ಕಾವ್ಯಯಾನ

ದೇವರ ದೇವ

Silhouette of Man at Daytime

ಅಂಜನಾ ಹೆಗಡೆ

ಕಾಲ ಎಲ್ಲವನ್ನೂ ಮರೆಸುತ್ತದೆ
ಎಂದವ
ಕಾಲಕ್ಕೆ ಕಿವುಡಾಗಿ
ಕಣ್ಣುಮುಚ್ಚಿ
ಉಟ್ಟಬಟ್ಟೆಯಲ್ಲೇ
ಧ್ಯಾನಕ್ಕೆ ಕುಳಿತಿದ್ದಾನೆ

ತಂಬೂರಿ ಹಿಡಿದು
ತಂತಿಗಳ ಮೇಲೆ ಬೆರಳಾಡಿಸುತ್ತ
ಶ್ರುತಿ ಹಿಡಿಯುತ್ತಾನೆ
ಬೆರಳಲ್ಲಿ ಹುಟ್ಟಿದ
ಬೆಳಕಿನ ಕಿರಣವೊಂದು
ನರಗಳಗುಂಟ ಹರಿದು
ಬೆಂಕಿಯಾಗಿ ಮೈಗೇರಿದೆ
ಉಸಿರೆಳೆದುಕೊಳ್ಳುತ್ತಾನೆ
ದೇವರ ಗೆಟಪ್ಪಿನಲ್ಲಿ
ಕಾಲಮೇಲೆ ಕೈಯೂರಿದ್ದಾನೆ
ಕಪ್ಪು ಫ್ರೆಮಿನ
ದಪ್ಪಗಾಜಿನ ಕನ್ನಡಕ
ರೂಪಕವಾಗಿ
ಮುಚ್ಚಿದ ಕಿವಿಯ ಮೇಲೆ
ಬೆಚ್ಚಗೆ ಕೂತಿದೆ

ಕೈಗೆ ಸಿಗದ
ಕಣ್ಣಿಗೆ ಕಾಣಿಸದ
ಶಬ್ದ ಹಿಡಿಯಲು ಕುಳಿತವನ
ಮೈಯೆಲ್ಲ ಕಣ್ಣು….
ಮುಚ್ಚಿದ ಕಣ್ಣೊಳಗೊಂದು ರಾಗ
ತೆರೆದರೆ ಇನ್ಯಾವುದೋ ತಾಳ
ಮೈಮರೆಯುತ್ತಾನೆ
ರೆಪ್ಪೆಗೊತ್ತಿದ ತುಟಿಗಳನ್ನು
ಧಿಕ್ಕರಿಸಿದವನ
ಹಣೆಮೇಲಿಂದ ಬೆವರಹನಿಯೊಂದು
ಲಯತಪ್ಪದಂತೆ
ಮುತ್ತಾಗಿ ತುಟಿಗಿಳಿದಿದೆ
ಕಾಲವನ್ನೇ ಮರೆಯುತ್ತಾನೆ
ಕಾಲವನ್ನು ಮರೆಸುವವ

ಕಳಚಿಕೊಂಡ ಕಣ್ಣರೆಪ್ಪೆಯೊಂದು
ಧ್ಯಾನ ಮರೆತಿದೆ

********************************

13 thoughts on “ಕಾವ್ಯಯಾನ

  1. ಕವಿತೆಯಲ್ಲಿ ನೀವು ಕಂಡಿರುವ ಅನುಭವ ತುಂಬಾ ಚೆನ್ನಾಗಿದೆ. ಕಳಚಿಕೊಂಡ ಕಣ್ಣರೆಪ್ಪೆಯೊಂದು ಧ್ಯಾನ ಮರೆತಿದ್ದ ಎಂಬ ಸಾಲು ವಿಶೇಷವಾಗಿದೆ.

    1. ದನ್ಯವಾದಗಳು ಸರ್,ಅಂಜನಾರವರ ಪರವಾಗಿ.ಅವರಿಗೆ ಕಮೆಂಟ್ ಮಾಡಲು ಸಾದ್ಯವಾಗ್ತಿಲ್ಲ

    1. ಕಾಲವನ್ನು ನೆಚ್ಚಿಕೊಂಡವನಿಗೆ ಅದಿನ್ಯಾವ ಧ್ಯಾನ ಸಾಧ್ಯವಾದೀತು ಬಿಡಿ !!!

  2. ಅಂಜನಾ ಬಹಳ ಚನ್ನಾಗಿದೆ.ಇಷ್ಟವಾಯ್ತು

Leave a Reply

Back To Top