ಕವಿತೆಯ ದಿನಕ್ಕೊಂದು ಕವಿತೆ
ಸಜೀವ
ಡಾ.ಗೋವಿಂದ ಹೆಗಡೆ
ಕವಿತೆ ನನ್ನ ಲೋಕಕ್ಕೆ
ಬಂದಾಗಿನಿಂದ ಜೊತೆಗಿದೆ
ಕಿಸೆಯ ಕನ್ನಡಕ
ಪೆನ್ನು ಪರ್ಸುಗಳಂತೆ
ನನ್ನದಾಗಿ
ಅಷ್ಟೇ ಅಲ್ಲ
ಎದೆಯ ಲಬ್ ಡಬ್ ಗಳಗುಂಟ
ನಾಡಿಗಳಲ್ಲಿ ಹರಿದಿದೆ
ಉಸಿರ ತಿದಿಯಲ್ಲಿ
ಯಾತಾಯಾತ ಆಡಿದೆ
ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ
ನರಮಂಡಲದಲ್ಲಿ ಗ್ರಹಿಸಿ
ಸ್ಪಂದಿಸಿ
ನನ್ನ ಭಾಗವೇ
ಬೇಲಿಸಾಲಿನ ಹೂಗಳಿಗೆ ಕೈ
ಆಡಿಸಿ ನಕ್ಕು ಹಕ್ಕಿಗಳ ಪಕ್ಕ
ಹಾರಿ ತಾರೆಗಳಿಗೆ ಕಣ್ಮಿಟುಕಿಸಿ
ಅಲೆ-ದಂಡೆಗಳಗುಂಟ ಅಲೆದು
ಮರುಳು ಮನೆ ಕಟ್ಟಿ ಕುಣಿದು
ಮೈಪಡೆದ ಕವಿತೆ
ಹಾಗಲ್ಲದೆ
ಕವಿತೆ ಕವಿತೆ ಹೇಗೆ
ನಾನು
ಜೀವಂತ ಹೇಗೆ
**********
ಸುಂದರ, ಸೊಗಸಾದ ಕವನ.ಅಭಿನಂದನೆ