ಕಾವ್ಯಯಾನ

ಮಾಂತ್ರಿಕಳೆಂದು..

ವಿಜಯಶ್ರೀ ಹಾಲಾಡಿ

ಮೊದಮೊದಲ ಮಳೆಹನಿಗೆ
ಅವಳು ಕರಗಲಿಲ್ಲ
ಹನಿಯೇ ಕರಗಿತು
ಮಳೆಧಾರೆಯೇನು …
ಕಡಲನ್ನೇ ನುಂಗಿ
ನೊಣೆಯುವ ತಾಕತ್ತಿನವಳು !

ಬೇಡವೆಂದು ದೂಡಿದ್ದಾಳೆ
ಅರಸಿ ಬಂದದ್ದೆಲ್ಲವನ್ನು
ಕೊನೆಗೆ ಜಗವೆಂಬ ಜಗವನ್ನೂ ..
ಕಾವ್ಯವನ್ನು ಮಾತ್ರ
ಹುಡುಕಿ ಹೋಗಿದ್ದಾಳೆ
ಹುಡುಕುತ್ತಲೇ ತಿರುಗಿದ್ದಾಳೆ

ಅಲೆಮಾರಿಗೇನು ..
ನಿರಾಳ ಬೀದಿಗಳೇ
ಆಲಯಗಳೇ
ತೊರೆಯೇ ಹಳ್ಳಗಳೇ …
ಕಡಿದು ಪರ್ವತ
ದಿಣ್ಣೆ ಕೊರಕಲುಗಳ
ನಡುವೆ ಯಾತ್ರೆ ಹೊರಟು
ಬೇಡವೆಂದು ಕೈಬಿಟ್ಟು
ಸಂತೆಮಾಳದಲ್ಲಿ
ಸಂಜೆ ಮಾಡಿಕೊಂಡು
ಇರುಳು ಚಂದ್ರನ ಕೆಳಗೆ
ಕವಿತೆ ಬರೆಯುತ್ತಿದ್ದಳಂತೆ
ಬೆಳಗಿನವರೆಗೂ
ಲಾಂದ್ರ ಹಚ್ಚಿಟ್ಟು
ಗುಡಾರದಲ್ಲಿ ಗುಡಿ-
ಗುಡಿಯ ಸೇದುತ್ತ
ಕೂದಲು ಬಿರಿಹೊಯ್ದು
ಕನಸು ಚೆಲ್ಲಿತೆಂದು
ಆಯ್ದು ಕೂತಿದ್ದಳಂತೆ

ಊರ ಜನ ಮಾಂತ್ರಿಕ
-ಳೆಂದು ಅಡ್ಡಬೀಳಲು
ಅಂಗಲಾಚಲು ಶುರು
-ವಿಟ್ಟುಕೊಂಡಾಗ
ಓ ಅದೇ ಬೆಟ್ಟದ
ಕೆಳಗೆ ನದಿಯ ಗುಂಟ
ನಡೆದುಹೋದಳಂತೆ
ಮತ್ತಿನ್ಯಾರೂ
ಕಾಣಲಿಲ್ಲವಂತೆ !

******

ಚಿತ್ರಕೃಪೆ:ವಿಜಯಶ್ರೀ ಹಾಲಾಡಿ

Leave a Reply

Back To Top