ಕನ್ನಡದ ಮೊದಲ ಶಬ್ದಕೋಶ ನೀಡಿದ ರೆ.ಫರ್ಡಿನಾಂಡ್ ಕಿಟೆಲ್ ಜನ್ಮದಿನ

ಕಾವ್ಯ ಸಂಗಾತಿ

ವಿಶೇಷ ಲೇಖನ

ಕನ್ನಡದ ಮೊದಲ ಶಬ್ದಕೋಶ ನೀಡಿದ

ರೆ.ಫರ್ಡಿನಾಂಡ್ ಕಿಟೆಲ್ ಜನ್ಮದಿನ

ಶಬ್ದಕೋಶ ಎಂದ ತಕ್ಷಣ ನಮಗೆ ಕಿಟೆಲ್ ಎಂಬ ಶಬ್ದವೂ ನೆನಪಾಗುತ್ತದೆ. ಇಂದು ಅವರು ಹುಟ್ಟಿದ ಜರ್ಮನ್ ದೇಶ ಅವರನ್ನು ಮರೆತಿರಬಹುದು, ಆದರೆ ಕನ್ನಡ ನಾಡು ಅವರನ್ನು ಮರೆತಿಲ್ಲ. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಅವರ ಪ್ರತಿಮೆ ಕನ್ನಡಿಗರ ಕೃತಜ್ಞತೆಯ‌ ದ್ಯೋತಕವಾಗಿ ಈಗಲೂ ಕಂಡುಬರುತ್ತದೆ.
ಬ್ರಿಟಿಶರು ಭಾರತಕ್ಕೆ ಬರುವಾಗ ಅವರ ಜೊತೆ ಬಂದ ಅಥವಾ ಕರೆತಂದ ಕ್ರೈಸ್ತ ಮಿಶನರಿಗಳಿಗೆ ಇಲ್ಲಿ ಎರಡು ಬಗೆಯ ಕರ್ತವ್ಯಗಳಿದ್ದವು. ಒಂದು – ತಮ್ಮ ಧರ್ಮ ಪ್ರಸಾರ ಮಾಡುವದು. ಎರಡು- ಇಲ್ಲಿಯ ಜನರನ್ನು ಮತಾಂತರ ಮಾಡುವದು. ಹೆಚ್ಚಿನ ಕ್ರೈಸ್ತ ಧರ್ಮೋಪದೇಶಕರು ಆ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡಿದರು. ಅಂದು‌ಈ ದೇಶದಲ್ಲಿ ತುಂಬಿದ್ದ ದಟ್ಟ ಬಡತನ ಮತ್ತು ಅನಕ್ಷರತೆಗಳು ಅವರಿಗೆ ಆ ಕೆಲಸದಲ್ಲಿ ನೆರವಾದವು. ದೊಡ್ಡ ಪ್ರಮಾಣದಲ್ಲಿ ಮತಾಂತರಗಳು ನಡೆದವು.
ಆದರೆ ಕೆಲವು ಮಿಶನರಿ ಪಾದ್ರಿಗಳು ತಮ್ಮ ಸುಸಂಸ್ಕೃತ ಮನಸ್ಸಿಗೆ ತಕ್ಕಂತೆ ತಾವೇ ಇಲ್ಲಿಯ ಜನಜೀವನ, ಸಂಸ್ಕೃತಿ, ಭಾಷೆ ,ಮತ್ತು ಸಾಹಿತ್ಯಗಳನ್ನೆಲ್ಲ ಅರಿತುಕೊಂಡು ಇಲ್ಲಿಯ ಬದುಕಿನಲ್ಲಿ ಬೆರೆತರು , ಅಷ್ಟೇ ಅಲ್ಲ ಕನ್ನಡ ನಾಡುನುಡಿಗೆ ಬಹಳ ಮಹತ್ವದ ಕೊಡುಗೆಯನ್ನೂ ನೀಡಿದರು. ಅವರು ನಮ್ಮವರೇ ಆಗಿಹೋದರು. ಅವರಲ್ಲಿ ರೆ. ಕಿಟ್ಟೆಲ್ ಸಹ ಒಬ್ಬರು.
ನಾನು ಈ ಮೊದಲು ಇದೇ ಅಂಕಣದಲ್ಲಿ ಕನ್ನಡದ ಮೊದಲ ಪತ್ರಿಕೆ ” ಮಂಗಳೂರು ಸಮಾಚಾರ” ಹೊರತಂದ ಮೊಗ್ಲಿಂಗ್ ಬಗ್ಗೆ ಬರೆದಿದ್ದೇನೆ. ಅವರದೂ ಬಹಳ ದೊಡ್ಡ ಸೇವೆ ಕನ್ನಡಕ್ಕೆ ಸಂದಿದೆ. ( ಎರಡು ತಿಂಗಳ ಹಿಂದಿನ ನನ್ನ ಫೇಸಬುಕ್ ಗಮನಿಸಬಹುದು), ಹಾಗೆಯೇ ಮೊನ್ನೆಯಷ್ಟೇ ರೆ. ಉತ್ತಂಗಿ ಚೆನ್ನಪ್ಪನವರ ಬಗೆಗೂ ಬರೆದಿದ್ದೇನೆ. ಕಿಟೆಲ್ ಬಗ್ಗೆ ಬರೆಯದಿದ್ದರೆ ಈ ಮಾಲಿಕೆ ಅಪೂರ್ಣವೆನಿಸುತ್ತದೆ.
ಫರ್ಡಿನಾಂಡ್ ಅವರು ಜರ್ಮನಿಯ ರೆಸ್ಟೆರಫೆಯಲ್ಲಿ 8/4/1832 ರಂದು ಜನಿಸಿದರು. ತಂದೆಯೂ ಪಾದ್ರಿಯಾಗಿದ್ದು‌ ಮಗನೂ ತಮ್ಮ ದಾರಿಯಲ್ಲೇ ಹೋಗಬೇಕೆಂದು ಬಯಸಿದರು. ಧರ್ಮಬೋಧನೆಯೊಡನೆ ಅನೇಕ ಭಾಷೆಗಳನ್ನೂ ಕಲಿತ ಕಿಟೆಲ್ 1853 ರಲ್ಲಿ ಭಾರತಕ್ಕೆ ಬಂದರು. ಇಲ್ಲಿ ಅವರು ನೀಲಗಿರಿ, ಕೊಡಗು, ಮಂಗಳೂರು, ಧಾರವಾಡಗಳಲ್ಲಿ ಕೆಲಸ ಮಾಡಿದರು. ಕರ್ನಾಟಕದ ಕಲೆ ಸಾಹಿತ್ಯ ಸಂಸ್ಕೃತಿಗಳ ಕಡೆಗೆ ಆಕರ್ಷಿತರಾದ ಅವರು ಮೊದಲು ಕನ್ನಡ ಭಾಷೆಯನ್ನು ಕಲಿತರು. ಕನ್ನಡ ಸಾಹಿತ್ಯವನ್ನೂ ಅಭ್ಯಸಿಸಿದರು.
ಎಲ್ಲಕ್ಕಿಂತ ಹೆಚ್ಚಾಗಿ ನಾಡಿನ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಬಳಕೆಯಲ್ಲಿರುವ ಕನ್ನಡ ಶಬ್ದಗಳನ್ನೂ ಸಂಗ್ರಹಿಸುವ ಹವ್ಯಾಸ ಬೆಳೆಯಿತು. ಅದರ ಪರಿಣಾಮವಾಗಿ 1894 ರಲ್ಲಿ 70 ಸಾವಿರ ಶಬ್ದಗಳನ್ನೊಳಗೊಂಡ ಪ್ರಪ್ರಥಮ ಕನ್ನಡ – ಇಂಗ್ಲಿಷ್ ಶಬ್ದಕೋಶ ಹೊರಬಂತು. ಅದೊಂದು ಅದ್ಭುತ ಮತ್ತು ಅಪೂರ್ವ ಪ್ರಯತ್ನ. ಕನ್ನಡದಲ್ಲಿ ಆನಂತರ ಹಲವು ಶಬ್ದಕೋಶಗಳು ಬಂದಿವೆಯಾದರೂ ಅವೆಲ್ಲ ಕಿಟೆಲ್ ಕೋಶವನ್ನೇ ಆಧರಿಸಿವೆ. ಅಷ್ಟಾದರೂ‌ಕಿಟೆಲ್ ಕೋಶ ತನ್ನದೇ ವೈಶಿಷ್ಟ್ಯವನ್ನು ಹೊಂದಿ ಎಲ್ಲದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ.
ಕಿಟೆಲ್ ಇದರ ಹೊರತಾಗಿಯೂ ಹಲವು ಕೃತಿಗಳನ್ನು ರಚಿಸಿದರು, ಸಂಪಾದಿಸಿದರು. ನಾಗವರ್ಮನ ಕನ್ನಡ ಛಂದಸ್ಸು, ಕಥಾಮಾಲೆ, ಶಾಲಾ ನಿಘಂಟು, ಕನ್ನಡ ವ್ಯಾಕರಣ ಮೊದಲಾದವು. ( ಕಿಟೆಲ್ ಕೋಶದ ವೈಶಿಷ್ಟ್ಯಗಳನ್ನು ಕುರಿತು ಬೇರೆ ಲೇಖನ ಬರೆಯುವ ವಿಚಾರ ಇದೆ.)
ಕಿಟೆಲ್ 18/12/ 1903 ರಲ್ಲಿ ತಮ್ಮ 71 ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ರಾಜ್ಯದ ರಾಜಧಾನಿಯಲ್ಲಿ ಅವರ ವಿಗ್ರಹವನ್ನು ನಿಲ್ಲಿಸುವದರೊಡನೆ ಆಸ್ಟಿನ್ ಟೌನನ್ನು ಕಿಟೆಲ್ ನಗರವೆಂದು ಹೆಸರಿಸಿ ಗೌರವ ಸಲ್ಲಿಸಲಾಗಿದೆ. ಅವರ ಹೆಸರಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳೂ ಇವೆ.
ಕನ್ನಡಿಗರಲ್ಲದ ಕನ್ನಡಿಗರಾಗಿ ನಮ್ಮ ಹಲವು ಕನ್ನಡ ಜನರಿಗಿಂತ ಹೆಚ್ಚು ಕನ್ನಡ ಭಾಷೆ ಸಾಹಿತ್ಯ‌, ಜನಜೀವನ ಅರಿತುಕೊಂಡ ಫರ್ಡಿನ್ಯಾಂಡ್ ಕಿಟೆಲ್ ಎಂದೂ‌ ಮರೆಯಲಾಗದ ಕನ್ನಡಿಗರು. ಕನ್ನಡ ಭಾಷೆ ಇರುವತನಕವೂ ಅವರು ಇದ್ದೇಇರುತ್ತಾರೆ. ಅವರಿಗೆ ನಮ್ಮ ಕೃತಜ್ಞತೆಯ ಶತ ಸಹಸ್ರ ನಮನಗಳು.


    - ಎಲ್ಲೆಸ್ ಶಾಸ್ತ್ರಿ ನಾಜಗಾರ

One thought on “ಕನ್ನಡದ ಮೊದಲ ಶಬ್ದಕೋಶ ನೀಡಿದ ರೆ.ಫರ್ಡಿನಾಂಡ್ ಕಿಟೆಲ್ ಜನ್ಮದಿನ

Leave a Reply

Back To Top