ಮುಖವಾಡ
ದಾಕ್ಷಾಯಣಿ ನಾಗರಾಜ
ಮತ್ತೆ ಮುಸ್ಸಂಜೆಯಲಿ
ಮುಸುಕಿನ ಗುದ್ದಾಟ
ಆಗಷ್ಟೇ ಮುದ್ದೆಯಾದ
ಹಾಸಿಗೆಯಲಿ
ನಲುಗಿದ ಹೂಗಳ ಅಘ್ರಾಣಿಸಿ
ತಡಕಾಡುತ್ತೇನೆ
ಒಂದಷ್ಟಾದರೂ ನಿನ್ನ ಪ್ರೀತಿ ಘಮಲು
ಉಳಿದಿದೆಯೇ ?
ಪ್ರತಿಸಾರಿಯಂತೆಯೇ,
ರವಷ್ಟು ಕೂಡ ಮುಲಾಜಿಲ್ಲದೆ
ರಾಚುತ್ತದೆ ಮೂಗಿಗೆ
ತುಸು ಕಾಮ
ಮತ್ತಷ್ಟು ಗೆದ್ದೆನೆಂಬ
ನಿನ್ನ ಅಹಂ,,
ಜಾರಿದ ಕಣ್ಣಹನಿಗೆ
ಜತನದಿಂದ
ನಗುವಿನ ಮುಖವಾಡ
ತೊಡಿಸಿಬಿಡುತ್ತೇನೆ
ನೀನಿಲ್ಲದ ಮತ್ತೊಂದು
ಮುಸ್ಸಂಜೆಯಲಿ
ಮುಖವಾಡ ಕಳಚಿಟ್ಟು
ನಿಂದಿಸುತ್ತೇನೆ
ಹೇ ನಿರ್ದಯಿ ಬದುಕೇ
ಅದೆಷ್ಟು ಮುಖವಾಡಗಳ
ತೊಡಿಸುವೆ?
ಜಾರಿಸುತ್ತಾ ಕಂಬನಿಗಳ ,,,,
*******