ಕರೋನಾದ ಮುಂದೆ ಯುಗಾದಿ
ಬಿದಲೋಟಿ ರಂಗನಾಥ್
ಹೊಸ್ತಿಲ ಮುಂದೆ ಲಕ್ಷ್ಮಣರೇಖೆ
ಒಳಗೆ ಕರಳರಚುವ ಸದ್ದು
ಉಗಾದಿಯ ಬೆನ್ನಿಗೂ ಬಿತ್ತು ಕಲ್ಲು
ಇರುವ ಪುಡಿಕಾಸಿನಲಿ ಹೋಳಿಗೆ ತಟ್ಟಿದರೆ,ಹೊಸಬಟ್ಟೆ ತಂದರೇ…
ಇಪ್ಪತ್ತೊಂದು ದಿನಗಳ ಹಾಲಿಗಿಲ್ಲ ಕಾಸು
ಊರಿನ ಬಸ್ಸಿಗಿಲ್ಲ ಬಾಗಿಲು,ಟೈರು
ಇದ್ದರು ಭಯದ ಪಂಕ್ಚರ್ರು
ಬಿರು ಬಿಸಿಲ ಬೇಗೆಯಲಿ ಸುಡುವ ತಾಯ ಕರುಳು
ಅಪ್ಪನ ವಾತ್ಸಲ್ಯದ ಮನಸು
ಕಾಯುತ್ತಿವೆ…ಹಬ್ಬದ ನೆವದಲ್ಲಿ
ಯಾರೋ ಮಾಡಿದ ತಪ್ಪಿಗೆ
ದೇಶದ ಜನ ನರಳುತ್ತಾ ನಲುಗುವ
ಕ್ಷಣ ಕ್ಷಣಕ್ಕೂ ಭಯದ ಭುಗಿಲು ಹೆಗಲೇರಿ
ಜೈಲಲ್ಲದ ಒಂಥರಾ ಜೈಲಲ್ಲಿ
ಕೊಳೆಯುವಂತೆ ದೂಡಿ
ದುಡಿಯುವ ಕೈಗಳನ್ನು ಕಟ್ಟಿ ಹಾಕಿ
ಅವರವರದೇ ಸಾವಿನ ಚಿತ್ರ ಬರೆಸುತ್ತಿದೆ ಕೊರೋನ
ಕಣ್ಣಿಗೆ ಕಾಣಲ್ಲ
ಅಂಟಿದರೆ ಬಿಡಲ್ಲ
ಇದೇನು ಜನರು ಮಾಡಿದ ಪಾಪಕರ್ಮವೋ
ಹಿಟ್ಟುಬಟ್ಟೆ ಇಲ್ಲದೆ ಅಪ್ಪ ಅಮ್ಮಂದಿರು ಅಯ್ಯೋ ಅಂದಿದ್ದರ ಫಲವೋ
ವಕ್ಕರಿಸಿದೆ ಹಿರಿಮಾರಿ ಎಲ್ಲಾ ಕಾಣುವ ಜಗತ್ತನ್ನೇ
ಕಾಣದೇ ನುಂಗುತ್ತಾ ,ಹೆದರಿಸುತ್ತಾ ಬಾರುಕಾಲಾಕುತ್ತಿದೆ ಹತ್ತಿರ ನಿಂತು ಉಸಿರು ಬಿಡುವುದರಿಂದ, ಮುಟ್ಟುವುದರಿಂದ, ಇವನು ಮುಟ್ಟಿ ಹೋದ ವಸ್ತು ಅವನ್ಯಾರೋ ಮುಟ್ಟುವುದರಿಂದ, ಕೈ ಕುಲುಕುವುದರಿಂದ
ಮನುಷ್ಯನ ಶ್ವಾಸಕೋಶದ ಮೇಲೆ.
ಸ್ಪರ್ಶನೂ ಇಲ್ಲಿ ಅಸ್ಪೃಶ್ಯ !
ಅಘೋಚರ ವೈರಾಣುವಿನ ಹಸಿವಿನ ತುತ್ತು
ತತ್ತರಿಸುವ ಜೀವಗಳು ಹಿಂಡು ಹಿಂಡು
ಗುಂಪಿದ್ದರಂತೂ ಕರೋನಕ್ಕೆ ಹಸಿವೇ ಹೆಚ್ಚು
ಕಾಲ ಕುರುಡಾಗಿ ತಟ್ಟಾಡುತ್ತಿದೆ
ಜಗದ ಬೆಳಕು ಮಂಕಾಗಿ ಮಂಜಾಗಿವೆ ಕಣ್ಣುಗಳು
ಮನೆಯ ದೀಪಕ್ಕೆ ಎಣ್ಣೆ ಇಲ್ಲ
ಹಿಟ್ಟಿನ ಮಡಿಕೆಯ ತಳಕ್ಕೆ ಬೆಂಕಿ ತಾಕಿಲ್ಲ
ಹೊಸ್ತಿಲು ದಾಟಲು
ಬಾಗಿಲ ಬಳಿ ಲಕ್ಷ್ಮಣ ರೇಖೆ
ಎಳೆದ ದೊರೆಗೂ ಹಸಿವಿನ ಸಂಕಟ ಗೊತ್ತಿಲ್ಲ
ಬದುಕೆಂದರೆ ಹೇಗೆ ಬದುಕುವುದು
ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ !
ಇನ್ನು ಬಿಕ್ಷೆ ಎತ್ತುವ
ರೇಷನ್ ಕಾರ್ಡೂ ಇಲ್ಲದ
ಗೋಡೆ ಹೊಸ್ತಿಲುಗಳಿಲ್ಲದ ಮುರುಕು
ಸಿಲ್ವಾರ್ ತಟ್ಟೆಗಳಿಗೆ
ಯಾವ ಲಕ್ಷ್ಮಣ ರೇಖೆಗಳನ್ನು ಹಾಕುತ್ತೀರಿ ದೊರೆ.!
**********