ಆದೇ ಅಪ್ಪನಂತೆ ಏಕೆ?
ಜಿ.ಲೋಕೇಶ್
ನನ್ನಪ್ಪಂಥನಾಗಲು
ನನಗಿಷ್ಟೂ ಇಷ್ಟವಿರಲಿಲ್ಲ
ಮೌನವಾಗಿರಲು
ಬಯಸುತ್ತಿದ್ದ ನನಗೆ
ಹೇಳಿದ್ದೆ ಹೇಳುತ್ತಿದ್ದ
ಅವನ ಮಾತುಗಳು
ಸದಾ ಅವೇ
ಅಕ್ಷತೆಯ ಮಂತ್ರಗಳು
ಶಾಲೆಯಲ್ಲಿ ಮಗುವೊಂದು
ಮರೆಯದೇ ಹೇಳುತ್ತಿದ್ದ
ರಾಷ್ಟ್ರಗೀತೆಯಂತೆ
ಗುಡಿಯ ಕಲ್ಲು ವಿಗ್ರಹ
ಕಿವಿಯಿದ್ದರೂ ಕೇಳಿಸಿಕೊಳ್ಳದಂತೆ
ನಾನು ನಿಲ್ಲುತ್ತಿದ್ದೆ
ತಡೆದು
ವಾಕರಿಕೆ, ಬೇಸರಿಕೆ.
ಯಾವತ್ತೂ ಪ್ರತಿಕ್ರಯಿಸದೇ
ನನ್ನೊಳಗೆ ಸತ್ತೇ ಹೋಗುತ್ತಿದ್ದ
ಪ್ರತಿ ಹೇಳಿಕೆ
ಇದ್ದಕ್ಕಿದ್ದಂತೆ
ಒಂದು ದಿನ
ನನ್ನಪ್ಪ
ಮಾತುಗಳನ್ನು
ಅನಾಥವಾಗಿಸಿ
ಹೊರಟುಬಿಟ್ಟ!
ಎಂಥಾ ಆಶ್ಚರ್ಯ!
ನಾನೀಗ ಸಲುಹುತ್ತಿದ್ದೇನೆ
ಅವನದೇ ಮಾತುಗಳನ್ನು
ಯಥಾ ಪ್ರಕಾರ!
ಅಪ್ಪನಂತಾಗಲು
ಒಂದಿಷ್ಟು ಇಷ್ಟವಿಲ್ಲದವನಾಗಿ
ಬದುಕಿದ ಮೇಲು
ನನ್ನ ಮಕ್ಕಳಿಗೆ
ಥೇಟ್ ಅಪ್ಪನಂತೆ ಆಗಿ!
**********************************
ಇದೇ ಜೀವನ ನೋಡಿ.