ಮರೀನ್ ಡ್ರೈವ್ ಎಂಬ ಮೋಹಕ ತಾಣ

ಸ್ಮಿತಾ ರಾಘವೇಂದ್ರ

ಮರೀನ್ ಡ್ರೈವ್ ಎಂಬ ಮೋಹಕ ತಾಣ
ಮೊದಲ ಬಾರಿಗೆ ಮುಂಬೈಗೆ ಭೇಟಿ ಕೊಡುತ್ತಿರುವ ನನಗೆ..
ಮುಂಬೈ ಜನ ಜೀವನ ನೋಡಬೇಕು ಎಂಬ ತೀವ್ರವಾದ ತುಡಿತವಿತ್ತು..
ಯಾಕೆಂದರೆ ಕಾಯ್ಕಿಣಿ, ಮತ್ತು ಚಿತ್ತಾಲರ ಕಥೆಗಳಿಂದ ಮುಂಬೈ ನಗರಿಯ ಪೂರ್ಣ ಚಿತ್ರಣವೊಂದು ನನ್ನ ಮನಃಪಟಲದೊಳಗೆ ಗಿರಕಿ ಹೊಡೆಯುತ್ತಲೇ ಇತ್ತು..
ಬಿಡದೇ ಕಾಡಿದ ಕಥೆಗಳ ಎಳೆ ಹಿಡಿದು ಕಳೆದು ಹೋದ ಮಗುವೊಂದು ತಾಯಿ ಹುಡುಕುವಂತೆ. ಬೆರಗು ಮತ್ತು ಆಸೆ ಕಂಗಳಲ್ಲಿ, ಇಡೀ ನಗರ ಬ್ಯಾಟರಿ ಹಿಡಿದು ಹುಡುಕುವ ಉಮೇದು ಹೊಂದಿದ್ದೆ.
ಯಾವುದೇ ವೆಹಿಕಲ್ ಬಳಸದೇ ರೈಲು ಮತ್ತು ನಡಿಗೆಯ ಮೂಲಕ ಸುತ್ತಿ ಸುತ್ತಿ ಒಂದಿಷ್ಟು ಸಂತ್ರಪ್ತಭಾವ.

ಎಂದಿಗೂ ನಿದ್ರೆ ಮಾಡದ ನಗರ, ಪ್ರತಿ ಕನಸನ್ನು ಜೀವಂತಗೊಳಿಸುವ ನಗರ, ರಾತ್ರಿಯೆಲ್ಲಾ ಪಾರ್ಟಿ ಮಾಡುವ ನಗರವೂ ಹೌದು! ಮುಂಬಯಿಯಲ್ಲಿನ ರಾತ್ರಿಜೀವನವು ಯಾರನ್ನಾದರೂ ಬೆಚ್ಚಿ ಬೀಳುವಷ್ಟು ಬೆರಗುಗೊಳಿಸುತ್ತದೆ, . ಚಂದ್ರನು ಅಂತಿಮವಾಗಿ ವಿದಾಯ ಹೇಳುವ ಸಮಯಕ್ಕೆ ನಕ್ಷತ್ರಗಳು ಹೊರಬಂದ ಕ್ಷಣದಿಂದಲೇ, ಮುಂಬೈಯ ರಾತ್ರಗಳು ಬಹಳಷ್ಟು ಸೋಜಿಗ ವಾಗಿ ತೋರುತ್ತದೆ.
ರಿಕ್ಷಾವಾಲಾ ಹತ್ತಿರ ಕೇಳಿದ್ವಿ ಇಲ್ಲಿ ಮರೀನ್ ಡ್ರೈವ್ ಅಂತ ಇದೆಯಲ್ಲ ಅದೆಲ್ಲಿ ಇದೆ,ಅಂದಿದ್ದಕ್ಕೆ ಅಯ್ಯೋ,, ಅದಾ!! ಅಲ್ಲಿ ಬರೀ ಜೋಡಿ ಜೀವಗಳೇ ಇರೋದು ನೋಡೋಕೆ ಅಂತ ಏನಿಲ್ಲ ಅಲ್ಲಿ ಅವರಾಡುವ ಮಂಗಾಟ ನೋಡೋಕೆ ಸಿಗುತ್ತೆ ಅಷ್ಟೇ.. ಅಂತ ಮೂಗು ಮುರಿದು ಮುಗುಳ್ನಕ್ಕಿದ್ದ..
ಅಮಿತಾಬ್ ಬಚ್ಚನ್ ತನ್ನ ಆರಂಭಿಕ ದಿನಗಳನ್ನು ಮುಂಬೈನಲ್ಲಿ ಮೆರೈನ್ ಡ್ರೈವ್‌ನಲ್ಲಿ ಬೆಂಚ್ ಮೇಲೆ ಮಲಗಿದ್ದನೆಂದು ಎಲ್ಲೋ ತಿಳಿದುಕೊಂಡ ನನಗೆ ಅದನ್ನು ನೋಡಲೇ ಬೇಕಾಗಿತ್ತು.. ಮತ್ತು ಇಲ್ಲಿ ಚಿತ್ರೀಕರಿಸಲಾದ ಚಲನಚಿತ್ರಗಳಾದ ಮುಕದ್ದಾರ್ ಕಾ ಸಿಕಂದರ್, ಸಿಐಡಿ , ವೇಕ್ ಅಪ್ ಸಿಡ್,ಹೀಗೇ ಅನೇಕ ಚಿತ್ರ ಗಳು ಸಾಗರ ಭಾವಪೂರ್ಣ ಉಪಸ್ಥಿತಿಯನ್ನು ಮನಸುರೆಗೊಳ್ಳುವಂತೆ ಚಿತ್ರೀಕರಿಸಿದ್ದು ನೋಡಿದ್ದೆ.
ಅವೆಲ್ಲ ಸೆಳೆತಗಳು ಒಟ್ಟುಗೂಡಿ
ನನ್ನ ಆ ಪ್ರದೇಶದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿತ್ತು.
ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರ. . ಇಲ್ಲಿನ ಮುಸ್ಸಂಜೆ ಹಾಗೂ ಬೆಳಕು, ಕಡಲ ತೀರದ ನೈಸರ್ಗಿಕ ಸೌಂದರ್ಯದ ನೋಟವನ್ನು ಒದಗಿಸುತ್ತವೆ. ರಥವೇರಿಬರುವ ರವಿ ಸದ್ದಿಲ್ಲದೇ ಕಡಲಿನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ..ರಾತ್ರಿ ಪೂರ್ತಿ ಮಡಿಲೊಳಗೆ ಮಲಗಿದವನ ಇಂಚಿಂಚೇ ಹುರಿದುಂಬಿಸಿ ಕಳುಹಿಸುತ್ತಿರುವಂತೆ ಭಾಸವಾಗುತ್ತದೆ..
ದಿನವೆಲ್ಲ ದಣಿದ ಅದೇ “ಇನ”ನ ಮತ್ತೆ ಬಾಚಿ ಮಡಿಲೊಳಗೆ ಹುದುಗಿಸಿಕೊಳ್ಳುವ ಕಡಲ ಪ್ರಕ್ರಿಯೆಗೆ ನೋಡುತ್ತ ಕುಳಿತವರೂ ನಾಚಿ ನೀರಾಗಿ ಪ್ರೀತಿ ಹಂಚಿಕೊಳ್ಳುತ್ತಾರಾ?!
ಅದಕ್ಕೆ ಇಲ್ಲಿ ಪ್ರೇಮಿಗಳ ಕಲರವ ಜಾಸ್ತಿಯಾ ಅಂತನ್ನಿಸುತ್ತದೆ..
ಮುಂಬೈನ ಸಾಂಪ್ರದಾಯಿಕವಾಗಿ ಬಾಗಿದ ಕರಾವಳಿ ಬೌಲೆವಾರ್ಡ್‌ನ ಮೆರೈನ್ ಡ್ರೈವ್ ಅನ್ನು ಬೀದಿ ದೀಪಗಳ ಹೊಳೆಯುವ ದಾರದಿಂದಾಗಿ ಕ್ವೀನ್ಸ್ ನೆಕ್ಲೆಸ್ ಎಂದು ಕರೆಯತ್ತಾರೆ.ನಿಜಕ್ಕೂ ಇದು ಮುತ್ತಿನ ಹಾರದಂತೆ ಕಂಗೊಳುಸುತ್ತದೆ..
ರಾತ್ರಿಯ ಈ ಕಡಲ ತೀರದ ನೋಟ
ವರ್ಣನೆಗೆ ಸಿಕ್ಕುವಂತಹದ್ದಲ್ಲ..
ಬೀಸಿ ಬರುವ ಅಲೆಯ ನಡುವೆ ಹೊಳೆವ ಮುತ್ತಿನ ಹಾರ.
ಮೈ ಮನಗಳ ಮುದ ನೀಡಿ ಎಂತಹ ನೋವನ್ನೂ ಕಡಲು ಒಮ್ಮೆ ಕಸಿದುಕೊಂಡು ಬಿಡುತ್ತದೆ..
ಪಕ್ಕದಲ್ಲಿ ಕುಳಿತ ನಮ್ಮೆಜಮಾನ್ರ ಹೆಗಲಮೇಲೆ ನಾನೂ ತಣ್ಣಗೆ ಕೈ ಏರಿಸಿದ್ದೆ
ಆಗಲೇ ಪುಟ್ಟ ಮಗುವೊಂದು ಗುಲಾಬಿ ಹೂಗಳ ಗುಚ್ಚವನ್ನೇ ಹಿಡಿದು ತಗೊಳಿ ಸರ್ ಅನ್ನುತ್ತ ನಮ್ಮ ಹತ್ತಿರ ಬಂದು ನಿಂತಿತ್ತು..
ಅರೇ ಈಗ್ಯಾಕೆ ಗುಲಾಬಿ ಎನ್ನುವಂತೆ ಪುಟ್ಟ ಪೋರನ ದಿಟ್ಟಿಸಿದರೆ ಪ್ರಪೋಸ್ ಮಾಡೋಕೆ ಅನ್ನೋದೇ..
ತಗೊಳ್ಳಲು ಕೈ ಚಾಚಿದರು. ಯಾರಿಗೆ ಅಂದೆ, ಯಾರಿಗಾದರೂ ಆಗುತ್ತೆ ಅಂದಾಗ ನಾನು ಕಣ್ಣಿಟ್ಟು ಆ ಪೋರನ ಓಡಿಸಿದ್ದೆ..
ಅವನು ಕೈಯೊಳಗೆ ಹೂವು ಇಟ್ಟೇ ಹೋಗಿದ್ದ..
ನನಗೆ ಆಶ್ಚರ್ಯ ವಾಗಿದ್ದು ಆ ಪುಟ್ಟ ಹುಡುಗನ ಬುದ್ದಿವಂತಿಕೆ ಮತ್ತು ವ್ಯಾಪಾರೀ ಗುಣ..
ಹೂ ಗುಚ್ಛವನ್ನು ಹಿಡಿದು ಸುಮ್ಮನೇ ಅತ್ತಿಂದಿತ್ತ ಓಡಾಡುತ್ತಾನೆ ಅಷ್ಟೇ..
ಕುಳಿತು ಇಷ್ಟಿಷ್ಟೇ ನುಲಿಯುತ್ತಿದ್ದ ಆಸಾಮಿಗೆ ತಗೊಳಿ ಅಂತ ಒತ್ತಾಯ ಮಾಡತೊಡಗಿದ..
ಅರೇ ಎಂತಹ ಚಾಲಾಕಿ ಪೋರ ಯಾರಿಗೆ ಯಾವ ಸಮಯದಲ್ಲಿ ಹೂವು ಬೇಕು ಅಂತ ನಿಖರವಾಗಿ ಊಹಿಸಿ ಮಾರಾಟಮಾಡುವ ಅವನ ಜಾಣತನಕ್ಕೆ ದಂಗಾಗಿದ್ದೆ.
ಬದುಕು ಎಲ್ಲವನ್ನೂ ಕಲಿಸುತ್ತೆ.ಅವನು ಯಾವ ಸೈಕಾಲಜಿ ಸ್ಟಡಿ ಮಾಡಿಲ್ಲ ಆದರೆ ಆ ಪುಟ್ಟ ಪ್ರಪಂಚದೊಳಗೆ ಜೀವನಾನುಭವ ಕರಾರುವಕ್ಕಾಗಿದೆ ಅನ್ನುಸಿತು..
ಅವನು ಕೆಂಪು ಗುಲಾಬಿ ಖರೀದಿಸಿದ್ದೂ ಆಯ್ತು
ಈ ಪರಿಯ ಜನ ಜಂಗುಳಿಯ ಜಾತ್ರೆಯಂತ ಜಾಗದಲ್ಲಿ ಅದೆಂತ ಏಕಾಂತ ಬಯಸಿ ಬರುತ್ತಾರೆ ಎನ್ನುವದು ಅರ್ಥವೇ ಆಗಲಿಲ್ಲ..
ಬಹುಶಃ ದಟ್ಟ ಬಯಲಿನಲ್ಲಿ
ಸಾಗರಾಭಿಮುಖವಾಗಿ ಕುಳಿತಾಗ ಸಾಗರದಂತೆ ಭಾವಗಳೂ ಉಕ್ಕುತ್ತವೆಯೇನೋ..
ಅಳುವ ಕಂಗಳು.ಸಂತೈಸುವ ಕೈಗಳು. ಜಗಳವಾಡುವ ಬಾಯಿಗಳು,ಸೋಲುವ ಮನಸುಗಳು,ಕ್ರಷ್ ಆಗುವ ಹೃದಯಗಳು,
ಮುದ್ದಾಡುವ ದೇಹಗಳು..
ಶೂನ್ಯ ದಿಟ್ಟಿಸುವ ಒಂಟಿ ಜೀವಗಳು,,
ಅಲ್ಲಿ ಎಲ್ಲವೂ ನಡೆಯುತ್ತದೆ..
ರವಿಯ ಉದಯ ಕಾಲದಿಂದ ಅಂತ್ಯ ಕಾಲದವರೆಗೂ ನಿರಾತಂಕವಾಗಿ ಕುಳಿತು ನಿರಾಳವಾಗಿ ಹೋಗುತ್ತಾರೆ.
ಮಧ್ಯ ಮಧ್ಯ ಬರುವ ನಮ್ಮಂತ ಪ್ಯಾಮಿಲಿಗಳು ಕೇವಲ ಪೋಟೊ ಕ್ಕೆ ಪೋಸ್ ಕೊಟ್ಟು ಹೋಗುತ್ತಿರ್ತಾರೆ ಅಷ್ಟೇ..
ಬೆನ್ನಿಗೆ ಕಣ್ಣಿಲ್ಲವೆಂದು ಕುಳಿತೇ ಇರುವ ಜೀವಗಳಿಗೆ ನೋ ಟೆನ್ಷನ್…ಅಲ್ಲಿ ಉಕ್ಕುವ ಶರಧಿ ಓಕುಳಿಯಾಡುವ ಸೂರ್ಯ, ರಂಗೇರುವ ಜೀವಗಳು ಅಷ್ಟೇ ಪ್ರಪಂಚ ಅಲ್ಲಿ ಯಾರು ಯಾರನ್ನೂ ನೋಡುವದೇ ಇಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಅವಶ್ಯಕತೆಗಳು. ಪಬ್ಲಿಕ್ ನಲ್ಲಿ ಒಮ್ಮೆ ಪ್ರೀತಿ ಮಾಡ್ಬೇಕು ಅನ್ನುವ ಛೋಟೀ ಸಿ ಆಸೆಯನ್ನು ಮದುವೆಯಾದವರೂ ಅವರವರ ಸಂಗಾತಿ ಜೊತೆಗೇ ತೀರಿಸಿಕೊಳ್ಳಬಹುದು..
ಶುದ್ಧ ಪ್ರೇಮಿಗಳ ಭಾವೋದ್ವೇಗದ ವಿಶಾಲ ಬಯಲುದಾಣ ಈ ಮರೀನ್ ಡ್ರೈವ್ ಎಂಬ ಮೋಹಕ ಜಾಗ..
ಕುಳಿತಷ್ಟೂ ಹೊತ್ತೂ ಹೊಸ ಹೊಸ ಅನುಭವಗಳ ಜೊತೆಗೆ ಪ್ರಕೃತಿ ಸೌಂದರ್ಯ ವನ್ನೂ ಭರಪೂರ ಸವಿಯಬಹುದು.
ಮಕ್ಕಳಿಂದ ವಯೋವೃದ್ಧರವರೆಗೂ ನಿರ್ಭಿಡೆಯಾಗಿ ಮುದಗೊಳ್ಳುವ ಜಾಗ..
ವಿಶೇಷವಾಗಿ ರವಿವಾರದಂದು ನೂರಾರು ಬೀದಿ ಮಾರಾಟಗಾರರು
ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು.
******