ವಿಶೇಷ ಲೇಖನ
ಜಯಶ್ರೀ.ಜೆ.ಅಬ್ಬಿಗೇರಿ
ಸಾಧ್ಯವೆಂದರೆ ಅಸಾಧ್ಯವೂ ಸಾಧ್ಯ!
ಒಬ್ಬ ವ್ಯಕ್ತಿ ಒಂದು ಮೀನನ್ನು ನೀರು ತುಂಬಿದ ಟ್ಯಾಂಕಿನಲ್ಲಿ ಬಿಟ್ಟ
ಕೆಲ ಸಮಯದ ನಂತರ ಅದಕ್ಕೆ ಹಸಿವಾಯಿತು. ಆಗ ವ್ಯಕ್ತಿ ಕೆಲ
ಚಿಕ್ಕ ಮೀನುಗಳನ್ನು ಆ ಟ್ಯಾಂಕಿಗೆ ಹಾಕಿದನು. ಅದೇ ಚಿಕ್ಕ
ಮೀನುಗಳನ್ನು ತಿನ್ನುತ್ತ ಕೆಲ ದಿನಗಳನ್ನು ಕಳೆಯಿತು.
ನಂತರ ವ್ಯಕ್ತಿ ಒಂದು ಪಾರದರ್ಶಕ ಗಾಜನ್ನು ದೊಡ್ಡ
ಮತ್ತು ಚಿಕ್ಕ ಮೀನುಗಳ ನಡುವೆ ಇಟ್ಟನು. ಹಸಿವಾದ ತಕ್ಷಣ
ಬೇಟೆಯತ್ತ ಹೋಯಿತು. ಆದರೆ ಎಂದಿನಂತೆ ಬೇಟೆ
ಸುಲಭವಾಗಿರಲಿಲ್ಲ. ಫೈಬರ್ ಗಾಜಿನ ಮೇಲೆ ದಾಳಿ ಮಾಡತೊಡಗಿತು.
ಅದರ ಮೇಲ್ಮೈ ಗೆ ಹೊಡೆಯಿತು. ಆ ಗಾಜನ್ನು ಒಡೆಯುವ
ಸಾಹಸವನ್ನು ಮಾಡಿತು. ಇನ್ನೇನು ಕೆಲವೇ ಸೆಕೆಂಡುಗಳ ಕಾಲ
ಮುಂದುವರೆಸಿದ್ದರೆ ಆ ಗಾಜು ಒಡೆದು ಆಹಾರ
ಸಿಗಬಹುದಿತ್ತೇನೋ ಆದರೆ ಮೀನು ಆ ಗಾಜನ್ನು ಒಡೆಯುವ ಕೆಲಸ
ನನ್ನಿಂದ ಆಗದು ಎಂದು ಕೈ ಚೆಲ್ಲಿತು.ಒಂದೆರಡು ದಿನಗಳ
ನಂತರ ಆ ವ್ಯಕ್ತಿಯು ಫೈಬರ್ ಗಾಜನ್ನು ತೆಗೆದ. ಆಗ ಒಂದೇ
ನೀರಿನ ಟ್ಯಾಂಕಿನಲ್ಲಿದ್ದರೂ ಆ ದೊಡ್ಡ ಮೀನು ಚಿಕ್ಕ
ಮೀನುಗಳನ್ನು ತಿನ್ನುವ ಪ್ರಯತ್ನಕ್ಕೆ ಹೋಗಲಿಲ್ಲ.
ಏಕೆಂದರೆ ಗಾಜಿನ ಹೊದಿಕೆ ಇನ್ನೂ ಇದೆ ಎಂಬ ಕಲ್ಪನೆಯನ್ನೇ ಅದು
ಹೊಂದಿತ್ತು. ಇದೇ ರೀತಿಯಲ್ಲಿಯ ಆನೆಯ ಉದಾಹರಣೆ ಕೂಡ
ನಮಗೆ ಪ್ರೇರಣೆ ನೀಡುತ್ತದೆ. ಆನೆ ಮರಿ ಇದ್ದಾಗ ಅದನ್ನು
ಚಿಕ್ಕ ಹಗ್ಗ ಅಥವಾ ಸರಪಳಿಯಿಂದ ಗೂಟಕ್ಕೆ ಕಟ್ಟುತ್ತಾರೆ. ಆಗ
ಅದು ತಪ್ಪಿಸಿಕೊಳ್ಳಲು ತುಂಬಾ ಪ್ರಯತ್ನಿಸುತ್ತದೆ. ಕೆಲವೊಮ್ಮೆ
ಕಾಲಿಗೆ ಗಾಯವಾಗಿ ರಕ್ತ ಸುರಿಯುವವರೆಗೆ
ಪ್ರಯತ್ನಿಸುತ್ತದೆ. ಆದರೆ ನಂತರ ಇನ್ನು ನನ್ನಿಂದಾಗದು
ಎಂದು ಸುಮ್ಮನಿದ್ದು ಬಿಡುತ್ತದೆ.ಬಂಧಿ ಜೀವನಕ್ಕೆ ತನ್ನನ್ನು
ತಾನು ಒಗ್ಗಿಸಿಕೊಳ್ಳುತ್ತದೆ. ಮುಂದೆ ಅದು ಬೆಳೆದು ದೊಡ್ಡ
ಶರೀರದ ಆನೆಯಾಗುತ್ತದೆ ಆದರೆ ಅದೇ ಚಿಕ್ಕ ಗೂಟಕ್ಕೆ
ಬಂಧಿಯಾಗಿರುತ್ತದೆ. ಬಿಡಿಸಿಕೊಳ್ಳಲು ಹೋದರೆ ಮತ್ತೆ
ನೋವಾಗಬಹುದೆಂಬ ಕಲ್ಪನೆಯ ಭಯ ಆನೆಯನ್ನು ಕಟ್ಟಿ
ಹಾಕುತ್ತದೆ.
ಉಳಿದೆಲ್ಲ ಪ್ರಾಣಿಗಳಿಗೆ ಹೋಲಿಸಿದರೆ ನಾವು ಅತಿ ಅಶಕ್ತ
ಪ್ರಾಣಿಗಳು. ಆದರೆ ನಮ್ಮ ಬುದ್ಧಿಶಕ್ತಿಗೆ ಸೀಮೆಯೇ ಇಲ್ಲ. ಸಿಂಹ
ಹುಲಿಯಂತಹ ಕ್ರೂರ ಶಕ್ತಿಶಾಲಿ ಕಾಡುಪ್ರಾಣಿಗಳನ್ನು
ಪಳಗಿಸುವ ಬುದ್ಧಿಶಕ್ತಿ ನಮಗಿದೆ. ಆಲೋಚನೆ ಶಕ್ತಿಯುಳ್ಳ
ನಾವು ನನ್ನಿಂದಾಗದು ಎಂದು ಯೋಚಿಸಬಾರದು. ಯವುದಕ್ಕೂ
ಯಾರಿಗೂ ಬಂಧಿಯಾಗಿರಬಾರದು. ದೈಹಿಕವಾಗಿ ಮತ್ತು
ಮಾನಸಿಕವಾಗಿ ಸ್ವತಂತ್ರರು. ನಮ್ಮ ಆಲೋಚನೆಗಳು
ನಮ್ಮನ್ನು ರೂಪಿಸುತ್ತವೆ ಸುಂದರ ನಾಳೆಗಳನ್ನು
ಕಟ್ಟಿಕೊಡುತ್ತವೆ ಕಲ್ಪನೆ ಮತ್ತು ಊಹೆಗಳ ಸಹಜ.
ಕಲ್ಪನೆಯಲ್ಲಿ ಸಮಸ್ಯೆಯನ್ನು ಚಿಕ್ಕದಾಗಿಸಬೇಕು. ಅದನ್ನು
ಬಿಟ್ಟು ಕಲ್ಪನೆಯ ಭ್ರಮೆಯಲ್ಲಿ ಭಯದಿಂದ ಬದುಕಿದರೆ
ಸೋಲು ಕಟ್ಟಿಟ್ಟ ಬುತ್ತಿ. ತನ್ನ ಮೇಲೆ ತನಗೆ ನಂಬಿಕೆ
ಇರುವವನು ಮಾತ್ರ ಗೆಲುವಿನ ದಡ ಸೇರುತ್ತಾನೆ
ಆತ್ಮವಿಶ್ವಾದಿಂದ ಬೀಗುತ್ತ ನನ್ನಿಂದ ಸಾಧ್ಯ ಅಂತ
ಅಂದುಕೊಳ್ಳಬೇಕು. ಕಲ್ಪನೆಗಳು ಮತ್ತು ವಿಚಾರಗಳು
ನಮ್ಮನ್ನು ಮೇಲಕ್ಕೆತ್ತುವಂತಿರಬೇಕೇ ಹೊರತು ಕೆಳಕ್ಕೆ
ತಳ್ಳುವಂತಿರಬಾರದು. ಸಾಧ್ಯವೆಂದರೆ ಅಸಾಧ್ಯವೂ ಸಾಧ್ಯ!