ಇಲ್ಲಿ ಕೇಳಿ…
ದಾಕ್ಷಾಯಿಣಿ ವಿ ಹುಡೇದ.
ಅದಾಗಲೇ ಒಂದು ದೋಣಿಯನೇರಿ
ಹರಿವ ನದಿಯ ಮುಕ್ಕಾಲು ದೂರ ದಾಟಿ
ದಡ ಮುಟ್ಟಲಿರುವವನನ್ನು
ಹಚ್ಚಿಕೊಳ್ಳುವುದೂ
ನೆಚ್ಚಿಕೊಳ್ಳುವುದೂ ಸಣ್ಣ ಮಾತೇ?
ಇಲ್ಲಿ ಹೇಳುವೆ ಕೇಳಿ ;
ಹಾಗೆ ಹೊರಟವನ ಮೊಗ ನೋಡಿ
ಮುಗುಳ್ನಗೆ ಬೀರಿ
ನನಗೆ ನಾನೇ
ಭರವಸೆಯ ಚಿಮಣಿ ದೀಪ
ಕಡ ತಂದುಕೊಳ್ಳುವುದು ಸಣ್ಣ ಮಾತೇ?
ವಾರದಲ್ಲೆರಡು ಸಲ
ಒಮ್ಮೊಮ್ಮೆ ತಿಂಗಳಿಗೊಂದು ಸಲ
ಹುಡುಕಿಕೊಂಡು ಬಂದು
ಮೊಳ ಮಲ್ಲಿಗೆ
ತುಂಡು ಬ್ರೆಡ್ಡು ತಂದು
“ನಾ ನಿನ್ನವನೇ” ಎಂದುಲಿವವನ
ನಂಬುವುದು ಸಣ್ಣ ಮಾತೇ?
ಇಲ್ಲಿ ಹೇಳುವೆ ಕೇಳಿ ;
ನೀತಿ ಅನೀತಿಯ ಖಾತೆ ಕಿರ್ದಿಯಲ್ಲಿ
ಗುಣಾಕಾರ ಭಾಗಾಕಾರ ಮಾಡಿ
ಎದುರಿನವರೆದೆಗೆ ಬಾಣ ಹೂಡುವವರ ಮಾತುಗಳಿಗೆ
ಉತ್ತರ ನನ್ನಲ್ಲೂ ಇವೆ.
ಆದರೆ.. ಆದರೆ…
ಇದ್ದುದನ್ನು ಇದ್ದಂತೆ ಹೇಳಿ
ನಿಮ್ಮ ಮನಸು ಮುರಿವ ಇರಾದೆ
ನನ್ನೆದೆಯಲ್ಲಿ ಹುಟ್ಟಲಿಲ್ಲ,
ಪ್ರೀತಿ ಬಯಸಿ ಬಂದವನ ಎದೆಗೆ
ಮಳೆ ಸುರಿಸಿದ ಒಂಟಿ ಹೆಣ್ಣು ನಾನು,
ನೀವಾಡಿದ ಮಾತುಗಳು ನನ್ನ ಸೆರಗ ಚುಂಗಿನಲ್ಲಿ ಹಾಕಿಕೊಂಡಿರುವೆ ಗಂಟು,
ಬಿಡುವಾದಾಗ ಬಿಚ್ಚಿ ನೋಡಿ
ನಿಮಗೂ ಅಲ್ಲಿ ಪ್ರೀತಿ ಉಂಟು.
ಒಡೆದ ಮನೆಯ
ಬಿದ್ದ ಗೋಡೆಯ
ಮುಗಿದ ಯುದ್ಧದ ಸೂತಕ
ಏನೆಂದು ಬಲ್ಲವಳು ನಾನು,
ನನ್ನೊಲವ ಪ್ರಶ್ನಿಸುವ ಮೊದಲೊಮ್ಮೆ ನಿಮ್ಮನ್ನು ನೀವು ಓದಿ, ಉತ್ತರ ಸಿಕ್ಕ ದಿನ ಪಂಚಾಯ್ತಿಗೆ ಚಂದ್ರನನ್ನು ಕರೆಯೋಣ.
**********
super akka
ಅತ್ಯಂತ ಸುಂದರವಾದ ಸೊಗಸಾದ ಕವಿತೆ
ಎಷ್ಟು ಛಂದ ಬರೀತೀರಿ ಮೆಡಮ್
ಅಪರೂಪಕ್ಕೆ ಒಮ್ಮೆ ಊಟ ಹಾಕಿದರೂ ಮೃಷ್ಟಾನ್ನ ಭೋಜನ
ಬಾಳ ದಿವಸದ ನಂತರ ಒಂದು ಛಂದ ಕವಿತೆ ಓದಂಗಾತು