ಜಿ. ಹರೀಶ್ ಬೇದ್ರೆ-ಋಣ ಕಥೆ

ಕಥಾ ಸಂಗಾತಿ

ಋಣ

ಜಿ. ಹರೀಶ್ ಬೇದ್ರೆ

  ಋಣ

ನಿನ್ನ ಸಹಾಯ ಸಾಯೋ ತನಕ ನಾವು ಮರೆಯಲ್ಲ, ಈ ಋಣ ಹೇಗೆ ತೀರಿಸಬೇಕು ತಿಳಿಯುತ್ತಿಲ್ಲ…..

ಅಷ್ಟು ದೊಡ್ಡ ಮಾತು ಅಣ್ಣ ತಂಗಿಯ ಮಧ್ಯೆ ಯಾಕೆ? ಈಗ ನಾನು ಮಾಡಿದ ಘನಂದಾರಿ ಕೆಲಸವಾದರೂ ಏನು? ಈ ಸಂದರ್ಭದಲ್ಲಿ ನಾನು ಇಷ್ಟು ಮಾಡಿಲ್ಲ ಅಂದ್ರೆ ಇದ್ದು ಏನು ಉಪಯೋಗ ಹೇಳು.

ಆದರೂ, ಇಷ್ಟು ದೊಡ್ಡ ಸಹಾಯ ಈ ಕಾಲದಲ್ಲಿ ಯಾರು ಮಾಡ್ತಾರೆ ಹೇಳು?

ಇವತ್ತು ನಾನು ಬದುಕಿದ್ದೀನಿ ಅಂದ್ರೆ, ಅದು ನೀನೂ ಭಾವ ಅವತ್ತು  ಜೊತೆಗಿದ್ದು ಸಹಾಯ ಮಾಡಿದ್ದಕ್ಕೆ ಅಲ್ವಾ, ಇಲ್ಲ ಅಂದಿದ್ರೆ ಈಗ ಏನೂ ಮಾಡಲು ಸಾಧ್ಯ ಇದೆ ಹೇಳು.

ನಮ್ಮ ಜಾಗದಲ್ಲಿ ಯಾರೇ ಇದ್ದಿದ್ರು ಅದನ್ನು ಮಾಡ್ತಾ ಇದ್ರು……

ಹದಿನೈದು ವರ್ಷಗಳ ಹಿಂದಿನ ಮಾತು, ನಾನು ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯ  ಸಿಬ್ಬಂದಿಗಳ ಸಂಘಟನೆಯ ಕಾರ್ಯದರ್ಶಿಯಾಗಿ, ವಿಭಾಗ ಮಟ್ಟದ ದೊಡ್ಡ ಕಾರ್ಯಕ್ರಮ ಆಯೋಜಿಸಬೇಕಿತ್ತು. ಇದಕ್ಕಾಗಿ ಸಾಕಷ್ಟು ತಿರುಗಾಟ ಮಾಡಬೇಕಿತ್ತು. ಹೀಗೆ ಹೊರಹೋದಾಗ ಎಲ್ಲೆಂದರಲ್ಲಿ ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು. ಎಲ್ಲಿ ತಿಂದಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರಿತೋ ಗೊತ್ತಿಲ್ಲ. ಅಂದುಕೊಂಡ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿ ಮುಗಿಸಿದ ಎರಡೇ ದಿನಕ್ಕೆ ಜ್ವರ ಕಾಣಿಸಿಕೊಂಡಂತಾಗಿ ಪರಿಚಯದ ಡಾಕ್ಟರ್ ಬಳಿ ಹೋದಾಗ, ಅವರು ಸಾಮಾನ್ಯ ಜ್ವರ ಎಂದು ಎರಡು ದಿನಕ್ಕೆ ಮಾತ್ರೆ ಕೊಟ್ಟರು.ಅದರಿಂದ ಕಡಿಮೆ ಆಗಲಿಲ್ಲ ಎಂದಾಗ, ರಕ್ತ ಪರೀಕ್ಷೆ ಮಾಡಿಸಿ, ಜಾಂಡೀಸ್ ಆಗಿದೆ ಎಂದು ಅದಕ್ಕೆ ಬೇಕಾದ ಔಷಧಿ ಕೊಟ್ಟರು. ಒಂದು ವಾರ ಕಳೆದರೂ ಏನು ಉಪಯೋಗವಾಗಲಿಲ್ಲ. ಆಗ ಆತ್ಮೀಯರ ಸಲಹೆ ಮೇರೆಗೆ ಮತ್ತೊಬ್ಬ ಪರಿಚಯದ ಡಾಕ್ಟರ್ ಬಳಿ ಹೋದಾಗ, ಅವರು ಹಲವು ಪರೀಕ್ಷೆ ಮಾಡಿಸಿ, ನಿಮಗೆ ಜಾಂಡೀಸ್ ಅಲ್ಲ

ಟೈಫಾಯಿಡ್ ಎಂದು ಅದಕ್ಕೆ ಬೇಕಾದ ಚಿಕಿತ್ಸೆ ಕೊಟ್ಟರು. ಇವರೂ ಕೊಟ್ಟ ಔಷಧಿಯಿಂದ ಏನೂ ಉಪಯೋಗವಾಗಿಲ್ಲ. ನನ್ನ ದೇಹವೆಲ್ಲ ಊದಿಕೊಂಡು, ನನಗೆ ಏನಾಗುತ್ತಿದೆ ಎಂಬ ಅರಿವೇ ಇಲ್ಲದಂತಾಗಿತ್ತು. ಇದರಿಂದ ಗಾಬರಿಯಾದ ನನ್ನ ಹೆಂಡತಿ, ಐದು ವರ್ಷದ ಮಗನನ್ನು ಕರೆದುಕೊಂಡು ಸೀದಾ ಶಿವಮೊಗ್ಗದಲ್ಲಿ ಇದ್ದ ತಂಗಿಯ ಬಳಿ ಬಂದಿದ್ದಾಳೆ. ನಾನು ಹೇಗೆ ಊರಿಂದ ಊರಿಗೆ ಪ್ರಯಾಣ ಮಾಡಿ ಬಂದೆನೋ ಆ ದೇವರಿಗೇ ಗೊತ್ತು. ನನ್ನ ಪರಿಸ್ಥಿತಿ ಕಂಡ ತಂಗಿ ಮತ್ತು ಭಾವ ಸ್ವಲ್ಪವೂ ತಡಮಾಡದೆ ತಮ್ಮ ಪರಿಚಯದ ಡಾಕ್ಟರ್ ಬಳಿ ಕರೆದೊಯ್ದಿದ್ದಾರೆ. ಅವರು ಹಿರಿಯೂರಿನ ಇಬ್ಬರೂ ಡಾಕ್ಟರ್ ಗಳು ನೀಡಿದ ಚಿಕಿತ್ಸೆಯ ವಿವರಗಳನ್ನು ನೋಡಿ ನಂತರ ತಾವು ಇತರ ಪರೀಕ್ಷೆಗಳನ್ನು ಮಾಡಿ, ಇವರಿಗೆ ಪ್ಲೇಟ್ ಲೆಟ್ ಬಹಳ ಕಡಿಮೆ ಆಗುತ್ತಿದೆ. ಇನ್ನು ತಡಮಾಡಿದರೆ ಜೀವಕ್ಕೆ ಅಪಾಯ. ನನ್ನ ಪ್ರಕಾರ ಇವರಿಗೆ ಇಲಿ ಜ್ವರ ಬಂದಿದೆ, ಇದಕ್ಕೆ ಬೆಂಗಳೂರಿನಲ್ಲಿ ಮಾತ್ರ ಚಿಕಿತ್ಸೆ ಸಿಗುತ್ತದೆ.  ಡಾಕ್ಟರ್ ನರೇಶ್ ಭಟ್ ಅಂತ ಅವರು ಬೆಂಗಳೂರು ಸಿಟಿ ಹಾಸ್ಪಿಟಲ್ನಲ್ಲಿ ಇರ್ತಾರೆ, ನನ್ನ ಪರಿಚಯದವರೆ. ಅವರಿಗೆ ನಾನು ಲೆಟರ್ ಕೊಡ್ತೀನಿ ಮತ್ತೆ ಪೋನ್ ಕೂಡ ಮಾಡ್ತಿನಿ. ನೀವು ತಡಮಾಡದೆ ಈ ಕ್ಷಣವೇ ಹೊರಡಿ ಎಂದರಂತೆ. ಬರುವ ಅವಸರದಲ್ಲಿ ನನ್ನ ಹೆಂಡತಿ ಹೆಚ್ಚು ಹಣ ತಂದಿರಲಿಲ್ಲವಂತೆ, ಅವಳಿಗೆ ಕೇಳದೇನೆ, ತಂಗಿ ಮತ್ತು ಭಾವ ಹಣದ ಏರ್ಪಾಡು ಮಾಡಿಕೊಂಡು ಅಂಬುಲೆನ್ಸಿನಲ್ಲಿ ಬೆಂಗಳೂರಿಗರಿಗೆ ಕರೆ ತಂದಿದ್ದಾರೆ. ನಮ್ಮ ಬರುವಿಕೆಯನ್ನು ಮೊದಲೇ ಶಿವಮೊಗ್ಗದ ಡಾಕ್ಟರ್ ತಿಳಿಸಿದ್ದರಿಂದ, ಡಾಕ್ಟರ್ ನರೇಶ್ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು. ನೋಡಿ ಪ್ಲೇಟ್ಲೆಟ್ ಕೇವಲ ಹನ್ನೆರಡು ಸಾವಿರ ಇದೆ. ಇದೂ ನಿಜಕ್ಕೂ ಆತಂಕದ ವಿಷಯ. ನೀವು ಹೂಂ ಎಂದರೆ ಚಿಕಿತ್ಸೆ ಶುರುಮಾಡುವೆ. ಆದರೆ ನಲವ್ವತ್ತೆಂಟು ಗಂಟೆ ಜೀವದ ಬಗ್ಗೆ ಖಾತ್ರಿ ಕೊಡುವುದಿಲ್ಲ ಎಂದರಂತೆ. ಇವರು ದೇವರ ಮೇಲೆ ಭಾರ ಹಾಕಿ  ಆಗಲಿ,  ಚಿಕಿತ್ಸೆ ಆರಂಭಿಸಿ ಎಂದರಂತೆ. ಹತ್ತು ದಿನ ಐಸಿಯುನಲ್ಲಿ, ಹತ್ತು ದಿನ ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆದು ಮರುಜನ್ಮದೊಂದಿಗೆ ಮನೆಗೆ ಬರುವಂತಾಯಿತು. ಆಸ್ಪತ್ರೆಯಲ್ಲಿ ಇರುವಷ್ಟು ದಿನವೂ ತಂಗಿ ಭಾವ ಇಬ್ಬರೂ ತಮ್ಮ ಮನೆಯ ಬಗ್ಗೆ ಸ್ವಲ್ಪವೂ ಯೋಚಿಸದೆ  ನನ್ನ ಮಡದಿಯ ಜೊತೆಗಿದ್ದು, ಅವಳಿಗೆ ಧೈರ್ಯ ತುಂಬುತ್ತಾ ನನ್ನ ಚಿಕೆತ್ಸೆಗೆ ಬೇಕಾದ್ದನ್ನೆಲ್ಲ ನೋಡಿಕೊಂಡಿದ್ದಾರೆ.  ಅಲ್ಲದೇ ಡಿಸ್ಚಾರ್ಜ್ ಆದಮೇಲೂ ನನ್ನನ್ನು ನಮ್ಮ ಮನೆಗೆ ಕಳಿಸದೆ ಸೀದಾ ತಮ್ಮ ಮನೆಗೆ ಕರೆದೊಯ್ದು ಒಂದು ತಿಂಗಳಿಗೂ ಹೆಚ್ಚಿನ ಕಾಲ ಚೆನ್ನಾಗಿ ಆರೈಕೆ ಮಾಡಿ ನಾನು ಚೇತರಿಸಿಕೊಂಡಿದ್ದೇನೆ ಎಂಬ ನಂಬಿಕೆ ಬಂದ ಮೇಲೆ ತಾವೇ ಮನೆಗೆ ಕರೆತಂದು ಬಿಟ್ಟು ಹೋಗಿದ್ದರು. ನಿಜ ಹೇಳಬೇಕೆಂದರೆ, ತುಂಬಾ ಸಿರಿಯಸ್ಸಾಗಿ ಮಲಗಿ ಚಿಕಿತ್ಸೆ ಪಡೆದ ಕಾರಣವಾಗಿ ನನ್ನ ದೇಹದಲ್ಲಿ ಶಕ್ತಿಯೇ ಇರದೆ,  ತಂಗಿ ಭಾವ ಇಬ್ಬರೂ ನನ್ನನ್ನು ಅತ್ಯಂತ ಕಾಳಜಿಯಿಂದ ಚಿಕ್ಕ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಂಡಿದ್ದರಂತೆ. ನನಗಂತೂ ಹಿರಿಯೂರಿನ ಎರಡನೇ ಪರಿಚಯದ ಡಾಕ್ಟರ್ ಬಳಿ ಹೋದಾಗಿನಿಂದ ಮತ್ತೆ ಮನೆಗೆ ಹಿಂದಿರುಗಿ ಬಂದ ಒಂದಷ್ಟು ದಿನಗಳವರೆಗೆ ನಡೆದ ಯಾವ ವಿಷಯಗಳು ಈಗಲೂ ನೆನಪಿಲ್ಲ. ನನ್ನ ಹೆಂಡತಿಯೋ, ತಂಗಿ ಭಾವನೋ ಅಥವಾ ಮತ್ತ್ಯಾರಾದರೂ ಆಗ ನೋಡಿದವರು ಆಗಿನದನ್ನು ಹಾಗಿದ್ದೆ, ಹೀಗಿದ್ದೆ, ಹಾಗಾಯಿತು ಎಂದು ಹೇಳಿದರೆ ಹೌದೇ ಎನ್ನುತ್ತೇನೆ ಹೊರತು ಖಂಡಿತವಾಗಿಯೂ ಏನೊಂದೂ ನೆನಪಾಗುವುದಿಲ್ಲ.  ಮೂರು ತಿಂಗಳ ನಂತರ ಚೆಕಪ್ ಎಂದು ಮತ್ತೆ ಡಾಕ್ಟರ್ ನರೇಶ್ ಭಟ್ ಬಳಿ ಹೋದಾಗ, ಅವರು ಮತ್ತೊಮ್ಮೆ ಎಲ್ಲಾ ಪರೀಕ್ಷೆ ಮಾಡಿ, ಈಗ ನಿಮಗೇನು ತೊಂದರೆಯಿಲ್ಲ, ಅರಾಮವಾಗಿ ಇರಬಹುದು. ಒಟ್ಟಿನಲ್ಲಿ ನಿಮ್ಮ ಮಡದಿ, ತಂಗಿ ಭಾವನವರ ಶ್ರಮ, ತಂದೆ ತಾಯಿಯರ ಆಶೀರ್ವಾದ ನಿಮ್ಮನ್ನು ಕಾಪಾಡಿದೆ. ಇರುವಷ್ಟು ದಿನ ನಾಲ್ಕು ಜನರಿಗೆ ಬೇಕಾದವರಾಗಿ ಬದುಕಿ ಎಂದು ಶುಭ ಹಾರೈಸಿ ಕಳಿಸಿದ್ದರು.

ಅಂದಿನಿಂದ ನಾನು ಒಬ್ಬರಿಗೆ ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು ಮಾಡದೆ ಬದುಕುತ್ತಿದ್ದೇನೆ. ನನ್ನ ಬಳಿ ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದೇನೆ ಹಾಗಿರುವಾಗ ನನ್ನ ಮರುಹುಟ್ಟಿಗೆ ಕಾರಣರಾದ ತಂಗಿ, ಭಾವ ಕಷ್ಟದಲ್ಲಿ ಇರುವಾಗ ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವೇ? 

ನನ್ನ ಭಾವನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಿಕೊಳ್ಳಲು ಮುಂದಾದಾಗ, ಅವರ ಅಕ್ಕ ಒಬ್ಬರೂ ತಮಗೂ ಅದರಲ್ಲಿ ಭಾಗ ಬೇಕೇ ಬೇಕೆಂದು ಕ್ಯಾತೆ ತೆಗೆದಾಗ, ಇರುವ ಗೇಣುದ್ದ ಜಾಗದಲ್ಲಿ ಅವರಿಗೂ ಪಾಲು ಕೊಟ್ಟರೆ, ಇವರಿಗೆ ಲಂಗೋಟಿಯಷ್ಟು ಜಾಗ ಉಳಿಯುತ್ತಿತ್ತು. ಅದಕ್ಕೆ ಜಾಗದ ಬದಲಿಗೆ ಹಣ ಕೊಡುತ್ತೇವೆ ಎಂದರೆ, ಆ ಪುಣ್ಯತಗಿತ್ತಿ ಬಾಯಿಗೆ ಬಂದಂತೆ ಕೇಳಬೇಕೆ. ಯಾರೂ ಎಷ್ಟೇ ಹೇಳಿದರೂ ಕೇಳದಿದ್ದಾಗ, ನನ್ನ ಬಳಿಯಿದ್ದ ಉಳಿಕೆಯ ಹಣವನ್ನು ಕೊಟ್ಟು, ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ಆದಷ್ಟು ಬೇಗ ಮನೆ ಕಟ್ಟಲು ಶುರು ಮಾಡಿ ಎಂದೆ. ಅದಕ್ಕೆ ನನ್ನ ತಂಗಿ ಮತ್ತು ಭಾವ ಇಬ್ಬರೂ, ನಿನ್ನ ಋಣವನ್ನು ಹೇಗೆ ತೀರಿಸುವುದು ಎಂದು ಕೇಳಿದರು. ಒಡಹುಟ್ಟಿದವರಲ್ಲಿ ಋಣದ ಪ್ರಶ್ನೆಯೇ ಬರುವುದಿಲ್ಲ ಎಂದು ನನ್ನ ನಂಬಿಕೆ. ನೀವು ಏನು ಹೇಳುತ್ತೀರಿ…….


ಜಿ. ಹರೀಶ್ ಬೇದ್ರೆ

Leave a Reply

Back To Top