ವಿಪ್ಲವದ ಪತಂಗ
ಶೃತಿ ಮೇಲುಸೀಮೆ
ವಯಸ್ಸಿನ್ನೂ ಹದಿನಾಲ್ಕು
ಎತ್ತ ನೋಡಿದರೂ
ಹರಡಿರದ ಮೈ..
ಸಿನಿಮಾ ಮೋಡಿಯೋ
ಹದಿವಯಸ್ಸಿನ ಮಂಕೋ
ಆಗಿತ್ತಂತೆ ಪ್ರೇಮ..
ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ
ಶುರುವಾಯಿತು ಶಾಲೆ ಹೋಗಲ್ಲ
ಅನ್ನೋ ಖಯಾಲಿ..
ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು
ಸಾಕಿತ್ತು ಇಷ್ಟು ಹೆತ್ತವರಿಗೆ
ಊದಿಸಿದರು ವಾಲಗವ
ಅಕ್ಷರದ ಬೆಲೆ ತಿಳಿಯದ ಹಿರೀಕರು
ಯಾರಿಗೂ ಗೊತ್ತಾಗದಂತೆ
ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ
ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು
ಸಂಸಾರದ ಸುಳಿಗೆ..
ಈಗೇನಿದ್ರೂ ದುಡಿತ
ಬಿಡುವಿಲ್ಲದ ಗಳಿಗೆ..
ಹಸಿದ ಮೈ ನೀಡಿಸಿತ್ತು ಹದನ
ಚಟದ ವಸ್ತುವಾಗಿದ್ದಳು ಅಡಿಗಡಿಗೆ..
ಬದುಕಿನ ನೊಗ ಎಳೆಯಬೇಕಿತ್ತು
ಪುಸ್ತಕ ಹೋರುವ ಹೆಗಲಿಲಿ
ಮೃದು ವದನ ಹೊದ್ದಿತ್ತು ಭಾರ
ಅಗಸನ ಬಟ್ಟೆ ಕತ್ತೆಯ ಬೆನ್ನಿಗೆನ್ನುವಂತೆ
ಆಡುವ ಕೂಸಿಗೆ ಕಾಡುವ ಕೂಸು, ಕೊಂಕಳಲ್ಲಿ
ಇರುಳಿನಲಿ ಕೊರಳಲಿ ದಾರ ಕಟ್ಟಿದ ಕೈ,
ಹಿಂದೆ ತಬ್ಬಿದ್ದ ಕೈ,
ಸೀರೆ ಕೊಡಿಸಿದ್ದ ಕೈ,
ಮುದ್ದು ಮಾಡಿ ತುತ್ತು ನೀಡಿದ ಕೈ,
ಕುಡಿತಕ್ಕೆ ಬಿದ್ದ ಕೈ,
ದುಡ್ಡು ತಾ ತವರಿಂದ ಎಂದು
ಬೆನ್ನಿಗೆ ಬಾಸುಂಡೆ ನೀಡಿ
ನಡುರಾತ್ರಿಯಲಿ ಹೊರಹಾಕಿತ್ತು..
ಕಿವಿಯಲಿ ಹರಡಿತ್ತು
ಬುದ್ಧಿ ಮಾತಿನ ದನಿ
ನಾ ಮಾಡಿದ್ದು ತಪ್ಪೆಂದು ಅರಿತ
ಕಣ್ಣು, ಸಂತೈಸುತ್ತಿತ್ತು ಮನವನು
ಆಗಿದ್ದಾಗಿದೆ ಒಡಲಲಿದ್ದ
ಹೆಣ್ಣನಾದರು ತಿದ್ದಿ ಬೆಳೆಸೋಣವೆಂದು…
ಗೊತ್ತಿದ್ದು ಗೊತ್ತಿದ್ದು ಮತ್ತೇ ಮತ್ತೇ ಕೂಪಕ್ಕೆ
ತಳ್ಳದೆ ಇನ್ನಾದರೂ ತಿದ್ದಿ ನೆಡೆಯುತ
ಪೆದ್ದು ಮುದ್ದು ಹೃದಯಕೆ ತಿಳಿ ಹೇಳುತಾ ಬೆಳೆಸೋಣ..
**********
ಸೊಗಸಾದ ಕವನ. ಇಂದಿನ ಮಕ್ಕಳ ಆತುರದ ನಿರ್ಧಾರಕ್ಕೆ ಪೋಷಕರು ತೆಗೆದುಕೊಂಡ ವಿವೇಚನಾ ರಹಿತ ನಿರ್ಧಾರ ಇದರಿಂದ ಆದ ಒಂದು ಹೆಣ್ಣಿನ ಜೀವನದ ಅಧೋಗತಿಯನ್ನು ಸೊಗಸಾಗಿ ಚಿತ್ರಿಸಿದ್ದೀಯ ಶೃತಿ. ಹೀಗೆ ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರು.
Super agi ide madm