ನನ್ನೊಳಗೆ ನೀನಿರುವಾಗ…
ಬಿದಲೋಟಿ ರಂಗನಾಥ್
ನನ್ನೊಳಗೆ ನೀನಿರುವಾಗ
ಭಯದ ಬೆಂಕಿಯನ್ನು ಹಾರುವುದು ಕಷ್ಟವೇನಲ್ಲ
ಸುಡುವ ನೆಲದ ತಂಪಿಗೆ
ನೀನೆ ಬರೆದ ಪ್ರೇಮ ಪತ್ರವಿರುವಾಗ
ಕಾಮನ ಬಿಲ್ಲು ಮಾತಾಡುವುದು ಕಷ್ಟವೇ ಅಲ್ಲ
ಪರಿಷೆಯಲ್ಲು ಧ್ಯಾನ ನೇರಗೆರೆಯ ಮೇಲೆ
ನಿಂತಿರುವಾಗ ಮನಸು ಯಾವ ಮೂಲೆಯಿಂದ ಪಲ್ಲಟಗೊಳ್ಳುವುದು ಹೇಳು ?
ನಗುವ ಚಂದಿರನ ಮುದ್ದಿಸಿದ ನೀನು
ಪ್ರೇಮದ ಹೂವಿನ ಸುಗಂಧವ ಮೂಸದೇ ಹೋದೆ
ನಿನ್ನೊಳಗಿನ ದಾರಿಯ ಮೇಲೆ ಬೆಳೆದ ಮುಳ್ಳುಗಳು
ಚುಚ್ಚುವಾಗ ಜಾತಿಯ ಬಣ್ಣಕೆ ಕಣ್ಣು ಮಂಜಾಗಿದ್ದು
ಹೃದಯದ ಕಣಿವೆಗಳಲ್ಲಿ ಕಂದರ ತೋಡಿದ ನೀನು
ನನ್ನೆಲ್ಲವನ್ನೂ ಬೀಳಿಸಿಯೇ ಹೋದೆ
ನಡೆದ ಅಷ್ಟೂ ದೂರ
ತಲೆಯೆತ್ತಿ ನಿಂತ ಭಾವ ಮುರುಟಿ
ನೆಲ ನೋಡುವುದ ಕಂಡೆ
ನಿನ್ನ ನಗುವಿನ ಅಲೆಗಳು
ನನ್ನ ಹೃದಯವೆಂಬ ಸಾಗರದಲ್ಲಿ ಎದ್ದಿರುವಾಗ
ನೆಲದ ಕಣ್ಣಲ್ಲಿ ನೀರಾದರೂ ಎಲ್ಲಿ ಬತ್ತೀತು ಹೇಳು.
ನಿನ್ನದೇ ಚಿತ್ರ ಗಾಳಿಯಲ್ಲಿ ಬರೆದು
ನೋಡುತ್ತಲೇ ಇರುವೆ
ಅದು ಬಣ್ಣ ಬಣ್ಣದ ಕನಸುಗಳನ್ನು
ಬಿಡಿಸುತ್ತಲೇ ಇದೆ.
***********************