ಕಾವ್ಯಯಾನ

ಏನಿದ್ದರೇನು…?

Image result for images of gandhi

ಪ್ಯಾರಿಸುತ

ಈ ದೇಶಕೆ ಏನಿದ್ದರೇನು
ನೀನೇ ಇಲ್ಲವಲ್ಲ ಗಾಂಧಿ….?
ಖಾಲಿಯಾದ ಕುರ್ಚಿ,ಗಾದಿ,ಖಾದಿ
ಕನ್ನಡಕದ ಕಡ್ಡಿ ಎಲ್ಲವೂ ಬೆತ್ತಲೆಯಾಗಿ
ಬೆರಗು ಕಂಡು ಸುಮ್ಮನಾದವು
ಕೋರ್ಟು,ಕಛೇರಿ, ಶಾಲಾಕಾಲೇಜುಗಳಲ್ಲಿ
ನಿನ್ನ ಭಾವಚಿತ್ರವೊಂದು ಮೊಳೆ ಹೊಡೆದ
ಆಸರೆಗೆ ಗೋಡೆಯನೇರಿ ಕುಳಿತು
ಅದೇ ನಗುವ ಬೀರಿದೆ
ಮಾಲೆಯು ಸುಗಂಧ ಸೂಸಿದೆ
ಇಷ್ಟೇ ಸಾಲದು ಇನ್ನು ಇದೆ ಗಮನದಲಿ ಕೇಳು..!!
ನೀನಿರುವ ಹಾಳೆಯ ಚೂರೊಂದು ಸಾಕು
ಅದರಿಂದಲೇ ಇಲ್ಲೆಲ್ಲವು ಬೆಲೆಯುಳ್ಳವಾಗಿವೆ…!

ಆದರೆ…?
ನಿನ್ನ ಸಿದ್ದಾಂತ ಹೊತ್ತಿಗೆಯಲಿ ಹೊತ್ತಿ
ಕರಕಲಾಗಿದೆ
ನೀತಿ ಕಲೆತ ಮಂಗಗಳು ಮರವನೇರಿ ಕುಳಿತು
ನೀ ಬರುವ ದಾರಿಗೆ ದಿಟ್ಟಿಸಿವೆ
ನಿನ್ನ ಬರುವಿಕೆಯ ಸೂಚನೆಗೆ…!
ಗಾಢ ಕತ್ತಲು ಕವಿಯುವ ಮೊದಲೇ
ಚಪ್ಪಲಿ ಹೊಲೆಯುವನ
ಗಾಡಿ ತಳ್ಳುವವನ
ಕಣವೆ ಕೂಲಿಯವನ
ಇನ್ನಾರದೋ ಮನೆಯ ಚಿಮುಣಿಗೆ
ಇಲ್ಲವೇ ….?

ನಿನ್ನದೇ ನಿರ್ಮಿಸಿದ ಸ್ಮಾರಕದ ಬೆಳಕಿಗಾದರೂ
ಬಂದು ನಿಲ್ಲು
ಉಳಿದವರು, ಉಳ್ಳವರು ನಿನ್ನನ್ನು
ಗುರುತಿಸಲು ಸೋಲಬಹುದು…!
ಕೆಲವು ಕಡೆ ನಿನ್ನ ಅನುಪಸ್ಥಿತಿ
ಅವಮಾನಸಿದೆ
ಅದೇ ಘೋಷ
ಅದೇ ವೇಷ
ಮತ್ತದೇ ರೋಷ
ಮತ್ತೊಂದಿಷ್ಟು ಉಪವಾಸಗಳ ಅವಶ್ಯಕತೆಯಲ್ಲಿ
ನಿನ್ನ ಬೇಡಿಕೆ ಅಪಾರವಾಗಿದೆ

*******

One thought on “ಕಾವ್ಯಯಾನ

Leave a Reply

Back To Top