ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಸಂಸಾರ ಮತ್ತು ಗೆಳೆತನಗಳ ನಡುವೆ

ಗೆಳೆತನ ಎಂಬುದು ಜೀವನ ಬನದ ಹೂಗಳಿದ್ದಂತೆ . ಸಮಾಜಜೀವಿಯಾದ ಮಾನವನಿಗೆ ಜೀವನದ ಎಲ್ಲ ಹಂತಗಳಲ್ಲಿಯೂ ಸ್ನೇಹ ಬೇಕೆಬೇಕು. ಚಡ್ಡಿ ದೋಸ್ತರಿಂದ ಹಿಡಿದು ಇಳಿವಯಸ್ಸಿನ ಪಿಂಚಣಿದಾರರ ಕ್ಲಬ್ ತನಕ. ಸ್ನೇಹ ಮಾಡಿಕೊಳ್ಳುವುದು ಸುಲಭವಾದರೂ ಉಳಿಸಿಕೊಳ್ಳುವುದು ತೀರಾ ಕಷ್ಟಸಾಧ್ಯ ಕೆಲಸ.. ಪರಸ್ಪರ ನಂಬಿಕೆ ವಿಶ್ವಾಸದ ಬೇರು ಚಿಗುರಿ ಬೆಳೆದ ಮರದ ಹಸಿರು ಕಾಪಾಡಿಕೊಳ್ಳಲು ನಿರಂತರ ಹೊಂದಾಣಿಕೆ ಅರ್ಥೈಸಿಕೊಳ್ಳುವಿಕೆಯ ಪ್ರಕ್ರಿಯೆ ನಡೆದಿರಲೇಬೇಕು . ಅದೇ ಜೀವಾಳ. ಆದರೆ ಈ ಎಲ್ಲಾ ಸ್ನೇಹಗಳು ಸುಲಭವಾಗಿ ಮುಂದುವರಿಸಿಕೊಂಡು ಹೋಗಲು ಆಗುತ್ತದೆಯೇ? ನಿಜಕ್ಕೂ ಇದು ಮಿಲಿಯನ್ ಡಾಲರ್ ಪ್ರಶ್ನೆ . ಅದರಲ್ಲೂ ನಮ್ಮ ದೇಶದ ಸಾಮಾಜಿಕ ಪರಿಸ್ಥಿತಿಯಲ್ಲಿ ಮದುವೆಯಾದ ಹೆಣ್ಣು ಮಗಳು ತನ್ನ ಹಳೆಯ ಸ್ನೇಹವನ್ನು ಮದುವೆಗೆ ಮುಂಚಿನಂತೆಯೇ ಉಳಿಸಿಕೊಳ್ಳಲು ಸಾಧ್ಯವೇ? ಬನ್ನಿ ಉತ್ತರ ಹುಡುಕೋಣ.

ಕಡೆಯಲ್ಲಿ ನೀರು ಮಜ್ಜಿಗೆಗೆ ಹಾಕಲು ಈರುಳ್ಳಿ ಸಣ್ಣಗೆ ಹೆಚ್ಚುತ್ತಿದ್ದ ಪ್ರತೀಕ್ಷಾಳ ಕಣ್ಣಿನ ಕಂಬನಿಯು ಅದರ ಜೊತೆಯಲ್ಲಿ ಸೇರಿತ್ತು. ಹೈಸ್ಕೂಲಿನಿಂದ ಡಿಗ್ರಿಯವರೆಗೂ ಜೊತೆಗೆ ಓದಿದ್ದ ಗೆಳತಿ ನಿಶಾಳ ಮೆಹೆಂದಿ ಕಾರ್ಯಕ್ರಮ ಅಂದು. ಅಂದೇ ಅತ್ತೆಯವರ ಹತ್ತಿರದ ಸಂಬಂಧಿಯೊಬ್ಬರ ಆಕಸ್ಮಿಕ ಭೇಟಿ. . ಮದುವೆಗೂ ಬಾರದಿದ್ದ ಅವರು ಬಂದಾಗ ಇರಲೇಬೇಕೆಂದು ಅತ್ತೆಯ ಫರಮಾನು. ಎಲ್ಲಾ ಶಾಸ್ತ್ರಕ್ಕೂ ಹೋಗಬೇಕೆ ಮದುವೆಗೆ ಹೋದರೆ ಸಾಕು ಎಂದ ಗಂಡನ ನುಡಿಗಳು. ನಿಟ್ಟುಸಿರು ಗೈದು ಬಾರದ ನಗೆ ತಂದುಕೊಳ್ಳುತ್ತ ಅತಿಥಿಗಳನ್ನು ಉಪಚರಿಸಲು ತೆರಳಿದಳು. ಇದು ಒಬ್ಬ ಪ್ರತೀಕ್ಷಾಳ ಕಥೆಯಲ್ಲ . ಸಂದರ್ಭಗಳು ಬದಲಾಗಿರಬಹುದು ಆದರೆ ಭಾವಗಳು ಒಂದೇ. ಮದುವೆಗೆ ಮೊದಲು ಭೇಟಿ ಕೊಡುವಂತೆ ಸ್ನೇಹಿತರ ಜತೆಗಾಗಲಿ ಸಮಾರಂಭಗಳಿಗಾಗಲೀ ನಮ್ಮಿಷ್ಟದಂತೆ ಹೋಗಲಾಗದು. ಆದ್ಯತೆಗಳು ಬದಲಾಗುತ್ತವೆ . ವಿವಾಹವೆಂಬ ಸೌಕರ್ಯದ ಜತೆಗಿನ ಅನಿವಾರ್ಯಗಳು ಇವು. ಮುಂದೆ ಮಕ್ಕಳು ಮರಿ ಆದಮೇಲಂತೂ ಮೊದಲನೆಯ ಪ್ರಾಮುಖ್ಯತೆ ಅವರಿಗೇ ಆಗಿ ಉಳಿದೆಲ್ಲವೂ ಗೌಣವಾಗಿ ಬಿಡುತ್ತದೆ. ಇದು ಸಹಜ ಕೂಡ. ಸ್ನೇಹಿತರು ಇರಲಿ ತಾಯಿ ಮನೆಯ ಕಡೆಯ ಹತ್ತಿರದ ಬಂಧುಗಳ ಭೇಟಿ ಮಾಡುವುದು ಅಪರೂಪವಾಗಿಬಿಡುತ್ತದೆ . ಮುಂದಂತೂ ಗಂಡನ ಸ್ನೇಹವಲಯ ಮಕ್ಕಳ ಸ್ನೇಹಿತರ ತಾಯಿಯರಷ್ಟೇ ಪರಿಚಿತ ವಲಯವಾಗಿ ಉಳಿದುಬಿಟ್ಟು ಹಳೆಯ ಸ್ನೇಹಿತರಿರಲಿ ಹೊಸಬರಿರಲಿ ನಮಗಾಗಿಯೇ ಎಂದು ಕಾಲಕಳೆಯುವುದು ದುಸ್ತರವಾಗುತ್ತದೆ.

ಇನ್ನು ಗಂಡಸರಾದರೂ ಅಷ್ಟೇ ಬ್ರಹ್ಮಚಾರಿಗಳಾಗಿದ್ದಾಗ ಗೆಳೆಯರೊಡನೆ ಕಾಲ ಕಳೆಯುವಷ್ಟು ಮದುವೆ ಸಂಸಾರ ಎಂದೆಲ್ಲಾ ಆದಮೇಲೆ ಆಗುವುದಿಲ್ಲ . ಉರುಳುವ ಕಾಲ ಬಂಡಿಯ ಜತೆ ಸರಿಯುವ ಚಿತ್ರಗಳಾಗುತ್ತಾರೆ ಸ್ನೇಹಿತರು. ಊರುಗಳನ್ನೇ ಬಿಟ್ಟ ಮೇಲಂತೂ ಹಳಬರ ಜೊತೆ ಸಂಪರ್ಕವೂ ಇಲ್ಲದಂತಾಗಿ ಹಳೆಯ ಫೋಟೋಗಳನ್ನು ನೋಡಿದಾಗ ಇವರೆಲ್ಲಾ ಎಲ್ಲಿರುವರೋ ಹೇಗಿರುವರೋ ಎನಿಸುತ್ತದೆ.

ಆದರೆ ಮೊದಲೇ ಹೇಳಿದಂತೆ ಸ್ನೇಹವಿಲ್ಲದ ಜೀವನ ಪರಿಪೂರ್ಣವಲ್ಲ. ಸ್ನೇಹಿತರೊಂದಿಗಿನ ಕ್ವಾಲಿಟಿ ಸಮಯ ಚೈತನ್ಯದ ಪುನರುಜ್ಜೀವನ. ಹಾಗಾಗಿ ಸ್ವಲ್ಪ ಚಾಕಚಕ್ಯತೆಯಿಂದ ಕುಟುಂಬ ಮತ್ತು ಸ್ನೇಹಗಳಿಗೆ ತಕ್ಕ ಸಮಯ ನೀಡಬೇಕು. ಮಕ್ಕಳ ಪತಿ /ಪತ್ನಿಯ ಸ್ನೇಹಿತರ ಪರಿಚಯ ಒಬ್ಬರೊಬ್ಬರಿಗೆ ಇರಬೇಕು . ಕುಟುಂಬ ಸ್ನೇಹಿತರನ್ನು ಹೊಂದಿ ಇಡೀ ಕುಟುಂಬಗಳೇ ಒಟ್ಟಾಗಿ ಪ್ರವಾಸ ಹೊರಡಬಹುದು. ನಮಗೂ ಅಷ್ಟೇ ಕೆಲವೊಮ್ಮೆ ಜವಾಬ್ದಾರಿಯ ಹೊಣೆ ಇರದೆ ಸಮಾನಮನಸ್ಕ ಸ್ನೇಹಿತೆಯರೊಂದಿಗೆ ನಾವೇ ನಾವಾಗಿ ಕಳೆಯುವ ಕ್ಷಣಗಳು ಏಕತಾನತೆಯ ಬಂಧನದಿಂದ ಹೊರಬರಲು ಸಹಾಯಕವಾಗುತ್ತದೆ. ಆರೋಗ್ಯಕರ ಸಮತೋಲನ ಎಂದಿಗೂ ಅಗತ್ಯ. ಅತಿಯಾದರೆ ಅಮೃತವೂ ವಿಷ ಅಲ್ಲವೇ?

ಇನ್ನು ವಿರುದ್ಧ ಲಿಂಗಿಗಳ ಸ್ನೇಹದ ವಿಷಯಕ್ಕೆ ಬಂದರೆ ಈಗ ಕಾಲೇಜು ಉದ್ಯೋಗಗಳಲ್ಲಿ ಗೆಳತಿಯರಂತೆ ಗೆಳೆಯರು ಇರುವುದು ಸಾಮಾನ್ಯ. ಅಪ್ಪ ಅಮ್ಮ ಅದನ್ನು ಸಹಜವಾಗಿ ತೆಗೆದುಕೊಂಡ ಹಾಗೆ ಗಂಡ ಅತ್ತೆಯ ಮನೆಯವರು ತೆಗೆದುಕೊಂಡರೆ ಪರವಾಗಿಲ್ಲ .ಆದರೆ ಅವರಿಗೆ ಅದು ಅಸಮಾಧಾನ ತಂದು ದಿನನಿತ್ಯ ಜಗಳ ಘರ್ಷಣೆಗೆ ಎಡೆ ಮಾಡಿದರೆ ಅರ್ಥಮಾಡಿಕೊಳ್ಳದಿದ್ದರೆ ಸಂಸಾರಕ್ಕಾಗಿ ಸ್ನೇಹದ ತ್ಯಜಿಸುವುದೇ ಒಳ್ಳೆಯದು. ನಿಜವಾದ ಸ್ನೇಹಿತರು ಪರಿಸ್ಥಿತಿಯನ್ನು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ . ಸ್ನೇಹ ಊಟಕ್ಕೆ ರುಚಿ ಕೊಡುವ ಉಪ್ಪಿನಕಾಯಿಯಂತೆ . ರುಚಿಯೆಂದು ಬರೀ ಅದನ್ನೇ ತಿಂದರೆ ಆರೋಗ್ಯ ಕೆಡುತ್ತದೆ. ಹಾಗೆಯೇ ಕುಟುಂಬದ ಒಳಿತಿಗಾಗಿ ಕೆಲವೊಮ್ಮೆ ನಮ್ಮ ಇಷ್ಟಗಳನ್ನು ಮರೆಯಬೇಕಾಗುತ್ತದೆ. ಸ್ವಾರ್ಥ ಒಂದನ್ನೇ ಸಾಧಿಸಲು ಹೊರಟರೆ ಅನರ್ಥವೇ. ಆಗ ಸ್ನೇಹಿತರ ದೃಷ್ಟಿಯಲ್ಲೂ ನಮಗೆ ಗೌರವ ಸಿಗುವುದಿಲ್ಲ.

ಯಾವುದೇ ಸಂಬಂಧಗಳನ್ನಾಗಲಿ ಗೌರವಿಸಿ ಯುಕ್ತಾಯುಕ್ತ ವಿವೇಚನೆಯಿಂದ ನಡೆದುಕೊಳ್ಳಬೇಕು. ಗೌಪ್ಯತೆ ಮುಚ್ಚುಮರೆ ಗಳು ಎಂದಿಗೂ ಒಳಿತುಂಟು ಮಾಡುವುದಿಲ್ಲ. ಪಾರದರ್ಶಕತೆಯಿಂದ ಕೂಡಿದ ಮೈತ್ರಿ ಕೌಟುಂಬಿಕ ಬದುಕಿನೊಡನೆ ಸಮ್ಮಿಳಿತ ವಾಗಬೇಕೇ ಹೊರತು ಘರ್ಷಣೆಗೆ ಕಾರಣವಾಗಬಾರದು. ಹೀಗೆ ನೋಡಿಕೊಳ್ಳುವ ಪ್ರಬುದ್ಧತೆ ನಮಗಿರಲಿ ಅಲ್ಲವೇ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

One thought on “

Leave a Reply

Back To Top