ದಕ್ಕಿತೆಷ್ಟು ಪ್ರೀತಿ
ವಿನುತಾ ಹಂಚಿನಮನಿ
(ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು
ಅದರ ಉತ್ತರಾರ್ಧ ಹೀಗೂ ಇರಬಹುದೇ …….)
ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ
ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ
ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ
ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ
ಅಕ್ಷಯವಾದ ವನವಾಸ ಪತಿಯ ದೇಣಿಗೆ
ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ
ಅಷ್ಟ ಮಹಿಷಿಯರಿಗೆ ವಲ್ಲಭನಾದ
ಗೋಕುಲದ ಕೃಷ್ಣ ಗೋಪಿಲೋಲನೀತ
ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ
ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ
ಐವರು ಶೂರ ಪತಿಗಳ ಧರ್ಮದ ಹಠಕೆ
ದ್ರೌಪದಿಯ ಎದೆಯಾಯ್ತು ಪಗಡೆಯ ಪಠ
ಅವಮಾನ ವನವಾಸಗಳೇ ಕೊಡುಗೆ
ಸೂರ್ಯ ಚಂದ್ರರೆ ಸಾಕ್ಷಿ ಶೋಷಣೆಗೆ
ಅಗ್ನಿಪುತ್ರಿಯ ಜೀವ ಉರಿದ ಬವಣೆಗೆ
ಸಲೀಮನ ಪ್ರೇಮದ ಪುತ್ಥಳಿ ಅನಾರ್ಕಲಿ
ಅಕಬರನ ಅಂತಸ್ತಿಗಾದಳು ನರಬಲಿ
ಜೀವಂತ ಹುಗಿಸಿದ ಅವಳ ಮಹಾಬಲಿ
ಜಹಾಂಗೀರನಿಗೆ ಚಕ್ರವರ್ತಿಯ ಪಟ್ಟ
ಪ್ರೀತಿಯ ಸಮಾಧಿಯ ಮೇಲೆ ಕಟ್ಟಿ
ಶಹಾಜಾನನ ಪ್ರೇಮದಫಲದ ಸೊತ್ತು
ಹದಿಮೂರು ಬಾರಿ ಗರ್ಭ ಹೊತ್ತು
ಕೊನೆಗೆ ಮಣ್ಣಾದಳು ಹೆತ್ತು ಹೆತ್ತು
ತಾಜಮಹಲ ಅವನ ಪ್ರೀತಿಯ ಕುರುಹು
ಮುಮ್ತಾಜಳ ಬಲಿದಾನದ ಗುರುತು
ಆದಿಲಶಾಹಿಯ ಪಿಸುಮಾತಿನ ಬಲೆಗೆ
ಮೊದಲು ಮರುಳಾದ ರಂಭ ಒಲಿದು
ಜೀವತೆತ್ತು ಮಲಗಿದಳು ಗೋಲಗುಮ್ಮಜದಿ
ಕಾದಿಹಳು ಶತಶತಮಾನ ಗುಮ್ಮಟದಿ
ಬಾದಶಹನ ಪ್ರೇಮ ನಿವೇದನೆಗೆ
ಒಲವಿನ ನಾಟಕದ ಅಂಕದ ಪರದೆ ಜಾರಿ
ನಲುಗಿತು ನಾರಿಯ ಸಮ್ಮಾನ ಬಾರಿಬಾರಿ
ತಿಳಿಯದಾದೆಯಾ ನೀ ಜಗದ ನೀತಿ
ನಿನ್ನ ಪ್ರೇಮ ತ್ಯಾಗಗಳ ಅಳೆದ ರೀತಿ
ನಿನಗೆ ಇದರಲಿ ದಕ್ಕಿತೆಷ್ಟು ಪ್ರೀತಿ?
*******