ನಮ್ಮ ಕವಿ

ವಿಜಯಕಾಂತ ಪಾಟೀಲ

ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..!
ಅವರು ಪಡೆದ ಹಲವಾರು ಗೌರವಗಳೂ.!!

ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು…

ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು…

ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು…

ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ ೧) ಮಾಸದ ಕಲೆಗಳು (1994), ೨) ಸಲಸಲದ ಪಾಡು (2003), ೩) ನೂರು ಬಣ್ಣದ ಕಣ್ಣು (2012), ೪) ಹೌದು ನಾನು ಕೌದಿ (2013), ೫) ಇಂತಿ ನದಿ (20050) ಕವನ ಸಂಕಲನ…

ಅವರ ಪ್ರಬಂಧಗಳು ವಜನುಕಟ್ಟು (2005).
ಮಕ್ಕಳ ಸಾಹಿತ್ಯವು ಅಮ್ಮ ಅಂದ್ರೆ ಅಷ್ಟಿಷ್ಟಲ್ಲ-ಕವಿತೆಗಳು (2014). ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016).

ಅವರ ಇತರೆ ಕೃತಿಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು-2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು- 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015).

ಅವರಿಗೆ ಹಲವಾರು ಪ್ರಶಸ್ತಿ ಬಹುಮಾನ ಹಾಗೂ ಗೌರವ ಪಡೆದರು ವಿಜಯಕಾಂತ ಪಾಟೀಲರು. ಅವುಗಳು ಹೀಗಿವೆ– ಬೇಂದ್ರೆ-ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ…

ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ(2011)ಯನ್ನೂ ವಹಿಸಿದ್ದರು…

ಈಗವರ ಕೃತಿಗಳ ಬಗೆಗೆ ನೋಡೋಣ–

ಈ ವರೆಗಿನ ವಿಜಯಕಾಂತ ಪಾಟೀಲರ ಕೃತಿಗಳ ಕಿರು ಪರಿಚಯ…

೧.ಮಾಸದ ಕಲೆಗಳ

ಈ ಮೊದಲ ಸಂಕಲನದ ಮೂಲಕ ಭವಿತವ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ,ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿನ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸ್ತುತ್ಯಾರ್ಹ ಸಂಗತಿ

೨. ಸಲಸಲದ ಪಾಡು

ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ

೩. ನೂರು ಬಣ್ಣದ ಕಣ್ಣು:ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜದ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು….

೪. ಹೌದು ನಾನು ಕೌದಿ:

ಇಲ್ಲಿ ಕವಿಯು ‘ಸ್ವಕಾವ್ಯ ಹಾದಿ’ಯ ತಿರುವಿನಲ್ಲಿದ್ದಾರೆ.
ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜಭಾಷಾಸಾಮರ್ಥ್ಯದ ಮೂಲಕ,ಸಮಕಾಲೀನ ಕಾವ್ಯದಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಶಕ್ತಿಯವು. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ…

೫. ಇಂತಿ ನದಿ

ಇಲ್ಲಿ ಕವಿಯದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು ಈ ಕವಿಯದು.ನವ ಬಂಡಾಯದ ಅಸ್ಪಷ್ಟ ಚಹರೆಗಳು ಇಲ್ಲಿನ ಕವಿತೆಗಳಲ್ಲಿ ಗೋಚರಿಸುತ್ತವೆ…

೬. ಬೆವರ ಬಣ್ಣ:

ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ ಇಲ್ಲಿ ನಡೆದಿದೆ. ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಕವಿ ಈ ಸಂಕಲನದಲ್ಲೂ ಸಾಗಿದ್ದಾರೆ.ನೆಲಮೂಲ ಸಂಬಂಧವನ್ನು ಗಾಢವಾಗಿ ಉಳಿಸಿಕೊಂಡ ಕವಿಯ ಕಾವ್ಯದ ಧೋರಣೆ ಜೀವಪರ,ನಿಸರ್ಗಪರವಾಗಿ ಇದ್ದಷ್ಟೇ ಆಳದಲ್ಲಿ ಅದು ಜನಪರ ನಿಲುವಿನಲ್ಲಿ ಅರಳಿದೆ…

ಹೀಗೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ವಿಜಯಕಾಂತ ಪಾಟೀಲರು…

**
–ಕೆ.ಶಿವು.ಲಕ್ಕಣ್ಣವರ

2 thoughts on “ನಮ್ಮ ಕವಿ

  1. ಯುವಕರಿಗೆ ಯುವ ಬರಹಗಾರಿಗೆ ಸ್ಪೂರ್ತಿಯ ಕವಿ ವಿಜಯಕಾಂತ್ ಪಾಟೀಲ ಸರ್. ನನ್ನ ಕವಿತೆಗೆ ಪ್ರಾರಂಭದಲ್ಲಿ ಪ್ರೋತ್ಸಾಹ ಕೊಟ್ಟು ಉತ್ಸಾಹ ತುಂಬಿದವರಲ್ಲಿ ಪಾಟೀಲ್ ಸರ್ ಕೂಡ ಒಬ್ಬರು.

Leave a Reply

Back To Top