ಶಿಕ್ಷಕ ದಿನಾಚರಣೆ ವಿಶೇಷ

ಶಿಕ್ಷಕ, ನಾಡಿನ ರಕ್ಷಕ!

ರೂಪ ಮಂಜುನಾಥ

“A teacher affects eternity;he can never tell where his influence stops”,- ಹೆನ್ರಿ. ಬಿ. ಆಡಮ್ಸ್.

ಒಬ್ಬ ಶಿಕ್ಷಕನಿಂದ ತನ್ನ ಶಿಷ್ಯವೃಂದಕ್ಕೆ ಆಗುವ  ಪ್ರಭಾವದ ವ್ಯಾಪ್ತಿಯ  ಬಗ್ಗೆ  ಈ ಮಹನೀಯರು ಎಷ್ಟು ಅರ್ಥವತ್ತಾಗಿ ತಿಳಿಸಿದ್ದಾರಲ್ಲವೇ?

ಹೌದು. ಒಬ್ಬ ಒಳ್ಳೆಯ ವೈದ್ಯನಾದರೆ ನೂರಾರು ಜೀವಿಗಳನ್ನ ಉಳಿಸಬಲ್ಲ.

ಒಬ್ಬ ಒಳ್ಳೆಯ ಅಭಿಯಂತರನಾದರೆ ಹಲವಾರು ಗಟ್ಟಿಮುಟ್ಟಾದ ಕಟ್ಟಡಗಳನ್ನ ಕಟ್ಟಬಲ್ಲ.

ಒಬ್ಬ ಒಳ್ಳೆಯ ವಕೀಲನಾದರೆ ನೂರಾರು ವ್ಯಾಜ್ಯಗಳಿಗೆ ನ್ಯಾಯ ಒದಗಿಸಬಲ್ಲ.

ಅದೇ ಆತ ಒಬ್ಬ ಒಳ್ಳೆಯ ಶಿಕ್ಷಕನಾದರೆ ಸಹಸ್ರಾರು ಸತ್ಪ್ರಜೆಗಳನ್ನ ರಾಷ್ಟಕ್ಕೆ ಕೊಡುಗೆಯಾಗಿ ನೀಡಿ, ದೇಶದ ತಾಕತ್ತನ್ನ ಹೆಚ್ಚಿಸಬಲ್ಲ!

ಶಿಕ್ಷಕ ಧರ್ಮ,ಹೆತ್ತ ಮಾತೆಯ ಧರ್ಮಕ್ಕಿಂತಲೂ ಶ್ರೇಷ್ಠವಾದದ್ದೆಂದು ನನ್ನ ಭಾವನೆ. ಯಾಕೇಂತ ಕೇಳಿ, ನಮ್ ಹುಡುಗರು ಚಿಕ್ಕೋರಿದ್ದಾಗ ನಾವು ಹೇಳೋದು ಸರಿಯೇ ಇರಲೀ, ಜಪ್ಪಯ್ಯಾ ಅಂದ್ರೂ ಕೇಳ್ತಿರಲಿಲ್ಲ. ಅದೇ ಅವರ ಶಾಲೆಗಳಲ್ಲಿ ಮ್ಯಾಡಮ್ಗಳು ಹೇಳಿದ್ದನ್ನ ಅದು ಎಷ್ಟೋ ಸಾರಿ ತಪ್ಪಿದ್ದರೂ ಮ್ಯಾಡಮ್ ವಾಕ್ಯ ಪರಿಪಾಲಕರಾಗಿ ಅವರಿಗೆ ನಿಷ್ಠರಾದ ವಿಧೇಯ ವಿದ್ಯಾರ್ಥಿಗಳಾಗಿದ್ದರು.ನಾವುಗಳಿದ್ದಿದ್ದೂ ಹಾಗೇ ಬಿಡಿ!

ನಮ್ಮ ಊರಿನ ಶಾಲೆಗಳಲ್ಲಿ ಮಿಸ್ಗಳು ಮಾಡುವ ಇಂಗ್ಲೀಷ್ ಪಾಠದಲ್ಲಿ ಹಲವಾರು ವ್ಯಾಕರಣದ ತಪ್ಪುಗಳಿರುತ್ತಿದ್ದವು.ಚಿಕ್ಕ ಉದಾಹರಣೆ ಹೇಳುವುದಾದರೆ,”It is raining “ ಗೆ ಬದಲಾಗಿ,”rain is coming “ಎಂದು ಹೇಳಿ ಕೊಡುತ್ತಿದ್ದರು.

ಪಾಪ, ಅದೇನು ಅವರು ತಿಳಿದೂ ಮಾಡುತ್ತಿದ್ದುದ್ದೇನಲ್ಲಾ. ಅವರಿಗಿರುತ್ತಿದ್ದ ಭಾಷೆಯ ಅರಿವು ಸೀಮಿತವಾಗಿರುತ್ತಿತ್ತು. ಆದರೆ, ಮಕ್ಕಳಿಗೆ ಶಂಖದಿಂದ ಬಿದ್ದ ನೀರೇ ತಾನೇ ತೀರ್ಥ!ಏನು ಮಾಡುವುದೂ? ಈ ಉದಾಹರಣೆ ಯಾಕೆ ಹೇಳಬೇಕಾಯ್ತು ಎಂದರೆ, ಮೂರನೆಯ ವಯಸ್ಸಿನಲ್ಲಿ ಕಲಿತ ವಿದ್ಯೆ ನೂರು ವರುಷ ಕಾಯುತ್ತದೆ ಎನ್ನುವ ಗಾದೆ ಮಾತಿದೆ. ಹಾಗಿದ್ದಾಗ ಎಳೆಯ ಮನಸುಗಳಲ್ಲಿ ಬಿತ್ತಿದ ವಿಚಾರಗಳೇ ಹೆಮ್ಮರವಾಗಿ ಬೆಳೆದು ಕೊನೆವರೆಗೂ ಸಮಾಜಕ್ಕೆ ಫಲ ಕೊಡುವುದು ನಿಜಕ್ಕೂ ಸತ್ಯ.

         ಶಿಕ್ಷಕನಾದವನು ಕೇವಲ ಪಾಠ ಮಾಡಿ ಮುಗಿಸಿದರೆ ಸಾಕು, ನನ್ನ ಜವಾಬ್ದಾರಿ ಮುಗಿಯಿತು,ಎನ್ನುವ ಮೈಂಡ್ ಸೆಟ್ ಇಟ್ಟುಕೊಂಡಾಗ ಆತ ಆದರ್ಶ ಶಿಕ್ಷಕನೆನಿಸಿಕೊಳ್ಳಲಾರ.ತನ್ನ ತರಗತಿಯಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯ ಅಂತರಾಳವನ್ನು ಹೊಕ್ಕು, ಅಲ್ಲಿ ಆ ಮಗುವಿನೊಳಗಿನ ಮನಸ್ಥಿತಿಯನ್ನು ಅಳೆದು,ಆ ಮಗುವಿನ ಅಂತಃಶಕ್ತಿಯನ್ನು ಸಂಪೂರ್ಣವಾಗಿ ಹೊರತೆಗೆಯುವ ಸಾಮರ್ಥ್ಯ ಆ ಗುರುವಿಗಿರಬೇಕು.

ನಾನು ಬಿ.ಕಾಮ್ ಮಾಡುತ್ತಿದ್ದ ಸಮಯದಲ್ಲಿ ಶ್ರೀ ಮಾದಪ್ಪನವರು ನಮ್ಮ ಸ್ಟಾಟಿಸ್ಟಿಕ್ಸ್ ಲೆಕ್ಚರರ್.ಲೆಕ್ಕಗಳನ್ನು ಚಕಚಕನೆ ಮಾಡಲು ಎಲ್ಲರನ್ನೂ ಪ್ರೇರೇಪಿಸುತ್ತಿದ್ದರು. ಮುಂದಿನ ಬೆಂಚಿನ ನಾವು ಕೆಲವರು ಕಾಂಪಿಟೇಶನ್ ಗೆ ಬಿದ್ದವರಂತೆ ಲೆಕ್ಕದ ಸಮಸ್ಯೆಗಳಿಗೆ ಉತ್ತರ ಮೊದಲು ಹೇಳುವ ಸಾಹಸ ಮಾಡ್ತಿದ್ವಿ. ಸರ್,”ನಿಮ್ಗ್ ಉತ್ರ ಬಂತೇನ್ರೀ?”ಅಂತ, ಹಿಂದಿನ ಬೆಂಚುಗಳಲ್ಲಿ ಅಪರೂಪಕ್ಕೆ ಕುಳಿತು, ಸದಾ ಕಾಲೇಜಿನ ಕಾರಿಡಾರುಗಳಲ್ಲಿ, ಹುಡುಗಿಯರಿಗೆ ಕಾಳು ಹಾಕುತ್ತಾ, ಗಸ್ತು ಹೊಡೆಯುತ್ತಿದ್ದ ಕರುನಾಡ ಮಜ್ನೂಗಳನ್ನು ಗಮನಿಸಿ ಎಬ್ಬಿಸಿ ಕೇಳುತ್ತಿದ್ದರು. ಅವರುಗಳು ತಲೆ ಕೆರೆದುಕೊಂಡು,”ಇಲ್ಲಾ ಸಾ….”, ಅಂದ್ರೆ,ಸರ್,”ಏನ್ರೀ ನಿಮ್ ಅಪ್ಪನದು ವ್ಯವಹಾರ?”ಅಂತ ಗಂಭೀರವಾಗಿ ಕೇಳ್ತಿದ್ರು.ಆಗ,”ಬೇಸಾಯ ಸಾ…..”, ಅಂತ ಉತ್ತರ ಬರುತ್ತಿತ್ತು. “ಎಷ್ಟ್ರೀ ಇದೇ ಜಮೀನೂ?”, ಅಂತ ಕೇಳಿದರೆ,”ಎಲ್ಡೂವರೆಕರೆ ಸಾ….”, ಅನ್ನುತ್ತಿದ್ದರೆ.”ಓ….ಹೌದಾ?ನೀವೆಷ್ಟ್ ಮಕ್ಳೋ?”, ಅಂದ್ರೆ,”ನಾಕ್ ಜನಾ  ಸಾ…”,ಅಂತಿದ್ದರು. ಆಗ ಸರ್,”ಸ್ವಲ್ಪನಾದ್ರೂ ತಲೇಲಿ ಬುದ್ದಿ ಇದ್ಯೇನ್ರೀ ನಿಮ್ಗೇ?ಹುಡ್ಗೀರ್ ಹಿಂದೆ ಹಲ್ ಗಿಂಜ್ಕೊಂಡು ಪೋಲಿ ಅಲೀತೀರಲ್ರೀ!ಚಿಕ್ ಲೆಕ್ಕ ಬಿಡ್ಸಿ ಅಂದ್ರೆ ತಲೆ ಕೆರೀತೀರಲ್ಲಾ!ನಿಮ್ಗೆ ಲವ್ ಬೇರೆ ಕೇಡೂ!ನಿಮ್ಮಪ್ಪನ ಜಮೀನು ಹಂಚಿದರೆ ಒಬ್ಬೊಬ್ರಿಗೂ ಅರ್ದ ಎಕ್ರೆ ಬರುತ್ತೆ. ಅಷ್ಟರಲ್ಲಿ ಏನ್ ಸಂಸಾರ ಸಾಕ್ತೀರ್ ರೀ? ಕೂಲಿ ನಾಲಿ ಮಾಡಿ ನಿಮ್ನ ಓದಕ್ ಕಳುಸ್ತಾರೆ, ಸರ್ಯಾಗಿ ಓದ್ದೆ ಮುಂದೆ ತಿರ್ಪೆ ಎತ್ತ ಸ್ಕೀಮ್ ಏನಾದ್ರೂ ಇದ್ಯಾ?ಮೊದ್ಲು ಜವಾಬ್ದಾರಿಯಿಂದ ಬದ್ಕೋದು ಕಲ್ತುಕೊಳ್ರೀ.”, ಅಂತ ಅವರ ಸ್ಥಿತಿಯನ್ನ ಬಿಡಿಸಿ ಬುದ್ದಿ ಹೇಳುತ್ತಿದ್ದರು.”ನೀನ್ಯಾಕೋ,ನಿನ್ನ ಹಂಗ್ಯಾಕೋ”, ಎಂದುಕೊಂಡು ತಮ್ಮ ಪಾಠ ತಾವು ಮುಗಿಸಿ ಆಚೆಗೆ ನಡೆಯುತ್ತಿರಬಹುದಿತ್ತು. ಆದರೆ, ಅದು ಅವರ ಎಕ್ಸ್‌ಟ್ರಾ ಬೋಧನೆ!ಅದಕ್ಕಾಗಿ ಅವರಿಗೆ ಹೆಚ್ಚಿನ ಸಂಬಳವೇನೂ ಕಾಲೇಜಿನಿಂದ ಕೊಡುತ್ತಿರಲಿಲ್ಲ. ಆದರೆ ಆ ವಿದ್ಯಾರ್ಥಿಗೆ ಅವನ ಪರಿಸ್ಥಿತಿ ಅರಿವಾಗಿ ಆತ ಬದಲಾಗಿ ಒಳ್ಳೆಯ ಜವಾಬ್ದಾರಿಯುತ ವ್ಯಕ್ತಿಯಾದರೆ, ಆ ಗುರುವಿನ ಮನಸ್ಸಿಗೆ ಎಷ್ಟು ಆನಂದವಾಗಬಹುದು? ಅದನ್ನು ಪದಗಳಿಂದ ಅಳೆಯಲು ಸಾಧ್ಯವಿಲ್ಲ.ಪ್ರತಿಯೊಬ್ಬ ವಿದ್ಯಾರ್ಥಿಯ ಗುರುತಿಸಿ, ಅವನ ಜವಾಬ್ದಾರಿ ಅವನಿಗೆ ಹೇಳಿ, ಅವನು ಹೇಗೆ ಬದಲಾದರೆ ಕ್ಷೇಮ,ತಿಳಿ ಹೇಳುವುದು ಸದ್ಗುರುವಾದವನ ಕರ್ತವ್ಯ!

        ಅಕ್ಷರವನ್ನು ಕಲಿಸುವಾತ ಶಿಕ್ಷಕ.ಅಂದರೆ, ಈ ಅಕ್ಷರದ ಅರ್ಥವಾದರೂ ಏನೂ? “ಕ್ಷರ” ಎಂದರೆ ನಾಶವಾಗುವಂಥದ್ದು. “ಅಕ್ಷರವೆಂದರೆ ಅವಿನಾಶಿ”, ಎಂದು. ಯಾವುದು ನಮ್ಮೊಳಗೆ ಕೊನೆವರೆಗೂ ನಾಶವಾಗದೇ ಇದ್ದು, ನಮ್ಮನ್ನು ಉನ್ನತ ಸ್ಥಾಯಿಗೆ ಕರೆೆದುಕೊಂಡು ಹೋಗುವುದೋ, ಅದೇ ಅಕ್ಷರ. ಅದನ್ನು ನೀಡುವವನೇ ಉತ್ತಮವಾದ ಶಿಕ್ಷಕ.ಮಹಾತ್ಮಾ ಗಾಂಧಿಯವರು ಒಮ್ಮೆ ಒಂದು ಪಾಠಶಾಲೆಗೆ ಭೇಟಿ ಕೊಟ್ಟರಂತೆ.ಮಕ್ಕಳನ್ನೆಲ್ಲಾ ಪ್ರೀತಿಯಿಂದ, ಆತ್ಮೀಯತೆಯೊಂದಿಗೆ ಮಾತನಾಡಿಸಿ ನಂತರದಲ್ಲಿ ಅಲ್ಲಿದ್ದ ಶಿಕ್ಷಕರನ್ನ ಪರಿಚಯ ಮಾಡಿಕೊಂಡರಂತೆ. “ಅಮ್ಮ, ನೀವು ಮಕ್ಕಳಿಗೆ ಏನು ಹೇಳುತ್ತೀರಿ?”, ಎಂದರೆ,”ನಾನು ಗಣಿತ ಪಾಠ ಮಾಡುತ್ತೇನೆ”, “ನಾನು ವಿಜ್ಞಾನ ಮಾಡುತ್ತೇನೆ”,”ನಾನು ಸಮಾಜ ಶಾಸ್ತ್ರ ಬೋಧಿಸುತ್ತೇನೆ”, ಎಂದು ಒಬ್ಬೊಬ್ಬರೂ ಹೇಳುತ್ತಾ ಹೋದರಂತೆ.ಆಗ ಗಾಂಧೀಜಿಯವರು, ತಲೆ ಕೆರೆದುಕೊಂಡು ,“ಶಾಲೆಗೆ ಸಂಬಂಧಪಟ್ಟ ಪಾಠಗಳನ್ನ ಎಲ್ಲರೂ ಮಾಡುತ್ತಿದ್ದೀರಿ.ಜೀವನಕ್ಕೆ ಬೇಕಾದ ವಿದ್ಯೆಯನ್ನು ಬೋಧಿಸುವವರು ಯಾರೂ?”ಎಂದರಂತೆ.ಶಾಲೆಯ ಪಠ್ಯಗಳ ಹೊರತಾಗಿ ಜೀವನವನ್ನು ಸಫಲವಾಗಿ ಬದುಕುವ ಕಲೆ ತಿಳಿಸುವುದೇ ವಿದ್ಯೆ! ಈ ವಿದ್ಯೆಯನ್ನು ತಿಳಿಸುವ ಕಲೆ ಶಿಕ್ಷಕನಿಗಿರಬೇಕು. ನಿಜವೇ ಅಲ್ಲವೇ? ಗಣಿತ,ವಿಜ್ಞಾನಗಳಲ್ಲಿ ನಾವು ಕಲಿಯುವ ಪ್ರಮೇಯಗಳಾಗಲಿ,ಸೂತ್ರಗಳಾಗಲೀ, ನಮ್ಮ ಜೀವನದ ಎಲ್ಲ ಘಟ್ಟಗಳಲ್ಲೂ ನಮಗೆ ಬೆಂಬಲವಾಗಿ ನಿಲ್ಲುವುದಿಲ್ಲ. ನಾವು ಕಲಿತಂಥ ಮಾನವೀಯ ಮೌಲ್ಯಗಳು,ನೀತಿ ನಿಷ್ಠೆಗಳು,ಕಷ್ಟದ ಸಮಯಕ್ಕೆ ನಮ್ಮನ್ನು ನಾವು ಒಡ್ಡಿಕೊಂಡು ನಿಲ್ಲುವ ಸಮತ್ವದ ಸ್ಥಿತಿ, ಮುಂತಾದವುಗಳೇ ನಮ್ಮನ್ನು ಎಂಥ ಸಮಯದಲ್ಲೂ ಕಾಪಾಡುವುದು.

                ಟೀಚರ್ ಆದವನು ಕೇವಲ “ಟೀಚ್”ಮಾಡಿದರಷ್ಟೇ ಸಾಲದೂ.ಅವನು ಪ್ರತಿಯೊಬ್ಬ ವಿದ್ಯಾರ್ಥಿಯ ಹಿನ್ನಲೆ ಹಾಗೂ ಚಲನವಲನಗಳನ್ನೂ “ವಾಚ್”ಮಾಡಬೇಕು.“ತಲೆಗೆಲ್ಲಾ ಒಂದೇ ಮಂತ್ರ”ವೆಂಬಂತೆ, ಶಿಕ್ಷಕನು ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ದೃಷ್ಟಿಯಲ್ಲಿ ನೋಡಿದರೆ ಸರಿ ಹೋಗುವುದಿಲ್ಲ.ಯಾವ ಮಕ್ಕಳು ಯಾವ ಹಿನ್ನೆಲೆಯಿಂದ ಬಂದಿರುತ್ತಾರೋ, ಅವರಿಗೇನೇನು ಒತ್ತಡವಿದೆಯೋ, ಅವರಿಗೆಷ್ಟು ಅನುಕೂಲವಿದೆಯೋ, ಇದೆಲ್ಲಾ ವಿಚಾರ ಮಾಡಿಯೇ ಶಿಕ್ಷಕರು, ಶಿಷ್ಯರಿಗೆ ಮಾರ್ಗದರ್ಶನ ನೀಡುವುದು ಬಲು ಅಗತ್ಯವಾದ ಶಿಕ್ಷಕನಿಗಿರಬೇಕಾದ ಗುಣ.ಅನ್ನದ ಆತುರವಿಟ್ಟುಕೊಂಡು ಶಾಲೆಗೆ ಬಂದ ಹುಡುಗನಿಗೆ ವಿದ್ಯೆ ಹತ್ತುವುದಾದರೂ ಹೇಗೇ? ಅಟ್ಟ ಹತ್ತಲಾರದವನಿಗೆ ಬೆಟ್ಟ ಹತ್ತಲಾದೀತೇ?

       ಶಿಕ್ಷಕನಿಗೊಬ್ಬನಿಗೇ ಕಣ್ರೀ ನಿವೃತ್ತಿಯಾದ ಮೇಲೂ ತಮ್ಮ ಶಿಷ್ಯ ವೃಂದ  ಬಂದು ನಮಸ್ಕಾರ ಹಾಕುವುದು. ಮಿಕ್ಕ ಯಾರಿಗೂ ಆ ಗೌರವ ಸಿಗಲಾರದು. ಆತ ದೊಡ್ಡ ಅಧಿಕಾರಿಯೇ ಆಗಿರಲಿ,ಅವನು ಸ್ಥಾನದಲ್ಲಿರುವವರಿಗೆ ಮಾತ್ರವೇ ಗೌರವ! ಆದರೆ ಯಾರು ಎಷ್ಟು ದೊಡ್ಡ ಅಧಿಕಾರಿಯೇ ಆಗಿರಲಿ, ಅವರ ಗುರುಗಳನ್ನ ಆತ ಕಂಡರೆ, ಶಿರಬಾಗಿ ವಂದಿಸುತ್ತಾನೆ.ಆ ಗೌರವ ಸಿಗಬೇಕಾದರೆ,ಅವರೂ ಕೂಡಾ ಆ ಮಟ್ಟದಲ್ಲಿ ಶ್ರೇಷ್ಠರಾಗಿರಬೇಕಾಗುತ್ತದೆ. ಅಷ್ಟೇ ಜ್ಞಾನವನ್ನು ಪ್ರತಿನಿತ್ಯ ಸಂಪಾದನೆ ಮಾಡಿಕೊಂಡು ಅಪ್ಡೇಟ್ ಆಗಿಬೇಕಾಗುತ್ತದೆ.ಸುಮ್ಮನೆ ಹೇಳುವುದಾದರೆ,ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕ ವಿಜ್ಞಾನದ ವಿಷಯ ಪಾಠ ತೆಗೆದುಕೊಳ್ಳುತ್ತಿದ್ದರೆ, ಆ ವಿಷಯದ ಹಿಂದು ಮುಂದಿನ ವಿಚಾರಗಳ ಸ್ಪಷ್ಟತೆ ಇರಬೇಕು. ಶಿಕ್ಷಕನೆನ್ನುವನು ನಿತ್ಯ ವಿದ್ಯಾರ್ಥಿ!ಅವನದ್ದು ನಿರಂತರ ಕಲಿಕೆಯಾದಾಗ ಮಾತ್ರವೇ, ಎಂಥ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲ.

ವಿದ್ಯಾರ್ಥಿಗಳ ಕುತೂಹಲಕರ ಪ್ರಶ್ನೆಗಳಿಗೆ ಯಾವುದೇ ಸಮಯದಲ್ಲೂ ಉತ್ತರಿಸುವ ಜ್ಞಾನ ಹಾಗೂ ಜಾಣ್ಮೆ ಇರಬೇಕು.ಬದಲಿಗೆ ಗುರುಗಳೇ ಧುತ್ತೆಂದು ಬರುವ ಅನಿರೀಕ್ಷಿತ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದರೆ, ವಿದ್ಯಾರ್ಥಿಗಳ ಮುಂದೆ ಅವರ ಸ್ಥಿತಿ ಹಾಸ್ಯಾಸ್ಪದವಾಗುತ್ತದೆ. ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕನಿದ್ದ.ಆತ ತರಗತಿಯಲ್ಲಿ ಭೊಗೋಳ ಶಾಸ್ತ್ರದ ಪಾಠ ಮಾಡುತ್ತಿರುವಾಗ,ಪ್ರಕೃತಿಯಲ್ಲಿ ಸಿಗುವ ವಿವಿಧ ರೀತಿಯ ಕಲ್ಲು ಬಂಡೆಗಳು ಹಾಗೂ ಅವುಗಳ ಲಕ್ಷಣವನ್ನು, ಪಾಠದಲ್ಲಿರುವಷ್ಟು ಹೇಳಿ ಮುಗಿಸಿದರು. ಆದರೆ, ರಾಮನೆನ್ನುವ ವಿದ್ಯಾರ್ಥಿಯ ತಲೆಯಲ್ಲಿ ಒಂದು ಕುತೂಹಲದ ಪ್ರಶ್ನೆ.

ಪಾಠದ ನಡುವೆ, “ರಾಮ”, ಅನ್ನುವ ವಿದ್ಯಾರ್ಥಿ,”ಸಾ…”, ಅಂತ  ಕೈ ಎತ್ತಿದ. ಮೇಷ್ಟರು, “ಏನೋ?”, ಎಂದರು.

“ ಸಾ…ಮೆಟಾಮಾರ್ಫಿಕ್ ಕಲ್ಲು ಬಂಡೆಗಳು ಪದ್ರಪದ್ರವಾಗಿ ಇರುತ್ತೇಂತ ಹೇಳುದ್ರೀ. ಆ ಪದ್ರಗುಳು ಎಂಗಾಗ್ತವೆ ಸಾ….”, ಅಂದ. ಮೇಷ್ಟ್ರಿಗೆ ಗೊತ್ತಿದ್ರೆ ತಾನೇ ಉತ್ತರಿಸೋಕೇ,”ಥೂ ತರ್ಲೆ ಮುಂಡೇದೇ, ಮಾಡಿದ್ ಪಾಠ ಓದದ್ ಬಿಟ್ಟು, ನಮ್ ತಲೆ ತಿನ್ನೊಕ್ಕೆ ಬ್ಯಾಡ್ದಿದ್‌ ವಿಚಾರ್ವೆಲ್ಲಾ ಬೇಕು ಇವುಕ್ಕೆ”, ಅಂತ ಮನ್ಸಲ್ಲೇ  ಬೈಕೊಳ್ತಾ,ಆ ಕ್ಷಣಕ್ಕೇ

ಬುದ್ದಿ ಉಪಯೋಗಿಸಿ,”ಕೃಷ್ಣ”ನೆಂಬ ವಿದ್ಯಾರ್ಥಿಯನ್ನು ಎಬ್ಬಿಸಿ,”ಏನೋ ಕೃಷ್ಣಾ, ರಾಮ ಕೇಳಿದ ಪ್ರಶ್ನೆಗೆ ಉತ್ತರ ನಿನ್ಗೆ ಗೊತ್ತೇನೋ?”, ಎಂದು ಕೇಳಿದ. ಆಗ ಅವನು “ಗೊತ್ತಿಲ್ಲಾ ಸಾ…..”, ಅಂತ ಹ್ಯಾಪ್ ಮೋರೆ ಹಾಕಿದರೆ,ಮತ್ತೊಬ್ಬನ ಕಡೆ ತಿರುಗಿ,”ಏ ರಂಗಾ ನೀನ್ ಹೇಳೋ”, ಅಂತ ಕೇಳಿದ. ಅವನೂ ನಿಂತು ಸುಮ್ಮನೆ ತಲೆ ಕೆರೆಯುತ್ತಾ ನಿಂತರೆ,”ದಡ್ ನನ್ ಮಕ್ಳಾ. ಹೋಗಿ ಕತ್ತೆ ಕಾಯ್ರಿ. ನೋಡೀ, ಇವತ್ತೊಂದು ದಿನ ನಿಮಗೆಲ್ಲಾ ಟೈಮ್ ಕೊಡ್ತೀನಿ. ರಾಮ ಕೇಳಿದ ಪ್ರಶ್ನೆಗೆ ನಾಳೆ ತರಗತಿಯಲ್ಲಿ ಎಲ್ಲರೂ ಉತ್ತರ ಹುಡುಕಿಕೊಂಡು ಬರಬೇಕು.ಇಲ್ಲದಿದ್ರೆ ನಿಮಗೆಲ್ಲಾ ನಾಳೆ ದೊಣ್ಣೆ ಸೇವೆ ಇದೆ”, ಎಂದು ಹೇಳಿ ವಿಷಯಕ್ಕೆ ಮುಕ್ತಾಯ ಹಾಕಿ, ಮಾರನೆಯ ದಿನದ ಹೊತ್ತಿಗೆ ಆ ಪ್ರಶ್ನೆಗೆ ಪರಿಹಾರ ಹುಡುಕಿಕೊಂಡು ಬಂದಿರುತಿದ್ದರು. ಹುಡುಗರೇನಾದರೂ ಉತ್ತರ ಹೇಳಿದರೆ ಬಚಾವ್!ಇಲ್ದಿದ್ರೆ, ಎಲ್ಲರಿಗೂ ದೊಣ್ಣೆಯಲ್ಲಿ ಸೇವೆ ಮಾಡಿ, ನಂತರ ,”ಕೊನೆಗೂ ನೀವ್ಯಾರೂ ಉತ್ತರ ಹೇಳುವ ಪ್ರಯತ್ನ ಮಾಡಲೇ ಇಲ್ಲ. ದಡ್ಡ ಶಿಖಾಮಣಿಗಳಾ. ಈಗ ನಾನು ಉತ್ತರ ಹೇಳ್ತೀನಿ ಕೇಳಿ”, ಎಂದು ಜಾಣತನದಲ್ಲಿ ಉತ್ತರಿಸುವ ಶಿಕ್ಷಕರಿಗೇನೂ ಕಮ್ಮಿ ಇಲ್ಲ.

    ಅದೊಂದು ಹಳ್ಳಿಯ ಶಾಲೆ.ಮಟಮಟ ಮಧ್ಯಾನ್ಹದ ಊಟದ ನಂತದ ಪೀರಿಯಡ್ಡು. ಮೇಷ್ಟರು ಆ ದಿನ ಗಡದ್ದಾಗಿ ತಿಥಿ ಊಟ ಮುಗಿಸಿ ಬಂದಿದ್ದರು. ವಿಜ್ಞಾನ ಪಾಠ ಮಾಡಬೇಕು. ಹಳ್ಳಿಗಳ ಕಡೆ ಬೇಸಿಗೆಯಾದರೂ, ಶಾಲೆಯ ಸುತ್ತ ದೊಡ್ಡದೊಡ್ಡ ಹೊಂಗೆ ಮರಗಳು ಬೆಳೆದು ನಿಂತು ತಂಪಾಗಿ ಗಾಳಿ ಬೀಸುತ್ತಿತ್ತು.ಕುರ್ಚಿಯ ಮೇಲೆ ಕೂತು ನೋಟ್ಸ್ ಡಿಕ್ಟೇಟ್ ಮಾಡುತ್ತಿದ್ದ ಮೇಷ್ಟ್ರಿಗೆ ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ಕಣ್ಣೆಳೆದು ತೂಕಡಿಗೆ ಬರಲು ಶುರುವಾಯಿತು.ಎಚ್ಚರಿಕೆಯಿಂದಿರಲು ಎಷ್ಟು ಒದ್ದಾಡಿದರೂ ತಡೆಯಲಾಗಲೇ ಇಲ್ಲ. ಕೊನೆಗೆ ಹುಡುಗರಿಗೆ,”ಏನ್ರುಲಾ, ಶಾನೆ ನಿದ್ದ್ ಬತ್ತಾ ಅವೆ. ನಾನ್ ನೆನ್ನೆ ಮಾಡಿದ್ ಪಾಟ್ವೇ ವಸಿ ಅಂಗೇ ಸದ್ ಮಾಡ್ದೇ ಓದ್ಕೊಂತಾ ಕುತ್ಕಳೀ.”, ಅಂದು ಕ್ಲಾಸ್ ಮಾನಿಟರ್ ಮುದ್ರೇಶನ್ ಕರ್ದು,”ಲೋ ಮುದ್ದೇಸಾ, ಯಾರೂ ಗಲಾಟೆ ಮಾಡ್ದಂಗ್ ನೋಡ್ಕಾ.ಅಂಗೆೇಯಾ ಎಡ್‌ಮಾಸ್‌ಟುರೋ, ಇನ್ಯಾರಾ ಮಾಸ್ಟ್ರು  ಆಚೆ ಕಂಡ್ರೆ, ಓಡ್ ಬಂದು ನನ್ ಎಬ್ಸು. ಆತೇನ್ಲಾ. ಮರೀಬ್ಯಾಡ.”, ಅಂತ ಹೇಳಿ, ಹಾಕಿಕೊಂಡಿರೋ ಅಂಗಿ ಬಿಚ್ಚಾಗಿ ಗಡದ್ದಾಗಿ ನಿದ್ದೆ ಹೊಡ್ಯೋಕೆ ಸುರು ಅಚ್ಕಂಡೇಬಿಟ್ರು ಮೇಷ್ಟ್ರು. ಸ್ವಲ್ಪ ಹೊತ್ತಿನ ನಂತರ ಬಿ ಇ ಓ ಸಾಹೇಬ್ರು,ಶಾಲೆಗೆ ಇನ್ಸ್‌ಪೆಕ್ಷನ್‌ಗೇಂತ ಬಂದರು.ಹೆಡ್ ಮಾಸ್ತರರ ಜೊತೆ ಎಲ್ಲಾ ತರಗತಿಗಳನ್ನೂ ಪರಿಶೀಲಿಸಿಕೊಂಡು ಬರುತ್ತಾ, ಮುದ್ದೇಶನಿದ್ದ ತರಗತಿಯ ಕಿಟಕಿಯ  ಮುಂದೆ ಹಾದು ಬರುತ್ತಿದ್ದರು. ದುಡುದುಡು ಮೇಷ್ಟ್ರ ಹತ್ರ ಓಡಿದ ಮುದ್ದೇಶ, ಅವರ ಭುಜ ಅಲ್ಲಾಡಿಸಿ,”ಸಾ ಸಾ, ಬಿಇಓ ಸಾಯೇಬ್ರುನೂವಾ,ಎಡ್ ಮಾಸ್ತ್ರು ಇತ್ತಕಡೀಕೆ ಬತ್ತೇವ್ರೇ ಸಾ..”, ಅಂತ ಮೇಷ್ಟ್ರನ್ನ ಗಾಬ್ರಿಯಾಗಿ ಎಬ್ಬಿಸಿದ. ಮೇಷ್ಟ್ರುಗೆ ಅವಿನಿಗಿಂತ್ಲೂ  ಗಾಬ್ರಿ, ಜತೀಗೆ ಭಯ ಬ್ಯಾರೇ!ಮೊದಲೇ ಅಂಗಿ ಹಾಕಿಲ್ಲ. ಹೋಗ್ಲಿ ಹಾಕಿಕೊಳ್ಳೋವಷ್ಟು ಟೈಮೂ ಇಲ್ಲ.ಚಾಣಾಕ್ಷ ಮೇಷ್ಟ್ರು ಸಮಯಕ್ಕೆ ಬಲೇ ಬುದ್ದಿ ಉಪಯೋಗಿಸಿದ.”ಮುದ್ದೇಸ ಇಲ್ಲೇ ನಿಂತ್ಕಳ್ಳಾ”, ಅಂದು ಅವನ ಕೈ ಹಿಡಿದು ತನ್ನ ಹೊಟ್ಟೆಯ ಕಡೆಗೆ ತೋರಿಸ್ಕಳ್ತಾ,”ನೋಡಪ್ಪಾ ಮುದ್ದೇಸಾ, ಪಕ್ಕೆಲ್ಬು ಇಲ್ ಬತ್ತದೇ, ಸಣ್‌ ಕಳ್ಳು ಇಲ್ ಬತ್ತದೇ,ಮೇದೋಜೀರಕ ಗ್ರಂದಿ ಈ ಸಂದೀಲ್ ಬತ್ತದೇ”, ಅಂತ ಪ್ರಾಕ್ಟಿಕಲ್ ಕ್ಲಾಸ್ ಶುರು ಹಚ್ಕೊಂಡೇ ಬಿಟ್ರು!ಬೆಂಚಿನ್ ಮೇಲೆ ಆಸೀನ್ರಾದ ಐಕ್ಳು, ಇದ್ಕಿದ್ದಂಗೇಯಾ ಮೇಷ್ಟ್ರು ಸೀನು ಬದಲಾಯ್ಸಿದ್ದನ್ನ ಪಂಚೇಂದ್ರಿಯಗುಳ್ನೂ ತೆರೆದ್ಕೊಂಡು ಆವಕ್ಕಾಗಿ,”ಇಲ್ಲೇನ್ ನಡೀತೀ ಇದೇ?”ಯೋಚಿಸ್ತಾ ಕುಂತೇಬಿಟ್ವು.ಕಲಾಕಾರ ಮೇಷ್ಟ್ರು ಇದ್ಕಿದ್ದಂಗೆ ರಂಗು ಬದ್ಲಾಯ್ಸಿದ್ ನೋಡಿ ಪೆಂಗುಪೆಂಗಾಗಿ,ದಂಗಾಗೋದ್ರು!

ಬಿ ಇ ಓ ಸಾಹೇಬ್ರಿಗೆ ಈ ಮೇಷ್ಟ್ರು ವಿದ್ಯಾರ್ಥಿಗಳ ಮುಂದೆ ಮಾಡ್ತಿದ್ದ ಹೊಸ ಪ್ರಯೋಗ ಕಂಡು,ಬಲೇ ಇನ್‌ಸ್ಪೈರ್ ಆಗೋಯ್ತು.ಮೇಷ್ಟ್ರು ಇವ್ರುನ್ ನೋಡಿ, ಸೆಲೂಟ್ ಹೊಡ್ದು, ಏಳೋಕ್ ಹೋದ್ರು. “ಕೂತ್ಕಳಿ ಕೂತ್ಕಳಿ ಮೇಷ್ಟ್ರೇ, ನೀವ್ ಪಾಠ ಮುಂದೊರ್ಸಿ”, ಅಂತ ಹೆಡ್ ಮಾಸ್ತರ ಜೊತೇಲಿ ಹೋಗಿ ಕೊನೆ ಬೆಂಚಿನಲ್ಲಿ ಕೂತ್ಕೊಂಡ್ರು. ಮೇಷ್ಟ್ರು,”ನೋಡ್ರಪಾ, ಮೊನ್ನೆ ಮಂತ್ಲಿ ಟೆಸ್ಟ್ನಾಗೆ ಮಾನವ ದೇಹದ ಅಂಗಾಗಗಳ್ನ ಗುರುತಿಸಿ ಅಂದ್ರೆ, ಎತ್ತೆತ್ಲಾಗೋ ಗುರ್ತಾಕಿದ್ರಲ್ಲೋ,ನೋಡಿ,ನಾನು ಬೋಲ್ಡಿನ್ ಮೇಕೆ ಬರ್ದುದ್ದು ನಿಮ್ಗೆ ಸರ್ಯಾಗ್ ಅರ್ಥ ಆಗಿರ್ಲಿಲ್ಲಾಂತ ಕಾಣ್ತದೆ. ಈಗ್ ನಾನು ಒಬ್ಬೊಬ್ರುನ್ನೂವ ಕರ್ದು ಕರ್ದು,ಈಗ ಯಾವ್ ಯಾವ್ ಅಂಗ ಎಲ್ ಬತ್ತವೇಂತ ಕರೆಟ್ಟಾಗ್ ತೋರ್ಸಿವ್ನಿ. ಎಲ್ರುಗೂ ಅರ್ತಾತ್ ತಾನೇ?ಓಗ್ ನಿನ್ ಜಾಗುಕ್ ಕುಂತ್ಕಳೋ ಮುದ್ದೇಸ.ನಿನ್ ಪಕ್ಕುದ್ ಉಡ್ಗ ಮಲ್ಲೇಸುನ್ ಕಳ್ಸು”, ಅಂದು, ಬಂದ ಬಿ ಇ ಓ ಸಾಹೇಬ್ರಿಗೆ “ಅಡ್ಬಿದ್ರೆ ಸಾಯೇಬ್ರೇ”, ಅಂತ ಹಲ್ಲುಗಿಂಜಿ ನಮಸ್ಕಾರ ಹಾಕಿದರು. ಬಿ ಇ ಓ ಸಾಹೇಬ್ರು ದಿಲ್‌ಖುಷ್ ಆಗಿ ಹೋಗಿ,”ಶಬಾಶ್ ಮೇಷ್ಟ್ರೇ ನಿಮ್ಮಂತೋರ್ ಬೇಕು ನಮ್ ಹುಡುಗರಿಗೆ.ಎಂತ ಚಂದಾಗಿ ಅರ್ಥವಾಗುವಂತೆ ನಿಮ್ಮ ದೇಹಾನೇ ಪ್ರಯೋಗಶಾಲೆ ಮಾಡ್ಕೊಂಡು ಯಾವುದೇ ಮುಜುಗರವಿಲ್ಲದೆ ಹುಡುಗರಿಗೆ ತೋರುಸ್ತಿದೀರಲ್ಲಾ. ಒಪ್ದೇ ಕಣ್ರೀ ನಿಮ್ ಕರ್ತವ್ಯಕ್ಕೆ,ನೀವು ಸಮರ್ಪಿಸಿಕೊಂಡ ರೀತಿಯನ್ನ.ಬೇಗ್ನೆ ಇವ್ರಿಗೆ ಒಂದು ಪ್ರಮೋಷನ್ ಕೊಡ್ಬೇಕ್ ಕಣ್ರೀ ಹೆಡ್ ಮೇಷ್ಟ್ರೇ”, ಅಂತ ಹೇಳಿ, ಈ ಗೊರ್ಕೆ ಪಾರ್ಟಿ ಬಾಡಿ ಶೋ ಮೇಷ್ಟ್ರ ಬಗ್ಗೆ ಒಳ್ಳೆಯ ರಿಮಾರ್ಕು ಬರ್ದುಕೊಂಡು ಹೊಂಟೇಬಿಟ್ರೂ! ನೋಡುದ್ರಾ ಹೆಂಗಿದೆ?ಈ ಥರದ ಬುದ್ದಿವಂತಿಕೆ ತೋರಿಸುವ ಎಷ್ಟೋ ಮೇಷ್ಟರು ಈ ಸಮಾಜದಲ್ಲಿಲ್ಲಾ ಹೇಳಿ? ಮೆಚ್ಕೋಬೇಕ್ ಕಣ್ರೀ ಇಂಥ ಈ ಸೋಂಬೇರೀ ಮೇಷ್ಟರ ಸಮಯಪ್ರಜ್ಞೆ!ಸುಖ್ವಾಗಿ ನಿದ್ದೆ ಹೊಡ್ದೂ ಪ್ರೊಮೋಷನ್ ಗಿಟ್ಟಿಸಿಕೊಂಡ ಸೂಪರ್ಟ್ಯಾಲೆಂಟೆಡ್ ಮೇಷ್ಟ್ರು!

    ಇದೆಲ್ಲಾ ಇಲ್ಲಿ ಬರೆಯುವ ಉದ್ದೇಶವಾದರೂ ಏನೂ? ಅಂದರೆ,ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ, ಜನರು ಅವರಿಗೊಂದು ಮಾರ್ಜಿನ್ ಕೊಟ್ಬಿಡ್ತಾರೆ. ಆದರೆ, ಈ ಶಿಕ್ಷಕ ಅನ್ನುವ ಪದವಿಯಲ್ಲಿ ಕೂತವರು, ಏನೇ ಮಾಡಬಾರದ್ದು ಮಾಡಿದರೂ, ಅದು ಅಪರಾಧವೆಂದೇ ನನ್ನ ಭಾವನೆ.ಶಾಲೆಯಲ್ಲಿ ಪ್ರತಿವರ್ಷ ಕಲಿಯಲು ಬರುವ ನೂರಾರು ಮಕ್ಕಳು ಶಿಕ್ಷಕರ ಗುಣ, ಸ್ವಭಾವಗಳನ್ನು ಮಾದರಿಯಾಗಿ ತೆಗೆದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸ್ವಾಭಾವಿಕ. ನಿಜ ಹೇಳಬೇಕೆಂದರೆ, ಮಕ್ಕಳು,ತಂದೆ ತಾಯಿಗಿಂತಲೂ ಶಿಕ್ಷಕರ ಮಾತುಗಳಿಂದ, ಅವರ ನಡತೆಗಳಿಗೆ , ಬೋಧನೆಗಳಿಗೆ ಪ್ರಭಾವಿತರಾಗುತ್ತಾರೆ. ಇದನ್ನು ಬರೆಯುವಾಗ ಒಂದು ವಿಷಯ ನೆನಪಿಗೆ ಬಂದದ್ದು, ಸಿಡ್ನಿಯ ಶಾಲೆಯ ಮೇಷ್ಟರೊಬ್ಬ ತನ್ನ ವಿದ್ಯಾರ್ಥಿಗಳಿಗೆ ತರಗತಿಯೊಳಗೇ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದನಂತೆ!ಇಂಥ ಕೃತ್ಯಗಳು ಗುರು ಎನ್ನುವವನಿಂದಾದರೆ, ಮಕ್ಕಳ ಭವಿಷ್ಯದ ಕತೆಯೇನೂ? ಜೊತೆಗೆ ಜನರ ಬಾಯಿಗಳು,”ನಾಲ್ಕು ಮಕ್ಕಳಿಗೆ ವಿದ್ಯೆ ಕಲಿಸುವ ಮೇಷ್ಟರಾಗಿ ಇಂಥ ಕೆಲಸ ಮಾಡಿದರೆ, ಮಕ್ಕಳಿಗ್ಯಾವ ಮುಖ ಇಟ್ಕೊಂಡು ಬುದ್ದಿ ಹೇಳ್ತಾರೆ”, ಎಂದು ನುಡಿಯುತ್ತವೆ.ಮಾದರೀ ಶಿಕ್ಷಕ ಮಾದರೀ ರಾಷ್ಟ್ರಕ್ಕೆ ಬುನಾದಿ ಹಾಕುವುದರಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಾನೆ.

    ಅದಕ್ಕಾಗಿಯೇ ಶ್ರೀಸತ್ಯಸಾಯಿಬಾಬಾರವರು ತಮ್ಮ ವಿದ್ಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ,”ಈ ಎಚ್ ವಿ”,ಅಂದರೆ ಎಡುಕೇಷನ್,ಹ್ಯೂಮನ್ ವ್ಯಾಲ್ಯೂಸ್,ಎಂಬ ಪ್ರೋಗ್ರಾಮ್ ನಡೆಸಿ, ಅವರಿಗೆಲ್ಲಾ ಮಾನವೀಯ ಮೌಲ್ಯಗಳನ್ನ ಕುರಿತಾದ ತರಬೇತಿಯನ್ನ ನೀಡುತ್ತಿದ್ದರು.

     ಆಗಿನ್ನೂ  ಸ್ವತಂತ್ರ ಸಂಗ್ರಾಮ ಮುಗಿದು,ನಮಗೆ ಸ್ವತಂತ್ರದ ಸಿಕ್ಕು ಮಂತ್ರಿಪದವಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಬಾಲ ಗಂಗಾಧರ ತಿಲಕರನ್ನು ಅಭಿಮಾನಿಗಳು,”ನೀವೂ ಪ್ರಧಾನ ಮಂತ್ರಿಗಳ ಸ್ಥಾನಕ್ಕೆ ಯೋಗ್ಯರಲ್ಲವೇ?ನಿಮಗೆ ಆ ಸ್ಥಾನದಲ್ಲಿದ್ದು ಸೇವೆ ಮಾಡಲು ಇಷ್ಟವಿಲ್ಲವೇ?” ಎಂದು ಕೇಳಿದರಂತೆ. ಅದಕ್ಕೆ ಅವರು,” ದೇಶಕ್ಕೆ ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ, ಆರ್ಥಿಕ ಮಂತ್ರಿ,ವಿದ್ಯಾ ಮಂತ್ರಿಗಳನ್ನು ಕೊಡುವ ಶಿಕ್ಷಕ ವೃತ್ತಿಯೇ ಅತ್ಯಂತ ಶ್ರೇಷ್ಠವಾದದ್ದು. ಯಾವುದೇ ಉನ್ನತ ಪದವಿಗಳಿಗಿಂತಲೂ ನನಗೆ ಆ ವೃತ್ತಿಯೇ ಇಷ್ಟ”, ಎಂದರಂತೆ. ಹೌದಲ್ಲವೇ? ಸಮಾಜದ ಎಲ್ಲ ರಂಗಗಳಿಗೂ ಬೇಕಾದವರನ್ನು ಸೃಷ್ಟಿಸುವ ತ್ರಿಮೂರ್ತಿ ಸ್ವರೂಪರು ಈ ಶಿಕ್ಷಕರು!ಆ ಉದಾತ್ತಗುಣದ ವೃತ್ತಿಗೆ ಯಾವ ವೃತ್ತಿ ಸಾಟಿಯಾಗಿ ನಿಲ್ಲುತ್ತದೆ ಹೇಳಿ?

             ಏನೇ ಆಗ್ಲಿ, ಒಂದು ಕಾಲಕ್ಕೆ ಶಾಲೆ ಮೇಷ್ಟರು ಎಂದರೆ,ಅವರು “ಬಡವರು” ಎಂದು ಇನ್ನೊಂದು ಪದ ಬಳಸಬೇಕಾಗಿರಲಿಲ್ಲ. ಮೇಷ್ಟ್ರೆಂದರೆ ಬಡವರೇ ಅಂತ ಜನರ ಮನಸ್ಸಿನಲ್ಲಿ ಕುಳಿತು, ಅವರಿಗೆ ಹೆಣ್ಣು ಕೊಡಲೂ ಜನರು ಹಿಂದೂಮುಂದು ನೋಡುತ್ತಿದ್ದರು.”ಮೂರು ಕಾಸು ಕೋಣೆ ತುಂಬಾ ಹಾಸು,”ಅನ್ನುವಂತೆ,ಅವನಿಗೆ ಬರುವ ಸಂಬಳದಲ್ಲಿ ಅವನು ಬಾಳ್ವೆ ಮಾಡುವುದೇ ಕಷ್ಟಾ! ಅವನೇನು ಹೆಂಡತಿ, ಮಕ್ಕಳನ್ನ ಸಾಕ್ತಾನೆ?”ಅನ್ನುವ ಕಾಲವೊಂದಿತ್ತು. ಆದರೆ, ಈಗ ಹಾಗಿಲ್ಲ ರೀ. ಒಬ್ಬ ಸರಕಾರಿ ಪ್ರಾಥಮಿಕ ಶಾಲೆಯ ಮೇಷ್ಟರು ಕೂಡಾ ನನಗೆ ತಿಳಿದ ಮಟ್ಟಿಗೆ ಕೈತುಂಬಾ ಸಂಬಳ ಎಣಿಸುತ್ತಾರೆ.ಹಾಗಿದ್ದಾಗ, ಹೆಚ್ಚೇನೂ ಮಾಡದೇ, ಆ ತೆಗೆದುಕೊಳ್ಳುವ ಸಂಬಳಕ್ಕೆ, ಶಿಕ್ಷಕರು  ನ್ಯಾಯ ಒದಗಿಸಿಕೊಟ್ಟರೆ ಸಾಕು.ಯಾಕೆಂದರೆ,ಮನೆ ಟ್ಯೂಷನ್ನುಗಳ ಹಣದ ವ್ಯಾಮೋಹಕ್ಕೆ ಬಿದ್ದು ,ಶಾಲೆಗಳಲ್ಲಿ ಪಾಠ ಮಾಡುವ ಮೇಷ್ಟರಿಗೆಲ್ಲಾ ಪಾಠ ಮಾಡುವ ಆಸಕ್ತಿ ಕಡಿಮೆಯಾಗಿದೆ ಎಂದು ಬಹಳ ಜನರ ಅಂಬೋಣ! ಹಾಗೆಂದು ನಿಷ್ಠೆ ಇರುವ ಶಿಕ್ಷಕರು ಇಲ್ಲವೇ ಇಲ್ಲವೆಂದೇನಿಲ್ಲ. ಆದರೆ, ಕಾಲದಿಂದ ಕಾಲಕ್ಕೆ ಪರ್ಸೆಂಟೇಜ್ ನ ಗ್ರಾಫ್ ಕಮ್ಮಿಯಾಗುತ್ತಾ ಹೋಗುತ್ತಿರುವುದು ವಿಷಾದನೀಯ!ಮಾನವೀಯ ಮೌಲ್ಯಗಳು,ರಾಷ್ಟ್ರ ಪ್ರೇಮ,ಪರಿಸರ ಜಾಗೃತಿ,ಅನುಕಂಪ,ನೀತಿ,ನೇಮ,ಸಂಸ್ಕಾರ, ಸ್ವಚ್ಛತೆ, ಧರ್ಮದಂತಹ ತಳಹದಿಯನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರುವಂತೆ ಅರ್ಥ ಮಾಡಿಸುವುದಕ್ಕೆ ಶಿಕ್ಷಕರಿಂದ ಮಾತ್ರವೇ ಸಾಧ್ಯ! ಈ ತಳಹದಿ ಭದ್ರವಾಗಿದ್ದರೆ,ನಂತರ ನಮ್ಮ ಮಕ್ಕಳು ಯಾವುದೇ ವೃತ್ತಿಯಲ್ಲಿ ತೊಡಗಿಸಿಕೊಂಡರೂ, ಅಲ್ಲಿಯ ಕೆಲಸಗಳಿಗೆ ನ್ಯಾಯ ಒದಗಿಸುವುದರಲ್ಲಿ ಸಂದೇಹವೇ ಇಲ್ಲ! ಹೀಗಿದ್ದಾಗ ಸತ್ವಯುತವಾದ, ಸಂಪತ್ಬರಿತ, ಸಬಲ ರಾಷ್ಟ್ರ ನಿರ್ಮಾಣ ಖಂಡಿತ ಸಾಧ್ಯ!

ಶಿಕ್ಷಕ ವೃತ್ತಿಯನ್ನ ಆರಂಭಿಸಿ,ಸ್ವತಂತ್ರ ಭಾರತದ ಎರಡೇ ಅಧ್ಯಕ್ಷರಾದ,ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ರವರ ಹುಟ್ಟುಹಬ್ಬದಂದು 

ಆಚರಿಸಲಾಗುವ,ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ, ನನಗೆ ಬದುಕಲು ವಿದ್ಯೆ ಕಲಿಸಿದ ಎಲ್ಲ ಗುರುಗಳನ್ನೂ ಸ್ಮರಿಸಿ, ಅವರಿಗೆ ಅನಂತ ವಂದನೆಗಳನ್ನು ತಿಳಿಸುತ್ತೇನೆ.ಹಾಗೇ, ಮುಂದಿನ ಪೀಳಿಗೆಯನ್ನು ತಯಾರಿ ಮಾಡುವ ಗುರುತರ ಜವಾಬ್ದಾರಿ ಹೊತ್ತ ಎಲ್ಲ ಶಿಕ್ಷಕರಿಗೂ ನನ್ನ ವಂದನೆಗಳು ಹಾಗೂ ಶುಭ ಹಾರೈಕೆಗಳು. ಜೈ ಹಿಂದ್! ವಂದನೆಗಳು.


2 thoughts on “

Leave a Reply

Back To Top