ಜೀವರಾಮ
ಅಶ್ವಥ್
ವಾರಕ್ಕೆ ಮೂರುದಿನ ಮಡಿಯಾಗಿ ,
ಮಂಡಿನೋವು ತೀರಲೆಂದು ಕೋರಿಕೊಂಡಳು
ಮಂಡಿಯೂರಿ ಪರಿಪರಿ ಬೇಡಿಕೊಂಡಳು
ಕಡೆಗೆ ಅಮ್ಮ ತೀರಿಕೊಂಡಳು!
ಬೇಡುವ ಆರ್ತನಾದ ಕೇಳಿ ನಿಂತ ಹುಡುಗ,
ಬಿಕ್ಕಳಿಸೆ ಅಮ್ಮನ ತಪಸ್ಸಿಗೆ ಭಂಗವೆಂದು
ಬಿಸಿಯುಸಿರು ಬಾಯೊಳಗೇ ಬಿಗಿಹಿಡಿದಿದ್ದು
ದೂರದೂರಲಿ ಬಿಕ್ಕಳಿಸಿದ, ಅವಳಿಲ್ಲವೆಂದು.
ಫಲಿಸಿಬಿಟ್ಟಿತೇ ಅಮ್ಮನ ಸುದೀರ್ಘ ಪ್ರಾರ್ಥನೆ?
ಅಮ್ಮನೂ ಇಲ್ಲದ ಮೇಲೆ ಮಂಡಿನೋವೂ ಇಲ್ಲ.
ಹಾಗೆಂದುಕೊಂಡು ಹುಡುಗ ಸುಮ್ಮನಾಗಲಿಲ್ಲ
ನೋವು ತೀರಿಸುವ ಯೋಚನೆಯ ಬಿಡಲಿಲ್ಲ
ಹುಡುಗನ ಇನ್ನಿಲ್ಲದೆ ಬಾಧಿಸಿ ಅಮ್ಮನ ನೋವು,
ಅವಳ ಪ್ರಾರ್ಥನೆಯ ನೆನಪೆಲ್ಲವ ಬಿಗಿಹಿಡಿದ
ಆಳ ಅಧ್ಯಯನ ಮಾಡಿಕೊಂಡು ತಜ್ಞನಾದ
ನೋವು ನಿವಾರಿಸುವ ನಾರಾಯಣ ತಾನಾದ!
ಪ್ರಾರ್ಥನೆಯ ಹರಿವಿನ ಬಗ್ಗೆ ಅವನಿಗೆ ಕುತೂಹಲ,
ಕೋರಿಕೆಯ ಕಂಠವ ಆಲಿಸುವ ಕಿವಿಗಳಿರಬೇಕೆಂದು
ಬೇಡುವುದಕೆ ಬೆಲೆ ಮಾನವೀಯತೆ ಒಂದೇಯೆಂದು
ಬಂಡೆಗೂ ಜೀವವೆರೆಯಲು ಜೀವರಾಮನೇ ಬೇಕೆಂದು.
********