ಅಂಕಣ ಸಂಗಾತಿ

ಸಿನಿ ಸಂಗಾತಿ

ಸೀತಾ ರಾಮಮ್ ( ತೆಲುಗು)

ಸುಂದರ ಪ್ರೇಮ ಕಾವ್ಯ

ಅಫ್ರೀನ್ (ರಶ್ಮಿಕಾ ಮಂದಣ್ಣ) ಪಾಕಿಸ್ತಾನಿ ಮೂಲದ ಲಂಡನ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ .ಅವಳ ತಾತ ಪಾಕಿಸ್ತಾನಿ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು ( ಬ್ರಿಗೇಡಿಯರ್) ತಾತನ ಆಸ್ತಿ ಮೊಮ್ಮಗಳಿಗೆ ದಕ್ಕ ಬೇಕಾದರೆ ಅವಳು ಭಾರತಕ್ಕೆ ತೆರಳಿ ಭಾರತೀಯ ಸೈನ್ಯಕ್ಕೆ ಸೇರಿದ ರಾಮನ ಪತ್ರವನ್ನು ಸೀತಾ ಮಹಾಲಕ್ಷ್ಮಿ ಗೆ ತಲುಪಿಸಬೇಕು.

         ಪಾಕಿಸ್ತಾನದಿಂದ ಬರುವ ಈ ಹುಡುಗಿ ಸೀತಾ ಮಹಾಲಕ್ಷ್ಮಿಯನ್ನು ಹುಡುಕಿದಳೇ ?! ಹುಡುಕಿ ಪತ್ರವನ್ನು ತಲುಪಿಸಿದಳೇ ?? ಪಾಕಿಸ್ತಾನದ ಸೈನ್ಯಾಧಿಕಾರಿಗೂ, ಭಾರತೀಯ ಸೈನ್ಯದ ಲೆಫ್ಟಿನೆಂಟ್ ರಾಂಗೂ ಇದ್ದ ಸಂಬಂಧ ಏನು ? ಎಂಬುದನ್ನು ತಿಳಿಯಬೇಕಾದರೆ ಸೀತಾರಾಮಮ್ ತೆಲುಗು ಸಿನಿಮಾವನ್ನು ನೋಡಬೇಕು.

         ಈ ಕಥೆ ನಡೆಯುವುದು 1964 ರಿಂದ 1984ರ ನಡುವಿನ ಕಾಲಘಟ್ಟದಲ್ಲಿ .ಯುದ್ಧ ಹಾಗೂ ಪ್ರೇಮ ಕಥನ ಎರಡನ್ನು ಸಮೀಕರಿಸಿ ದೃಶ್ಯ ಕಾವ್ಯವನ್ನಾಗಿ ಸಿನಿಮಾವನ್ನು ಹೆಣದಿದ್ದಾರೆ . ರಾಮ್ (ದುಲ್ಕರ್ ಸಲ್ಮಾನ್ )ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ , ಸೀತಾ (ಮೃಣಾಲ್ ಠಾಕೂರ್) ಮೂಲತಃ ನೂರ್ ಜಹಾನ್ ಎಂಬ ಹೈದರಾಬಾದಿ ಮೂಲದ ರಾಣಿ, ಸೈನಿಕ ರಾಮ  ಹಾಗೂ ಸೀತಾಳ ಭೇಟಿ ಅನಿರೀಕ್ಷಿತವಾಗಿ ಆಗುತ್ತದೆ . ಆಕಸ್ಮಿಕವಾಗಿ ಗಲಭೆ ಕೋರರಿಂದ ತಪ್ಪಿಸಿಕೊಳ್ಳಲು ಸೀತಾಳನ್ನು ತನ್ನ ಪತ್ನಿ ಎಂದು ರಾಮ್ ಪರಿಚಯಿಸುತ್ತಾನೆ

. ಅಲ್ಲಿಂದ ಆಚೆಗೆ ಅವರಿಬ್ಬರೂ ಭೇಟಿಯಾಗಿರುವುದಿಲ್ಲ ಸೈನ್ಯಕ್ಕೆ ತೆರಳಿದ ರಾಮನಿಗೆ ಸೀತಾಳಿಂದ ಪತ್ರಗಳು ಬರುತ್ತವೆ . ಆ ಪ್ರೇಮಪತ್ರಗಳಲ್ಲಿ ಸೀತಾ ರಾಮನನ್ನು ಪತ್ನಿಯಂತೆ ಕಾಡುತ್ತಾಳೆ . ಹೀಗೆ ಆವರಿಸಿಕೊಳ್ಳುವ ಸೀತಾಳನ್ನು ಹುಡುಕಿಕೊಂಡು ರಾಮ್ ಹೈದರಾಬಾದಿಗೆ ಬರುತ್ತಾನೆ, ಅವಳನ್ನು ಭೇಟಿಯಾಗಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ .

  ಕರ್ತವ್ಯದ ಕರೆಯಿಂದಾಗಿ ಮತ್ತೆ ಕಾಶ್ಮೀರಕ್ಕೆ ತೆರಳುತ್ತಾನೆ        

        ಈ ನಡುವೆ ರಾಣಿ ಸೀತ (ನೂರ್ ಜಹಾನ್) ಳಿಗೆ ಓಮನ್ ದೇಶದ ರಾಜನೊಂದಿಗೆ ಮದುವೆ ಗೊತ್ತು ಮಾಡುತ್ತಾನೆ ನೂರ್ ಜಹಾನ್ ನ ಅಣ್ಣ. ಆದರೆ ರಾಣಿ ಪಟ್ಟವನ್ನೇ ತಿರಸ್ಕರಿಸಿ ತನ್ನ ಪ್ರೇಮಿಯನ್ನು  ಸೇರಲು ಸೀತ ಕಾಶ್ಮೀರಕ್ಕೆ ಓಡಿ ಬರುತ್ತಾಳೆ. ಸೀತಾಳ ನಿಜ ಹೆಸರು ನೂರ್ ಎಂಬುದು ರಾಮ್ ಗೆ ನಂತರ ತಿಳಿಯುತ್ತದೆ .ಆದರೆ ಅವರಿಬ್ಬರ ಪ್ರೇಮಕ್ಕೆ ಜಾತಿ ಧರ್ಮಗಳ ಅಡ್ಡಗೋಡೆ ಅಡ್ಡಿಯಾಗುವುದಿಲ್ಲ

      ಇನ್ನೇನು ಅವರಿಬ್ಬರು ಮದುವೆಯಾಗಬೇಕು ಎನ್ನುವಾಗ ಪಾಕಿಸ್ತಾನ ಬಂಡುಕೋರರನ್ನು ಬಗ್ಗು ಬಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ರಾಮ್ ತೆರಳುತ್ತಾನೆ .ಅಲ್ಲಿ ಪಾಕಿಸ್ತಾನ ಲೆಫ್ಟಿನೆಂಟ್ ರವರ ಮೊಮ್ಮಗಳನ್ನು ಉಳಿಸಲು ಹೋಗಿ ಪಾಕಿಸ್ತಾನಿ ಸೈನಿಕರ ಸೆರೆಗೆ ಸಿಕ್ಕಿಬಿಡುತ್ತಾನೆ .ಅವನಿಗೆ ಬಿಡುಗಡೆಯ ಯೋಗ ದೊರೆಯುವುದಿಲ್ಲ.. ಇತ್ತ ರಾಮ್ ನ ನಿರೀಕ್ಷೆಯಲ್ಲಿ ಸೀತಾ ಕಾಯುತ್ತಿರುತ್ತಾಳೆ .

         ಸೆರೆಯಲಿದ್ದ ರಾಮ್ ಬಿಡುಗಡೆಯಾಗದೆ ಉಳಿದನೇ ?ಸೀತಾರಾಮ್ ಒಂದಾದರೆ ?ಅಲ್ಲಿ ರಾಮ್ ಬರೆದ ಪತ್ರ ಭಾರತಕ್ಕೆ ತಲುಪಿ ಸೀತಾಳನ್ನು ಮುಟ್ಟಿತೇ?

 20 ವರ್ಷಗಳ ನಂತರ ರಾಮನ ಪತ್ರ ಹೊತ್ತು ತರುವ ಅಫ್ರೀನ್ ಸೀತಾಳನ್ನು ಹುಡುಕಿದಳೆ, ..ಒಲವಿನ ಸಾಕ್ಷಾತ್ಕಾರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೀತಾಳನ್ನು ಭೇಟಿಯಾದಳೇ..

 ಪತ್ರ ನೀಡಿದಳೆ..?,  ಪತ್ರ ಪಡೆದ ಸೀತಾಳ ಬೇಗು ದಿ ಭಾವಗಳೇನು? ಇವೆಲ್ಲವೂ ತಿಳಿಯಬೇಕಾದರೆ ಸಿನಿಮಾವನ್ನು ನೋಡಬೇಕು.

           60ರ ದಶಕದ ಕಾಲಘಟ್ಟದ ದೃಶ್ಶೀಕರಣದ ಈ ದುರಂತ ಪ್ರೇಮಕಥೆ ಬಹಳ ಅದ್ಭುತವಾಗಿ ಮೂಡಿಬಂದಿದೆ . ನಾವು ಹಲವಾರು ಪ್ರೇಮ ಕಥೆಗಳನ್ನು ಹೊಂದಿದ ಸಿನಿಮಾಗಳನ್ನು ನೋಡಿದ್ದೇವೆ . ಆದರೆ ಒಂದು ರೀತಿಯ ವಿಶಿಷ್ಟ ಕ್ಲಾಸಿಕ್ ಟಚ್ ಈ ಸಿನಿಮಾಕ್ಕಿದೆ.

               ಕಾಶ್ಮೀರದ ಸುಂದರ ದೃಶ್ಯಗಳು, ಬಳಸಿರುವ ಸೆಟ್ಗಳು ವಸ್ತ್ರ ವಿನ್ಯಾಸ ಬಹಳ ವಿಶಿಷ್ಟವಾಗಿದೆ. ಮನಸ್ಸಿಗೆ ಮುದ ನೀಡುತ್ತದೆ, ಚಿತ್ರದ ನಾಯಕ ನಾಯಕಿಯರಾಗಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಬಹಳ ಚಂದದ ಜೋಡಿ, ಅವರಿಬ್ಬರನ್ನು ತೆರೆಯ ಮೇಲೆ ನೋಡುವುದೇ ಒಂದು ಚೆಂದ .ಇಬ್ಬರದು ಸುಂದರ ಜೋಡಿ, ಈ ಜೋಡಿ ನಮ್ಮನ್ನು ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತದೆ .

       ಇಂತಹ ಅದ್ಭುತ ಸಿನಿಮಾ ನೀಡಿದ ಕೀರ್ತಿ ನಿರ್ದೇಶಕ ಹನುರಾಘವ ಪುಡಿ ಅವರಿಗೆ ಸಲ್ಲಬೇಕು .ಒಂದು ಸುಂದರ ಪ್ರೇಮ ಕಥೆಯನ್ನು ಸ್ವರ್ಗ ಸದೃಶವಾಗಿ ಮನಸ್ಸಿಗೆ ಹಿತವಾಗುವಂತೆ ಮೂಡಿಸಿರುವುದು ಚಿತ್ರದ ವಿಶೇಷತೆ, 60ರ ದಶಕದ ಸೆಟ್ಗಳು ಪೀಠೋಪಕರಣಗಳು ವಸ್ತ್ರಾಭರಣಗಳು ಎಲ್ಲವೂ ಅಮೂಲ್ಯ,

 ಚಿತ್ರದ ಮೊದಲ ಭಾಗ ಎಳೆದಂತೆ ಭಾಸವಾಗುತ್ತದೆ , ಚಿತ್ರದ ಎರಡನೇ ಭಾಗ ವೇಗದ ಗತಿಯಲ್ಲಿ ಸಾಗುತ್ತದೆ . ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಒಂದು ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದೆ. ಅವರೆಲ್ಲರೂ ಕಥೆಗೆ ಪೂರಕವಾಗಿ ಅಭಿನಯಿಸಿದ್ದಾರೆ .ಚಿತ್ರದಲ್ಲಿ ಹಲವಾರು ತಿರುವುಗಳಿವೆ , ಕೆಲವು ಅನಗತ್ಯ ಘಟನೆಗಳನ್ನು ತೆಗೆಯಬಹುದಿತ್ತು. ಚಿತ್ರದಲ್ಲಿ ಹಾಸ್ಯಕ್ಕೆ ಅವಕಾಶ ಕಡಿಮೆ. ಇದೊಂದು ಗಂಭೀರವಾದ ಪ್ರೇಮ ಕಥೆ, ಹಾಗಾಗಿ ಮನರಂಜನೆಗಿಂತ ಹೆಚ್ಚಿನ ಗುಣಮಟ್ಟದಾಗಿದೆ,. ಚಿತ್ರದ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

             ಸಿನಿಮೆಟೋಗ್ರಫಿ ಅತ್ಯದ್ಭುತವಾಗಿ ಮೂಡಿಬಂದಿದೆ, ಸುಂದರ ಕಾಶ್ಮೀರವನ್ನು ಬಹಳ ಮನಸೂರೆಗೊಳ್ಳುವಂತೆ  ಸೆರೆಹಿಡಿದಿದ್ದಾರೆ.

   ಹನು ಅವರ ದಕ್ಷ ನಿರ್ದೆಶನದ ಛಾಪು ಒಡ ಮೂಡಿದೆ .ಒಟ್ಟಾರೆಯಾಗಿ ಯುದ್ಧ ಮತ್ತು ಪ್ರೇಮ ಎರಡನ್ನು ಸಮೀಕರಿಸಿದ ದೇಶ ಭಾಷೆ ಧರ್ಮಗಳನ್ನು ಮೀರಿದ ಸುಂದರ ಅನುಭೂತಿ ಈ ಸಿನಿಮಾ.

      ಮಾಸ್ ವೀಕ್ಷಕರಿಗೆ ಸಿನಿಮಾ ಹಿಡಿಸುವುದು ಅನುಮಾನ .ದೊಡ್ಡ ತೆರೆಯಲ್ಲಿ ಈ ಅದ್ಭುತ ಸಿನಿಮಾ ಪ್ರೇಮಕಥೆಯನ್ನು ಕಣ್ಣು ತುಂಬಿ ಕೊಳ್ಳಬೇಕು, ಅಮೆಜಾನ್ ಪ್ರೈಮ್ ನಲ್ಲಿಯೂ ಸಿನಿಮ ಲಭ್ಯವಿದೆ .ಸಿನಿಮಾ ನೋಡಿ ಉತ್ತಮ ಪ್ರೇಮಕಥೆಯನ್ನು ನೋಡಿದ ರಸಾನುಭೂತಿಯನ್ನು ಹೊಂದಲೇಬೇಕು.

ತಾರಗಣ -ದುಲ್ಕ್ವೀರ್ ಸಲ್ಮಾನ್, ಮೃಣಾಲ್ ಠಾಕೂರ್ , ರಶ್ಮಿಕಾ ಮಂದಣ್ಣ , ಸುಮಂತ್ ಇತರರು

ನಿರ್ದೇಶನ – ಹನು ರಾಘವ ಪುಡಿ

ನಿರ್ಮಾಪಕರು – ಅಶ್ವಿನಿ ದತ್

ಸಂಗೀತ- ವಿಶಾಲ್ ಚಂದ್ರಶೇಖರ್

ಸಿನಿಮಾಟೋಗ್ರಫಿ – ಪಿ .ಎಸ್ .ವಿನೋದ್ ಮತ್ತು ಶ್ರೇಯಸ್ ಕೃಷ್ಣ

ಸಂಕಲನ- ಕೋಟಗಿರಿ ವೆಂಕಟೇಶ್ವರ ರಾವ್.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top