ಅಂಕಣ ಸಂಗಾತಿ

ಸಕಾಲ

ಮನಸ್ಸಿನ ಮೂಲ ಆತ್ಮದ ಅರಿವಾಗಿದೆ  

 ವಚನದಲ್ಲಿ ನಿಮ್ಮ ನಾಮಾಮೃತ ತುಂಬಿ                    

ನಯನದಲ್ಲಿ ನಿಮ್ಮ ಮೂರುತಿ ತುಂಬಿ

ಮನದಲ್ಲಿ ನಿಮ್ಮ ನೆನಹು ತುಂಬಿ

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಕೂಡಲಸಂಗಮ ದೇವಾ ನಿಮ್ಮ

ಚರಣ ಕಮಲದೊಳಗಾನು ತುಂಬಿ

                                            ಬಸವಣ್ಣನವರು

ಮನದಲ್ಲಿ ನಿಮ್ಮ ನೆನಹು ತುಂಬಿ,ಮನದಿಂದಲೇ ಮನುಷ್ಯನಲ್ಲವೇ? ಮನಸ್ಸಿನಂತೆ ಮಾನವ. ಮನಸ್ಸಿನಿಂದಲೇ ಮನುಷ್ಯ .ಮನ ತುಂಬಿದ ಬಳಿಕ ನೆನೆಯಲಿಲ್ಲ ಎನ್ನುತ್ತಾರೆ ಬಸವಣ್ಣನವರು ಮನಸ್ಸಿದ್ದರೆ ಮಾರ್ಗ.ಮನಸ್ಸೇ ಮಹಾದೇವ ಎಂಬ ಮಾತುಗಳಿಲ್ಲವೇ? ಒಳ್ಳೆಯ ಮನಸ್ಸೇ ದೇವರು ಎನ್ನುವುದು ನನ್ನ ಮಾತು.ಮನಸ್ಸು ಮರ್ಕಟ ಎನ್ನುವುದು ಎಲ್ಲರೂ ತಿಳಿದ ವಿಷಯವೇ. ಮನಸ್ಸಿನ ಬಗ್ಗೆ ರಮಣ ಮಹರ್ಷಿಗಳು ವಿಶೇಷವಾಗಿ ವಿಶ್ಲೇಷಿಸಿರುವುದು ಅಧ್ಯಾತ್ಮವಾದಿಗಳಿಗೆ ಸಮ್ಮತವೇ. ಸರಿ,ತಪ್ಪುಗಳ ವಿಶ್ಲೇಷಣೆಯಲ್ಲಿ ಮನಸ್ಸಿನ ಪಾತ್ರ ಅತೀ ಮುಖ್ಯ.ಇದು ಆಯಾ ವ್ಯಕ್ತಿಯ ಮನೋಬಲಕ್ಕೆ ಸೇರಿದ್ದಾಗಿದೆ.ಮನಸ್ಸಿಗೆ ತೋಚಿದಂತೆ ಕಾರ್ಯವೆಸಗುವುದು ಅಪಾಯಕರವೇ,ಮನಸ್ಸು ಬುದ್ಧಿಯ ಕೈಗೊಂಬೆಯಾಗಬೇಕು ಒಡೆಯನಲ್ಲ.

ಏಕಾಗ್ರ ಚಿತ್ತದಲ್ಲಿ ಮನಸ್ಸಿನ ಸ್ಥಿರತೆ ಗುರಿ ಸಾಧಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹಾಗೂ ಫಲಕಾರಿ.ಮನಸ್ಸಿನ ವೇಗ,ಶಕ್ತಿ ಅಗಾಧವಾದುದು.ಸ್ಪೋಟಕವು ಹೌದು.

ಏಕಾಗ್ರತೆಗೆ ಧ್ಯಾನ ಬೇಕು.ಧ್ಯಾನ ಅಂದರೆ ಉಸಿರಾಟದ ಕಡೆಗೆ ಗಮನಹರಿಸುವುದು.ಹೊಯ್ದಾಟವನ್ನು ಲಯಗೊಳಿಸುವುದು.ಇನ್ನೊಂದು ಅರ್ಥದಲ್ಲಿ ಮನಸ್ಸಿನ ಮೂಲ ಆತ್ಮದ ಅರಿವೇ ಆಗಿರುತ್ತದೆ. ಆತ್ಮವನ್ನೇ ದೇವರು ಎನ್ನಬಹುದು.ಸರಳವಾಗಿ ಹೇಳಬೇಕೆಂದರೆ ಶರೀರದಲ್ಲಿರುವ ಜೀವ ಚೈತನ್ಯವೇ ಆತ್ಮವೆನ್ನಬಹುದು.ಇದು ಬುದ್ಧಿ ಮನಸ್ಸು ಅಹಂಕಾರಗಳ ಸಂಯುಕ್ತ ಭಾವ. ಭೌತಿಕ ಶರೀರದಲ್ಲಿ ಇನ್ನೂ ಹಲವಾರು ಅಗೋಚರ ಶರೀರಗಳು ಸಮಾವೇಶಗೊಂಡಿರುತ್ತವೆ.ಇದನ್ನು ಧ್ಯಾನದಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದು.ತುಂಬಿದ ಮನದಲ್ಲಿ ಸಾಕ್ಷಿಭೂತವಾಗಿ ಬರಮಾಡಿಕೊಳ್ಳುವುದೇ ಶಿವಯೋಗ,ಶಿವಾರ್ಪಣೆ.ಎಲ್ಲ ಧರ್ಮಗಳ ಮೂಲ ತತ್ವ ಒಂದೇ.ಆಚರಣೆಗಳು ಮಾತ್ರ ಭಿನ್ನ .ಪೂರ್ಣತೆಯ ಬಗ್ಗೆ ಬಸವಣ್ಣನವರು ಒಂದೆಡೆ ಹೇಳುತ್ತಾರೆ.

 ಕಂಗಳು ತುಂಬಿದ ಬಳಿಕ ನೋಡಲಿಲ್ಲ

 ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ

 ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ

 ಮನ ತುಂಬಿದ ಬಳಿಕ ನೆನೆಯಲಿಲ್ಲ

 ನಮ್ಮಮಹಾಂತ ಕೂಡಲಸಂಗಮ ದೇವನ…

ಮನಸ್ಸಿನಿಂದಲೇ ಮುಕ್ತಿಮನಸ್ಸಿನ ಬಂಧನದಿಂದಲೇ ದುಃಖ,ಬಿಡುಗಡೆಯಿಂದ ಸುಖ…ಹೊರ ಜಗತ್ತಿನ ಪ್ರತಿಯೊಂದು ವಸ್ತು ನಮಗೆ ತಿಳಿಯದೇ ಮನಸ್ಸಿನೊಳಗೆ ಸೇರಿಕೊಳ್ಳುತ್ತದೆ.ನೀವು ನನಗೆ ನೂರು ರೂಪಾಯಿ ನೋಟು ನೀಡಿದರೆ ನನ್ನ ಮುಖ ಅರಳುತ್ತದೆ.ಖುಷಿಯಲ್ಲಿ ಜೇಬಿಗೆ ಸೇರಿಸುತ್ತೇನೆ. ವಾಸ್ತವವಾಗಿ ಅದು ಜೇಬಷ್ಟೇ ಅಲ್ಲ,ಮನಸ್ಸಿನೊಳಗೆ ಸೇರಿಕೊಂಡಿರುತ್ತದೆ.ಮನಸ್ಸು ನಾಯಿಯಂತೆ ಸದಾ ಜೊಲ್ಲು ಸುರಿಸುತ್ತಾ ,ಎಲ್ಲ ವಿಷಯಗಳಲ್ಲಿ ಮೂಗು ತೂರಿಸಿಕೊಂಡು ತನ್ನದಾಗಿರಿಸಿಕೊಳ್ಳಲು ಹಪಹಪಿಸಿ ಹಣಕ್ಕೆ ಹೆಚ್ಚು ಹವಣಿಸುತ್ತದೆ. ಮನಸ್ಸಿನ ಮೂಲೆಯಲ್ಲಿ ನೂರು ರೂಪಾಯಿ ಜಾಗ ಮಾಡಿಕೊಂಡು ಮೆರೆಯುತ್ತದೆ.ಅರ್ಧಗಂಟೆಯ ನಂತರ ಆ ನೋಟು ಖರ್ಚಾಗುತ್ತದೆ.ಆಗ ನನ್ನ ಮನಸ್ಸಿನ ಸ್ಥಿತಿ ಹೇಗೆ ?ಕಳಾಹೀನ ಮುಖ,ದುಃಖ.ತನ್ನದಲ್ಲದ ನೋಟು,ಕೇವಲ ಒಂದು ಮುದ್ರಿತ ಕಾಗದ ತುಂಡು ಆದರೆ, ಮನಸ್ಸನ್ನಾವರಿಸಿದ ಪರಿ ಎಂಥ ಸೆಳೆತ? ಈ ನಂಟು ಹೇಗೆ ಬೆಳೆಯಿತು? ಮನಸ್ಸಿನಲ್ಲಿ ಈ ನೂರು ರೂಪಾಯಿ ಸೇರಿಕೊಳ್ಳದಿದ್ದರೆ ದುಃಖವಾಗುತ್ತಿತ್ತೇ.?ಮನಸ್ಸು ಖಾಲಿಯಾಗಿಟ್ಟುಕೊಂಡಿದ್ದರೆ ಕಳೆದ ನೋವು ಇರುತ್ತಿರಲಿಲ್ಲ.ಸುಖವಾಗಿಯೇ ಇರಬಹುದಿತ್ತಲ್ಲಾ…!

ಕೈಗೂಡದ ಆಸೆಗಳು ಮನಸ್ಸನ್ನಾವರಿಸುವ ವಿದ್ಯಮಾನ ಗಮನಾರ್ಹವಾಗಿದೆ.

ಇದೆಂಥಹ ಸ್ಥಿತಿಯೆಂದು ಅಲ್ಲಮಪ್ರಭುಗಳು ಹೀಗೆ ಹೇಳುತ್ತಾರೆ,

ಆಶೆ ಎಂಬ ಶೂಲದ ಮೇಲೆ

ವೇಷವೆಂಬ ಹೆಣನ ಕುಳ್ಳಿರಿಸಿ

ಧರೆಯ ಮೇಲುಳ್ಳ ಹಿರಿಯರು

ಹೇಂಗೆ ಸವೆದರು ನೋಡಾ

ಆಶೆಯ ಮುಂದಿಟ್ಟುಕೊಂಡು

 ಸುಳಿವ ಹಿರಿಯರ ಕಂಡು

 ಹೇಸಿಕೆಯಾಯಿತು ಗುಹೇಶ್ವರ…

ಮನಸ್ಸು ಆಸೆಯಿಂದ ಬಿಡಿಸಿಕೊಳ್ಳದು.ಕನಸಿನ ರೂಪವಾದರೂ ಸರಿ.ಸ್ಥೂಲ ಶರೀರವು ಮಾಡದ ಕಾರ್ಯವನ್ನು ಸೂಕ್ಷ್ಮ ಮನಸ್ಸು ಸೃಷ್ಟಿಸಿಬಿಡುತ್ತದೆ. ಸೂಕ್ಷ್ಮ ಮನಸ್ಸು ಎಚ್ಚರ ಸ್ಥಿತಿಗಿಂತ ಭಿನ್ನ .ಕನಸಿನಲ್ಲಿ ಅಸಾಧ್ಯವಾದ ಕಾರ್ಯವನ್ನು ಕೈಗೊಳ್ಳುತ್ತೇವಲ್ಲಾ. ಭೌತಿಕವಾಗಿ ಇಲ್ಲದ ವ್ಯಕ್ತಿ ಕನಸಿನಲ್ಲಿ ಪ್ರತ್ಯೇಕವಾಗಿ ಮಾತಾಡುವುದು ಅಂದರೆ ಏನರ್ಥ? ಸತ್ತ ವ್ಯಕ್ತಿಯನ್ನೇ ಮರುಸೃಷ್ಟಿಸುವ ಮನಸ್ಸಿನ ಶಕ್ತಿ ಅಗಾಧವಾದುದಲ್ಲವೇ ಸಾವು ಗೌಣವಾಗಿ ಅಮರತ್ವಕ್ಕೆ ಸಂಕೇತವಾಯಿತೇ,

ಮಾನಸ ಸರೋವರದಲ್ಲಿ ಭಾವನೆಗಳು ಅಲೆಯೋಪಾದಿಯಲ್ಲಿ ಅವಿರತವಾಗಿ ಹರಿಯುತ್ತವೆ ಭಾವನೆಗಳ ತಾಣವೇ ಮನಸ್ಸು .ಈ ಭಾವನೆಗಳನ್ವಯ ವ್ಯಕ್ತಿ ವರ್ತಿಸಿ ತನ್ನ ಸ್ವಭಾವವನ್ನು ತೋರ್ಪಡಿಸುತ್ತಾನೆ. ನವರಸ ಭಾವದಲೆಗಳು ಪ್ರಮುಖ ಪಾತ್ರವಹಿಸಿ ವ್ಯಕ್ತಿತ್ವವನ್ನು ರೂಪಿಸುತ್ತವೆ.ಭಾವದ ಅಲೆ ಶರೀರದ ದಡ ದಾಟಿ ಮುಂದೆ ಹೋಗಬೇಕು .ತಡೆಹಿಡಿದರೆ ಶರೀರದ ಮೇಲೆ ಪರಿಣಾಮ ಬೀರುತ್ತದೆ.ಅಪಾಯ ತಪ್ಪಿದ್ದಲ್ಲ.ಸಿಟ್ಟು ಬಂದಾಗ ವ್ಯಕ್ತಿ ಬೈಯ್ಯುತ್ತಾನೆ. ಬೈಯ್ಗಳ ಮೂಲಕ ಭಾವದಲೆ ಹೊರದೂಡುತ್ತಾನೆ. ಶರೀರದ ಒತ್ತಡ ಹಗುರಗೊಳಿಸಿಕೊಳ್ಳುತ್ತಾನೆ.ಈ ದಿಸೆಯಲ್ಲಿ ಕೆಟ್ಟ ಬೈಗಳು ಕೂಡಾ ಮನಸ್ಸಿನ ನೆಮ್ಮದಿಗೆ ಔಷಧಿಗಳಾಗಿ ಪರಿಣಮಿಸುತ್ತವೆ.ಆದುದರಿಂದ ಬೈಯ್ಯುವುದು ಕೂಡಾ ಮನಸ್ಸಿನ ಸ್ಥಿರತೆಗೆ ಕಾರಣ ಎಂಬ ಅಂಶವನ್ನು ಅಲ್ಲಗಳೆಯಲಾಗದು.

ಮನಸ್ಸೊಂದೇ ಶರೀರದ ಆಸ್ತಿಯಲ್ಲ. ಜೀವ,ಬುದ್ಧಿ  ಚಿತ್ತ,ಅಹಂಕಾರ ಇರುವಂತೆ ಶರೀರದಲ್ಲಿಯೂ ಅವಸ್ಥೆಗಳಿವೆ.ಸ್ಥೂಲ,ಸೂಕ್ಷ್ಮ ಕಾರಣ ಇನ್ನೂ ಆಳದಲ್ಲಿ ಅತೀಂದ್ರಿಯ,ತುರಿಯ ಜಡಚೈತನ್ಯಗಳ ಸಮಾಯೋಗ ಅಚ್ಚರಿಯಲ್ಲವೇ.ಎಷ್ಟೋ ವಿಷಯಗಳು ತಿಳಿದಿಲ್ಲ.ಮೆದುಳಿಗೆ ನಿಲುಕದ ಅಗೋಚರ ಸಂಗತಿಗಳ ಪರಿಜ್ಞಾನ ಹೇಗೆ ಸಾಧ್ಯ?

ಶರೀರವು ತನ್ನದೇ ಕಾರ್ಯಚಟುವಟಿಕೆಯಲ್ಲಿ ಯಂತ್ರವಾಗಿದೆ.ಅದರ ಸ್ವಭಾವ ,ಗುಣಗಳನ್ನು ಜಾರಿಗೆ ತರುವುದಷ್ಟೇ ಅದರ ಮುಖ್ಯ ಗುರಿಯಾಗಿದೆ. ಹಸಿವು , ನಿದ್ರೆ,ಮೈಥುನ ಎಲ್ಲಾ ಪ್ರಾಣಿಗಳಲ್ಲಿರುವಂತೆ ಮನುಷ್ಯನಲ್ಲಿಯೂ ಇದೆ.ಆದರೆ ಮಾನವ ದೇವನಾಗುವುದು ಹೇಗೆ?ಈ ಶರೀರವು ರಾಸಾಯನಿಕ ಕ್ರಿಯೆಯ ಒಂದು ಭೌತಿಕ ಕಾರ್ಖಾನೆ ಎಂದರೆ ತಪ್ಪಿಲ್ಲ. ಕಿಣ್ವ ,ಹಾರ್ಮೋನುಗಳ ಸ್ರವಿಕೆಯಲ್ಲಿ ಮನಸ್ಸಿನ ಮೇಲಾಗುವ ಪರಿಣಾಮ ಸ್ವಯಂವೇದ್ಯವೇ.ವಿಜ್ಞಾನ ವಿಷಯದಲ್ಲಿ ಓದಿದ‌ ನೆನಪು.

ಶೂನ್ಯ ಪೀಠದ ಅಲ್ಲಮಪ್ರಭು, ಅನುಭವ ಮಂಟಪದ ಬಸವಣ್ಣನವರು, ಅಕ್ಕಮಹಾದೇವಿ,ಚನ್ನಬಸವಣ್ಣ ಹೀಗೆ ಮೊದಲಾದ ಶಿವ ಶರಣರು,ಶರೀರದ ವಿಕಾರಕ್ಕೆ ಬಲಿಯಾಗಲಿಲ್ಲ.ಅದರ ಪುಂಡಾಟಿಕೆಯನ್ನು ಮಣಿಸಿ ಆತ್ಮಶೋಧನೆಯಲ್ಲಿ ಮೆರೆದವರು.ಬಾಹ್ಯದ ಕಾಮ ವಿಕಾರದಿಂದ ಬಿಡಿಸಿಕೊಂಡು ಒಳಹೋದರೆ ಮಾತ್ರ ದೇವರ ದರ್ಶನ ಸಾಧ್ಯ.ಇದಕ್ಕೆ ಸಾಂಕೇತಿಕವಾಗಿ ನಮ್ಮ ಪೂರ್ವಿಕರು ದೇವಸ್ಥಾನದ ಹೊರಗೋಡೆಯ ಮೇಲೆ ಮೈಥುನ ಚಿತ್ರಗಳನ್ನು ಬಿಡಿಸಿರುವುದನ್ನು ಕಾಣಬಹುದು.ಶರೀರದ ಸಹಜ ಕ್ರಿಯೆಯನ್ನು ಮೀರಿ ಸಾಧಿಸುವುದು ಅಷ್ಟು ಸರಳವಾದುದಲ್ಲ.ಕತ್ತಿ ಮೇಲೆ ನಡೆದಷ್ಟೇ ಕಠಿಣ.ಬೆತ್ತಲೆಯಾಗಿ ಹೊರಟ ಅಕ್ಕಮಹಾದೇವಿಯ ಮನಸ್ಥಿತಿ ಅಸಮಾನ್ಯವಾದುದು. ಷಟ್ ಸ್ಥಲ ಜ್ಞಾನ ಚಕ್ರವರ್ತಿ ಚನ್ನಬಸವಣ್ಣ ,ಅನುಭವ ಪೀಠವನ್ನೇರಿದ ಅಲ್ಲಮಪ್ರಭು ಶರೀರದ ಗಡಿ ದಾಟಿರುವುದು ಸಾಮಾನ್ಯವಾದ ಮಾತೇ? ಆತ್ಮದ ಸೂಚನೆಯನ್ವಯ ದೇಹ ದಂಡನೆಯಾಗಬೇಕೇ ಹೊರತು ಶರೀರದ ಭಾವಾಂದೋಲನಕ್ಕೆ ಮನಸ್ಸು ಈಡಾಗಬಾರದು.ಆತ್ಮದ ಅರಿವು ಮೂಡಲು ಧ್ಯಾನ ಅಗತ್ಯ. ಆತ್ಮಚಿಂತನೆಯಿಂದ ಅರಿವು ಸಾಧ್ಯ ಪಂಚಮಹಾಭೂತಗಳಲ್ಲಿ ಸಮಾವೇಶಗೊಳ್ಳುವ ಶರೀರವು ಆತ್ಮೋನ್ನತಿಗೆ ಸಾಧನವಾದರೆ ಸಾಕು. ಆತ್ಮಕ್ಕೆ ಸಾವಿಲ್ಲ.ಅಮರತ್ವದ ಪ್ರತೀಕವಾಗಿ ವ್ಯಕ್ತಿ ತನ್ನನ್ನೇ ‘ ಚಿರಂಜೀವಿ ‘ ಎಂದು ಕೊಂಡಿರುತ್ತಾನಲ್ಲ ಶರೀರಕ್ಕೆ ತೊಂದರೆಯಾದರೆ ಜೀವ ಆತಂಕ ಪಡುವುದು ಸಹಜ.ತಾನು ವಾಸ ಮಾಡುವ ಮನೆ ಶಿಥಿಲವಾದರೆ ಅಥವಾ ಸೋರಿದರೆ,ನೋವಾಗದೆ ಇದ್ದಿತೆ? ಅದು ಶಾಶ್ವತವಾಗಿ ನೆಲೆಸಲು ಸಾಧ್ಯವಾಗದಿರುವ ಕ್ಷಣಿಕ ಚಿಂತನೆ ಅಷ್ಟೇ. ಸೋರುತಿಹುದು ಮನೆಯ ಮಾಳಿಗೆ ‘ ಎಂಬ ಶಿಶುನಾಳ ಶರೀಫರ ಹಾಡಿಗೇನರ್ಥ? ಅಂಗವಿಕಲರ ಭಾವನೆಗಳನ್ನು ಗಮನಿಸಿದಾಗ ಆತ್ಮನ ಚಿರಂಜೀವಿತನದ ಛಾಯೆ ವ್ಯಕ್ತವಾದೀತು. ಅವರ ನಡತೆಯಿಂದ ಇದನ್ನು ಕಂಡುಕೊಳ್ಳಬಹುದಾಗಿದೆ.  ವಿಕಲತೆಯ ಅರಿವೇ ಇಲ್ಲದಂತೆ ವ್ಯವಹರಿಸುವುದು ಸಾಮಾನ್ಯವಾದ ಮಾತೇ? ಆತ್ಮಶಕ್ತಿಯ ಸ್ವರೂಪ ಅಗಾಧವಾದುದು.  ಹೀಗಿರುವಾಗ ಸಾವಿನ ಕಲ್ಪನೆ ಯಾರಲ್ಲಿಯೂ ಎಳ್ಳಷ್ಟು ಮೂಡುವುದಿಲ್ಲ. ಸಾವು ಖಚಿತವಾಗಿದ್ದರೂ ಯಾವುದೇ ವ್ಯಕ್ತಿಗೆ ಇದರ ಬಗ್ಗೆ ಅನುಭವವಿಲ್ಲ.”ನೀನು ಸಾಯುತ್ತಿ” ಎಂದರೆ ನಂಬುವುದಿಲ್ಲ.ಸಾಯುವ ಭಾವನೆ ಬರುವುದೇ ಇಲ್ಲ. ವ್ಯಕ್ತಿಗೆ ಎಷ್ಟೇ ವಯಸ್ಸಾಗಿರಲಿ ಜೀವಂತವಾಗಿರುವ ಬಗ್ಗೆಯೇ ಯೋಚಿಸಿ ಅನುಭವಿಸುತ್ತಾನೆ ಹೊರತು ಜೀವ ಹೊರಟು ಹೋಗುತ್ತೆ ಎನ್ನುವ ಅನುಭವವೇ ಅವನಲ್ಲಿ ಸುಳಿಯುವುದಿಲ್ಲ. ಯಾಕೆಂದರೆ ಆತ್ಮಕ್ಕೆ  ಸಾವಿಲ್ಲವೆಂಬುದು ಸತ್ಯ.

ಇಡೀ ಜಗತ್ತನ್ನೇ ಸುತ್ತಿಕೊಂಡಿರುವ ಮಾಯೆಯ ಪರಿಯನ್ನು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ.

  ಜಗವ ಸುತ್ತಿಪುದು ನಿನ್ನ ಮಾಯೆಯಯ್ಯ

  ನಿನ್ನ ಸುತ್ತಿಪುದು ಎನ್ನ ಮನ ನೋಡಯ್ಯ

  ಜಗಕೆ  ಬಲ್ಲಿದೆ ನೀನು

  ನಿನಗೆ ಬಲ್ಲಿದೆ ಆನು ಕಂಡಯ್ಯ

  ಕರಿಯು ಕನ್ನಡಿಯೊಳಗಡಗಿಂತಯ್ಯಾ

  ಎನ್ನೊಳಗೆ ನೀ ಅಡಗಿದೆ ಕೂಡಲಸಂಗಮ ದೇವ

ಮನಸ್ಸನ್ನು ಸಾಕ್ಷಿಭೂತವಾಗಿ ನಿಲ್ಲಿಸಿಬಿಟ್ಟರೆ ಬಹಳಷ್ಟು ಸಮಸ್ಯೆಗಳು ತಾನಾಗಿಯೇ ಪರಿಹಾರ ಕಂಡುಕೊಳ್ಳುತ್ತವೆ. ಸಕಾರಾತ್ಮಕ ಚಿಂತನೆಯಿಂದ ಮನಸ್ಸಿನ ಸ್ಥಿತಿಯನ್ನು ಬದಲಿಸಬಹುದು.ಅನಂತ ಶಕ್ತಿ ಹೊಂದಿರುವ ಭವ್ಯ ಸ್ಥಾವರವೇ ಮನಸ್ಸು…!  ಎಲ್ಲವನ್ನೂ ಬದಲಿಸಿಬಿಡುವ ಶಕ್ತಿ ಅದಕ್ಕಿದೆ.ಕೇವಲ ಇದು ಮನಸ್ಸಿನ ಭಾವದಲೆ ಆಗಿರುವುದರಿಂದ ಹರಿದು ಮುಂದೆ ಹೋಗುವ ಪ್ರಕ್ರಿಯೆಯನ್ನು ಸುಮ್ಮನೆ ಕಾದು ನೋಡಬೇಕಷ್ಟೇ.ನಿರಾಶೆಯಾಯಿತು ಎನ್ನುವುದಾಗಲಿ, ಉದ್ವೇಗಕ್ಕೊಳಪಟ್ಟೆ ಎನ್ನುವುದಾಗಲಿ ಭಾವಿಸಲೇ ಬಾರದು.ಶಾಂತಚಿತ್ತರಾಗಿ ಮನಸ್ಸಿಗೆ ಬುದ್ಧಿ ಹೇಳಿದರೆ ಸಾಕು.ಖಂಡಿತವಾಗಿಯೂ ಬುದ್ಧಿ ಮನಸ್ಸು ಮಾಡುತ್ತದೆ .ನಾವು ಹೇಳಿದ್ದನ್ನೇ ಅದು ತಿರುಗಿ ನಮಗೆ ನೀಡುತ್ತದೆ.

   ಲೋಕದ ಡೊಂಕವ ನೀವೇಕೆ ತಿದ್ದುವಿರಿ

   ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

   ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

   ನೆರೆ ಮನೆಯವರ ದುಃಖಕ್ಕೆ ಅಳುವವರ

   ಮೆಚ್ಚ ನಮ್ಮ ಕೂಡಲ ಸಂಗಮದೇವ….

ಮೊಸಳೆ ಕಣ್ಣೀರಿಗಿಂತ ವಾಸ್ತವ ಚಿಂತನೆ ಮುಖ್ಯ. ಮನಸ್ಸಿನ ಸ್ಥಿರತೆಯಿಂದ ಸಮಾಜದಲ್ಲಿ ತಾನಾಗಿಯೇ ಶಾಂತಿ ನೆಲೆಸುತ್ತದೆ ಎಂಬ ಸರಳ ಸೂತ್ರ ಕಣ್ಣು ತೆರೆಸಿದೆ.

ಮನಸ್ಸೆಂಬ ಮಾಯೆಯನ್ನು ಗೆಲ್ಲುವ ದುಃಸ್ಸಾಹಸ ಮಾಡಿದವನೇ ಜಗತ್ತಿನ ಪ್ರಾಣವಾಗಿ ಬೆರೆತಿರುವ ಮಹಾನ್‌ ವ್ಯಕ್ತಿ ಸ್ವರೂಪವನ್ನು ಮನದಾಳದಲ್ಲಿಟ್ಟು ಅದರಂತೆ ನಡೆಯುವ ಪ್ರತಿಜ್ಞೆ ಮಾಡುತ್ತೆವೆ.ಭವ ಬಂಧನವ ತ್ಯಾಗ ಮಾಡಿದಷ್ಟು ಆತ್ಮಕ್ಕೆ ಮುಕ್ತಿ. ನಶ್ವರ ಶರೀರದಲಿ ನೆಲೆಸಿರುವ ಚೈತನ್ಯವನ್ನು ನಮಗಿಷ್ಟವಾದ ದೈವರೂಪ ನೀಡಿ ಚಂಚಲ ಮನಸ್ಸನ್ನು ಏಕಾಗ್ರತೆಯತ್ತ ಹರಿಬಿಡಲು ಪ್ರಯತ್ನ ನಮ್ಮದು ಏನೇ ಆಗಲಿ ಮರಳಿಯತ್ನವ ಮಾಡುವುದನ್ನು ಬಿಡುವುದು ಬೇಡ.ಬಿಟ್ಟರೆ ಮನಸ್ಸೆಂಬ ಮಾಯೆಯೋಳು ಸಿಲುಕುವುದು ಗ್ಯಾರಂಟಿ.ಮನಸ್ಸಿನ ಮೂಲ ಆತ್ಮದ ಅರಿವಾಗಿದೆ ಎಂಬುದನ್ನು ಮರೆಯುವಂತಿಲ್ಲ…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

5 thoughts on “

  1. ಲೇಖನ ಸೊಗಸಾಗಿ ಮೂಡಿಬಂದಿದೆ ಸಿಸ್ಟರ್..

  2. ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಉನ್ನತ ವಿಚಾರಗಳ ತಳಹದಿವುಳ್ಳ ಸುಂದರ ಲೇಖನ ರೀ ಮೇಡಂ

Leave a Reply

Back To Top