ಕಾವ್ಯಯಾನ

ಸೀರೆ ಮತ್ತು ಬಟ್ಟೆ

Image result for images of spreaded sarees

ಡಾ.ಗೋವಿಂದ ಹೆಗಡೆ

ಸೀರೆ ಮತ್ತು ಬಟ್ಟೆ

ಆದರೂ ಈ ಸೀರೆ ಎಂಥ ಯಕ್ಷಿಣಿ!
ಮೈತುಂಬ ಹೊದ್ದ ಸೆರಗಾಗಿ
ಗಜಗೌರಿ ಎನಿಸಲೂ ಸೈ
ಮಾಟದ ಬೆನ್ನು ಸೊಂಟ ಆಕರ್ಷಕ
ಹೊಕ್ಕುಳ ಸುಳಿ ತೋರಿಸಿ ಹಸಿವು
ಕೆರಳಿಸಲೂ ಸೈ

‘ನಾವೇನು ಸೀರೆ ಉಟ್ಟಿಲ್ಲ’ ಎಂದೆಲ್ಲ
ಪೌರುಷ ತೋರಿಸುವಂತಿಲ್ಲ ಈಗ
ನೀರೆಗೂ ಸೀರೆ ಕಡ್ಡಾಯವಲ್ಲ!
ಆಯ್ಕೆಗಳಿವೆ ಅವಳಿಗೆ

ಆದರೂ ‘ಸೆರಗು ಸೊಂಟಕ್ಕೆ ಸುತ್ತಿ’
‘ವೀರಗಚ್ಚೆ ಹಾಕಿ’ ಎಂದೆಲ್ಲ
ನಾರೀಶಕ್ತಿಯನ್ನು ಬಣ್ಣಿಸುವುದುಂಟು

ಗಂಡ ಅರ್ಧ ಸೀರೆಯನ್ನು ಹರಿದು
ಸುತ್ತಿಕೊಂಡು ನಾಪತ್ತೆಯಾದಾಗ
ದುರುಳ ಉಟ್ಟ ಸೀರೆಯನ್ನು
ಸೆಳೆಯುವಾಗ
ಎದ್ದು ನಿಂತಿದ್ದಾಳೆ ಅವಳು
ತನ್ನ ಅಂತಃಶಕ್ತಿಯನ್ನೇ ನೆಚ್ಚಿ

ಸೀರೆಯ ನೆರಿಗೆಯನ್ನು ಎಷ್ಟೊಂದು ಸಲ
ಬೆರಳುಗಳು ನೇವರಿಸಿವೆ
ಸುಕ್ಕಾಗಿದ್ದು ಸೀರೆ ಮಾತ್ರವೇ?
ಸೆರಗಿನ ಕೊನೆ ಕಣ್ಣ ಪಸೆಯನ್ನು
ಎಷ್ಟೆಲ್ಲ ಬಾರಿ ಹೀರಿ ಸಂತೈಸಿದೆ
ಯಾವೆಲ್ಲ ನಿಟ್ಟುಸಿರು ಕರಗಿದೆ
ಸೀರೆಯ ಮೃದು ಒಡಲ ಹಿಂದೆ

ಗಂಡಸಿನ ಅಹಂಕಾರಕ್ಕೋ ಅವಳು
ಹಾಸಿಗೆ
ಅಥವಾ ಪೊರೆಯುವ ಮಡಿಲು

ಅವಳ ಹುಟ್ಟೇ ಬೇರೆ!
ಎದೆಯೂಡೆಂದ ತ್ರಿಮೂರ್ತಿಗಳ
ಕೂಸಾಗಿಸಿ ಸಲಹಿದ್ದಾಳೆ ಅವಳು
ಅಜಾತನಿಗೂ ಎದೆಹಾಲು ಉಣಿಸಿದ್ದಾಳೆ
ಜಾತನಿಗೆ ತಾಯಿಯಾಗುವುದು-
ಅದೇನು ಮಹಾ!

ಕಾಡುವ ಕಣ್ಣು ಕೈ
ತಾಳಿ ಕಟ್ಟಿದ ಕಾರಣಕ್ಕೆ ತನ್ನ
ಹಕ್ಕೆನ್ನುವ ಪುರುಷಾಮೃಗ
ದ ತುರಿಕೆ ತೀಟೆಗೆ
ಬುದ್ಧಿ ಬಂದಿರಬಹುದೇ

ಸೀರೆಯಲ್ಲ, ನೂಲಿನ ಹಂಗನೂ
ಕಳಚಿ ನಡೆದಾಗ ಅಕ್ಕ
ಸಂತೆ-ಸೀಮೆಯ ದಾಟಿ

ಬಯಲನ್ನು ಬಿತ್ತಿಕೊಂಡಾಗ
ಬಟ್ಟೆಯ ಗೊಡವೆಯೆಲ್ಲಿ

***********

Leave a Reply

Back To Top