ಗೆಳತಿ ಕೇಳೆ
ದೀಪಿಕಾಬಾಬು
ಗೆಳತಿ ಕೇಳೆ, ಎಲ್ಲರಂತಲ್ಲ ನನ್ನವನು,
ನನ್ನವನು ನನಗಾಗಿ ಇರುವವನು..!
ತನ್ನ ಹಣೆಯ ಬರಹ ಬರೆದುಕೊಳ್ಳಲಾಗದೆ
ಬೇರೆಯೆಲ್ಲರ ವಿಧಿ ಲಿಖಿತ ಬರೆಯುತ್ತ,
ಸೃಷ್ಟಿಸಿದ ಮಗಳಾದ ಸರಸ್ವತಿಯನ್ನು ವರಿಸಿದ
ಮೂರು ಶಿರವುಳ್ಳ ಬ್ರಹ್ಮನಂತಲ್ಲ,
ಕಣೆ ಗೆಳತಿ ನನ್ನವನು..!
ಸ್ಮಶಾನದ ಅಧಿಪತಿಯಾಗಿ ಭಸ್ಮ ಬಳಿದುಕೊಂಡು
ಕೈಲಾಸನಾಥನೂ ಎನಿಸಿಕೊಂಡು
ಪಾರ್ವತಿಯನ್ನು ವಿವಾಹವಾಗಿ
ಗಂಗೆಯನ್ನು ಶಿರದಲ್ಲಿ ಮುಡಿದಿಹ ಶಂಕರನಂತಲ್ಲ ,
ಕಣೆ ಗೆಳತಿ ನನ್ನವನು..!
ಶಾಂತ ಸಾಗರದಲ್ಲಿ ಸರ್ಪದ ಮೇಲೆ ಆಯಾಗಿ,
ಲೋಕದ ಬಗ್ಗೆ ಚಿಂತಿಸದೆ ಮಲಗಿರುವ,
ಶ್ರೀ ಮಹಾಲಕ್ಷ್ಮಿಯು ಕಾಲೊತ್ತಿ ಸೇವೆಗೈದರು
ಪದ್ಮಳ ಅಂದಕ್ಕೆ ಮನಸೋತ ವಿಷ್ಣುವಿನಂತಲ್ಲ,
ಕಣೆ ಗೆಳತಿ ನನ್ನವನು..!
ನವಮಾಸ ಹೊತ್ತು ಹೆತ್ತು ಹಾಲುಣಿಸಿದ
ಹೆತ್ತ ತಾಯಿಯ ಶಿರವನ್ನು
ಮಾತೃ ವಾತ್ಸಲ್ಯ ಮರೆತು ಕಟುಕನಂತೆ
ಕಡಿದು ಹಾಕಿದ ಪರಶುರಾಮನಂತಲ್ಲ,
ಕಣೆ ಗೆಳತಿ ನನ್ನವನು..!
ಯಾರೋ ಮೂರ್ಖನೊಬ್ಬನ ಮಾತಿಗೆ ಕಿವಿಗೊಟ್ಟು
ತನ್ನ ನಂಬಿ ಬಂದ ಮಡದಿಯನ್ನು ಶಂಕಿಸಿ
ತುಂಬು ಗರ್ಭಿಣಿಯ ಕಣ್ಣಿಗೆ ಬಟ್ಟೆ ಕಟ್ಟಿ
ಕಾಡಲ್ಲಿ ಬಿಟ್ಟುಬರಲು ಆಜ್ಣಾಪಿಸಿದ ಶ್ರೀರಾಮನಂತಲ್ಲ,
ಕಣೆ ಗೆಳತಿ ನನ್ನವನು…!
ರಾಜ್ಯಗಳ ಆಸೇಗೆ, ತನ್ನ ಸ್ಪಾರ್ಥಕ್ಕೆ ಮಡಿದು
ಪಗಟೆಯ ಆಟದಲ್ಲಿ ಪತ್ನಿಯನ್ನು ಅಡವಿಟ್ಟು ಸೋತು,
ತುಂಬಿದ ಸಭೆಯಲ್ಲಿ ಅವಳ ವಸ್ತ್ರ ಅಪಹರಣ ಮಾಡುವಾಗ
ಶಿಕಂಡಿಗಳಂತೆ ತಲೆ ತಗ್ಗಿಸಿ ಕೂತ ಪಂಚ ಪಾಂಡವರಂತಲ್ಲ,
ಕಣೆ ಗೆಳತಿ ನನ್ನವನು…!
ನೀಲಿ ವರ್ಣದ ಸ್ತ್ರೀ ಲೋಲ ಎನಿಸಿರುವ
ಹದಿನಾರು ಸಾವಿರ ಮಡದಿಯರೊಂದಿಗೆ ಕ್ರೀಡೆ ಆಡುವ
ಕಪಟ ನಾಟಕದಾರಿ ಎಲ್ಲದರ ಸೂತ್ರಧಾರ
ಪರಮಾತ್ಮ ಎಂದು ಪೂಜಿಸುವ ಶ್ರೀಕೃಷ್ಣ ನಂತಲ್ಲ,
ಕಣೆ ಗೆಳತಿ ನನ್ನವನು…!
ಗೆಳತಿ ಕೇಳು ಅವರಿವರಂತಲ್ಲ ನನ್ನವನು
ಅವನಂತಿಲ್ಲ ಯಾರು
ಅವನೇ ನನ್ನವನು,
ನಾನು ಮೆಚ್ಚಿದವನು,
ಈ ಆಧುನಿಕ ಜಗದವನು,
ಉತ್ತಮ ಪುರುಷೋತ್ತಮನು.!!
*******