ಕಾವ್ಯಯಾನ

ಮಕ್ಕಳಪದ್ಯ

ಅಪ್ಪನೇ ಪ್ರೀತಿ

ನಾಗರೇಖಾ ಗಾಂವಕರ

ಅಪ್ಪನದೇಕೆ ಕಂಚಿನಕಂಠ
ನಿನ್ನಂತಿಲ್ಲಲ್ಲಾ
ಕಣ್ಣುಗಳಂತೂ ಕೆಂಡದ ಉಂಡೆ
ನೋಡಲು ಆಗೊಲ್ಲ
ಅಮ್ಮ ಪುಕ್ಕಲು ನಾನಲ್ಲ.

ಆದರೂಅಮ್ಮ
ಅಪ್ಪನೇ ಪ್ರೀತಿ
ಎದೆಯೊಳಗೊಂದು ಮೀಟುವ ತಂತಿ
ಕಾರಣ ಹೇಳಮ್ಮ

ಕೈಗಳ ಹಿಡಿದು ವಠಾರ ನಡೆದು
ನಡೆಯಲು ಕಲಿಸಿದನು
ದಾರಿಯ ಮಧ್ಯೆ ಸಿಕ್ಕವರಲ್ಲಿ’
ಮಗಳೆಂದು ಹೊಗಳಿದನು
ಬೈಕಲಿ ಕೂರಿಸಿ, ಮರಗಿಡ ತೋರಿಸಿ,
ಮನವನು ತಣಿಸುವನು
ಅಪ್ಪನು ನಿನಗಿಂತ ಪ್ರಿಯನವನು.

ಆಗೀಗೊಮ್ಮೆ ಉಪ್ಪಿನಮೂಟೆ
ಮಾಡುತ ಮುದ್ದಿಸುವ
ಮರುಕ್ಷಣ ನನ್ನ ಹಠವನು
ಕಂಡು ಕೋಲನು ತೋರಿಸುವ
ಅಮ್ಮಾ, ಕೋಲನು ತೋರಿಸುವ

ಆದರೂ ಅಮ್ಮ
ಅಪ್ಪನೇ ಪ್ರೀತಿ
ಅಂಗಡಿಯೊಳಗಣ ಜೀಲೇಬಿ ರೀತಿ
ಸಿಹಿಸಿಹಿ ಮನದವನು
ಸೊಗಸಿನ ಮೊಗದವನು

ಕೇಳೆ ಅಮ್ಮ,
ಮುದ್ದಿನ ಅಮ್ಮ
ಅಪ್ಪನ ಕೂಡ ನೀನಿರಬೇಕು
ನಿಮ್ಮಿಬ್ಬರ ನಡುವೆ ನಾನೀರಬೇಕು
ನಿನ್ನ ದಮ್ಮಯ್ಯ.
ನನ್ನ ಮುದ್ದು ಅಮ್ಮಯ್ಯ.

****************

3 thoughts on “ಕಾವ್ಯಯಾನ

Leave a Reply

Back To Top