ಒಂದು ಹೆಣ್ಣಿನ ಸ್ವಗತ.
ಜ್ಯೋತಿ ಡಿ.ಬೊಮ್ಮಾ
ನನಗಾರ ಭಯ..!
ನಾನು ಜನ್ಮ ಕೊಡುವ ಹೆಣ್ಣು ಮಗುವನ್ನು
ಈ ಲೋಕದಿ ತರಲು ನನಗಾರ ಭಯ..
ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..
ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವ
ಧೈರ್ಯ ನನಗಿಲ್ಲದಿರುವದು..
ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!
ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..
ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..
ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವ
ನನಗೂ ಹೆಣ್ಣು ಮಗು ಬೇಕಾಗಿಲ್ಲ..
ಏಕೆ.. ನಾನನುಭವಿಸಿದ ತವಕ ತಲ್ಲಣಗಳು
ಅವಳು ಅನುಭವಿಸುವದು ಬೇಡವೆಂದೇ…
ಕೆಟ್ಟ ಕಾಮುಕರಿಗೆ ಬಲಿಯಾದೀತೆಂದು
ದಿಗಿಲುಗೊಂಡೇ…
ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದು
ಭಯಗೊಂಡೆ…
ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರ
ದುರುಳುತನಕ್ಕಂಜಿಯೇ…
ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..
ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.
ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!
ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ..
ಹೆದರದಿರು ಮನವೇ..
ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದು
ತಿಳಿದಿರು..
ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟ
ದಾರಿ ಇದೆ..
ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..
ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..
ಹೆಣ್ಣು ಹೆಣ್ಣೆಂದು ಜರೆಯಬೇಡ..
ಹೆಣ್ಣು ಹೇರಲು ಅಂಜಬೇಡ..
ಹೆಣ್ಣು ಬಾಳಿನ ಕಣ್ಣೆಂಬುದು ಮರೆಯಬೇಡ.
************