ಅಂಕಣ ಸಂಗಾತಿ

ಸಿನಿ ಸಂಗಾತಿ

ಅಲೆಗಳು ಹೇಳಿದ ಕಥೆಕಿರುಚಿತ್ರ

ಚಿತ್ರದ ಮೊದಲ ದೃಶ್ಯದಲ್ಲಿ ಕಾಣುವುದು ಕಡಲ ಕಿನಾರೆ, ಅಲ್ಲೊಂದಿಷ್ಟು ಪುಟ್ಟ ಮಕ್ಕಳು ಆಟವಾಡುತ್ತಿದ್ದಾರೆ . ಸಮುದ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ …ಆಟದ ಗುಂಪಿನಲ್ಲಿ ಒಬ್ಬ ಪುಟ್ಟ ಬಾಲಕಿ ‘ಅಮ್ಮಿ’ಸುಮಾರು 8 ವರ್ಷದ ಪೋರಿ, ಆಟದ ಮಧ್ಯದಲ್ಲಿ ಅವಳ ಅಪ್ಪ ಅವಳನ್ನು ಮನೆಗೆ ಕರೆದು ತರುತ್ತಾನೆ ,ತಾನೇ ಬಿಸಿನೀರು ಕಾಯಿಸಿ ಮಗಳಿಗೆ ಸ್ನಾನ ಮಾಡಿಸುತ್ತಾನೆ, ತಲೆ ಬಾಚಿ ಶಿಸ್ತಾಗಿ ಅವಳನ್ನು ತಯಾರು ಮಾಡುತ್ತಾನೆ ಅವಳಿಗೊಂದು ಮೊಟ್ಟೆ ಬೇಯಿಸಿ ಕೊಡುತ್ತಾನೆ, ಅನ್ನದ ಗಂಜಿಯನ್ನು ಮಾಡಿ ಊಟ ತಯಾರು ಮಾಡುತ್ತಾನೆ, ಹಾಗೆಯೇ ಅವಳನ್ನು ಅಂದು ನಡೆಯಲಿರುವ ಆನ್ಲೈನ್ ಕ್ಲಾಸಿಗೆ ಸಜ್ಜುಗೊಳಿಸುತ್ತಾನೆ, ಅದು ತಾಯಿ ಇಲ್ಲದ ಮಗು, ತಂದೆ ಸಾಣೆ ಕೆಲಸ ಮಾಡುವವ..
ಮುಂದಿನ ದೃಶ್ಯದಲ್ಲಿ ಸಾಣೆ ಕೆಲಸ ಮಾಡುವ ಪುಟ್ಟ ಪೋರಿಯ ಅಪ್ಪ ತನ್ನ ಕೆಲಸಕ್ಕೆ ಸಜ್ಜಾಗುತ್ತಾನೆ, ಆಗ ಮಗಳು ತಾನು ಪಾಠ ಕೇಳಲು ಉಪಯೋಗಿಸುವ ತನ್ನ ಫೋನಿಗೆ ಒಂದು ಒಳ್ಳೆಯ ಇಯರ್ ಫೋನ್ ತಂದುಕೊಡಲು ಜ್ಞಾಪಿಸುತ್ತಾಳೆ, ಅಂದಿನ ಸಂಪಾದನೆಯಲ್ಲಿ ತಂದು ಕೊಡುವ ಆಶ್ವಾಸನೆ ನೀಡುವ ಅಪ್ಪ ,ಅಲೆಯ ಕಡೆಗೆ ಆಡಲು ಹೋಗದಂತೆ ಬಿಸಿಲಲ್ಲಿ ಆಡದಂತೆ ಮತ್ತೆ ಸಮಯಕ್ಕೆ ಸರಿಯಾಗಿ ಊಟ ಮಾಡುವಂತೆ ಮಗಳಿಗೆ ಎಚ್ಚರಿಸಿ ತನ್ನ ನಿತ್ಯ ಕಾಯಕ್ಕೆ ಹೊರಡುತ್ತಾನೆ…
ಬಿಸಿಲು ಗಾಳಿಯೆನ್ನದೆ ಮನೆ ಮನೆಗೂ ಅಲೆಯುತ್ತಾ, ಚಾಕು ಕತ್ತಿಯ ಮೊನಚು ಮಾಡುವ ತನ್ನ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತಾನೆ ವಿಭಿನ್ನ ಮನೋಭಾವದ ವ್ಯಕ್ತಿ ಗಳೊಂದಿಗೆ ಅವನ ಮುಖಾಮುಖಿಯಾಗುತ್ತದೆ ಗೃಹಿಣಿಯರು, ಬಟ್ಟೆ ಹೊಲಿಯುವ ಟೈಲರ್ ,ಕೋಳಿ ಫಾರ್ಮ್, ಮಾಂಸದ ಅಂಗಡಿ, ಎಳನೀರು ಕೊಚ್ಚುವವರು ಇವರೆಲ್ಲರೂ ಅವನ ಗಿರಾಕಿಗಳು
ಅಂತೂ ಇಂತೂ ಸುಮಾರು ಮಧ್ಯಾಹ್ನದ ವೇಳೆಗೆ ಅಷ್ಟಿಷ್ಟು ಹಣ ಸಂಪಾದಿಸುವ ಆ ವ್ಯಕ್ತಿ ತನ್ನ ಮಗಳ ಇಯರ್ ಫೋನ್ ಖರೀದಿಗಾಗಿ ಪೇಟೆಗೆ ಬರುತ್ತಾನೆ ಪೇಟೆಯಲ್ಲಿ ಹೊಸದೊಂದು ಇಯರ್ ಫೋನ್ ಖರೀದಿಸಿ ಸಮೀಪದ ಹೋಟೆಲ್ ಗೆ ತನ್ನ ಮಧ್ಯಾಹ್ನದ ಊಟಕ್ಕೆ ತೆರಳುತ್ತಾನೆ.
ತನ್ನ ಮಗಳ ಆಸೆಯಂತೆ ಅವಳ ಓದಿಗೆ ಅನುಕೂಲವಾಗಲು ಖರೀದಿಸಿದ ಇಯರ್ ಫೋನ್ ಹಾಕಿಕೊಂಡು ಖುಷಿಯಲ್ಲಿ ತನ್ನಯನಾಗಿ ತನ್ನ ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಊಟ ಮಾಡುತ್ತಿರುತ್ತಾನೆ. ಎದುರುಗಡೆಯ ಗೋಡೆಯ ಮೇಲೆ ಚಿತ್ರಪಟದಲ್ಲಿ ತೂಗುತ್ತಿರುವ ಯಕ್ಷಗಾನದ ಪಾತ್ರಧಾರಿಣಿಯ ಬದಲಾಗಿ ತನ್ನ ಹೆಂಡತಿಯನ್ನು ಕಲ್ಪಿಸಿಕೊಂಡು ಖುಷಿಯಾಗಿ ಹಾಡು ಕೇಳುವುದರಲ್ಲಿ ಮೈ ಮರೆಯುತ್ತಾನೆ.
ಅವನಿಗೆ ಎದುರಿಗೆ ಬಂದು ಕೂರುವ ಮತ್ತೊಬ್ಬ ಗಿರಾಕಿ ಬಲವಂತ, ಅವನು ಜೆಸಿಬಿಯ ಮಾಲೀಕ ಇವನಿಗಿಂತ ಸ್ಥಿತಿವಂತ, ಕೋಪಿಷ್ಟ ಹಾಗೂ ಮಹಾ ದರ್ಪದವನು ಕ್ಷುಲ್ಲಕ ಕಾರಣಕ್ಕೆ ಸಾಣೆಯವನ ಮೇಲೆ ಕೋಪಗೊಳ್ಳುವ ಈತ ಅವನನ್ನು ಹೊಡೆಯಲು ಮುನ್ನುಗ್ಗುತ್ತಾನೆ
ಅವನ ಕೈ ಹಿಡಿದು ಜಗ್ಗಾಡುತ್ತಾನೆ, ಈ ಜಗ್ಗಾಟದಲ್ಲಿ ಜೆಸಿಬಿ ಮಾಲಿಕ ಕೆಳಗೆ ಬಿದ್ದು ಗಾಯಗೊಳ್ಳುತ್ತಾನೆ, ಈಗ ಮತ್ತಷ್ಟು ಕೋಪಗೊಂಡ ಅವನು ನುಗ್ಗಿ ಹೊರಬಂದು ಅವನ ಸಾಣೆ ಯಂತ್ರವನ್ನು ಬಿಸಾಕುತ್ತಾನೆ, ಅದು ಛಿದ್ರ ಛಿದ್ರವಾಗಿ ಮುರಿದುಬಿಡುತ್ತದೆ, ಅದರ ನಂತರ ಇಯರ್ ಫೋನನ್ನು ಕತ್ತರಿಯಿಂದ ತುಂಡು ಮಾಡಿ ಮೂಲೆಗೆ ಬಿಸಾಕುತ್ತಾನೆ ಹಾಗೆ ಮಾಡಬೇಡಿ ಎಂದು ಪರಿಪರಿಯಾಗಿ ಸಾಣಿಯವನು ಬೇಡಿಕೊಂಡರು ಜೆಸಿಬಿಯವನ ದರ್ಪ ಮುಂದುವರೆಯುತ್ತದೆ.
ಜೆಸಿಬಿ ಮಾಲೀಕನ ದಬ್ಬಾಳಿಕೆಗೆ ಸಾಣೆ ಹಿಡಿಯುವವ ಕಾರಣವಿಲ್ಲದೆ ಬಲಿಯಾಗುತ್ತಾನೆ, ತನ್ನ ಸಂಪಾದನೆಗೆ ಆಧಾರವಾಗಿದ್ದ ಮುರಿದು ತುಂಡಾಗಿದ್ದ ಯಂತ್ರವನ್ನುಮೂಟೆ ಕಟ್ಟಿಕೊಂಡು ಮರು ಮಾತನಾಡದೆ ನಿರಾಶೆಯಿಂದ ಮನೆ ಕಡೆ ದಾರಿ ಹಿಡಿಯುತ್ತಾನೆ.
ತಾನು ಆಸೆಪಟ್ಟು ಕೊಂಡಿದ್ದ ಇಯರ್ ಫೋನ್ ಕಿತ್ತು ಹೋದದ್ದುರ ದುಃಖ ಒಂದಡೆಯಾದರೆ ಬದುಕಿಗಾಗಿ ಒಂದೇ ಆಸರೆ ಯಾಗಿದ್ದ ಸಾಣೆ ಯಂತ್ರ ಛಿದ್ರವಾದ ನೋವು ಮತ್ತೊಂದೆಡೆ ಇದರಲ್ಲಿ ಮನೆ ಸೇರುತ್ತಾನೆ.
ಚಿತ್ರದ ಪ್ರಾರಂಭದಲ್ಲಿಯೇ ಅಪ್ಪನನ್ನು ಕಾಮನಬಿಲ್ಲಿಗೆ ಎಷ್ಟು ?ಬಣ್ಣವೆಂದು ಮಗಳು ಕೇಳಿರುತ್ತಾಳೆ ತನ್ನ ಸ್ನೇಹಿತ ಆಡುತ್ತಿದ್ದ ಗಿರಿಗಿಟ್ಲೆಯಿಂದ (ಬಣ್ಣದ ರೆಕ್ಕೆಗಳುಳ್ಳ ಕಡ್ಡಿಗೆ ಸಿಕ್ಕಿಸಿದ ಚಕ್ರದಂತೆ ಕಾಣುವ ಆಟದ ಸಾಮಾನಿನಿಂದ) ಆಕರ್ಷಿತಳಾಗಿ ಅದನ್ನು ಖುಷಿಯಿಂದ ನೋಡಿರುತ್ತಾಳೆ…!
ಚಿತ್ರದ ಕೊನೆಯ ದೃಶ್ಯದಲ್ಲಿ ಅಪ್ಪ-ಮಗಳಿಗಾಗಿ ಹೊಸದೊಂದು ಆಟದ ಸಾಮಾನನ್ನು ತಯಾರು ಮಾಡುತ್ತಾನೆ ಅದೇನೆಂದರೆ ತನ್ನ ಮುರಿದ ಸಾಣೆ ಯಂತ್ರದ ಚಕ್ರಕ್ಕೆ ಬಣ್ಣ ಬಣ್ಣದ ಪೇಪರ್ ಗಳನ್ನು ಅಂಟಿಸಿ ಅದನ್ನು ಆಟವಾಡಲು ಮಗಳಿಗೆ ನೀಡುತ್ತಾನೆ. ಚಕ್ರವನ್ನು ತಿರುಗಿಸಿ ಅಲ್ಲಿನ ಕಾಮನಬಿಲ್ಲಿನ ಬಣ್ಣಗಳನ್ನು ಕಂಡು ಮಗಳು ಖುಷಿ ಪಡುತ್ತಾಳೆ. ಅವಳ ನಗುವಿನಲ್ಲಿ ಅಪ್ಪನಿಗೆ ಹೊಸ ಭರವಸೆ ಇದೆ ಬದುಕಿಗೊಂದು ಗಮ್ಯ ಕಾಣುತ್ತದೆ ಜೀವನಕ್ಕೆ ಮತ್ತೊಮ್ಮೆ ಉಲ್ಲಾಸ ಮೂಡುತ್ತದೆ .
ಸಮುದ್ರದ ತೀರದಲ್ಲಿ ಮರಳಿನಲ್ಲಿ ಕಟ್ಟಿದ ಗೂಡು ಅಲೆಯ ಹೊಡೆತಕ್ಕೆ ಬಿದ್ದರೂ ಮತ್ತೆ ಹೊಸ ಗೂಡನ್ನು ಕಟ್ಟುವಂತೆ ಮುರಿದು ಬಿದ್ದ ಬದುಕಿನಲ್ಲಿ ಹೊಸ ಭರವಸೆ ಬೆಳಕು ಅವನಿಗೆ ಕಾಣುತ್ತದೆ..
ಇಲ್ಲಿ ಬಣ್ಣದ ಚಕ್ರ ಮುದುಡಿದ ಅವರ ಬದುಕಿಗೆ ಭರವಸೆಯ ಬೆಳಕಾಗಿ ಕಾಣುತ್ತದೆ. ಉತ್ಸಾಹ ತುಂಬುವ ಪ್ರೇರಕವಾಗಿದೆ ದೌರ್ಜನ್ಯ ಕ್ಕೊಳಗಾಗಿ ಬಣ್ಣ ಕಳೆದುಕೊಂಡ ಅವನ ಬದುಕಿನ ನಲ್ಲಿ ಮಗಳ ನಲಿವಿನ ನಿರ್ಮಲ ಪ್ರೀತಿಯ ಬಣ್ಣ ತುಂಬುತ್ತದೆ.
ಬಡವರ ಬದುಕಿನ ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ ನಿರ್ದೇಶಕರು ಈ ಕಿರು ಚಿತ್ರದಲ್ಲಿ .ಬಡವರಿಗೆ ಕನಸುಗಳು ಆಸೆಗಳು ಇರಲೇ ಬಾರದೆ ಎಂದು ಈ ಚಿತ್ರ ನೋಡುವಾಗ ಅನ್ನಿಸದಿರದು ಸಣ್ಣ ಸಣ್ಣ ಆಸೆಗಳನ್ನು ಪೂರೈಸಿಕೊಳ್ಳಲು ಅವರು ಪಡುವ ಕಷ್ಟಗಳು ಮನಸ್ಸನ್ನು ತಟ್ಟುವುದು ಇರುವುದರಲ್ಲಿಯೇ ಖುಷಿಪಡುವ ಅವರ ಸಂತೃಪ್ತ ಭಾವ ಮುದ ನೀಡುವುದು. ತಮ್ಮ ಮೇಲಾಗುವ ದೌರ್ಜನ್ಯವನ್ನು ಪ್ರತಿಭಟಿಸಲಾಗದ ಅವರ ಅಸಹಾಯಕತೆಯನ್ನು ಕಂಡು ಮನಸ್ಸು ಮರುಗುತ್ತದೆ.
ಸಾಣೆ ಹಿಡಿಯುವವನ ಗೆಳೆಯ ಪೀಟರ್ ಅಂಕಲ್, ಪುಟ್ಟ ಪೋರಿಗೆ ರಕ್ಕಸಮೀನಿನ ಕಥೆಯನ್ನು ಹೇಳುತ್ತಾನೆ ,ಸಮುದ್ರದಲ್ಲಿ ತಾಯಿ ಮೀನು ತನ್ನ ಮರಿ ಮೀನಿಗಾಗಿ ಆಹಾರ ಹುಡುಕಿ ಕೊಂಡೊಯ್ಯುವಾಗ ಅವನ್ನೆಲ್ಲಾ ರಕ್ಕಸಮೀನು ಬಕ್ಕರಿಸಿಬಿಡುತ್ತದೆ. ಅದು ಬಹಳ ದುಷ್ಟ ಮೀನು ಹಾಗಾಗಿ ಸಮುದ್ರದ ಕಡೆಗೆ ಆಡಲು ಹೋಗಬೇಡ ಎಂದು ಆ ಮಗುವಿಗೆ ಅವನು ಹೇಳುತ್ತಾನೆ ,ಇಲ್ಲಿ ರಕ್ಕಸಮೀನು ಸಮುದ್ರ ಮೀನನ್ನು ಬೇಟೆಯಾಡುವುದು ರೂಪಕದಂತೆ ಬಳಸಲ್ಪಟ್ಟಿದೆ, ಮಗಳಿಗಾಗಿ ಅಪ್ಪ ಕಷ್ಟಪಟ್ಟು ಹಣ ಕೂಡಿಸಿದರು ಅವನ ಮೇಲೆ ಬಲವಂತನ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತದೆ..! ಇಲ್ಲಿ ಜೆಸಿಬಿ ಯವನನ್ನು ರಕ್ಕಸಮೀನಿಗೆ ಹೋಲಿಸಲಾಗಿದೆ.
ದನಿ ಇಲ್ಲದವರ ಮೇಲೆ ಬಲಿಷ್ಠರ ಸವಾರಿ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಜಗತ್ತನ್ನು ಕಾಡಿದ ಕರೋನ ಪಿಡುಗಿನ ಕಾಲದ ಸಾಮಾಜಿಕ ಸ್ಥಿತಿಯನ್ನು ಚಿತ್ರದಲ್ಲಿ ಕಾಣಬಹುದು ಕರೋನಾಗೆ ಹೆದರಿ ಮಹಡಿಯ ಮೇಲಿಂದ ಸಾಣೆ ಹಿಡಿಯುವ ಕತ್ತರಿ ಯನ್ನು ದಾರದಲ್ಲಿ ಬಿಡುವ ದೃಶ್ಯ ನಗೆ ತರಿಸಿದರು ಅದು ಉತ್ಪ್ರೇಕ್ಷೆಯಗಿರಲಿಲ್ಲವೆಂಬದು ಕರೋನಾದ ಕರಾಳ ನೆರಳು ಕಾಡಿದ ದ್ದು ನೆನಪಾದಾಗ ವೇದ್ಯವಾಗುತ್ತದೆ…
ಕರಾವಳಿ ಸಂಸ್ಕೃತಿಯ ಚಿತ್ರಣವನ್ನು ಈ ಕಿರು ಚಿತ್ರದಲ್ಲಿ ಕಾಣಬಹುದಾಗಿದೆ ,ಕರಾವಳಿಯ ಕನ್ನಡ ,ಕರಾವಳಿ ಜನರ ನೆಚ್ಚಿನ ಆಹಾರ ಮೀನು ಎಲ್ಲವೂ ಇಲ್ಲಿ ಗೋಚರ..
ಸಮುದ್ರ ತೀರ ಹಲವು ಸಂಸ್ಕೃತಿಗಳ ಜೀವನದಿಯಾಗಿದೆ ಹಲವು ಜೀವಿಗಳು ಬದುಕು ಕಟ್ಟಿಕೊಂಡಿರುವ ಕಡಲ ತೀರದಲ್ಲಿ ದುಃಖ ದುಮ್ಮಾನವಿದೆ, ಸಂತೋಷವಿದೆ ಅಲೆಗಳ ಏರಿಳಿತದಂತೆ ಇಲ್ಲಿ ಎಲ್ಲವೂ ಮಿಳಿತಗೊಂಡಿದೆ ಇಲ್ಲಿ ಜೀವ ವೈವಿಧ್ಯವಿದೆ, ವೈರುಧ್ಯವಿದೆ ,ಸಮುದ್ರ ತೀರದ ಜನ ಬೆವರುಹರಿಸುತ್ತಾರೆ ,ಆ ಬೆವರಿಗೊಂದು ಬಣ್ಣವಿದೆ ಭಾಷೆ ಇದೆ ಭಾಷ್ಯವಿದೆ.
ಅಲೆಗಳು ಇಲ್ಲಿ ಹಲವು ಕಥೆಗಳನ್ನು ಹೇಳುತ್ತವೆ, ಕೇಳುತ್ತವೆ ಇಲ್ಲಿ ದುಡ್ಡಿರುವವರ ಮೋಜು ಮಸ್ತಿ ಇದೆ, ಬಡ ಜನರ ಬೆವರಿನ ಬಸೆಯುವಿಕೆಯೂ ಇದೆ ಹಣದ ಮದದ ಮಸ್ತಿಯೂ ಇದೆ ಬಡ ಜನರ ನಿಟ್ಟಿಸಿರು ಅಲೆಗಳೊಂದಿಗೆ ಬೆರೆತುಹೋಗಿದೆ.
ಚಿತ್ರ ನೋಡಿ ಮುಗಿಸಿದಾಗ ನಮಗೆ ಮೂಡುವ ವಿಚಾರ ಲಹರಿ ಇದು ,ಆ ಪುಟ್ಟ ಹುಡುಗಿಯ ಅರಳು ಕಣ್ಣುಗಳ ಮುಗ್ಧ ಮಂದಹಾಸ ನಮ್ಮ ಮನಸೂರೆ ಗೊಂಡರೆ ಅಪ್ಪನ ಕಣ್ಣಲ್ಲಿ ಬದುಕುವ ಛಲ ಭವಿಷ್ಯ ಕಟ್ಟುವವನ ಕನಸು ಬೆರಗು ಮೂಡಿಸದಿರದು .ಇದ್ದುದರಲ್ಲಿ ಖುಷಿಪಡುವ ಅವರ ಮನಸ್ಥಿತಿ ಮಾದರಿ ಆಗದಿರದು ತಂದೆ ಮಗಳ ನಿರ್ವಾಜ್ಯ ಪ್ರೀತಿಯ ದರ್ಶನ ಇಲ್ಲಿದೆ.
ಲವಣವಿಕೆಯಿಂದ ಚಿತ್ರದಲ್ಲಿ ಅಭಿನಯಿಸಿರುವ ಪುಟ್ಟಬಾಲೆ ಪ್ರಣಮ್ಯ ಹಾಗೂ ತಂದೆಯ ಪಾತ್ರಧಾರಿ ಸತೀಶ್ ನೀನಾಸಂ ಪುರಪ್ಪೆ ಮನೆ ಎಲ್ಲರ ಗಮನ ಸೆಳೆಯುತ್ತಾರೆ .ಚಿತ್ರದಲ್ಲಿ ಬಳಸಿಕೊಂಡಿರುವ ಸಮುದ್ರ ತೀರದ ದೃಶ್ಯಗಳು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ರಿಷಬ್ ಶೆಟ್ಟಿ ಫಿಲಂ ತಂಡದಿಂದ ಮೂಡಿಬಂದಿರುವ ಈ ಕಿರುಚಿತ್ರ “ಅಲೆಗಳು ಹೇಳಿದ ಕಥೆ” ನೋಡಿ ಮುಗಿಸಿದಾಗ ಮನಸ್ಸಿನಲ್ಲಿ ಒಂದು ವಿಷಾದ ಭಾವ ಬಂದು ಹೋಗದಿರದು.
“ಯೂಟ್ಯೂಬ್ “ನಲ್ಲಿ ಈ ಕಿರುಚಿತ್ರ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.

ತಾರಾಗಣ – ಪ್ರಣಮ್ಯ, ಸತೀಶ್ ನೀನಾಸಂ ಪುರಪ್ಪೆ ಮನೆ
ರೂಪ ವರ್ಕಾಡಿ, ಸುನಿಲ್ ಪಲ್ಲಮಜಲು ಅನಂತ ಭಟ್ ಇತರರು
ಸೌಂಡ್ ಡಿಸೈನ್ ಮತ್ತು ಮಿಕ್ಸ್ -ರವಿ ಹಿರೇಮಠ
ಸಂಕಲನ – ಮಾವಿನ್ ಜೋಯಿಲ್ ಪಿಂಟೋ
ಸಿನಿಮಾ ಆಟೋಗ್ರಾಫಿ – ಕಣ್ಣನ್ ಅಯ್ಯಂಗಾರ್
ನಿರ್ಮಾಪಕರು -ದೀಪಕ್ ಕೆ ಆಚಾರ್ಯ, ಚಂದನ್ ಗೌಡ
ಅನಂತ ಭಟ್, ರಘು ರಾಘವ
ಛಾಯಾಗ್ರಹಣ – ಪ್ರದೀಪ್ ಆರ್ಯನ್
ಸಂಗೀತ – ಸ್ವಾಮಿನಾಥನ್ ಆರ್. ಕೆ
ನಿರ್ದೇಶನ – ಗಣೇಶ್ ಮಹಾಬಲಗೌಡ


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

One thought on “

Leave a Reply

Back To Top