ಸ್ವಾತ್ಮಗತ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು


ಕೋಟ ಶಿವರಾಮ ಕಾರಂತರು..!

ಕೆ.ಶಿವು ಲಕ್ಕಣ್ಣವರ

ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧೦-೧೦-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು…

Image result for images of mukajjiya kanasugalu book

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು…

ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾ ರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು…

೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು…

ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫೦ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ…

ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು ೯-೧೨-೧೯೯೭ರಲ್ಲಿ ಮಂಗಳೂರಿನಲ್ಲಿ ನಿಧನರಾದರು..!

***********

Leave a Reply

Back To Top