ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ

Assorted-colored Paint Spills

ಸ್ಮಿತಾ ರಾಘವೇಂದ್ರ

ಆತ್ಮವೆಂಬ ಅನೂಹ್ಯ
ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು
ತಣ್ಣಗೆ ಹೊರ ನಡೆಯುತ್ತವೆ
ಕವಿತೆಯ ಹಡೆದ ಮೌನದಂತೆ!

ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು-
ನಿಟ್ಟುಸಿರು:
ಆತ್ಮಕ್ಕೆ ದಕ್ಕಿದ್ದು
ಕಾಯಕ್ಕೆ ದಕ್ಕುವದಿಲ್ಲ!

ಅಣು ರೇಣುವಿನಲಿ ಪಲ್ಲವಿಸಿ
ತಲೆದೂಗಿ ರಿಂಗಣಿಸಿ
ಒಳಗೊಳಗೇ ಭೋರ್ಗರೆದು
ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ
ಕರುಣೆ- ತೊರೆದ ನಿರಾಳ

ಬದುಕಿನ ಕೊನೆಯ ಕವಿತೆಗೆ
ಮಾತೂ ಇರುವುದಿಲ್ಲ
ಮೂಕ ಮರ್ಮರವೊಂದರ
ಅಂತರಾತ್ಮ:
ಸೋತ ಕಣ್ಣುಗಳಿಂದ
ಸರಿದ ಸುಂದರ ನೋಟ.

ಸಾವಿನ ಆಲಿಂಗನ, ಆಲಿಂದ ದಾಟಿ
ತಿರುಗಿಯೂ ನೋಡದೇ ನಡೆದ
ಕರುಳ ಹಿಂಡಿದ ಕವಿತೆ,
ಆತ್ಮ ಸಂಗಾತ

ಬಿಂದುವೊಂದಕೆ ಬಂದು ಸೇರಿದ ಭಾವ-
ಬೃಹದಾಕಾರ ಚದುರಿ-
ವಿವಿಧ ರೂಪಕ ಸೇರಿ
ಜಗದ ತುಂಬಾ ಪುಟ್ಟ ಪುಟ್ಟ
ಕವಿತೆಯ ಧಾರಣ!

ಹುಟ್ಟೂ ಇಲ್ಲದ ಸಾವೂ ಇಲ್ಲದ
ನಿರಂತರ ಚಲನೆ
ಜಗದ ಏಕೈಕ ಕವಿತೆ
ಸಕಲವನೂ ಸಹಿಸುತ್ತದೆ!
ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!!

*********

Leave a Reply

Back To Top