ಅಂಕಣ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ಭಾವತೀರಯಾನ
ಭಾವತೀರಯಾನ :
ಅಂಕಣ ಬರಹಗಳ ಸಂಗ್ರಹ ಲೇಖಕ :
ಎ ಆರ್ ಮಣಿಕಾಂತ
ಪ್ರಕಾಶಕರು : ನೀಲಿಮಾ ಪ್ರಕಾಶನ
ಮೊದಲ ಮುದ್ರಣ : ೦೧.೦೫.೨೦೧೪
ಎ ಆರ್ ಮಣಿಕಾಂತ್ ಅವರು ಕನ್ನಡದ ಪ್ರಮುಖ ಪತ್ರಕರ್ತರು ಮತ್ತು ಬರಹಗಾರರು. ಪ್ರಸಿದ್ಧ ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮತ್ತು ಕನ್ನಡ ಪ್ರಭ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹಾಗೂ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೂಲತಃ ನಾಗಮಂಗಲ ತಾಲ್ಲೂಕಿನ ಆಯತನ ಹಳ್ಳಿಯವರಾದ ಇವರು ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರು. ವಿಜಯ ಕರ್ನಾಟಕದಲ್ಲಿ ಇವರು ಬರೆದ ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ ಮತ್ತು ಹಾಡು ಹುಟ್ಟುವ ಸಮಯ ಅಂಕಣಗಳು ತುಂಬಾ ಜನಪ್ರಿಯವಾಗಿವೆ. ತಮ್ಮ ಸ್ವಂತದ ನೀಲಿಮಾ ಪ್ರಕಾಶನ ದಿಂದಲೇ ಇವರ 6 ಕೃತಿಗಳು ಪ್ರಕಟವಾಗಿದ್ದು ಭಾವತೀರಯಾನ ಇವರ ಐದನೆಯ ಪುಸ್ತಕ . ಇವರ ಪುಸ್ತಕಗಳು ಅಪಾರ ಜನಮನ್ನಣೆ ಗಳಿಸಿ ದಾಖಲೆ ಮುದ್ರಣಗಳನ್ನು ಕಂಡಿರುವುದು ಗಮನಾರ್ಹ. ಅಮ್ಮ ಹೇಳಿದ 8 ಸುಳ್ಳುಗಳು(೧೬೦ ಮುದ್ರಣ, ೧.೬ ಲಕ್ಷ ಪ್ರತಿಗಳು) ಅಪ್ಪ ಅಂದ್ರೆ ಆಕಾಶ (೯೦೦೦೦ ಪ್ರತಿಗಳು) ಭಾವತೀರಯಾನ (೨೫೦೦೦ ಪ್ರತಿಗಳು). ಮಣಿಕಾಂತರ ಪುಸ್ತಕದ ಅಧ್ಯಾಯಗಳನ್ನು ಏಳನೇ ತರಗತಿಯ ಪಠ್ಯಕ್ಕೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ವಿಭಾಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಮ್ಮ ಹೇಳಿದ 8 ಸುಳ್ಳುಗಳು ಕೃತಿಗೆ ೨೦೦೯ನೇ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ , ೨೦೧೦ನೇ ಸಾಲಿನ ಅಮ್ಮ ಪ್ರಶಸ್ತಿ ೨೦೧೨ನೇ ಸಾಲಿನ ಅವ್ವ ಪ್ರಶಸ್ತಿ ದೊರಕಿದೆ.
ಜೀವನದಲ್ಲಿ ಎಲ್ಲ ಇದ್ದೂ ನಿರ್ದಿಷ್ಟ ಗಮ್ಯ ಗುರಿಯಿರದ, ಇಲ್ಲಈದರ ಬಗೆಗೆ ಚಿಂತಿಸುತ್ತಾ ಕಾಲ ಕಳೆಯುತ್ತೇವೆ. ಆದರೆ ಏನೂ ಇರದೆ, ಬೆಂಬಲದ ಕೊರತೆಯಿಂದ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಇಂದು ಯಶಸ್ವಿ ವ್ಯಕ್ತಿಗಳ ಪಟ್ಟಿಯಲ್ಲಿ ನಿಂತವರೂ ಇದ್ದಾರೆ . ಹಾಗಾದರೆ ಅಂತಹವರ ವಿಶೇಷತೆ ಏನು ಯಾವುದಕ್ಕೂ ಒಂದು ಸಿದ್ಧ ಪರಿಸ್ಥಿತಿಯ ನಿಯಮಗಳ ಸೂತ್ರ ಇರುವುದಿಲ್ಲ. ಆದರೆ ಛಲಬಿಡದೆ ಸಾಧಿಸುವ ಮನೋಭಾವ, ಸೋಲಿಗೆ ಹಿಮ್ಮೆಟ್ಟದ ಹುಮ್ಮಸ್ಸು ಅವರನ್ನು ಈ ಎತ್ತರಕ್ಕೆ ಏರಿಸಿರುತ್ತದೆ. ಅಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಪರಿಚಯಿಸಿದ್ದಾರೆ . ಬೇಸತ್ತ, ಹಿಂಜರಿಯುವ ಪರಿಸ್ಥಿತಿಯಲ್ಲಿದ್ದಾಗ ನಮಗೇ ಏಕೆ ಹೀಗೆ ಕಷ್ಟಗಳ ಸರಮಾಲೆ ಎಂದು ವಿಧಿಯನ್ನು ಹಳಿಯುತ್ತಾ ಕೂರದೆ ಇಂತಹವರ ಜೀವನವನ್ನು ಅವರ ಸಾಧನೆಯ ಪಯಣವನ್ನು ಓದಿದರೆ ಒಂದು ತರಹದ ಸ್ಪೂರ್ತಿ, ಮುನ್ನಡೆಯಲು ಉತ್ಸಾಹ, ಮನಸ್ಸಿಗೆ ಬಲ ಬರುವುದಂತೂ ಖಂಡಿತ.
ಇಂಗ್ಲಿಷಿನಲ್ಲಿ “ಚಿಕನ್ ಸೂಪ್ ಫಾರ್ ದಿ ಸೌಲ್” ಎಂಬ ಮಾಲಿಕೆಯಡಿ ನೂರಕ್ಕೂ ಹೆಚ್ಚು ಸರಣಿ ಪುಸ್ತಕಗಳು ಬಂದಿವೆ .ಅನೇಕ ರೀತಿಯ ಕಾಯಿಲೆ, ಖಿನ್ನತೆ, ವಿಭಿನ್ನ ಸಂದರ್ಭಗಳ ನಿಭಾವಣೆ ಇವುಗಳಿಗೆಲ್ಲ ವ್ಯಕ್ತಿಗಳ ಜೀವಂತ ಉದಾಹರಣೆಗಳ ಮೂಲಕ ಸ್ಪೂರ್ತಿ ಧೈರ್ಯ ತುಂಬುವ ಲೇಖನಗಳು ಇಲ್ಲಿವೆ . ಕೆಲವನ್ನು ಮಾತ್ರ ಓದಿದ್ದೇನೆ. ಅಂತಹುದೇ ಸಾಲಿಗೆ ಸೇರುವ ಕನ್ನಡ ಪುಸ್ತಕ ಇದು. ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಧಾರ ಎನ್ನುವಂತೆ ಕತ್ತಲೆ ತುಂಬಿದ ಮನಕೆ ಮೂಲೆಯಲ್ಲೆಲ್ಲೋ ಬೆಳಕಿನ ಸಣ್ಣ ಮಿಂಚು ಹರಿದು, ಹೋಗುವ ದಿಕ್ಕು ಹೊಳೆಯಬಹುದು.
ಒಟ್ಟು ಮೂವತ್ತು ಸ್ಫೂರ್ತಿ ಸಂದೇಶದ ಲೇಖನಗಳಿರುವ ಈ ಪುಸ್ತಕದಲ್ಲಿ ಹತ್ತೊಂಬತ್ತು ಜನ ನಿಜಜೀವನದ ಹೀರೋಗಳ ಸಾಧನೆಯ ಪರಿಚಯವಿದೆ . ಸಂಪರ್ಕಿಸಲು ಬಯಸುವುದಾದರೆ ಅವರ ದೂರವಾಣಿ ಅಥವಾ ಇ ಮೇಲ್ ಗಳು ಸಹ ಇವೆ . ಲೇಖಕರ “ಭಾವವೆಂಬ ಹೂವು ಅರಳಿ” ತಮ್ಮ ಅರಿಕೆಯಲ್ಲಿ ವಿಶದ ಪಡಿಸಿದಂತೆ “ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೋ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ ಮನಸ್ಸೆಂಬುದು ಕನಸೆಂಬ ಕುದುರೆಯನೇರಿಬಿಡುತ್ತದೆ . ಗೆಲುವಿನ ಕಥೆಗಳನ್ನು ಹೆಜ್ಜೆಹೆಜ್ಜೆಗೂ ಕೇಳಬಯಸುತ್ತದೆ.” ತಮ್ಮ ಈ ರಿಯಲ್ ಲೈಫ್ ಹೀರೋಗಳನ್ನು ಸಂದರ್ಶಿಸಿ ಅವರಿಂದಲೇ ವಿಷಯ ಸಂಗ್ರಹಿಸಿದ ಮಾಹಿತಿಯೂ ಅಚ್ಚರಿ ಮೂಡಿಸುತ್ತದೆ.
ಬುದ್ಧಿಮಾಂದ್ಯ ಮಕ್ಕಳ ಸೇವೆ ಮಾಡಲು ಸ್ವಂತ ಮಕ್ಕಳೇ ಬೇಡ ಎಂದು ನಿರ್ಧರಿಸಿದ “ಭಾನುಮತಿ” , ತನ್ನರ್ಧ ಸಂಪಾದನೆಯನ್ನೇ ಬಡವರ ಸೇವೆಗೆ ಮೀಸಲಿಟ್ಟಿರುವ “ರತೀಶ್”, ತಮ್ಮ ಸಂಬಳವನ್ನೆಲ್ಲ ನಿರ್ಗತಿಕರಿಗೆ ವಿನಿಯೋಗಿಸುವ “ಕಲ್ಯಾಣ ಸುಂದರಂ” ಮನೆಮನೆಯಲ್ಲಿ ಔಷಧಿ ಗುಳಿಗೆಗಳನ್ನು ಭಿಕ್ಷೆ ಎತ್ತಿ ಬಡವರಿಗೆ ಹಂಚುವ “ಮೆಡಿಸನ್ ಬಾಬಾ” ಇವರೆಲ್ಲ ಸ್ವಾರ್ಥರಹಿತರಾಗಿ ಸಮಾಜಕ್ಕೆ ತಮ್ಮ ಕಾಣಿಕೆ ನೀಡುತ್ತಿರುವ ವನಸುಮಗಳು. ಪ್ರಚಾರ ಆಡಂಬರದ ಗೊಡವೆಯಿಲ್ಲದ “ಕರ್ಮಣ್ಯೇವಾಧಿಕಾರಸ್ತೇ” ಯ ಅನುಯಾಯಿಗಳು.
ಮುನ್ನುಡಿ ಕಾರರು ಹೇಳುತ್ತಾರೆ
ಈ ಲೋಕದಲ್ಲಿ
ಅಸಂಭವ ಎನ್ನುವುದು
ಕೇವಲ ಮಾತಿನಲ್ಲಿ
ಮಾತ್ರ ಬರುವಂಥದ್ದು
ಕೃತಿಯಲ್ಲಲ್ಲ
ಇದಕ್ಕೆ ಅನುಸಾರವಾಗಿ ಹುಟ್ಟಿನಿಂದಲೂ ಅಥವಾ ಜೀವನದ ಮಧ್ದಿಂದ ಬಂದ ಅಂಗವೈಕಲ್ಯದಿಂದಲೋ ಹಿಮ್ಮೆಟ್ಟದೆ ಆತ್ಮವಿಶ್ವಾಸದಿಂದ ಬದುಕಿನಲ್ಲಿ ವಿಶೇಷವಾದುದನ್ನು ಸಾಧಿಸಿ ಸಾಧನೆಗೆ ಏನು ಅಡ್ಡಿಯಾಗದು ಎಂದು ನಿರೂಪಿಸುವ ಐ ಕಾನ್
ಪಾಂಡುರಂಗ, ವೀಲ್ ಚೇರ್ ನಲ್ಲೇ ಪ್ಯಾರಾ ಒಲಿಂಪಿಕ್ಸ್ ಪದಕ ಗೆದ್ದ ದೀಪಾ ಮಲ್ಲಿಕ್ ನಿಜಜೀವನದ ಹೀರೋಗಳೇ ಎಂದೆನಿಸುವ ಹೆಮ್ಮೆಯ ಭಾವ ಮೂಡಿಸುತ್ತಾರೆ.
ಬಾರ್ ಡಾನ್ಸರ್, ಕಾಲ್ ಗರ್ಲ್ ಈ ಹಂತಗಳೆಲ್ಲ ದಾಟಿ ಬಂದು ಈಗ ಸಿನೆಮಾ ಸಂಭಾಷಣೆಕಾರರು ಆಗಿರುವ ಶಗುಪ್ತಾ ಮಲ್ಲಿಕ್ ಅಚ್ಚರಿ ತರಿಸಿದರೆ ಕಾಮಾಟಿಪುರದಿಂದ ನ್ಯೂಯಾರ್ಕ್ ತನಕದ ಹಾದಿ ಸವೆಸಿದ ಶ್ವೇತಾ ಕಟ್ಟಿ ವಿಶ್ವಾಸ ಮೂಡಿಸುತ್ತಾರೆ .
ಹಿಂದಿ ಚಲನಚಿತ್ರ ನಟಿ ವಿಮ್ಮಿಯ ಕರುಣಾಜನಕ ಕಥೆ ಕಣ್ಣೀರು ತರಿಸುತ್ತದೆ. ವೃದ್ಧಾಶ್ರಮಕ್ಕೆ ತಳ್ಳಲ್ಪಟ್ಟ ವೃದ್ಧರೊಬ್ಬರ ಪ್ರಸಂಗ ಮನ ಕಲಕುತ್ತದೆ.
ಪುಸ್ತಕದ ಮುಖ್ಯ ಪಾತ್ರಧಾರಿಗಳೆಂದರೆ ಏನೂ ಇಲ್ಲದ ಸ್ಕ್ರ್ಯಾಚ್ ನಿಂದ ಬದುಕು ಕಟ್ಟಿಕೊಂಡು ಇಂದೀಗ ಯಶಸ್ಸಿನ ಸುಖವನ್ನು ಅನುಭವಿಸು ತ್ತಿರುವ ಈ ಪರಿಶ್ರಮ ಜೀವಿಗಳು . ಆಫೀಸ್ ಬಾಯ್ ನಿಂದ ಕಂಪೆನಿಯ ಸಿಇಒ ಆದ ಉದಯಕುಮಾರ್, ಬರಿಗಾಲಲ್ಲಿ ಬಾಂಬೆಗೆ ಬಂದು ಈಗ ಸಾಲ್ಸಾ ಶೂ ಗಳ ತಯಾರಕನಾಗಿರುವ ಜಮೀಲ್ ಶಾ, ಡ್ರೀಮ್ ವೀವರ್ ಕಂಪೆನಿಯ ಹುಟ್ಟು ಬೆಳವಣಿಗೆ, ದಿನಗೂಲಿ ಮಾಡುತ್ತಿದ್ದು ಈಗ ಅಮೇರಿಕೆಯ ಸಾಫ್ಟ್ ವೇರ್ ಕಂಪೆನಿಯ ಸಿಇಒ ಆಗಿರುವ ಅನಿಲ ಜ್ಯೋತಿರೆಡ್ಡಿ ಇನ್ನೂ ಹತ್ತು ಹಲವು ಇಂತಹವರ ಕಥೆಗಳನ್ನು ಓದಿ ಅವರ ಯಶಸ್ಸಿನ ಗುಟ್ಟನ್ನು ನೀವು ಅರಿಯಬೇಕೆಂದರೆ ಖಂಡಿತ ನೀವು “ಭಾವತೀರಯಾನ” ಕ್ಕೆ ಹೊರಡಲೇ ಬೇಕು.
ಪ್ರೀತಿಗಾಗಿ ಏನೆಲ್ಲ ಮಾಡಿದವರ ಉದಾಹರಣೆ ಕೇಳಿದ್ದೇವೆ ನೋಡಿದ್ದೇವೆ ಆದರೆ “ಸನ್ನಿ ಲವ್ಸ್ ಆರತಿ” ಎಂಬ ಈ ಪ್ರಸಂಗದ ಪ್ರಸ್ತಾಪ ಮಾಡಿದ್ದಾರೆ ನೋಡಿ! ನಿಜಕ್ಕೂ ಮನ ಮಿಡಿಯುತ್ತದೆ! ಇದಲ್ಲದೆ ಅಮರಪ್ರೇಮ ಎಂದೆನಿಸಿ ಬಿಟ್ಟಿತು . ವಿವರ ಬೇಕೆ? ಖಂಡಿತ ಪುಸ್ತಕವನ್ನೇ ಓದಬೇಕು .
ತಾಯಿ ತಂದೆಯರ ಬಗೆಗಿನ ಪ್ರೀತಿ ಕೈ ಕೊಡುವವರ ನಡುವೆ ಕೈಹಿಡಿಯುವ ಹೃದಯವಂತರು ವೈದ್ಯರು ದೇವರ ರೂಪದಲ್ಲಿ ಬಂದು ಮಾತನಾಡಿದ ಒಳ್ಳೆಯತನ ಇದ್ದರೆ ಆಕಾಶಕ್ಕೆ ಏಣಿ ಹಾಕಬಹುದು ಮುಂತಾದುವು ಪ್ರಚಲಿತ ಕೆಲ ಸ್ಪೂರ್ತಿಧಾಯಕ ಕಥೆಗಳ ರೂಪಾಂತರ. ಆದರೆ ಅಂತಸ್ಸತ್ವದ ಕೊಡುಗೆಯಲ್ಲಿ ಹಿಂದೆಬಿದ್ದಿಲ್ಲ ಕೆಲವು ವಿಷಯಗಳು ಹಾಗೆ ಮನಸ್ಸಿನಲ್ಲಿ ಇದ್ದರೂ ಅದಕ್ಕೊಂದು ಆಕಾರ ಮೂರ್ತರೂಪ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವ ಆ ಕ್ಷಣಗಳಿಗೆ ಇಂತಹ ಮಾದರಿಗಳು ಒಂದೇ ರೀತಿಯ ರಸದೂತ (catalyst) ದಂತೆ ವರ್ತಿಸುತ್ತವೆ ಹಿಡಿದಿಟ್ಟ ಭಾವನೆಗಳ ಒಡ್ಡು ಕಳಚಿದಂತೆ ಪಂಜರದಿ ಬಂಧಿಸಿದ ಪಕ್ಷಿಯನ್ನು ಹಾರ ಬಿಟ್ಟಂತೆ ಬಿಡುಗಡೆಗೊಳ್ಳುತ್ತವೆ ಮಾಡಬೇಕೆಂದರೂ ಸುಮ್ಮನೆ ಮುಂದೂಡುತ್ತಿದ್ದ ಕಾರ್ಯಗಳಿಗೆ ಚಾಲನೆ ವೇಗ ಒದಗಿ ಬಂದು ಬಿಡುತ್ತದೆ .
ಸೃಷ್ಟಿ ಚಿತ್ರದ ನಡುವೆ ನರನದೊಂದುಪಸೃಷ್ಟಿ
ಚೇಷ್ಟಿಪ್ಪುದವನ ಕೈ ಪ್ರಕೃತಿ ಕೃತಿಗಳಲಿ
ಸೊಟ್ಟಗಿರೆ ನೆಟ್ಟಗಿಸಿ ನೆಟ್ಟಗಿರೆ ಸೊಟ್ಟಿಪುದು ಪುಟ್ಟುಬೊಮ್ಮನೊ ನರನು _ಮರಳು ಮುನಿಯ
ಸಂದರ್ಭ ಸನ್ನಿವೇಶಗಳನ್ನು ಬರಿ ಹಣೆಬರಹ ನಿರ್ಧರಿಸುವುದಲ್ಲ ಅದನ್ನು ನಾವು ತಿದ್ದಿ ನಮಗೆ ಬೇಕಾದಂತೆ ಬದಲಿಸಬಹುದು ನಾವು ಬ್ರಾಹ್ಮಣರಾಗಬಹುದು ಎನ್ನುವ ಮರುಳಮುನಿಯನ ನುಡಿಗಳನ್ನು ದೃಢೀಕರಿಸಿ ಸಾಕ್ಷಿಭೂತವಾಗಿಸುತ್ತದೆ ಈ ಪುಸ್ತಕ.
ಇದು ಕಟ್ಟಿಕೊಡುವ ಸಂಚಲನ ಸಂವೇದನೆ ಇವುಗಳನ್ನು ಮುನ್ನುಡಿ ಬರೆದ ಶ್ರೀ ರಾಘವೇಂದ್ರ ಜೋಶಿ ಅವರ ನುಡಿಗಳಲ್ಲೇ ಕೇಳಬಹುದಾದರೆ
“ಇಡೀ ಪುಸ್ತಕದ ಭಾವವನ್ನು ಒಂದು ಸಾಲಿನಲ್ಲಿ ಕಟ್ಟಿಕೊಡುವ ನಿರರ್ಥಕ ಪ್ರಯತ್ನ ಮಾಡಬಹುದಾದರೆ ಗಿಜಿಗಿಜಿ ಗುಡುತ್ತಿರುವ ಬಸ್ಸಿನಲ್ಲಿ ಹೊಡೆದಾಡಿ ಸೀಟು ಗಿಟ್ಟಿಸಿಕೊಳ್ಳುವ ಪೋರನೊಬ್ಬ ಆಗತಾನೆ ತೇಕುತ್ತಾ ಬಂದ ತುಂಬು ಗರ್ಭಿಣಿಗೆ ತನ್ನ ಜಾಗ ಬಿಟ್ಟು ಕೊಡುವುದರಲ್ಲಿಯೇ ಮಣಿಕಾಂತರ ಬೆರಳುಗಳ ಸಾರ್ಥಕತೆ ಇದೆ “.
ಪುಸ್ತಕ ಓದಿ ಓದಿ ಮುಗಿಸಿದ ನಂತರ ಆ ಸಾರ್ಥಕ್ಯದ ಧನ್ಯತೆಯ ಅನುಭಾವ ಅನುಭೂತಿಗಳು ನಮ್ಮಲ್ಲೂ ಪಡಿನೆಳಲಾಗುವುದರಲ್ಲಿ ಪುಸ್ತಕದ ಸಫಲತೆ ಬರಹಗಾರರ ಸಾಮರ್ಥ್ಯ ಬಿಂಬಿಸುತ್ತದೆ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು