ಕವಿಕಾವ್ಯ ಸಂಗಾತಿ
ಬದುಕೆ ಒಂದು ಮಹಾ ಕಾವ್ಯ
ಬುದ್ದ ಹೇಳುವಂತೆ
“ಪ್ರೇಮವು ಮಾನವತೆಯ ಇನ್ನೊಂದು ಹೆಸರು”.
ನಾವು ಮೊದಲು ಮನುಷ್ಯರಾಗಿ ಮನುಷ್ಯರನ್ನು ಪ್ರೀತಿ ಮಾಡುವುದನ್ನು ಕಲಿಯಬೇಕು…
ಯಾವುದೇ ಕಲೆಯಾಗಲಿ
ಪ್ರೀತಿಸದೆ, ಗೌರವಿಸದ ಹೊರತು ಅದು ನಮಗೆ ದಕ್ಕಲಾರದು.
ಅದು ಸಾಹಿತ್ಯ ಆಗಿರಬಹುದು, ಸಂಗೀತ ಆಗಿರಬಹುದು, ನೃತ್ಯವೇ ಆಗಿರಬಹುದು. ಹಾಗಾಗಿ ಮನುಷ್ಯ ಸಂಗ ಜೀವಿ, ಸೃಷ್ಟಿ ಜೊತೆಗೆ ಅವಿನಾಭಾವ ಸಂಬಂಧ ವಿರುತ್ತದೆ. ಕವಿಯಾದವನಿಗೆ ಹಾಗೆ ಸಮಾಜದ ಆಗು ಹೋಗುಗಳ ಜೊತೆ ಜೊತೆ ಬದುಕಬೇಕಾಗುತ್ತದೆ. ಅದೆ ಸಾಹಿತ್ಯ ಹುಟ್ಟಿಗೆ ಪ್ರೇರಣ, ಕಾರಣ.
ನಾನು ಗಜಲ್ ಪ್ರೇಮಿಗಳಲ್ಲಿ ಒಬ್ಬಳಾಗಿ ಗಾಲಿಬ್ ಸ್ಮೃತಿ ಹಿಡಿದು ಮಲ್ಲಿಗೆಯ ಹೂದೋಟದಲ್ಲಿ ಸಂಚರಿಸುತ್ತಾ ಸ್ನೇಹದ ಮಧುಶಾಲೆ ಕಡೆಗೆ ಹೊರಟಿರುವೆ.
ಶ್ರೀಯುತ ಡಾ. ಮಲ್ಲಿನಾಥ ಎಸ್. ತಳವಾರವರು ಪ್ರಸ್ತುತ ಕಲಬುರ್ಗಿಯ ನೂತನ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವರು. ಈಗಾಗಲೆ ಸಾಹಿತ್ಯ ಲೋಕಕ್ಕೆ ಹತ್ತಾರು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಬಹುಮುಖ ಪ್ರತಿಭೆಯ ಸೃಜನಶೀಲ ಬರಹಗಾರರು. ಕಥೆ, ಕವನ, ಸ್ತ್ರೀ ಪರ ಕುರಿತು ಸಂಶೋಧನಾ ಪ್ರಬಂಧಗಳು, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಮಜಲುಗಳನ್ನು ಸರಳ ಸುಲಲಿತವಾಗಿ ಬರವಣಿಗೆಯ ಮೂಲಕ ರುಜುವಾತು ಮಾಡಿದ್ದಾರೆ.
ಇವುಗಳೊಂದಿಗೆ ಇನ್ನೊಂದು ಹೊಸದಾಗಿ ಸೇರ್ಪಡೆಯಾದ ಸಾಹಿತ್ಯವೆಂದರೆ ಅದೆ ಗಜಲ್ ಸಾಹಿತ್ಯ.
ನನ್ನ ಪ್ರಕಾರ ಮನದ ತುಮುಲ, ವಿರಹ ವೇದನೆ, ಪ್ರೇಮ, ಪ್ರೀತಿ, ಸರಸ ವಿರಸಗಳ ಭಾವ ತೀವ್ರತೆಯನ್ನು ತಿಳಿಸಿಬೇಕೆಂದರೆ ಗಜಲ್ ನಲ್ಲಿ ಮಾತ್ರ ಅಳವಡಿಸಲು
ಸಾದ್ಯತೆ ಹೆಚ್ಚು ಎಂಬುದು ಮನದಟ್ಟಾಗಿದೆ. ಬೇರೆ ಸಾಹಿತ್ಯದಲ್ಲಿ ಇಷ್ಟು ಹಿಡಿದಿಡಲು ಸಾದ್ಯವಿಲ್ಲ ಅಂತ ನನ್ನ ಅನಿಸಿಕೆ.
ನನಗೆ ಅತೀವವಾಗಿ ಪ್ರಿಯವಾದ ಸಾಹಿತ್ಯ ಗಜಲ್. ಸಹೃದಯಿ, ಸ್ನೇಹಮಯಿ ಶ್ರೀಯುತ ತಳವಾರವರು ಕೃತಿ ಕಳಿಸಿ ತುಂಬಾ ದಿನಗಳೆ ಆಗಿತ್ತು, ಓದಿದ್ದೆ ಅದರೆ ಅದರ ಬಗ್ಗೆ ಮನದ ಅನಿಸಿಕೆಗಳನ್ನು ಬರೆಯಲು ಆಗಿರಲಿಲ್ಲ
ತಡವಾದುದಕ್ಕೆ ಕ್ಷಮೆ ಇರಲಿ. ನನಗೆ ತಿಳಿದ ಮಟ್ಟಿಗೆ ಬರೆಯಲು ಪ್ರಯತ್ನಿಸಿರುವೆ ಅಷ್ಟೇ.
ನಾನೂ ಕೆಲವು ಕವನ, ಕೃತಿಗಳನ್ನು ಹೊರತಂದಿದ್ದು ಗಜಲ್ ಬರೆಯುವ ನಿಟ್ಟಿನಲ್ಲಿ ಆಸಕ್ತಿವಹಿಸಿ ಬರೆಯುತ್ತಿದ್ದು, ಇದರ ಆಳ ಬಹಳ ಕ್ಲಿಷ್ಟಕರ.
“ಗಾಲಿಬ್ ಸ್ತೃತಿ” ಗಜಲ್ ಗುಲದಸ್ತ ಕೃತಿ ಒಂದು ಮಾಹಿತಿಯುಳ್ಳ ಗಜಲ್ ಕೃತಿಯಾಗಿ ಮೂಡಿಬಂದಿದೆ. ಗಜಲ್ ಬಗ್ಗೆ ತಿಳಿಯುವವರಿಗೆ, ಗಜಲ್ ಬರೆಯುವವರಿಗೆ ಮಾಗ೯ದಶಿ೯ಯಾಗಿ ಅದರ ಕ್ರಮಗಳನ್ನು ತಿಳಿಯಬಹುದು ಎಂಬ ಅನಿಸಿಕೆ ನನ್ನದು. ಈ ಕೃತಿಯಲ್ಲಿ..ನನಗೆ ಬಹಳ ಆಪ್ತ ಎನಿಸಿದ ಗಜಲ್ ೬ ನೇ ಗಜಲ್
“ಬಡವರ ಓಣಿಯಲ್ಲಿ ಹಸಿವಿದೆ ನಿರಾಸೆಯಿಲ್ಲ ದೋಸ್ತ
ಬಾಳ ಪುಟದಲ್ಲಿ ಅಂದಕಾರವಿದೆ ಭಯವಿಲ್ಲ ದೋಸ್ತ“
ಬಡವ ಶ್ರೀಮಂತರ ನಡುವಿನ ಅಂತರ, ನಿಯತ್ತಿನ ದುಡಿಮೆಯ ಶಕ್ತಿಯೆ ಅಂತಹದು. ಯಾಕೆಂದರೆ ಯಾರ ಆದೀನದಲ್ಲಿ ನಾವು ಕೆಲಸ ಮಾಡುವವರಲ್ಲ. ರೈತ, ಕಾರ್ಮಿಕ ಇತರೆ ಬಗ್ಗೆ ಅಲ್ಲಿ ಗಟ್ಟಿಯಾಗಿ ಹೇಳುವ ಹಕ್ಕು ಕೂಡ ಇದೆ ಎನ್ನಬಹುದು. ಗಜಲ್ ಪ್ರೀತಿ, ಪ್ರೇಮ, ವಿರಹ ವೇದನೆ ಅಷ್ಟೇ ಅಲ್ಲದೆ ಸಮಾಜದ ಓರೆ ಕೋರೆಗಳನ್ನೂ ತಿದ್ದುವುದಾಗಿದೆ ಎನ್ನಬಹುದು.
ಇನ್ನೂ ೮೧ ಗಜಲ್ ನಲ್ಲಿ
“ಎದಿಯ ಬ್ಯಾನಿಗೆ ಮುದ ಕೊಡತೈತಿ ಈ ಬರವಣಿಗೆ
ಬ್ಯಾಸತ್ತ ಮಸ್ಸಿಗೆ ಜೀವ ತುಂಬತೈತಿ ಈ ಬರವಣಿಗೆ”
ಈ ಗಜಲ್ ನಲ್ಲಿ ಹೇಳುವ ಪ್ರತಿ ಶೇರ್ ಗಳು ನಿಜ ನಿಲುವು ಹೇಳಿವೆ. ಕವಿಗಳಿಗೆ ಜೀವನದ ಒಂದು ಭಾಗವಾಗುತ್ತದೆ ಬರಹ, ಮನಸಿಗೆ ಬೇಸರ, ಖುಷಿ ಆದಾಗ ಎರಡೂ ತೆರನಾಗಿ
ಮನಸು ತನಗರಿವಿಲ್ಲದೆ ಅಕ್ಷರ ರೂಪದಲ್ಲಿ ಮೂಡುತ್ತವೆ ಅಲ್ಲವೇ?
ತಳವಾರರ ಎರಡನೆ ಗಜಲ್ ಕೃತಿಯಾದ “ಮಲ್ಲಿಗೆ ಸಿಂಚನ”. ಇದರ ಸಿಂಚನದಲ್ಲಿ ಮಿಂದೇಳುವುದೆ ಚೆಂದ. ಇಡಿ ನಾಡಿಗೆ ನಾಡೇ
ತಲ್ಲಣಗೊಂಡ ಕಾಲ ಅದು ಕರೋನ ಕಾಲ, ಅಂತಹ ವಿಷಮ ಪರಿಸ್ಥಿತಿ ತಂದು ಒಡ್ಡಿತ್ತು. ಮನೆಯಲ್ಲಿ ಇರುವುದು ಗಂಡಸರಿಗೆ ಒಂದು ಸವಾಲಾಗಿ ಬಂಧನದಂತೆ ಆದ ಕಾಲ. ಹೆಣ್ಣಿಗೆ ಮನೆಯಲ್ಲಿ ಇರುವುದು ರೂಡಿಇರುತ್ತದೆ. ಆದರೆ ಗಂಡಸರಿಗೆ ಅದು ಅಸಾದ್ಯವೇ ಸರಿ. ಅಂತಹ ಕಾಲದಲ್ಲಿ ಗಜಲ್ ರಾಣಿ ಮಲ್ಲಿನಾಥವರನ್ನು ಕೈ ಹಿಡಿದು ನಡೆಸಿದ್ದು ಸುಸಮಯ ಅಂತ ಅನಿಸಿದೆ. ಇಲ್ಲಾ ಅಂದ್ರೆ ಇಂತಹ ಸುಮಧುರ ಗಜಲ್ ಕೃತಿ ಬರಲು ಆಗುತ್ತಿರಲ್ಲಿಲ್ಲವೇನೋ. ಕಷ್ಟಗಳು ಮನುಷ್ಯನ ಸತತ ಶ್ರಮಪಡುವ ಹಾಗೆ ಮಾಡುತ್ತವೆ ಎನ್ನುವದಕ್ಕೆ ಸಾಕ್ಷಿ ತಳವಾರ ಸರ್. ಕರೋನಾ ಕಾರಣ ಧಾರುಣ ಘಟನೆಗಳು, ಮನ ತಳಮಳಿಕೆ, ಬದುಕು ಬವಣೆ ಎಲ್ಲವೂ ಒಂದು ಚಿತ್ರದಂತೆ ಸರಿದು ಹೋದವು. ಕರೋನ ಟೈಮಲ್ಲಿ ಮೈದಳೆದ ಈ ಕಾವ್ಯ ಪ್ರಕಾರ ಕನ್ನಡ ಸಾರಸ್ವತ ಲೋಕದಲ್ಲಿ ಅದ್ಬುತ ಸಂಚಲನ ಮೂಡಿಸಿದೆ. ತಳವಾರರ
ಬದುಕೆ ಒಂದು ಮಹಾ ಕಾವ್ಯವಾಗಿ ಬದುಕಿನಲ್ಲಿ ಬರುವ ಏರು ಪೇರುಗಳೆ ಕಾವ್ಯ ಸೃಷ್ಟಿಗೆ ಸರಕುಗಳಾಗಿವೆ.
55 ..ನೆ ಗಜಲ್ ನಲ್ಲಿ
ಗಜಲ್ ಕಾರರು ಹೀಗೆ ಹೇಳಿದ್ದಾರೆ.
“ನಿನ್ನನ್ನು ನೋಡಿದಾಗಿನಿಂದ ನೆಮ್ಮದಿ ಕಳೆದಂತಾಗಿದೆ ಪ್ರಿಯೆ
ನಿನ್ನನ್ನು ಇಷ್ಟಪಟ್ಟಾಗಿನಿಂದ ಶಾಂತಿ ಕದಡಿದಂತಾಗಿದೆ ಪ್ರಿಯೆ”
ಹೀಗೆ ಮನಸ್ಸನ್ನು ಹಿಡಿತದಲ್ಲಿ ಹಿಡಿದು ಇಟ್ಟು ಕೊಳ್ಳುವುದೆಂದರೆ ಸುಲಭವಲ್ಲ. ಜಾರುವುದೆ ಹರೆಯದ ಗುಣ. ಮನಕೆ ಇದು ಸಹಜ. ಈ ಪ್ರೀತಿಯ ಅಮಲೇ ಹಾಗೆ, ಪ್ರೀತಿಯಲ್ಲಿ ಬಿದ್ದ ಮೇಲೆ ಕಷ್ಟ ನಷ್ಟಗಳು ಅನುಭವಿಸಲೇ ಬೇಕು. ಪ್ರೀತಿಯ ಪರಿಯನ್ನು ಮನದಾಳದಿಂದ ತಿಳಿಸಿದ್ದಾರೆ ಈ ಗಜಲ್ನಲ್ಲಿ.
“ಸ್ನೇಹದ ಮಧುಶಾಲೆ”ಗೆ ಹೊಗುವಾ
“ಪ್ರೇಮದಿಂದಲೆ ಸೃಷ್ಟಿಯ ಜನ್ಮವಾಗುವುದು ಪ್ರೇಮದಿಂದಲೆ ಅದರ ವ್ಯವಸ್ಥೆಯಾಗಿ ಪ್ರೇಮದಲ್ಲಿಯೇ ಅದರ ವಿಲೀನವಾಗುವುದು” ಎಂಬ ಟ್ಯಾಗೋರ್ ಅವರ ನುಡಿಯಂತೆ “ಪೂರ್ಣ ಪ್ರಮಾಣವಾಗಿ ಒಂದನ್ನ ಪಡೆಯ ಬೇಕೆಂದರೆ ಚಿಕ್ಕ ಚಿಕ್ಕ ಮೋಹಗಳ ಬಿಡಲೇ ಬೇಕಾಗುತ್ತದೆ” ಸಾಹಿತ್ಯ ಜೊತೆಗೆ ಸಾಗುವಾಗ ಎಡರು ತೊಡರುಗಳು ಸಾಮಾನ್ಯ. ಅಂತಹ ಸಂದರ್ಭ 31ನೇ ಗಜಲ್ ಹೇಳುತ್ತದೆ.
“ಜೀವನದ ಹೋರಾಟದಲ್ಲಿ ತೊಂದರೆಗಳೆಲ್ಲ ಬರಲಿಬಿಡು
ಗೆಲುವಿನ ದಾರಿಯಲ್ಲಿ ನೋವುಗಳೆಲ್ಲ ಬರಲಿಬಿಡು”
ದೇವರು ನಮಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾನೆ. ಅದೆಂದರೆ ಬದುಕು, ಬಾಳು. ಹಾಗಾಗಿ ನಾವು ಬಹಳ ಜಾಗರೂಕತೆಯಿಂದ ನಡೆದು ಕೊಂಡು ಹೋಗಬೇಕು. ಅದನ್ನು ಸುಂದರಗೊಳಿಸುವುದು ಹಾಗೂ ಹಾಳುಗೆಡಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿ ಇದೆ.
ಗಜಲ್ 74
“ಹಾಲು- ಜೇನನ್ನು ಬೇರ್ಪಡಿಸುವ ದುಸ್ಸಾಹಸಕ್ಕೆ ಕೈ ಹಾಕದಿರಿ!
ಹೆತ್ತವರ ಮನಸ್ಸನ್ನು ಒಡೆಯುವ ನೀಚತನಕ್ಕೆ ಕೈ ಹಾಕದಿರಿ!!”
ಇಂದಿನ ಪರಿಸ್ಥಿತಿಯಲ್ಲಿ ನಡೆಯುತಿರುವ ಕಥೆ ಇದು. ನನ್ನ ಕಣ್ಣ ಮುಂದೆ ನಡೆದ ಘಟನೆಗಳು. ಕಣ್ಣಾರೆ ಕಂಡಿದ್ದೆನೆ, ಒಬ್ಬ ತಾಯಿ ಇಡಿ ಮನೆ ಮಂದಿಯನ್ನೆಲ್ಲ ಹಾಗೂ ನಾಲ್ಕಾರು ಮಕ್ಕಳನ್ನು ಪ್ರೀತಿಯಿಂದ ಸಲಹುವಳು. ಆದರೆ? ಒಬ್ಬ ತಾಯಿಯನ್ನ ವಯಸ್ಸಾದ ಮೇಲೆ ನೋಡಿಕೊಳ್ಳುವ ಮಕ್ಕಳು ಸಂಖ್ಯೆಯಲ್ಲಿ ತುಂಬಾನೇ ಕಡಿಮೆ ಇದ್ದಾರೆ. ಇದಕ್ಕೆ ತಳವಾರರ ಗಜಲ್ ಹಿಡಿದ ಕನ್ನಡಿಯಂತೆ ಇದೆ. ಹಾಗೆ 45ರ ಗಜಲ್ ನಲ್ಲಿ
“ಕೊಲ್ಲುವ ಕೈಗಳೇಕೆ ಹಿಂಬಾಲಿಸುತಿವೆ!
ಕಾಯುವ ಮನಗಳೇಕೆ ಮರೆಯಾಗುತಿವೆ “
ಸತ್ಯಕಿಂತ ಅಸತ್ಯ ಮೆರೆಯುವ ಕಾಲವಿದು.
ಹಾಗಾಗಿ ಸಾತ್ವಿಕ ಗುಣದವರನ್ನ ಜನ ಉತ್ಸವದ ಮೂರ್ತಿ ಮಾಡುತ್ತಾರೆ. ಬಾಯಿಬಡಕತನ ಜನರನ್ನ
ಬುದ್ದಿವಂತ ಅಂತ ಮೆರೆಸುತ್ತಿದ್ದಾರೆ. ಮೌಲ್ಯವು ಇಂದು ಮರೆಮಾಚುತಿದೆ.
ಗಜಲ್ ಬಗ್ಗೆ ಬರೆದಷ್ಟು ಬರೆಯಬೇಕು ಎನ್ನುವ ಹಿತಾನುಭವ ಇವುಗಳಲ್ಲಿದೆ. ಹಾಗಾಗಿ ಮೂರು ಕೃತಿಗಳು ಬಹಳ ಚೆನ್ನಾಗಿ ಬಂದಿವೆ. ಇವು ಕನ್ನಡ ಗಜಲ್ ಲೋಕದಲ್ಲಿ ಅಮೂಲ್ಯ ರತ್ನಗಳು. ಗಜಲ್ ಪ್ರಿಯರಿಗೆ, ಗಜಲ್ ಕಲಿಕಾರ್ಥಿಗಳಿಗೆ, ಗಜಲ್ ಕುರಿತು ಸಂಶೋಧನೆ ಮಾಡುವವರಿಗೆ ಹೆಚ್ಚು ಉಪಯುಕ್ತವಾಗುತ್ತವೆ. ಗಜಲ್ ಪರಂಪರೆ, ಲಕ್ಷಣ, ಸ್ವರೂಪ, ಪ್ರಕಾರಗಳು, ಅದರ ಉದಾಹರಣೆಗಳು, ಕನ್ನಡದಲ್ಲಿ ಮೊದಲ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಪರಿಚಯ, ಗಜಲ್ ಛಂದಸ್ಸು ಎಲ್ಲವುಗಳ ಸಂಪೂರ್ಣ ವಿವರ ಮಲ್ಲಿನಾಥ ಸರ್ ಅವರ ಈ ಎಲ್ಲ ಕೃತಿಗಳಲ್ಲಿದೆ. ಇವರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕೃತಿಗಳು ಪ್ರಕಟವಾಗಲಿ, ಇವರ ಗಜಲ್ ಗುರುಗಳು ಗಾಲಿಬ್ ಇವರಿಗೆ ಕೈ ಹಿಡಿಯಲಿ ಎಂದು ನನಗೆ ತಿಳಿದಂತ ನಾಲ್ಕು ಸಾಲಿಗೆ ವಿರಾಮ ಕೊಡುವೆ. ನಲ್ಮೆಯ ಶುಭಾಶಯಗಳು.🌹🌹
ಪುಸ್ತಕಗಳಿಗಾಗಿ ಸಂಪರ್ಕಿಸಿ, ಮಲ್ಲಿನಾಥ ಸರ್ ಅವರ ನಂಬರ್ 9986353288
ಕಸ್ತೂರಿ ಡಿ ಪತ್ತಾರ