ಕಾವ್ಯಯಾನ

ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ

Woman Walking Near Body of Water

ಮೂಗಪ್ಪ ಗಾಳೇರ

ನೀನು ಬಿಟ್ಟು ಹೋದ ಮೇಲೆ
ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ……..
ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ;
ಯಾಕೆ ಗೊತ್ತಾ ……?
ನೀನು ಬಿಟ್ಟು ಹೋದ ನೆನಪುಗಳು
ನನ್ನ ಹೃದಯದ ಅಂಗಳದಲ್ಲಿ
ಅರಳಿದ ಹೂಗಳಾಗಿಯೇ ಉಳಿದಿವೆ
ಹಾಗಾಗಿ ನಾನು ಅತ್ತರೆ……
ಆ ಕಣ್ಣೀರಿನ ಬಿಸಿ ತಾಕಿದಡೆ
ಹೂವುಗಳು ಬಾಡಬಹುದೆಂಬ
ಭಯ ವಷ್ಟೇ ನನ್ನ ನಸುನಗೆ ಕಾರಣ…….!

ನೀನು ಹೋದ ಮೇಲೆ
ಒಂಟಿ ಜೀವನ ಗತಿಯೆಂದು
ಖಾಲಿಯಾದ ಬಾಟಲಿ ಹಿಡಿದು
ಯಾರು ಇಲ್ಲದ ಬೀದಿಯಲ್ಲಿ
ಸುತ್ತುತ್ತೇನೆ ಎಂದುಕೊಂಡಿದ್ದೆ……!
ಊ.. ಊಂ… ಹಾಗಾಗಲಿಲ್ಲ ಇಲ್ಲಿ
ಒಂಟಿಯಾಗಿ ನೀಲಿ ನಭದಲ್ಲಿ
ತೇಲುತ್ತಿದ್ದ ಚಂದಿರ ನನ್ನ ಜೊತೆಯಾದ
ಆಗೊಮ್ಮೆ-ಈಗೊಮ್ಮೆ ಪಳಪಳನೆ ಹೊಳೆದು
ಮರೆಯಾಗುವ ನಕ್ಷತ್ರಗಳು
ನಿನ್ನ ನೆನಪುಗಳು ಬಂದಾಗಲೆಲ್ಲ
ಮೋಹಿಸಿ ಮರೆಯಾಗುವ ಔಷಧಿಯಾಗಿ ಬಿಟ್ಟಿವೆ………!

ಜೊತೆಯಲ್ಲಿ ಇಟ್ಟ ನಮ್ಮಿಬ್ಬರ ಹೆಜ್ಜೆಗಳು
ನನ್ನ ಹೃದಯದ ಕೋಣೆಯನ್ನು
ಚಿದ್ರ ಚಿದ್ರ ಮಾಡಬಹುದೆಂದು ಕೊಂಡಿದ್ದೆ
ಅದು ಸಾಧ್ಯವಾಗಲಿಲ್ಲ
ಯಾಕೆಂದರೆ……?
ಆ ಹೆಜ್ಜೆಗಳ ಹುಡುಕಾಟದಲ್ಲಿದ್ದ ನಾನು
ಕಡಲ ದಂಡೆಯ ಮರಳಿನ ಮೇಲೆ
ಬರೆದ ಕವಿತೆಯ ಸಾಲುಗಳು
ನಿನ್ನ ಹೆಜ್ಜೆಗಳ ಸಾಲ ಮರುಪಾವತಿಸುತಿವೆ……
ಇನ್ನೆಲ್ಲಿ ಹೆಜ್ಜೆಗಳ ಚಿದ್ರ ಚಿದ್ರ ನಾದ….‌‌..

ನೀನು ಅಂದುಕೊಂಡಂತೆ
ಇಲ್ಲಿ ಯಾವ ಬದಲಾವಣೆಗಳು ಆಗಿಲ್ಲ
ಆಗಿರುವುದು ಒಂದೇ
ಅದು ನನ್ನ ಕವಿತೆಯ ಸಾಲು
ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ……….!

***********

Leave a Reply

Back To Top