ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ಮಾರ್ಚ್ 8 ಅಂತರ ರಾಷ್ಟ್ರೀಯ ಮಹಿಳಾ ದಿನ. ಆದರೂ ಸ್ತ್ರೀ ಯರ ಮೇಲಿನ ದೌರ್ಜನ್ಯ ನಿಲ್ಲಲಿ… ಎಂಬ ಶೀರ್ಷಿಕೆಯ ಒಂದು ಲೇಖನ ಎಲ್ಲೋ ದಿನ ಪತ್ರಿಕೆಯಲ್ಲಿ ನೋಡಿದೆ. ಅದು ಇನ್ನೂ ಬರುತ್ತಲೇ ಇದೆ ದೇಶ ಎಷ್ಟು ಮುಂದುವರಿದರೆ ಏನು ಫಲ? ಹೆಣ್ಣಿಗೆ ಮಾನಸಿಕ ಸೌಖ್ಯ, ದೃಢತೆ, ಇದ್ದರೆ ತಾನೇ? ತಾನು ನೆಮ್ಮದಿಯಿಂದ ಬದುಕಲು ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಅಲ್ಲವೇ?
ಸ್ತ್ರೀಯರ ಮೇಲೆ ದೌರ್ಜನ್ಯ ಆಗುತ್ತಿದೆಯೇ ಎಂದರೆ ಹೌದು, ಬಹಳಷ್ಟು. ಅದು ಖಂಡಿತ. ಹೆಣ್ಣು ತಂದೆ ತಾಯಿಗೆ ಮಾತ್ರ ಮುದ್ದಿನ ಮಗಳು ಅಲ್ಲ, ಸೇರಿದ ಮನೆಯಲ್ಲೂ ಮುದ್ದು ಸೊಸೆಯಾಗಿ ಇರಬೇಕು, ಅವಳನ್ನು ಆ ರೀತಿ ನೋಡುವ ಕಾರ್ಯ ಆಗಬೇಕು. ಕುಟುಂಬದ ಒಳಗಿನ ಹಿರಿಯ ಪುರುಷರೇ ಹೆಣ್ಣನ್ನು ದೈಹಿಕವಾಗಿ ಬಳಸಿಕೊಂಡು ಅವಳ ಆಸೆ ಆಕಾಂಕ್ಷೆಗಳಿಗೆ ಪೆಟ್ಟು ಕೊಡುವ ಕಾರ್ಯ ಅದೆಷ್ಟೋ ಕುಟುಂಬಗಳಲ್ಲಿ ನಡೆಯುತ್ತಿಲ್ಲವೇ? ಹಾಗಂತ ಹೋದ ಮನೆಯಲ್ಲಿ ದಬ್ಬಾಳಿಕೆ ಮಾಡುವ ಗುಣ ಹೆಣ್ಣಿನದು ಆಗಿರಬಾರದು. ಹೆಣ್ಣು ಹೇಗೆ ಸಹಿಸಿಕೊಂಡು ಬಾಳುವಳೊ ಅದೇ ರೀತಿ ಹೆಣ್ಣನ್ನು ಸಹಿಸುವ ಶಕ್ತಿ ಪ್ರತಿ ಗಂಡಿನಲ್ಲೂ ಇರಬೇಕು. ಸಮಾಜ ಗಂಡಿನ ಆಸೆ ಆಕಾಂಕ್ಷೆಗಳನ್ನು ಗೌರವಿಸಿದ ಹಾಗೆ ಹೆಣ್ಣಿನ ಮನಸನ್ನು ಕೂಡಾ ಗೌರವಿಸಬೇಕು. ಬಡವಳಾಗಲಿ, ಸಿರಿವಂತಳಾಗಲಿ ಒಂದೇ ರೀತಿಯ ಮನ್ನಣೆ ಅವಳಿಗೆ ಸಿಗಬೇಕು. ಹೆಣ್ಣು ಗಂಡಿನ ತಾರತಮ್ಯ ಭಾರತದಲ್ಲಿ ತಲೆ ತಲಾಂತರದಿಂದ ಬಂದುದು.
ಸ್ವತಂತ್ರವಾಗಿ ಹರಿಯುವ ನೀರಾಗಿದ್ದಳು ಹೆಣ್ಣು. ಅವಳ ಬದುಕನ್ನು ತಣ್ಣನೆ ಮಾಡಿ ಉದ್ಧಾರ ಮಾಡುವೆನೆಂದು ಮದುವೆ ಎಂಬ ಒಂದು ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿ ಇಡುವರು. ಅಲ್ಲಿಂದ ಅವಳ ಬದುಕು ಕಷ್ಟದ ತಂಗಳಿನ ತೊಟ್ಟಿಯಲ್ಲಿ ಮಂಜುಗಡ್ಡೆಯಾಗಿ ಬಿಡುವುದು. ಅಲ್ಲಿ ಅತ್ತೆ, ನಾದಿನಿಯರ ಕಾಟ. ಬಂಧನ. ಮತ್ತೆ ಹಿಂದಿನ ಸ್ವಾತಂತ್ರಕ್ಕಾಗಿ ಹುಡುಕಾಟ. ಅದು ಸಿಗಲಿ ಎಂದು ಪರಿತಪಿಸುವ ಕಾಲಕ್ಕೆ ಬದುಕೆಲ್ಲೋ ದೂರ ಸಾಗಿ ಹೋಗಿರುತ್ತದೆ. ಮಂಜುಗಡ್ಡೆ ನೀರಾಗಬಹುದು, ಬದುಕು ಕಲ್ಲಾಗಿರುತ್ತದೆ. ಹಾಗೆ ಕಲ್ಲಾದ ಬದುಕಿಗೆ ಗಂಡಸರು ಅಥವಾ ಗಂಡು ಸಂತಾನ ಮಾತ್ರ ಕಾರಣ ಅಲ್ಲ. ಹೆಣ್ಣಿನ ಶೋಷಣೆಯಲ್ಲಿ ಈ ಅತ್ತೆ, ನಾದಿನಿಯರ ಕೈವಾಡವೂ ಇದೆ. ಇದರ ಜೊತೆಗೆ ಹೆಣ್ಣಿಗ ಗಂಡನೆಂದು ಮೆರೆಯುವ ಕೆಲವೊಂದು ಮನುಷ್ಯ ರೂಪದ ಪ್ರಾಣಿಯ ದರ್ಪವೂ ಇದೆ. ತನ್ನದು, ತಾನು, ತನ್ನದೇ ಸರಿ ಎಂಬ ಗಂಡಸಿನ ದರ್ಪವೂ ಸ್ತ್ರೀಯರ ಮೇಲಿನ ದೌರ್ಜನ್ಯಗಳಲ್ಲಿ ಒಂದು. ಹಲವಾರು ವೇಶ್ಯಾವಾಟಿಕೆ ತಾಣಗಳನ್ನು ನಡೆಸುತ್ತಿರುವವರು ಮಹಿಳೆಯರೇ ಅಲ್ಲವೇ? ಹೆಣ್ಣು ಮಕ್ಕಳನ್ನು ಗಂಡಸರಿಗೆ ಪರಿಚಯಿಸಿ ಅವರ ಬಾಳು ಹಾಳು ಮಾಡುವ ಕಾರ್ಯ ಹಲವಾರು ಬ್ಯೂಟಿ ಪಾರ್ಲರ್ ಗಳಲ್ಲೂ ನಡೆಯುತ್ತಾ ಇರುವುದನ್ನು ಪತ್ರಿಕೆಗಳಲ್ಲಿ ಓದಿಲ್ಲವೇ? ಹೆಣ್ಣಿಗೆ ಹೆಣ್ಣೇ ಶತ್ರುವೆ? ಹಣಕ್ಕಾಗಿ ಏನು ಬೇಕಾದರೂ ಮಾಡುವುದೇ? ಬಟ್ಟೆ ಬಿಚ್ಚಿ ಅರೆ ಬೆತ್ತಲೆ ಕುಣಿದ ತನ್ನದೇ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವುದನ್ನು ಕಾಣುವುದಿಲ್ಲವೇ? ಸಾರ್ವಜನಿಕ ಟಿವಿ ಶೋಗಳಲ್ಲಿ ಮಹಿಳೆಯರ ಅರ್ಧಂಬರ್ಧ, ಹರಿದ, ದೇಹದ ಉಬ್ಬು ತಗ್ಗುಗಳನ್ನು ಎತ್ತಿ ಕಾಣುವ ಹಾಗೆ ತೋರುವ ಬಟ್ಟೆಗಳ ಬಳಕೆ ಸರಿಯೇ? ಹಣಕ್ಕಾಗಿ ದೇಹ ಪ್ರದರ್ಶನವೇ? ಪ್ರಶಸ್ತಿಗೂ ಕೆಲವು ಮಹಿಳೆಯರು ಈ ರೀತಿಯ ಫೋಟೋ ಕಳುಹಿಸಿ ಕೊಡುತ್ತಾರೆ ಎಂಬುದನ್ನೂ ಕೇಳಿರುವೆ. ಇದು ತಪ್ಪಲ್ಲವೇ? ಮಹಿಳೆಗೂ ಬುದ್ಧಿ, ಜ್ಞಾನ, ಮಾನ ಬೇಡವೇ?

     ಅತ್ತೆ ಸೊಸೆಯನ್ನು ದಬ್ಬಾಳಿಕೆ ನಡೆಸುವ ಬಗ್ಗೆ ಶೇಕಡಾ 90ರಷ್ಟು ಹೆಣ್ಣುಗಳ ಜೀವನದಲ್ಲಿ ಜೀವಂತ ನೈಜ ಉದಾಹರಣೆಗಳಿವೆ. ವರದಕ್ಷಿಣೆ, ವರೋಪಚಾರದ  ಹೆಸರು ಬದಲಿಸಿ, ಮದುವೆ ಖರ್ಚು,ಬಟ್ಟೆ ಖರ್ಚು, ಚಿನ್ನ, ಕಾರಣ ಕಡೆಯವರಿಗೆ ಪಾರ್ಟಿ, ಡಿನ್ನರ್, ತುಪ್ಪ, ನೆಂಟರೂಟ ಅಂತ  ಲಕ್ಷಗಟ್ಟಲೆ ಖರ್ಚು ಮಾಮೂಲಿ. ಈಗ ಎಲ್ಲವೂ ಶೋಕಿ. ಜನರ ಬಳಿ ದುಡ್ಡಿರುತ್ತದೆ, ಖರ್ಚು ಮಾಡುತ್ತಾ ಇರುತ್ತಾರೆ, ಅದು ಹೇಗೋ. ಆದರೆ ಬಡವರು ಇದರಿಂದ ಸಾಯುತ್ತಿದ್ದಾರೆ. 

  ತುಳುವಿನಲ್ಲಿ ಒಂದು ಗಾದೆ ಇದೆ, "ಎಟ್ಟಿ ಲಾಗಿoಡ್ ಪಂಡ್ ದ್ ಡೆಂಜಿ ಲಾಗೆರೆ ಪೋದು ಡೆಂಜಿದ ಕೊಂಬ ಕಾರ್ ಪೊಲ್ಲಿದ್ ಪೋತುಂಡುಗೆ"  ಅದರ ಸಾರಾಂಶ ಇಷ್ಟು. ಸೀಗಡಿ ನೀರಿನಿಂದ ಮೇಲೆ ಹಾರಿ ಹಾರಿ ಬೀಳುತ್ತಿತ್ತು. ಅದು ಹಾರುವುದನ್ನು ನೋಡಿ ಆಸೆ ಆಗಿ ಏಡಿ ಕೂಡಾ ಹಾರಲು ಹೋಯಿತು. ಏಡಿ ಹಾರಿ, ತನ್ನ ಎರಡು ಮುಖ್ಯ ಕಾಲುಗಳನ್ನೇ ಕಳೆದುಕೊಂಡಿತು. ಸಿರಿವಂತರು, ಬೇರೆಯವರು ಏನೋ ಮಾಡುತ್ತಾರೆ, ಹೇಗೋ ಸ್ಟೈಲ್ ಮಾಡ್ತಾರೆ ಅಂತ ನಮ್ಮ ಹೆಣ್ಣು ಮಕ್ಕಳೂ ಕೂಡಾ ಇಂದು ನಮ್ಮ ಸಂಸ್ಕೃತಿ ಮರೆತು ಬಿಟ್ಟಿದ್ದಾರೆ. ದುಡ್ಡಿಗಾಗಿ ಯೋಚನೆ ಮಾಡದೆ ಯಾವುದೋ ಸಿನಿಮಾದಲ್ಲಿ ಹೀರೋ ಇನ್ ತೊಟ್ಟ ರೀತಿಯ ಬಟ್ಟೆಯೇ ನಮಗೂ ಬೇಕು ಅಂತ ಹಟ ಹಿಡಿದು ಸಾವಿರಾರು ರೂಪಾಯಿಗಳನ್ನು ಕೊಟ್ಟು ಕೊಂಡ ಬಳಿಕ ಒಂದು ಕಾರ್ಯಕ್ರಮಕ್ಕೂ ಅದನ್ನು ಸರಿಯಾಗಿ ಹಾಕಲು ಆಗದೆ ಯಾರಿಗೋ ಕೊಟ್ಟು ಬಿಡುವ ಕಾರ್ಯ ಬಿಟ್ಟು ತನ್ನ ಅಂದಕ್ಕೆ ಒಪ್ಪುವ ಬಟ್ಟೆ, ಕೂದಲಿನ ಡಿಸೈನ್, ಹಣೆಗೆ ಬಿಂದಿ ಧರಿಸಿದರೆ ಅದು ಉತ್ತಮ. 

ಈಗಿನ ಕಾನ್ವೆಂಟ್ ಗಳಿಂದ ಹೊರ ಬಂದ ಹಲವಾರು ಹುಡುಗಿಯರನ್ನು ನೋಡಿದರೆ, ಮೊದಲೇ ಹಣೆಗೆ ಬೊಟ್ಟು, ಕೈಗೆ ಬಳೆ, ಕಾಲು ಗೆಜ್ಜೆ ಸಂಸ್ಕೃತಿ ಎಲ್ಲೋ ಹಾರಿ ಹೋಗಿ, ಮದುವೆ ಆದ ಬಳಿಕ ತಾಳಿ ಹಾಕುವ ಕ್ರಮವೂ ಇಲ್ಲ, ಸೀರೆ ಉಟ್ಟಾಗ ಕುತ್ತಿಗೆಗೆ ಸರ, ಕೈಗೆ ಬಳೆ ಹಾಕುವ ಕಾಲ ಅದೆಲ್ಲೋ ಹೋಗಿದೆ. ಹಾಗೆ ಹಾಕಬೇಕು ಎಂದು ಒತ್ತಾಯ ಮಾಡುವ ಸ್ವಾತಂತ್ರ್ಯ ಕೂಡಾ ಇಂದು ಯಾರಿಗೂ ಇಲ್ಲ. ಅವರವರ ಇಷ್ಟ, ಇಚ್ಛೆ, ಆಸೆಗಳಿಗೆ ಅನುಗುಣವಾಗಿ ಅವರಿಗೆ ಬದುಕುವ ಹಕ್ಕು ಇದೆ. ಒಂದು ಕಾಲದಲ್ಲಿ ಪಕ್ಕದ ಮನೆ, ಸಮಾಜದ ಜನರಿಗೆ ಹೆದರಿ ಬದುಕುತ್ತಿದ್ದ ಜನ ಇಂದು ಪಕ್ಕದ ಮನೆಯಲ್ಲಿ ಸತ್ತು ಬಿದ್ದರೂ ಇಣುಕಿಯೂ ನೋಡದೆ ಆ ವಿಷಯವನ್ನು ಗೂಗಲ್ ನ್ಯೂಸ್ ನಲ್ಲಿ ಓದಿ ತಿಳಿದುಕೊಳ್ಳುವ ವರೆಗೆ ತಾಂತ್ರಿಕತೆ, ಅದರ ಜೊತೆಗೆ ಸ್ವಾರ್ಥ ಸಮಾಜ ರೂಪುಗೊಂಡಿದೆ ಇಂದು. ಇದು ಹೆಣ್ಣು ಮಕ್ಕಳ ಬದುಕಿನ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಹಿಂದಿನ ಕಾಲದಲ್ಲಿ ಪಕ್ಕದ ಮನೆಯ ಹುಡುಗ ಅದೆಷ್ಟು ಒಳ್ಳೆಯ ಸ್ನೇಹಿತ, ಆಪತ್ಕಾಲದಲ್ಲಿ ಸಹಾಯಕ. ಈಗಿನ ಪಕ್ಕದ ಮನೆಯ ಹುಡುಗನನ್ನು ಕೂಡಾ ಹೆಣ್ಣು ನಂಬುವ ಹಾಗಿಲ್ಲ. ತನ್ನ ಬದುಕಿನ ಶತ್ರುಗಳಲ್ಲಿ ಅವರೂ ಇರಬಹುದು. ಆದರೆ ಕೆಲವು ಕಡೆ, ಹಳ್ಳಿಗಳಲ್ಲಿ ಆ ಉತ್ತಮ ಸಂಬಂಧವನ್ನು ಹಿಂದಿನಂತೆಯೇ ಇಂದೂ ಕೂಡಾ ಬೆಳೆಸಿಕೊಂಡು ಬಂದ ಕುಟುಂಬಗಳೂ ಇವೆ. ಅವರಿಗೆ ಜೈ ಅನ್ನಬೇಕು ಅಷ್ಟೇ.
ಹೆಣ್ಣು ಮಕ್ಕಳು ಇಂದು ಸಬಲರಾಗಿದ್ದಾರೆ. ವಿಮಾನ ಬಿಡುವಲ್ಲಿಂದ ಹಿಡಿದು ಬಾರ್ ಮುಂದೆ ಕ್ಯೂ ನಿಂತು ಕುಡಿದು ತುರಾಡಿ ರಸ್ತೆಯಲ್ಲಿ ಬೀಳುವ ವರೆಗೂ ಏರಿ ಬಿಟ್ಟಿದ್ದಾರೆ. ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ, ಹೆಣ್ ಮಕ್ಲೆ ಸ್ಟ್ರಾಂಗ್ ಗುರು ಅಂತ ತೋರಿಸಿದರೂ, ಇಂದೂ ಕೂಡಾ, ಪಾತ್ರೆ ತಿಕ್ಕುವುದು, ಅಡಿಗೆ ಮಾಡುವುದು, ಒಲೆ ಉರಿಸುವುದು ತಪ್ಪಿಲ್ಲ! ಅದೆಲ್ಲಾ ಸರಿ, ಅತ್ತೆ ನಾದಿನಿಯರ ದಬ್ಬಾಳಿಕೆ, ಕಾಟವೂ ತಪ್ಪಿಲ್ಲ. ಗಂಡಿನ ದರ್ಪ ತಗ್ಗಿದೆ ಅಂದುಕೊಂಡಿರಾ? ಹೆಣ್ಣನ್ನು ಮೂವತ್ತ ಮೂರು ಬಾರಿ ಚಾಕುವಿನಿಂದ ಚುಚ್ಚಿ, ಚುಚ್ಚಿ ಸಾಯಿಸಿದ್ದು ಹಿಂದಿನ ಕಾಲದ ರಾಜ ಭಟರಲ್ಲ, ಅವನ್ ನಲ್ಲಿ ಬೇಯಿಸಿ ಸಾಯಿಸಿದ್ದೂ ಹಿಂದಿನ ರಾಜ ಮನೆತನದವರಲ್ಲ, ಹೆಣ್ಣಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟದ್ದು ಮಾಡರ್ನ್ ಯುಗದ ಕಲಿಗಳೇ! ಹೆಣ್ಣಿನ ಜೊತೆ ಜಗಳ ಮಾಡಿ ಅವಳು ದೈಹಿಕ ಸಂಬಂಧಕ್ಕೆ ಒಪ್ಪದ ಸಮಯದಲ್ಲಿ ಮೂರು ನಾಲ್ಕು ಜನ ಅವಳನ್ನು ಬಲಾತ್ಕಾರ ಮಾಡಿ ಅವಳ ಮರ್ಮಾಂಗಕ್ಕೆ ಬಿಯರ್ ಬಾಟಲಿ ತುರುಕಿ ಅವಳನ್ನು ಸಾಯಿಸಿದ್ದು, ಹೆಣ್ಣನ್ನು ಸಾಯಿಸಿ ನಂತರ ಅವಳ ಸತ್ತ ದೇಹವನ್ನು ಅನುಭವಿಸಿದ್ದು, ಅವಳ ದೇಹ ಕತ್ತರಿಸಿ ಮೂಟೆ ಕಟ್ಟಿದ್ದು, ತಾಯಿ ಮಗ ಸೇರಿ ಸಾಯಿಸಿ ತಾವೇ ಮಣ್ಣು ಮಾಡಿದ್ದು, ಹಲವಾರು ಕಾಮುಕರು ಮೋಹಿಸಿ, ಉಪಯೋಗಿಸಿ , ಸಾಯಿಸಿ ಕಸದ ತೊಟ್ಟಿಗೆ ಬಿಸಾಕಿದ್ದು, ಆರು ವರ್ಷ, ಹತ್ತು ವರ್ಷ , ಮೂರು ವರ್ಷ ಅಷ್ಟೇ ಅಲ್ಲ ಹತ್ತು ತಿಂಗಳ ಹಸುಗೂಸನ್ನು ಕೂಡಾ ಬಿಡದೆ ಕಾಮುಕರು ಅಟ್ಟಹಾಸ ಮೆರೆದಿದ್ದು ಯಾವ ಪೋಕ್ಸೋ ಕಾಯಿದೆ ಬಂದರೂ ಭಾರತದಲ್ಲಿ ಏನೂ ಪ್ರಯೋಜನ ಇಲ್ಲ. ನಿರ್ಭಯಾರಂತಹ ಹೆಣ್ಣು ಮಕ್ಕಳ ಜೀವ ತಿರುಗಿ ಬಂದೀತೆ? ಇದು ಒಂದು ಮುಖ. ಆಧುನಿಕ ಸಾಮಾಜಿಕ ಜಾಲ ತಾಣಗಳಲ್ಲಿ, ಮಾಧ್ಯಮಗಳಲ್ಲಿ ತೋರಿಸುವ ಬಿಸಿ ಬಿಸಿ ಚಿತ್ರಗಳಿಂದ, ಡ್ರಗ್ಸ್ ಸೇವನೆ, ಕುಡಿತ ಇವುಗಳ ಮತ್ತಿನಲ್ಲಿ, ದುಷ್ಟ ಚಟಗಳಿಂದ ಜನ ಈ ರೀತಿಯಲ್ಲಿ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿದ್ದರೆ ಇನ್ನೊಂದೆಡೆ ಹೆಣ್ಣೇ ಹೆಣ್ಣಿಗೆ ಶತ್ರು. ಆಸ್ತಿ, ಹಣ, ಒಡವೆ, ಕಾಮಕ್ಕೆ ಕುಟುಂಬದ ಗಂಡು ಮಕ್ಕಳನ್ನೂ ತಮ್ಮ ಜೊತೆಗೆ ಸೇರಿಸಿಕೊಂಡು ಮನೆಗೆ ಬಂದ ಮಹಾಲಕ್ಷ್ಮಿಯನ್ನು ಹಿಂಸಿಸಿ ಕೊಂದು,ಮಗನಿಗೆ ಮತ್ತೊಂದು ಮದುವೆ ಮಾಡಿಸಲು ಸಫಲರಾಗಿ ಹೆಮ್ಮೆಯಿಂದ ಮೆರೆಯುವ ಜನ ಅದೆಷ್ಟು!
ಹೆಣ್ಣಿಗೆ ಹೆಣ್ಣೇ ರಕ್ಷಣೆ! ಹೆಣ್ಣು ಮಕ್ಕಳು ತಾವು ಸಬಲರಾಗಿದ್ದೇವೆ ಎಂದು ಗಂಡು ಅಥವಾ ಇನ್ನೊಬ್ಬರ ಮೇಲೆ ಸವಾರಿ ಮಾಡುವುದಲ್ಲ. ಕೆಲವೊಂದು ಹುಡುಗರ ಸಾವಿಗೂ ಹೆಣ್ಣು ಮಕ್ಕಳೇ ಕಾರಣ. ಬದವನೆಂಬ ಕಾರಣಕ್ಕೆ ಪ್ರೀತಿಸಿದ ವ್ಯಕ್ತಿಯನ್ನು ಮರೆತು ಬಿಡು ಎಂದು ಸಾರಾ ಸಗಟಾಗಿ ತಿರಸ್ಕಾರ ಮಾಡಿ ಹಣವಂತನ ಹಿಂದೆ ಬೀಳುವ, ಪ್ರೀತಿಸಿದ ಯುವಕನ ಜೊತೆ ಸೇರಿ ಪತಿ ಮತ್ತು ಅವನ ಮಕ್ಕಳನ್ನು ಕೊಲ್ಲುವ ಮಹಿಳೆಯರೂ ಇದ್ದಾರೆ. ಮೊನ್ನೆ ಮೊನ್ನೆ ಓದಿದ ಸಮಾಚಾರ ಏನೆಂದರೆ ವಸತಿ ಯೋಜನೆಯಿಂದ ಮಹಿಳೆಯರ ಅಕೌಂಟಿಗೆ ಐವತ್ತು ಸಾವಿರ ಹಣ ಬಂದಿತ್ತು. ಅವರ ಮನೆ ಕಟ್ಟಿ ಕುಟುಂಬದ ಜೊತೆ ಚೆನ್ನಾಗಿ ಬದುಕಬೇಕಿದ್ದ ಮಹಿಳೆಯರು ತಮ್ಮ ಖಾತೆಗೆ ಆ ಹಣ ಬರುತ್ತಲೇ ಅದನ್ನು ತೆಗೆದುಕೊಂಡು ಮೂವರು ಮಹಿಳೆಯರು ಮಕ್ಕಳನ್ನೂ ಬಿಟ್ಟು ಆ ಹಣ ಮತ್ತು ತಮ್ಮ ಪ್ರಿಯತಮನ ಜೊತೆ ಪರಾರಿ ಆಗಿದ್ದಾರೆ. ಜವಾಬ್ದಾರಿ ಹೊತ್ತ ಹೆಣ್ಣು ಮಕ್ಕಳೇ ಹೀಗಾದರೆ ಹೇಗೆ?

ಹೆಣ್ಣು ತಾಳ್ಮೆಯ ಖನಿ. ಹಾಗೆಂದು ಅವಳನ್ನು ಪದೇ ಪದೇ ಹಿಂಸಿಸುತ್ತಾ ಇದ್ದ ಅವಳ ತಾಳ್ಮೆಗೂ ಮಿತಿ ಇದೆ. ಕುಡುಕ ಗಂಡ, ವಯಸ್ಸಾದ ಅತ್ತೆ ಮಾವನ ಸೇವೆ, ಕೈ ಕಾಲಲ್ಲಿ ಪುಟಾಣಿ ಮಕ್ಕಳು ಎಷ್ಟು ಅಂತ ದುಡಿದಾಳು ಆಕೆ? ಅತ್ತೆ ಮಾವನ ಸೇವೆ, ಮಕ್ಕಳ ಜವಾಬ್ದಾರಿ ಹೊರದ ಗಂಡ, ಮಡದಿಗೆ ಪ್ರೀತಿಯನ್ನೂ ಕೊಡದೆ, ಸರಿಯಾಗಿ ಊಟವನ್ನೂ ಕೊಡದೆ ಇದ್ದರೆ ಬದುಕು ಹೇಗೆ ತಾನೇ ಸಾಧ್ಯ? ಹಾಗೆಯೇ ಅನಾಥ ಮಕ್ಕಳು, ಸರಿಯಾಗಿ ಸಾಕುವವರು ಇಲ್ಲದ ಬಡ ಮಕ್ಕಳು ಹಲವರ ಕೈಗೆ ಸಿಕ್ಕಿ ಬದುಕಿನಲ್ಲಿ ಬೆಂದು ಹೋದವರು, ಈ ಬದುಕೇ ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ದಿನ ಬೆಳಿಗ್ಗೆ ವೃತ್ತ ಪತ್ರಿಕೆ ಓದಿದರೆ ಇಂತಹ ವಾರ್ತೆಗಳು ಕರುಳು ಹಿಂಡುತ್ತವೆ. ಯಾವ ತಾಂತ್ರಿಕ ಯುಗ ಬರಲಿ, ಯಾವ ಮನುಷ್ಯ ಚಂದ್ರನಲ್ಲಿ ಆಸ್ತಿ ತೆಗೆಯಲಿ, ಹೆಣ್ಣು ಪರಿಸರದಲ್ಲಿ ನೆಮ್ಮದಿಯಿಂದ ಬದುಕುವುದು ಕೇವಲ ಹತ್ತು ಹದಿನೈದು ಶೇಕಡಾ ಮಾತ್ರ. ಪ್ರತಿ ಕೆಲಸದ ಒತ್ತಡದಲ್ಲೇ ಬದುಕುವ ಅನಿವಾರ್ಯತೆ, ಮನಸ್ಸುಗಳ ಒಡನಾಟ ಸರಿಯಾಗಿ ಇರದೆ , ಆಯ್ಕೆಗಳ ಸಮಸ್ಯೆಯಾಗಿ, ಆಲೋಚನೆಗಳ ಬದಲಾವಣೆ , ಮರಣ, ಕುಟುಂಬದ ಪರಿಸ್ಥಿತಿ, ಬಡತನ , ಸಾಮಾಜಿಕ ಕಟ್ಟುಪಾಡುಗಳು, ಹಿರಿಯರ ನುಡಿ, ಶಿಸ್ತು, ವಿಪರೀತ ದುರಭ್ಯಾಸ, ಅಪಘಾತ,ಹಲವು ಖಾಯಿಲೆ – ರೋಗಗಳು ಇವೆಲ್ಲ ಬದುಕಲ್ಲಿ ಮಹಿಳೆಯನ್ನೂ, ಮಾನಸಿಕ ಖಿನ್ನತೆ ಪುರುಷರನ್ನೂ ಒಂಟಿಯಾಗಿ ಬದುಕುವಂತೆ ಮಾಡುತ್ತವೆ. ಮಹಿಳೆಯರು ದೈಹಿಕ ಶಕ್ತಿಯಲ್ಲಿ ಪುರುಷರ ಸಮನಾಗಿಲ್ಲ, ಪುರುಷರು ಮಾನಸಿಕ ಶಕ್ತಿಯಲ್ಲಿ ಮಹಿಳೆಯರಿಗೆ ಸಮಾನಾಗಿಲ್ಲ. ಇದು ಪ್ರಕೃತಿಯ ಸೃಷ್ಟಿ.


ಮಹಿಳೆಯರು ಒಬ್ಬಂಟಿ ಹೊರಗೆ ಹೋಗಿ ಬರುವ ಸ್ವಾತಂತ್ರ್ಯ ಇದ್ದರೂ ಅದು ಸೇಫ್ ಅಲ್ಲ!ಜನ ಎಷ್ಟೇ ಅಕ್ಷರಸ್ಥರು, ವಿದ್ಯಾವಂತರು,ಬುದ್ಧಿವಂತರು ಆದರೂ ಮೃಗಗಳಂತೆ ವರ್ತಿಸುವುದನ್ನು ಹಲವರು ಬಿಡಲಾರರು. ಅದು ಯಾವ ಕಾಲ ಎಂಬುದಿಲ್ಲ. ಸರ್ವ ಕಾಲದಲ್ಲೂ ಹೀಗೆಯೇ ಆಗಿದೆ. ಮಹಿಳೆ ಪುರುಷ ನೈತಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ನ್ಯಾಯಯುತವಾಗಿ ಒಬ್ಬರನ್ನು ಒಬ್ಬರು ಅರಿತು ಬದುಕಿದಾಗ ಮಾತ್ರ ಉತ್ತಮ ಸಂಬಂಧ. ಅಲ್ಲಿ ನಂಬಿಕೆ ಮುಖ್ಯ. ಇಲ್ಲದೆ ಹೋದರೆ ಮನೆಯೂ ಹಾಳಾಗುತ್ತದೆ, ಸಂಸಾರವೆಂಬ ನೌಕೆಯೂ ಮುಳುಗುತ್ತದೆ, ಸಮಾಜವೂ ಕೆಡುತ್ತದೆ. ದಬ್ಬಾಳಿಕೆ ಇಲ್ಲದ ಉತ್ತಮ ಸಮಾಜ ಇದ್ದರೆ ಮಾತ್ರ ಮಹಿಳೆಯರ ದಿನಾಚರಣೆಗೂ, ಪುರುಷರ ದಿನಾಚರಣೆಗೂ ಸರಿಯಾದ ಬೆಲೆ ಅಲ್ಲವೇ? ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ನೋಡಿದಾಗ ಅಲ್ಲ. ನೀವೇನಂತೀರಿ?

—————-


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top