ಕವಿತೆ
ರಾಮಸ್ನಾಮಿ ಡಿ.ಎಸ್
ಸಂಗೀತ
ಕಛೇರಿಯ
ತಂಬೂರಿ
ಶೃತಿ
ಹೆಣ್ಣು.
ಬಿಗಿತ ಹೆಚ್ಚಾದರೆ
ತುಂಡಾಗುವ ತಂತಿ
ಸಡಿಲಾದರೆ ಹೊಮ್ಮದು ನಾದ
ತನ್ನ ಕಂಠಸಿರಿಗೆ
ತಕ್ಕಂತೆ ಶೃತಿ
ಹೊಂದಿಸಿಕೊಳ್ಳುವುದು
ಗಾಯಕ
ನ ಜವಾಬ್ದಾರಿ.
ವೀಣೆ ಸಿತಾರು ಸರೋದುಗಳನ್ನು
ಬೆರಳಿನಿಂದಲೇ ನುಡಿಸಬಹುದಾದರೂ
ರಕ್ಷಣೆಗೆ ಕವಚ ಇರುವಂತೆಯೇ
ಪಿಟೀಲು ನುಡಿಯುವುದು ಕಮಾನಿಗೆ
ಶೃತಿ ತಪ್ಪದೇ ಇದ್ದರೆ
ಕಛೇರಿ ಕಳೆಗಟ್ಟುವುದಕ್ಕೆ
ಇದ್ದೇ ಇವೆ ಪಕ್ಕ ವಾದ್ಯದ
ಸಹಕಾರ, ತನಿ ಆವರ್ತನ.
ಸಂಸಾರದ ಕಛೇರಿಯೂ
ಥೇಟು ಸಂಗೀತದ ಹಾಗೇ
ಶೃತಿ ತಪ್ಪದ ಹಾಗೆ
ತಾಳ ಮರೆಯದ ಹಾಗೆ
ಪರಸ್ಪರರ ಗೌರವಕ್ಕೆ ಹಾನಿ ಮಾಡದ ಹಾಗೆ
ಬದುಕ ಹಾಡು ಹಾಡಬೇಕು
ಇಹದ ಇರವ ಮರೆಯಬೇಕು.
*******