ನಿಜರೂಪದ ಶಕ್ತಿಯರು
ಪಾರ್ವತಿ ಸಪ್ನ
ಬೀದಿ ಬೀದಿಗಳಲ್ಲಿ
ಪಾಳು ಬಿದ್ದ ಮನೆಮಠಗಳಲ್ಲಿ….
ಹಾದಿ ಬದಿಯ ಪೊದೆಗಳಲ್ಲಿ
ಬಂಜರು ನೆಲದ ಬಿರುಕುಗಳಲ್ಲಿ
ಹಸಿರುಮರದ ನೆರಳುಗಳಲ್ಲಿ
ಶಾಲೆಯ ಪವಿತ್ರ ಕೊಠಡಿಗಳಲ್ಲಿ
ಕೇಕೆಗಳ ಸದ್ದು ಮುಗಿಲು
ಮುಟ್ಟುವ ಉದ್ಯಾನವನಗಳಲ್ಲಿ
ಕಗ್ಗತ್ತಲ ಭೀಕರ ರಾತ್ರಿಗಳಲ್ಲಿ
ತಂಪೆರೆದ ಮುಸ್ಸಂಜೆಯ ಇರುಳಲ್ಲಿ
ನೇಸರನ ಎದುರಲ್ಲಿ…..
ಬೆಳದಿಂಗಳ ಬೆಳಕಲ್ಲಿ….
ಇಂದಿಗೂ ಹುಟ್ಟುತ್ತಿಹರು….
ಅದೆಷ್ಟೋ ನರರಾಕ್ಷಸರು….
ರಾವಣ, ದುರ್ಯೋಧನ,
ದುಶ್ಯಾಸನರ ವಂಶಾವಳಿಗಳು
ನೂರ ಎಂಟು ತಲೆಗಳಲ್ಲಿ….
ಹುಟ್ಟಿಗೂ ಹೆಸರಿಲ್ಲದೇ….
ಸಾವಿಗೂ ಬಿಡುವಿಲ್ಲದೇ….
ಕರುಳಬಳ್ಳಿಯ ಹೂವ
ಅರಳುವ ಮುನ್ನ ಹಿಚುಕುವ
ಕ್ರೂರ ಮನದ ಪಾತಕಿಗಳು
ಹುಟ್ಟುತ್ತಲೇ….ಇದೆ…
ರಾಕ್ಷಸ ಸಂತತಿಗಳು….
ಹುಟ್ಟುತ್ತಲೇ…..ಇದೆ
ವಿಷಜಂತುಗಳು……
ಎಂದಾದರೂ ಹುಟ್ಟುವರೇ..?
ರಾಕ್ಷಸನ ಮುಂಡವ
ಚೆಂಡಾಡುವ ದುರ್ಗೆಯರು??
ವಿಷ ಜಂತುಗಳ ಎದೆ
ಬಗೆಯುವ…ಕಾಳಿಯರು??
ಇನ್ನಾದರೂ ಹುಟ್ಟಲೀ
ನಿಜರೂಪದ ಶಕ್ತಿಯರು…!!
********
ಮಹಿಳಾ ದಿನಾಚರಣೆ ಯ ಶುಭಾಶಯಗಳು