ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ
ಎಲ್ಲಿಂದಲೂ ಎಷ್ಟು ಹೊತ್ತಿಗೂ ಎರಗೀತು ವಿಪತ್ತು
ರಕ್ಷಣೆಯ ಉಪಾಯಗಳಿಲ್ಲದೆ ಜೀವ ತಲ್ಲಣಿಸಿದೆ
ಒಬ್ಬರಿಗೊಬ್ಬರ ಸಾಂಗತ್ಯವಿರದೇ ಬದುಕು ಹೇಗೆ
‘ಜಂಗಮ’ ವಿಧಿಯ ದೂರಿದೆ ಜೀವ ತಲ್ಲಣಿಸಿದೆ
**************************