ಅಂಕಣ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಅಪ್ಪನ ಹೆಗಲು
ಅಪ್ಪನ ಹೆಗಲು :
ಬರಹಗಳ ಸಂಗ್ರಹ
ಸಂಪಾದಕರು: ಡಾಕ್ಟರ್ ರಾಜಶೇಖರ ಜಮದಂಡಿ
ಪ್ರಕಾಶಕರು : ಬಸವ ಪ್ರಕಾಶನ
ಪ್ರಥಮ ಮುದ್ರಣ : ೨೦೨೦
ಅಮ್ಮ ಅಪ್ಪ ಬದುಕಿನ ಪ್ರಮುಖ ಪಾತ್ರಗಳು. ಅಮ್ಮ ಭೂಮಿತಾಯಿಯಂತಿನ ಸಹನೆಯ
ಒಡಲಾದರೆ ಅಪ್ಪ ಅಂತಃಕರಣದ ಕಾಳಜಿಯ ಕಡಲು . ಅಪ್ಪನೆಂದರೆ ಅದ್ಬುತ! ಅಪ್ಪನೆಂದರೆ ಆಕಾಶ . ಈ ಆಕಾಶದ ಹಂದರದಡಿ ಬಾಲ್ಯ ನಿಶ್ಚಿಂತ, ನಿರ್ಭೀತ, ಸುಲಲಿತ . ಅಷ್ಟಲ್ಲದೆ ನಮ್ಮ ಜಾನಪದರು ಹೀಗೆಂದಾರೇ?
ತಂದೀಯಾ ನೆನೆದಾರೆ ತಂಗಳ ಬಿಸಿಯಾಯ್ತು
ಹಡೆದವ್ವ ನಿನ್ನ ತಾಯಿ ಗಂಗವ್ವ ನೆನೆದರೆ
ಮಾಸಿದ ತಲೆಯು ಮಡಿಯಾಯ್ತು
ಮೇಲಿನ ನುಡಿಯನ್ನೇ ಧ್ವನಿಸಿರುವ ಬಹುಪಾಲು ಲೇಖನಗಳ ಕಣಜ ಈ ಪುಸ್ತಕ . ನಾಡಿನ ಚಿರಪರಿಚಿತ ಲೇಖಕರಾದ ಶ್ರೀ ಡಾಕ್ಟರ್ ರಾಜಶೇಖರ ಜಮದಂಡಿ ತಮ್ಮನ್ನು ಸೇರಿಸಿದಂತೆ ೧೦೯ ಲೇಖಕರ, ಅಪ್ಪಂದಿರ ಬಗೆಗಿನ ಮನದಾಳದ ಅನಿಸಿಕೆಗಳನ್ನು ಹೊರಹಾಕಿದ ಬರಹಗಳ ಸಂಕಲನವೇ ಈ ಮಹಾನ್ ಹೊತ್ತಿಗೆ . ೬೫೫ ಪುಟಗಳ ಬೃಹತ್ ಪುಸ್ತಕ ಎಂಬುದಷ್ಟೇ ಅಲ್ಲ ತಮ್ಮೆಲ್ಲರ ತೀರ್ಥರೂಪಗಳಿಗೆ ಸಲ್ಲಿಸಿದ ಮಮತೆ ಕೃತಜ್ಞತೆ ಪ್ರೀತಿ ಪ್ರೇಮಗಳ ಅಕ್ಷಿ ಬಿಂದುಗಳ ವಿಸ್ತಾರ ಸಾಗರವೂ ಕೂಡ . ಅಪ್ಪನ ಬಗೆಗಿನ ಒಂದೇ ಬರಹವನ್ನೇ ಹತ್ತು ಹಲವಾರು ಬಾರಿ ಓದಿ ಚಪ್ಪರಿಸಿ ಮೆಲುಕಾಡಿಸುವ, ಕೇಳುಗರ ಕಿವಿ ತೂತು ಬರುವಂತೆ ಅದರ ಬಗ್ಗೆ ಮಾತನಾಡುವ ನನ್ನಪ್ಪನ ಬಗೆಗಿನ ನನ್ನ ಪ್ರೀತಿಯನ್ನು ಚೆನ್ನಾಗಿಯೇ ಅರಿತಿರುವ ನನ್ನ ತಂಗಿ ವೈಶಾಲಿ ಪುಸ್ತಕ ಬಿಡುಗಡೆ ಸಮಾರಂಭದಿಂದಲೇ ನೇರವಾಗಿ ತಂದು ಈ ಪುಸ್ತಕವನ್ನು ನನಗೆ ದೀಪಾವಳಿಯ ಕೊಡುಗೆಯಾಗಿತ್ತಳು. ಆಹಾ ! ಚಾಕಲೇಟಿನ ಪರ್ವತ, ಐಸ್ಕ್ರೀಮಿನ ಜಲಪಾತ ಕಂಡ ಮಗುವಂತೆ ಕುಣಿಯಿತು ನನ್ನ ಮನ. ಅಂದಿನಿಂದಲೂ ಜತನದಿಂದ ಸ್ವಲ್ಪಸ್ವಲ್ಪವೇ ಮರುಓದು ಮಾಡುತ್ತಾ (ತಂದ ತಕ್ಷಣ 1 ಓದು ಮುಗಿಸದಿದ್ದರೆ ನಿದ್ರೆ ಬರಲ್ಲವಲ್ಲ ಅದಕ್ಕೆ) ಬರಲಿರುವ ಜೂನ್ ಇಪ್ಪತ್ತರ ಅಪ್ಪಂದಿರ ದಿನಕ್ಕೆ ನನ್ನ ಓದಿನ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತ ಈ ಪುಸ್ತಕದ ಪರಿಚಯ.
ಸಂಪಾದಕರಾದ ಡಾ ರಾಜಶೇಖರ ಜಮದಂಡಿ ಪ್ರಸ್ತುತ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹಸಂಶೋಧಕರಾಗಿ ಸೇವೆಯಲ್ಲಿದ್ದಾರೆ. ೧೯೯೬ ರಿಂದ ೨೦೧೯ರವರೆಗೆ ಮೂವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಅಂಗಳ, ಚಿಂತನಾಂಜಲಿ, ಮಾರಯ್ಯನ ವಚನ ದೀಪಿಕೆ, ರಸಜ್ಞನ ಆಧುನಿಕ ವಚನಗಳು, ಜಾನಪದ ಸಂಪತ್ತು ಇನ್ನುಿ ಮುಂತಾದುವುಗಳು ಮುಖ್ಯವಾದವುಗಳು. ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಪ್ರವಚನ ಕಾರ್ಯಕ್ರಮ ಚಿಂತನಗಳು ಪ್ರಸಾರವಾಗಿವೆ . ಪಡೆದಿರುವ ಪ್ರಶಸ್ತಿಗಳಲ್ಲಿ ತಂಗಮ್ಮ ನಾಗರಾಜ ರಾವ್ ದತ್ತಿನಿಧಿ ಬಹುಮಾನ, ಶ್ರಾವಣೋತ್ಸವ ಪ್ರಶಸ್ತಿ, ಬಸವ ಗುರುಕಾರುಣ್ಯ ಪ್ರಶಸ್ತಿ, ಸಾಹಿತ್ಯ ಸೌರಭ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ, ಸಮಾಜಸೇವಾ ಭಾರ್ಗವ ಪ್ರಶಸ್ತಿ, ಬಸವ ಶಿರೋಮಣಿ ರಾಜ್ಯಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ ಮುಖ್ಯವಾದುವು.
ಪುಸ್ತಕದ ಅರ್ಪಣೆಯ ಚೆಂದ ನೋಡಿ “ಹೆಗಲ ಮೇಲೇರಿಸಿಕೊಂಡು ಬಾಳ ಬಂಡಿಯ ನೊಗ ಹೊರಲು ಅಣಿಗೊಳಿಸಿದ ಅಪ್ಪಂದಿರಿಗೆ”. ಒಂದೇ ವಸ್ತು ವಿಷಯ ಕುರಿತಂತೆ ಇಷ್ಟೊಂದು ಲೇಖಕರಿಂದ ಲೇಖನಗಳನ್ನು ಪಡೆಯುವ ಹಿಂದಿನ ಪರಿಶ್ರಮ ಕಾಳಜಿ ಸೋಜಿಗ ಮತ್ತು ಸಂತಸವನ್ನು ಹುಟ್ಟಿಸುತ್ತದೆ. “ತಪ್ಪೋ ಒಪ್ಪೋ ಒಪ್ಪಿಕೋ ಅಪ್ಪ ಅಂದ್ಹಂಗೆ” ಎಂಬಂತೆ ಪ್ರತಿಯೊಬ್ಬರೂ ಅವರ ಅಂತಃಕರಣದ ಮೂಲ ಸೆಲೆಯ ಅಂತರಂಗದ ದೀಪದ ಬೆಳಕಿನಲ್ಲಿ ತಮ್ಮ ತಂದೆಯ ಪ್ರಭೆಯನ್ನು ಕಾಣಲು ಯತ್ನಿಸಿರುವುದಂತೂ ನಿಜ .ಎಲ್ಲಾ ಅಪ್ಪಂದಿರ ಧ್ಯೇಯ ಕನಸು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಎಂಬುದು ಇಲ್ಲಿ ಸ್ಪಷ್ಟವಾಗಿ ನಿರೂಪಿತವಾಗುತ್ತದೆ . ಈ ದಾರಿಯಲ್ಲಿ ಇಟ್ಟ ಹೆಜ್ಜೆ ಪಟ್ಟ ಶ್ರಮ ವಿವಿಧ ರೂಪದ್ದಾದರೂ ಅಂತ್ಯದ ಗಮ್ಯ ಏಕರೂಪಿಯೇ. ಕೆಲವು ತಂದೆಯರು ” ಮೃದೂಣಿ ಕುಸಿಮಾದಪಿ”ಗಳಾಗಿ ತೋರ್ಪಡಿಸಿಕೊಂಡಿದ್ದಾರೆ .ಮತ್ತೆ ಕೆಲವರದು “ವಜ್ರಾದಪಿ ಕಠೋರಾಣಿ” ಯ ಪ್ರತಿರೂಪ. ಆದರೆ ಆ ವಜ್ರದ ಕವಚದ ಒಳಗೆ ಮೃದುಲ ಭಾವನೆಗಳಿವೆ ಎಂಬುದು ಮಕ್ಕಳಿಗೆ ಆಗ ಅರಿವಾಗದಿದ್ದರೂ ನಂತರದ ದಿನಗಳಲ್ಲಿ ತಿಳಿ ವಾಗಿರುತ್ತದೆ .ಇದನ್ನೇ ಇಲ್ಲಿನ ಲೇಖನಗಳು ಪ್ರತಿಧ್ವನಿಸುತ್ತದೆ. ಕೆಲವರು ತಮ್ಮ ಅಣ್ಣ, ಚಿಕ್ಕಪ್ಪ, ಸೋದರ ಮಾವಂದಿರಲ್ಲಿ ತಂದೆಯ ಪಡಿನೆಳಲನ್ನು ಕಂಡುಕೊಂಡಿರುತ್ತಾರೆ. ಆ ನಿರೂಪಣೆಗಳೂ ಹೃದಯಂಗಮವೇ. ಮುದ್ದಿಸಿ ತಿದ್ದಿ ಹೇಳಲಿ ಗುದ್ದು ಕೊಟ್ಟು ಬುದ್ಧಿ ಕಲಿಸಲಿ ಪ್ರತಿ ಅಪ್ಪನ ಹೃದಯದಲ್ಲಿಯೂ ಮಕ್ಕಳ ಶ್ರೇಯೋಭಿವೃದ್ಧಿಯ ವಾಂಛೆ ಅಡಗಿಯೇ ಇರುತ್ತದೆ. ಆ ಕನಸಿನ ನನಸಿಗಾಗಿ ಜೀವನವಿಡೀ ಶ್ರಮಿಸುವ ತಮ್ಮ ಸ್ವಹಿತ ಸ್ವಾರ್ಥ ಬದಿಗಿಟ್ಟು ಕುಟುಂಬಕ್ಕಾಗಿ ಶ್ರಮಿಸುವ ಅಪ್ಪಂದಿರ ಯಶೋಗಾಥೆ ಇಲ್ಲಿ ಚಿತ್ರಿತ. ಕೆಲವರಿಗೆ ತಮ್ಮ
ಶ್ರಮದ ಫಲವನ್ನು ಕಣ್ಣಾರೆ ಕಾಣುವ ಯೋಗವಿದ್ದರೆ ಇನ್ನೂ ಕೆಲವರು ಸಸಿ ವೃಕ್ಷ ವಾಗುವುದರಲ್ಲಿ ಕಾಲನ ಕರೆಗೆ ಓಗೊಟ್ಟು ನಡೆದು ಬಿಟ್ಟಿರುತ್ತಾರೆ . ಹಾಗೆಂದು ಇಲ್ಲಿ ಅಪ್ಪಂದಿರ ಸದ್ಗುಣಗಳ ವೈಭವದ ಪ್ರದರ್ಶನ ಮಾತ್ರ ಇಲ್ಲ. ದೌರ್ಬಲ್ಯಗಳನ್ನು ಆದರೆ ನೈಜವಾಗಿ ಕಥಯಿಸಿ ಸಹಜವಾಗಿ ಅಪ್ಪನ ದೌರ್ಬಲ್ಯಗಳನ್ನು ಅಪ್ಪಿಕೊಳ್ಳುವ ಪ್ರಯತ್ನವೂ ಇದೆ. ಕೆಲ ದೃಷ್ಟಾಂತಗಳು
ಪ್ರತಿದಿನ ಕುಡಿದು ಬರುತ್ತಿದ್ದ ನಮ್ಮ ಅಪ್ಪ ಬರುವಾಗಲೆಲ್ಲಾ ಮಕ್ಕಳಿಗೆ ತಿಂಡಿ ತರುತ್ತಿದ್ದ.
ಕುಜದೋಷ ಗಳಿದ್ದರೂ (ಕು =ಕುಡಿತ ಜ= ಜಗಳ )ಕಚ್ಚೆಹರುಕ ಎಂಬ ಕುಖ್ಯಾತಿ ಹೊಂದಿರಲಿಲ್ಲ ನನ್ನಪ್ಪ .
ಅಪ್ಪನ ಗೆಳೆಯರೆಲ್ಲಾ ತೀರ್ಥಂಕರರು, ಧರ್ಮರಾಯನ ವಾರಸುದಾರರು, ಧೂಮ್ರಾ ನಂದಿಗಳು
ಒಂದೊಂದು ಸಲ ನಮ್ಮಪ್ಪ ನನಗೆ ಒಂದು ರೀತಿಯ ರಾಕ್ಷಸನಂತೆ ಕಾಣುತ್ತಿದ್ದ
ಅಂದಿನಿಂದ ನಾನು ಅಪ್ಪನನ್ನು ನೋಡಲಿಲ್ಲ ನೋಡಬೇಕು ಎಂದು ಸಹ ಅನ್ನಿಸಲಿಲ್ಲ
ತಮ್ಮ “ನನ್ನ ಮೊದಲ ಗುರುವೇ ನನ್ನ ತಂದೆ” ಲೇಖನದೊಂದಿಗೆ “ಅಪ್ಪನ ದರ್ಶನ” ಎಂಬ ಮುನ್ನುಡಿಯ ಕಾರ್ಯಭಾರವನ್ನು ನಿರ್ವಹಿಸಿರುವ ಹಿರಿಯ ಲೇಖಕ ಗೋ. ರು. ಚನ್ನಬಸಪ್ಪ ಅವರು ಇಲ್ಲಿನ ಲೇಖನಗಳ ಬಗ್ಗೆ ಹೀಗೆ ನುಡಿದಿದ್ದಾರೆ “ಇಲ್ಲಿನ ಲೇಖಕರು ಕೇವಲ ತಮ್ಮ ತಂದೆಯನ್ನು ಕುರಿತು ಭಾವನಾತ್ಮಕ ವೈಭವೀಕರಣಕ್ಕೆ ಸೀಮಿತಗೊಳ್ಳದೆ ವಸ್ತುನಿಷ್ಠವಾಗಿ ಸಂಗತಿಸಿದ್ದಾರೆ . ತಂದೆಯ ಆದರ್ಶವೆನ್ನುವ ಗುಣಗಳು ಅಲ್ಲದೆ ಕುಂದು ಕೊರತೆಗಳನ್ನು ಮುಕ್ತವಾಗಿ ತಿಳಿಸಿದ್ದಾರೆ. ಈ ಪ್ರೀತಿ ವಾತ್ಸಲ್ಯಗಳ ಸಂಬಂಧದಲ್ಲಿ ಪರಸ್ಪರ ಕ್ಷಮಾಗುಣವಿದೆ, ಪರಸ್ಪರ ಶ್ರೇಯಸ್ಸಿನ ಆಶಯವಿದೆ, ಪರಸ್ಪರ ಆಂತರಂಗಿಕ ವಿಶ್ವಾಸವಿದೆ, ಕರುಳ ಸಂಬಂಧದ ಸಹಯೋಗವಿದೆ.”
ತಮ್ಮ ಮಕ್ಕಳ ಯಶಸ್ಸಿನಲ್ಲಿ ತಮ್ಮ ಜೀವನದ ಸಾಫಲ್ಯ ಕಾಣಲು ಅಪ್ಪನ ಎನ್ನುವ ಭಾವಋಷಿಗೆ ರಸಋಷಿ ಕುವೆಂಪು ಅವರ ಈ ನುಡಿಗಳು ಸಲ್ಲುವ ಗೌರವವೇ ತಾನೆ?
ನೀ ಕಲಿಸಿದುಲಿಯನ್ನೆ ನಾನುಲಿಯಲೊಮ್ಮೊಮ್ಮೆ
ನನಗೆ ಹೆಮ್ಮೆ
ರವಿಯ ಮರುಬಿಂಬಿಸುವ ಕನ್ನಡಿಗೆ ನನ್ನಂತೆ ಬಿಂಕವಂತೆ
~ಕುವೆಂಪು
ನಾನು ಉದ್ದೇಶಪೂರ್ವಕವಾಗಿ ಯಾರೊಬ್ಬರ ಲೇಖನದ ಬಗೆಗೂ ಬರೆದಿಲ್ಲಾ ಪ್ರತಿಯೊಂದು ಬರಹವೂ ನಾವೇ ಗೋಧಿ ಅನುಭವಿಸಬೇಕಾದ ಅನುಭೂತಿ ತಾಧ್ಯಾತ್ಮ ಗೊಳ್ಳಬೇಕಾದ ಅನುಭಾವ ವಿವರಿಸಿ ಹೇಳಿದಾಗ ಪಕ್ವಾನ್ನದ ರುಚಿ ಮಂಕಾಗಬಹುದು ಏನಿದ್ದರೂ ಇದು ಲೇಖಕ ಓದುಗನ ನಡುವಿನ ನೇರ ಸಂವಾದ ಹದ ಮಿಡಿದ ನುಡಿವ ವೀಣೆ ಯಕ್ಷಗಾನಕ್ಕೆ ಮದ್ಯದ ಅರ್ಥ ಗಾರನ ಅವಶ್ಯಕತೆ ಇಲ್ಲ ಅಲ್ಲವೇ
“ಅಪ್ಪ ಎಂಬ ರೂಪಕದ ಬೆನ್ನುಹತ್ತಿ” ಎಂಬ ಆಶಯ ನುಡಿಯಲ್ಲಿ ಲೇಖಕ ವಾಸುದೇವ ನಾಡಿಗ್ ಅವರು “ಎಷ್ಟೋ ಲೇಖಕರ ಹಪಾಹಪಿತನ ಮತ್ತು ಹುಡುಕಾಟಕ್ಕೆ ಅಪ್ಪ ಎಂಬ ಜೀವ ಕಾರಣವಾದ ಪ್ರೇರಕದ ಸತ್ಯವೊಂದು ಇಲ್ಲಿ ಝಗಮಗಿಸುತ್ತದೆ . ಹಾಗಾಗಿಯೇ ಅಮ್ಮ ಮಿಡುಕುವ ಪ್ರೀತಿಯ ಉಪಮೆಯಾದರೆ ಅಪ್ಪ ಸದಾ ಕಾಡುವ ಕೆಣಕುವ ರೂಪಕ” ಎನ್ನುವ ಮಾತುಗಳು ಎಷ್ಟು ಸತ್ಯ .
“ಅಮ್ಮನ ಸೀರೆ ಮಡಚೋಕಾಗಲ್ಲ ಅಪ್ಪನ ದುಡ್ಡು ಎಣಿಸೋಕಾಗಲ್ಲ” ಎಂಬ ಅಲಂಕಾರದಂತೆಯೇ ಅಪ್ಪ ಅಮ್ಮನ ಬಗ್ಗೆ ಮನದಲ್ಲಿ ಮಡುಗಟ್ಟಿದ ಆಪ್ತ ಭಾವಗಳನ್ನೆಲ್ಲಾ ಶಬ್ದಕ್ಕಿಳಿಸಲಾಗದ ಅಸಹಾಯಕತನ ಆರ್ತತೆಯನ್ನು ತಂದೊಡ್ಡುತ್ತದೆ, ಆರ್ದ್ರ ರನ್ನಾಗಿಸುತ್ತದೆ. ಆ ಹಪಾಹಪಿ ಸ್ವಲ್ಪವಾದರೂ ಬರೆಯುವ ಮೂಲಕ, ಹೀಗೆ ಬರೆದವುಗಳನ್ನು ಓದುವ ಮೂಲಕ ನೀಗಿಸಿಕೊಂಡು ನಮ್ಮನ್ನು ನಾವೇ ಸಂತೈಸಿ ಕೊಳ್ಳೋಣ .
ಪುಸ್ತಕದ ಕೊನೆಯಲ್ಲಿ “ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ” ಎಂಬ ತೆಲುಗು ಮೂಲದ ಅನುವಾದದ ಕವಿತೆಯ ಕಡೆಯ ಸಾಲುಗಳು ನಿಮ್ಮ ಓದಿಗಾಗಿ
ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ
ಅವರೇ ನಮ್ಮೆಲ್ಲರ ಬೆನ್ನೆಲುಬು
ಬೆನ್ನೆಲುಬು ಹಿಂದಿರುವ ನಾವೆಲ್ಲರೂ ಬೆಟ್ಟದ
ಹಾಗೆ ನಿಂತಿರುವುದು
ಆದ್ದರಿಂದಲೇ ಏನೋ ಅಪ್ಪಾ ಹಿಂದೆಯೇ ಉಳಿದುಬಿಟ್ಟ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು