ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ
ಮೂಗಪ್ಪ ಗಾಳೇರ
ಅನಾಥ ಶವವಾಗಿ ಮಲಗಿರುವ
ನನ್ನ ಒಂದೊಂದು ಕನಸುಗಳು
ಇನ್ನೂ ಉಸಿರಾಡುತ್ತಿವೆ ಎಂದರೆ
ನೀ ಬಿಟ್ಟು ಹೋದ ನೆನಪುಗಳು
ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ|
ಉಸಿರಾಟಕ್ಕೂ ಉಸಿರಿಗು
ಕನಸುಗಳಿಗು ನೆನಪುಗಳಿಗು
ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ
ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ
ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು
ನಾನೆಟ್ಟ ಹೂವಿನ ಗಿಡಗಳು
ನೂರಾರು ಜಾತಿಯದ್ದಾಗಿದ್ದರೂ
ಅವುಗಳಿಂದ ಸೂಸುವ ಕಂಪು ಒಂದೆಂದು
ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ
ತಿರುಗಿಸಿ ಹಿಂದಿಟ್ಟರೆ
ನನ್ನ ಹೃದಯದ ಆಕೃತಿ ಅಷ್ಟೇ ಅಲ್ಲ
ನನ್ನ ಭವಿಷ್ಯದ ಚಿತ್ರಣವು ಬದಲಾಗಬಹುದು
ಕೆರೆಯ ದಂಡೆಯ ಮೇಲೆ
ಕೂತು ಕಂಡ ಕನಸುಗಳಿಗೆಲ್ಲಾ……
ಒಂಟಿಯಾಗಿದ್ದಾಗ ಬರೆದ ಕಾವ್ಯಗಳಿಗೆಲ್ಲಾ……
ಮತ್ತೆ ನಿನ್ನ ಬಾಚಿ ತಬ್ಬಿಕೊಳ್ಳುವ ಬಯಕೆ
ಬಂದುಬಿಡು ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ……!
****************
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ