ಕವಿತೆ
ವಿಜಯಶ್ರೀ ಹಾಲಾಡಿ
ಚಿತ್ರ ಬಿಡಿಸುವ ಮರ
ಚಳಿಗೆ ನರಳಿ ಇಬ್ಬನಿ
ಅಡರಿ ಹಿಮಗಾಳಿ
ಶೀತ ಹಿಡಿದುಕೊಂಡಿದೆ
ಗಳಿತ ಎಲೆಯೊಂದು
ಹಳದಿ ಉಸಿರಿನ ಕೂಡೆ
ಮಣ್ಣಿಗೆ ಸೋಕಿ ನಿಡಿದು
ನಿರಾಳ ಅಪ್ಪಿಕೊಂಡಿದೆ
ಧೂಳ ಹೆಜ್ಜೆಗಳಲ್ಲಿ
ಪಾದವೂರಿದ ಬೀಜ
ಮುಗಿಲೂರಿನ ಕನಸ
ರಂಗುಗಳ ಕವಿದುಕೊಂಡಿದೆ
ಮೈಮುರಿದು ಆಕಳಿಸುವ
ನಿಗೂಢ ಇರುಳು ಮಾತ್ರ
ಬಿಟ್ಟ ಕಣ್ಣು ಬಿಟ್ಟಹಾಗೆ
ಗೂಬೆದನಿಗೆ ಆಲಾಪಿಸಿದೆ.
*******