ಗಾಂಧಿ ನಕ್ಕರು
ಅಶ್ವಥ್
ಗಾಂಧಿ ನಕ್ಕರು
ಗಾಂಧಿತಾತ ರಾಷ್ಟ್ರಪಿತ
ತನ್ನೊಳಗೇ ತಾನು ದೈವಭಕ್ತ
ಸಂಪತ್ತಿನುತ್ತುಂಗ ಎಂಜಿ ರಸ್ತೆ
ಗಾಂಧಿಗೆಂದು ಮೀಸಲಂತೆ
ಬೀದಿ ಬದಿಯ ಬಡವನ ಪಾಲು
ಚಿತ್ರಮಂದಿರದ ಕೊನೆಯ ಸಾಲು
ಕಣ್ಣರಳಿಸಿ ಕತ್ತನೆತ್ತಿ
ತುಣುಕು ತುಣುಕೇ ದೃಶ್ಯವುಂಡು
ಬೆರಗಾಗುವ ಬೆಪ್ಪನ ಕಂಡು
ಗಾಂಧಿ, ಸುಮ್ಮನೆ ನಕ್ಕುಬಿಟ್ಟರು
ಹೊಸ ಕಾಲದ ಅಭ್ಯುದಯಕೆ
ಒಂದು ಸಂಜೆ ಕಾರ್ಯಕ್ರಮಕೆ
ಸೆಲ್ಫಿ ತೆಗೆದುಕೊಳ್ಳಲೊಂದು
ಪೊರಕೆ ತಂದು, ಕ್ಯಾಮರ ಬಂದು
ಸಾವಧಾನ ಕೊಂಡುತಂದು
ಗಾಂಧಿಯನ್ನು ಬಳಸಿಕೊಂಡು
ನೀರು ಸಿಂಪಡಿಸಿಕೊಂಡು
ಹುಸಿಬೆವರು ಬರಿಸಿಕೊಂಡು
ಸಮಾಧಾನ ಭಂಗಿಯಲ್ಲಿ ಕ್ಲಿಕ್ ಕ್ಲಿಕ್ ಚಿತ್ರ ತೆಗೆವ
ಹುಸಿ ಮುಸಿ ನಗುವ ಮುಡಿಸಿ ಮಸಿಯ ಬಳಿವ
ನಾಯಕ ನಾಲಾಯಕ್ಕರ ನೆನೆದು
ಗಾಂಧಿ, ನಕ್ಕು ಸುಮ್ಮನಾದರು
ವಿಶ್ವಗುರುವು ನಮ್ಮ ಬೃಹತ್ ದೇಶ
ಉದ್ದಗಲಕೂ ಇದೇ ವೀರಾವೇಶ
ಕೂತರೆ ಖಂಡಾಂತರ
ನಿಂತರೆ ಹಿಮಾಲಯದೆತ್ತರ
ಸಮಾನತೆಗಿಲ್ಲ ಅರ್ಥ
ಸನಾತನವದೊಂದೇ ತೀರ್ಥ
ಫಡಫಡ ಬಾಯಿ, ಬಡಾಯಿ ದಂಡು
ಗಗನ ನೌಕೆ ತೇಲ್ವುದನ್ನು ಕಂಡು
ಗಾಂಧಿ, ಸುಮ್ಮನಿರದೇ ನಕ್ಕರು
ಆಟಗಾತಿ ಓಡಿ ಪದಕ ತಂದರಲ್ಲಿ
ಜಾತಿ ಹುಡುಕಿಕೊಂಡು ಬಂದರಿಲ್ಲಿ
ಕಣ್ ಮುಚ್ಚಿ ಹಾಲು ಕುಡಿವ ಬೆಕ್ಕು
ಮುಲ್ಲಾನ ಮಿಯಾಂವೇ ಇರಬೇಕು!
ಬಾಂಬಿನಲ್ಲೂ ಧರ್ಮವ ಕಂಡು
ನಿಂತಲ್ಲಿಯೇ ಬೆರಗುಗೊಂಡು
ಗಾಂಧಿ, ನಗಲಾರದೇ ಸುಮ್ಮನಿದ್ದರು!
ಬಂಗಾರದ ರಸ್ತೆಯ ಮಾತನಾಡಿ
ಬಡವರ ಬುಡಮೇಲು ಮಾಡಿ
ನೂರೈವತ್ತನೇ ಜಯಂತಿ ಕಂಡು
ಗಾಂಧಿ, ನಕ್ಕು ಸುಮ್ಮನಾದರು
‘ಮತ್ತೆ ಹುಟ್ಟಿ ಬಾ’ ಎಂಬುದನ್ನು ಕೇಳಿ
ಗಾಂಧಿ, ನಕ್ಕು ನಕ್ಕು ಸುಸ್ತಾದರು
*********