ಕಾವ್ಯಯಾನ

ಗಝಲ್

ಡಾ.ಗೋವಿಂದ ಹೆಗಡೆ

ಅರಳು ಹುರಿದಂತೆ ನುಡಿವವರೆದುರು ನಾನಾಗಿರುವೆ ಉಗ್ಗ
ಅಣಕಿಸಿದರು ಅವರೆಲ್ಲ ನನ್ನನ್ನೀಗ ನಾನಾಗಿರುವೆ ಮೂಕ

ಸ್ತುತಿ-ನಿಂದೆಗಳ ಮೀರಿ ಮುಂದೆ ಹೋಗಬೇಕು ಬದುಕಲು
ಒಳದನಿಯ ಹೊರತೆಲ್ಲ ಸ್ವರಗಳಿಗೆ ನಾನಾಗಿರುವೆ ಬಧಿರ

ಕತ್ತಲನ್ನೇ ಬೆಳೆದರು ಅವರು ನಡುವೆ ನೀನೊಂದು ಹಣತೆ
ಒಳಿತಾಯಿತು ಜಡ ಜಂಜಡಗಳಿಗೆ ನಾನಾಗಿರುವೆ ಕುರುಡ

ತಮ್ಮ ದಾರಿಯಲ್ಲೇ ಎಲ್ಲರೂ ಸಾಗಬೇಕೆಂಬ ವರಾತವೇಕೆ
ದಾರಿ ಕಡಿಯುವೆ ನಾನೇ, ಉಳಿದಂತೆ ನಾನಾಗಿರುವೆ ಹೆಳವ

ನನ್ನ ಕತ್ತಿನ ಪಟ್ಟಿ ಹಿಡಿದರೇನು ಒಲ್ಲದುದ ಮಾಡೆಂದು
‘ಜಂಗಮ’ ಸಾಕ್ಷಿ,ಅಹಿತವೆಸಗದಂತೆ ನಾನಾಗಿರುವೆ ಚೊಂಚ

*********

One thought on “ಕಾವ್ಯಯಾನ

Leave a Reply

Back To Top