ಲಲಿತ ಪ್ರಬಂಧ
ಕೇಶ ಪುರಾಣ
ಜ್ಯೋತಿ ಡಿ , ಬೊಮ್ಮಾ
ಅಧುನಿಕ ಕೇಶವಿನ್ಯಾಸಗಳು ಇತ್ತಿಚಿನ ಹೊಸ ಟ್ರೆಂಡ್ ಗಳಾಗುತ್ತಿವೆ. ಆಗೆಲ್ಲ ಕೇವಲ ಗಂಡಸರು ಮಾತ್ರ ತಲೆ ಕೂದಲು ಕತ್ತರಿಸಿಕೊಳ್ಳುವ ಪರಿಪಾಠವಿತ್ತು.ಹೆಣ್ಣು ಮಕ್ಕಳು ಕೂದಲಿಗೆ ಕತ್ತರಿ ಸೋಕಿಸುವದೇ ಅಪಶಕುನ ಎಂದು ಭಾವಿಸುವ ಕಾಲವೊಂದಿತ್ತು.ಆದರೆ ಅಧುನಿಕತೆ ಮುಂದುವರೆದಂತೆ ಹೇರ್ಕಟ್ ಎನ್ನುವದು ಲಿಂಗಾಧಾರಿತವಲ್ಲದ ಪ್ರಕ್ರಿಯೆ ಯಾಯಿತು. ನಾವು ಚಿಕ್ಕವರಿದ್ದಾಗ ತಲೆಗೂದಲು ಕತ್ತರಿಸುವದು ಕ್ಷೌರಿಕ ಮಾತ್ರವೆ ಎಂದು ಭಾವಿಸಿದ್ದೆವು, ಹೆಣ್ಣು ಮಕ್ಕಳಿಗೆ ಮೊದಲ ಮುಡಿ ಕೊಡುವ ಪದ್ದತಿ ಬಿಟ್ಟರೆ ಮತ್ತೆ ತಲೆಗೂದಲು ಕತ್ತರಿಸುವ ಪದ್ಧತಿಯೇ ಇರಲಿಲ್ಲ. ಕೆಲವರು ತಮ್ಮ ಹೆಣ್ಣುಮಗುವಿನ ಕೂದಲು ದಡುಸಾಗಿ ಬೆಳೆಯಲೆಂದು ಐದಾರು ವರ್ಷದ ವರೆಗೆ ತಲೆ ಪೂರ್ತಿ ಗುಂಡು ಹೊಡೆಸುತಿದ್ದರು.ಅದು ಕ್ಷೌರಿಕನ ಹತ್ತಿರವೆ. ಹುಡುಗಿಯರು ಸ್ವಲ್ಪ ದೊಡ್ಡವರಾಗುತಿದ್ದಂತೆ ಕ್ಷೌರಿಕನ ಮುಂದೆ ತಲೆ ಬಗ್ಗಿಸಿ ಕುಳಿತು ಕೊಳ್ಳುವದು ಮಜುಗರವನ್ನುಂಟು ಮಾಡುವದೆಂದು ತಮ್ಮ ತಲೆಗೂದಲ ಕತ್ವಿತರಿಸುವ ವಿನ್ಯಾಸಕ್ಕೆ ತಿಲಾಂಜಲಿ ಇಡಬೇಕಾಗುತಿತ್ತು.
ಯಾವಾಗ ಬ್ಯೂಟಿ ಪಾರ್ಲರ ಗಳು ಉದ್ಭವಿಸಿದವೂ ಮಕ್ಕಳು ಮಹಿಳೆಯರೆಲ್ಲ ಹೇರ್ ಕಟ್ ಮಾಡಿಸಿಕೊಳ್ಳುವದು ಸಾಮನ್ಯ ವಾಗುತ್ತ ಸಾಗಿತ್ತು.ಹೆಣ್ಣುಮಕ್ಕಳಿಗೆ ಬ್ಯೂಟಿ ಪಾರ್ಲರ್ ಗಳಾದರೆ , ಗಂಡು ಮಕ್ಕಳ ಸಲುವಾಗಿ ಮೇನ್ಸ ಪಾರ್ಲರ್ ಗಳು ಸ್ಥಾಪಿತವಾಗತೊಡಗಿದವು.ನಾವು ಚಿಕ್ಕವರಿದ್ದಾಗ ಉದ್ದವಾಗಿ ಅಡ್ಡಾದಿಡ್ಡಿ ಬೆಳೆದ ಕೂದಲಿಗೆ ಕಿವಿಯ ಮೇಲ್ಭಾಗ ದಲ್ಲಿ ಕತ್ತಿನ ಸುತ್ತಲು ಸಮಾನಾಂತರ ವಾಗಿ ಕತ್ತರಿಸುವ ಒಂದೇ ಒಂದು ಸ್ಟೈಲ್ ಪ್ರಚಲಿತವಾಗಿತ್ತು. ಬಹಳ ಫ್ಯಾಶನ್ ಎಂದರೆ ಹುಡುಗರಿಗೆ ಹಿಪ್ಪಿ ಕಟಿಂಗ್ , ಹುಡುಗಿಯರಿಗೆ ಸಾಧನಾ ಕಟಿಂಗ್. ಈ ಎರಡು ವಿನ್ಯಾಸಗಳು ಆಗಿನ ಟ್ರೆಂಡ್ ಗಳಾಗಿದ್ದವು. ಎರಡಕ್ಕೂ ಜಾಸ್ತಿ ವ್ಯತ್ಯಾಸ ವು ಇರುತ್ತಿರಲಿಲ್ಲ. ಉಳಿದಂತೆ ದೊಡ್ಡವರು ಕ್ಷೌರಿಕನಿಗೆ ತಲೆ ಒಪ್ಪಿಸಿ ಕುಳಿತರೆ ಮುಗಿಯಿತು.ಅವನು ಆಯಿತು ಎಂದಾಗ ತಿರುಗಿ ಕನ್ನಡಿಯೂ ನೋಡಿಕೊಳ್ಳದೆ ನಡೆಯುತಿದ್ದರು , ಚಿಕ್ಕ ಮಕ್ಕಳಿಗೆ ಹೇರ್ ಕಟ್ ಮಾಡಿಸಬೇಕಾದರೆ ಮನೆಯ ಯಾರಾದರೂ ದೊಡ್ಡವರು ಅವು ಎಷ್ಟೆ ಕೋಸರಾಡಿದರು ಬಿಡಿಸಿಕೊಳ್ಳಲು ತಿಣುಕಾಡಿದರು ಬಿಡದೆ ಎರಡು ಕೈಯಲ್ಲಿ ಅಮುಕಿ ಹಿಡಿದು ಕ್ಷೌರಿಕನ ಮುಂದೆ ಬಗ್ಗಿಸುತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಮಕ್ಕಳ ಕೈಗೆ ಫೋನ್ ಕೊಟ್ಟರೆ ಮುಗಿಯಿತು .ತಮ್ಮ ತಲೆಯೇ ತೆಗೆದರು ಅವುಗಳ ಅರಿವಿಗೆ ಬಾರದು.
ಈಗ ಉದ್ದ ಕೂದಲಿನ ನಾಗವೇಣಿಯರು ಅಲ್ಲೊಬ್ಬರು ಇಲ್ಲೋಬ್ಬರು ಕಾಣುತ್ತಾರೆ.ಉಳಿದಂತೆ ಎಲ್ಲರೂ ಪೋನಿಟೇಲಿ (ಕುದರೆ ಜುಟ್ಟು)ಗರೆ.
ಕೂದಲಿನ ನಿರ್ವಹಣೆ ಸಮಯ ತೆಗೆದುಕೊಳ್ಳುತ್ತದೆ.
ಅವುಗಳನ್ನು ತೊಳೆದು ಬಾಚಲು ಉದ್ದ ಕೂದಲಿರುವವರು ಬಹಳ ಸಮಯ ವ್ಯಯಿಸಬೇಕು.ಈಗಿನ ಧಾವಂತ ಬದುಕಿನಲ್ಲಿ ಸಮಯ ಯಾರಿಗಿದೆ. ಅದಕ್ಕೆ ಉದ್ದ ಕೂದಲಿನ ಆಕಾಂಕ್ಷಿಗಳು ಕಡಿಮೆಯೆ. ಶಾಲೆಗೆ ಹೊಗುವ ಮಕ್ಕಳಿಗೆ ತಲೆ ಬಾಚಿ ಜಡೆ ಹೆಣೆದು ಕಳಿಸಲು ಪಟ್ಣಣದ ತಾಯಂದಿರಿಗೆ ಸಮಯವಿಲ್ಲ.ಅದಕ್ಕೆ ಮಕ್ಕಳ ಕೂದಲನ್ನು ಕಿವಿಯ ವರೆಗೆ ಮಾತ್ರ ಬೆಳೆಯಲು ಬಿಡುತ್ತಾರೆ. ಕೂದಲನ್ನು ಇಬ್ಬಾಗ ಮಾಡಿ ಎರಡು ಕಡೆ ಒಂದೋಂದು ರಬ್ಬರ ಹಾಕಿದರೆ ಮುಗಿತು ತಲೆ ಬಾಚುವ ಶಾಸ್ತ್ರ. ಕೆಲವೊಂದು ಮಿಷನರಿ ಶಾಲೆಗಳಲ್ಲಂತೂ ಉದ್ದ ಕೂದಲಿದ್ದರೆ ಶಾಲೆಗಳಲ್ಲಿ ಪ್ರವೇಶ ವೇ ನಿಷಿದ್ದ.ನಾವು ಚಿಕ್ಕವರಿದ್ದಾಗ ಉದ್ದವಾಗಿ ಎರಡು ಜಡೆ ಹೆಣೆದು ಅದರ ಕೊನೆಗೆ ಬಣ್ಣದ ರಿಬ್ಬನ್ ಬಿಗಿದು ಮತ್ತೆ ಅದನ್ನು ಮೆಲ್ಬಾಗಕ್ಕೆ ಎತ್ತರಿಸಿ ಕಟ್ಟಿ ಬಲಭಾಗದ ಜಡೆಯ ಮೇಲೆ ಯಾವದಾದರು ಒಂದು ಹೂವಿನ ಮಾಲೆ ಮುಡಿದು ಹೋಗುವಂತಹ ಚಿತ್ರಣ ಈಗಿನ ಶಾಲೆಗೆ ಹೋಗುವ ಮಕ್ಕಳಲ್ಲಿ ಕಾಣುವದು ಅಪರೂಪ. ಪುಸ್ತಕದ ಚೀಲ, ಟಿಫಿನ್ ಬಾಕ್ಸನ್ ಚೀಲ ಯುನಿಫಾರ್ಮಗಳ ಗೋಜಿನಲ್ಲಿ ಸಮಯ ಹೊಂದಿಸುತ್ತ ಓಡುವ ಮಕ್ಕಳಿಗೆ ತಲೆ ಬಾಚಿಕೊಳ್ಳಲು ಪುರುಸೊತ್ತಿಲ್ಲ.
ಆದರೆ ಕಾಲೇಜಿಗೆ ಬರುವಷ್ಟರಲ್ಲಿ ಹುಡುಗ ಹುಡುಗಿಯರಲ್ಲಿ ಸೌಂದರ್ಯ ಪ್ರಜ್ಞೆ ಜಾಗ್ರತವಾಗಿ ಅವರು ತಮ್ಮ ಕೇಶ ವಿನ್ಯಾಸದೆಡೆ ಹೆಚ್ಚು ಆಕರ್ಷಿತರಾಗುತ್ತಾರೆ.ಈಗ ವಿವಿಧ ರೀತಿಯ ಹೇರ್ ಕಟ್ಗಳು ಪ್ರಚಲಿತದಲ್ಲಿವೆ.
. ಮುಖಕ್ಕೆ ಒಪ್ಪುವಂತೆ ಕೂದಲಿಗೆ ಆಕಾರ ಕೊಡುವ ಹೇರ ಎಕ್ಸಪರ್ಟಗಳ ಚಾಕಚಕ್ಯತೆಗೆ ಬೆರಗಾಗದೆ ಇರಲಾಗದು. ವಿವಿಧ ಕೇಶವಿನ್ಯಾಸಗಳಲ್ಲಿ ಹೆಚ್ಚು ಪ್ರಚಲಿತವಿರುವ ವಿನ್ಯಾಸಗಳು ,
ಲೇಯರ್ಡ ಕಟ್..ಕುತ್ತಿಗೆವರೆಗೆ ಕೂದಲು ಬರುವಹಾಗೆ ಪದರ ಪದರವಾಗಿ ಕಟ್ ಮಾಡಲಾಗುತ್ತದೆ.ಈ ಕಟ್ ನಿಂದ ತೆಳುವಾಗಿರು ಕೂದಲು ದಡುಸಾಗಿರುವಂತೆ ಕಾಣುತ್ತವೆ.
ಬ್ರೋಕನ್ ಕಟ್..ತಲೆಯಿಂದ ಕತ್ತಿನ ವರೆಗೂ ಚಿಕ್ಕಚಿಕ್ಕವಾಗಿ ಕೈಗೂ ಸಿಗದಂತೆ ಹಾರಾಡುವ ಕೂದಲು ಒಂದು ರೀತಿಯಲ್ಲಿ ಇಲಿ ತಿಂದತೆ ಕಾಣುತ್ತದೆ.ಇಲಿ ತಿಂದಂತೆ ಕಾಣುವ ಕೂದಲಿಗೆ ಭಾರಿ ಟ್ರೆಂಡ್ ಈಗ.
ಯು ಕಟ್ನಲ್ಲಿ ತಲೆಯಿಂದ ನೇರವಾಗಿ ಬೆನ್ನಮೇಲೆ ಬಿಳುವಂತಿರುವ ಕೂದಲು ಹಿಂದಿನಿಂದ ನೋಡಿದರೆ ಯು ಆಕಾರದಲ್ಲಿ ಕಾಣುತ್ತದೆ.ಇದೆ ರೀತಿ ವಿ ಆಕಾರ ಕೊಟ್ಟು ಕತ್ತರಿಸುತ್ತಾರೆ.ಇನ್ನೂ ಅನೇಕ ವಿವಿಧ ರೀತಿಯ ಕೇಶವಿನ್ಯಾಸಗಳು ಪ್ರಚಲಿತದಲ್ಲಿವೆ.ಒಟ್ಟಿನಲ್ಲಿ ತಲೆಯಲ್ಲಿ ಕೂದಲಿರಬೇಕು ಅಷ್ಟೆ.ಪ್ಯಾಶನ್ ಹೆಸರಿನಲ್ಲಿ ಪುರುಷರು ಮಾಡಿಕೊಳ್ಳುವ ಹೇರ್ ಕಟ್ ಗಳು ಚಿತ್ರ ವಿಚಿತ್ರವಾಗಿರುತ್ತವೆ.ಮಹಿಳೆಯರಿಗಿಂತ ಪುರುಷರಿಗೆ ಕೇಶವಿನ್ಯಾಸದ ಅವಕಾಶಗಳು ಹೆಚ್ಚು ಇವೆಯಂತೆ. ಕೂದಲು ಉದ್ದವಾಗಿ ಬೆಳೆಸಿ ಹಿಂದೆ ಒಂದು ರಬ್ಬರ ಹಾಕಿ ಪೊನಿಟೇಲ್ ಹಾಕುವದು ಪುರುಷರ ಕೇಶವಿನ್ಯಾಸದ ಅಧುನಿಕ ಟ್ರೆಂಡ್ ಆಗಿದೆ.
ಚಿಕ್ಕಂದಿನಲ್ಲಿ ಹುಲುಸಾಗಿ ದಟ್ಟವಾಗಿರುವ ಕೂದಲು ಕೃಮೇಣ ಅದೇಗೆ ಮಾಯವಾಗುತ್ತ ಬರುತ್ತವೋ ಅರಿವೆ ಆಗದು.ಅವುಗಳನ್ನು ಹಿಡಿದಿಡಲು ಅದೆಷ್ಟು ಸರ್ಕಸ್ ಮಾಡಿದರು ಉದುರುವದು ಮಾತ್ರ ತಡೆಯಕಾಗದು.ಕೂದಲು ಉದುರುವ ಸಮಸ್ಯೆ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲೆ ಅಧಿಕ.ಅದಕ್ಕೆ ಅನುವಂಶಿಯತೆಯು ಕಾರಣವಂತೆ.ಮೊದಲೆಲ್ಲ ಸಿಕಾಕಾಯಿ ಅಥವಾ ಅಂಟುವಾಳಕಾಯಿಯಿಂದ ತಲೆ ತೊಳೆದರಾಯಿತು ತಲೆಸ್ನಾನ ಸಂಪನ್ನವಾಗುತಿತ್ತು.ಈಗ ವಿಧವಿಧ ಶಾಂಪೂಗಳು , ಕಂಡಿಷನರ್ ಗಳು , ಸೀರಮ್ ಗಳು ಅವುಗಳ ಜಾಹಿರಾತಿಗೆ ಮರುಳಾಗಿ ಉಪಯೋಗಿಸಿದಷ್ಷೆ ಬಂತು , ಪರಿಣಾಮ ಮಾತ್ರ ಸೊನ್ನೆ.ಒಟ್ಟಿನಲ್ಲಿ ತಲೆಗೂದಲಿನ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಲೆ ಇದೆ.
ಹೆಣ್ಣು ಮಕ್ಕಳು ತಲೆಗೂದಲಿಗೆ ಕತ್ತರಿ ಸೋಕಿಸುವದು ಅಮಂಗಳಕರ ಎಂದು ಭಾವಿಸುವ ಕಾಲವೊಂದಿತ್ತು.ಈಗ ಯಾವದೇ ಶುಭ ಸಮಾರಂಭವಿರಲಿ ನೇರವಾಗಿ ಬ್ಯೂಟಿ ಪಾರ್ಲರ್ ನಿಂದಲೇ ಆಗಮಿಸುತ್ತಾರೆ.ಹುಬ್ಬಿಗೆ ಕೂದಲಿಗೆ ಕತ್ತರಿಯಿಂದ ಸುಂದರವಾದ ಆಕಾರ ಕೊಟ್ಟಾಗಲೇ ಅಲಂಕಾರ ಪೂರ್ಣಗೊಳ್ಳುವದು.ಆಗ ಕ್ಷೌರವಾದ ನಂತರ ಸ್ನಾನ ಮಾಡದೇ ಮನೆ ಒಳಗೆ ಪ್ರವೇಶಿಸಲು ನಿರ್ಬಂಧ ವಿಧಿಸುತಿದ್ದರು.ಆದರೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬಂದರೆ ಅಂತಹ ಯಾವ ನಿರ್ಬಂಧವು ಇಲ್ಲ. ನೇರ ದೇವಸ್ಥಾನದೊಳಗೂ ಹೋಗಬಹುದು.
ನಾನು ಚಿಕ್ಕವಳಿದ್ದಾಗ ತಲೆಗೂದಲು ದಡುಸಾಗಿ ಉದ್ದವಾಗಿದ್ದವು.ಕಾಲೇಜಿಗೆ ಬಂದಾಗ ಸಹಪಾಠಿ ಗೆಳತಿಯರ ಚಿಕ್ಕ ಚಿಕ್ಕ ವಿವಿಧ ಕೇಶವಿನ್ಯಾಸಕ್ಕೆ ಮರುಳಾಗಿ ನನಗೂ ಕೂದಲು ಚಿಕ್ಕವಾಗಿಸುವ ಇಚ್ಚೆಯಾಯಿತು. ಕೂದಲು ಕಟ್ಟಿಕೊಳ್ಳಲು ಬಹಳ ಸಮಯಬೇಕು , ಓದಲು ಸಮಯ ಸಿಗುತ್ತಿಲ್ಲ ಎಂದು ನೆವ ಹೇಳಿ ಬ್ಯೂಟಿ ಪಾರ್ಲರಗೆ ಹೋಗಿ ಹೇರ್ಕಟ್ ಮಾಡಿಸಿಕೊಂಡಿದ್ದೆ.ಈ ಪ್ರಕ್ರೀಯೆ ನಿರಂತರ ಮುಂದುವರೆಯಿತು.
ಅಂಗೈ ಮುಷ್ಟಿಗೂ ಸಾಕಾಗದಂತೆ ದಪ್ಪವಿದ್ದ ಕೂದಲು ಯಾವಾಗ ಕೈಬೆರಳಿನಲ್ಲಿ ಹಿಡಿಯುವಷ್ಟಾದವೋ ಆತಂಕ ಶುರುವಾಯಿತು.ಈಗ ಎಷ್ಟೆ ವಿಧವಾಗಿ ಪೋಷಿಸಿದರೂ ಕೂದಲುದುರುವದು ತಡೆಯುವದು ಅಸಾದ್ಯ.
ಈಗ ಯುನಿಸೆಕ್ಸ ಪಾರ್ಲರ್ ಗಳು ಹೆಚ್ಚು ಪ್ರಚಲಿತವಾಗಿವೆ.ಹೆಣ್ಣು ಗಂಡುಗಳೆಂಬ ಭೆಧವಿಲ್ಲದೆ ಎಲ್ಲರೂ ಹೇರ್ ಕಟ್ ಮತ್ತು ಕೇಶವಿನ್ಯಾಸ ಮಾಡಿಕೊಳ್ಳುವ ಇಂತಹ ಪಾರ್ಲರ್ಗಳು ಫ್ಯಾಷನ್ ಪ್ರಿಯರ ಅಚ್ಚು ಮೆಚ್ಚಿನ ತಾಣಗಳು. ಲಾರಿಯಲ್ , ಜಾವೇದ್ ಹಬೀಬ್ , ಗ್ಲೇಜ್ ಯುನಿಸೆಕ್ಸ ಪಾರ್ಲರ್ ಗಳಲ್ಲಿ ನುರಿತ ಕೇಶವಿನ್ಯಾಸಗಾರರಿರುತ್ತಾರೆ.
ಒಂದೊಮ್ಮೆ ಕ್ಷೌರಿಕನಿಂದ ತಲೆಗೂದಲು ಕತ್ತರಿಸಿಕೊಳ್ಳಲು ಮಜುಗುರ ಪಡುತಿದ್ದ ಹುಡುಗಿಯರು ಮತ್ತು ಮಹಿಳೆಯರು ಇಂದು ಪುರುಷ ಕೇಶವಿನ್ತಾಸಗಾರರ ಮೊರೆ ಹೋಗುತ್ತಾರೆ.ದೊಡ್ಡದೊಡ್ಡ ಸೆಲೆಬ್ರಿಟಿ ಹಿರೋಯಿನ್ ಗಳ ಕೇಶವಿನ್ಯಾಸಗಾರರೆಲ್ಲ ಪುರುಷರೆ. ಇವರಲ್ಲಿ ಬಹುತೇಕರು ಈಶಾನ್ಯ ಭಾರತ ಮತ್ತು ಡೆಲ್ಲಿ ಮೂಲದವರು. ತಲೆಗೂದಲನ್ನು ನವಿರಾಗಿ ತೊಳೆದು ಹೊಳಪು ಬರಿಸಿ ನಮ್ಮ ಮುಖದ ಆಕಾರಕ್ಕೆ ತಕ್ಕಂತೆ ಹೇರ್ಕಟ್ ಮಾಡಿ ಕೂದಲನ್ನು ಅಲೆಅಲೆಯಾಗಿ ಹರವುತ್ತ ಅವುಗಳ ಸ್ಟೈಲ್ ಕನ್ನಡಿಯಲ್ಲಿ ತೋರಿಸಿದಾಗ ನಾವು ಯಾವ ಸೆಲೆಬ್ರಿಟಿ ಗಿಂತಲೂ ಕಮ್ಮಿಯಿಲ್ಲ ಎಂದು ಕ್ಷಣ ಅನಿಸುವದುಂಟು.ಸ್ಟೇಟಸ್ ನಲ್ಲಿ ವಿತ್ ಮೈ ಹೇರ್ ಸ್ಟೈಲಿಸ್ಟ ಎಂದು ಪೋಟೋ ಹಾಕಿದರಾಯಿತು.ಆ ಪಾರ್ಲರ್ಗಳಿಗೆ ಮತ್ತಷ್ಟು ಗಿರಾಕಿಗಳು ಗ್ಯಾರಂಟಿ.
ತಲೆಗೂದಲು ಮುಖಕ್ಕೊಂದು ಶೋಭೆಕೊಡುತ್ತದೆ.ಎಷ್ಟು ಆತ್ಮವಿಶ್ವಾಸ ತುಂಬುತ್ತದೋ ಕೆಲ ಸಂದರ್ಭದಲ್ಲಿ ಅಷ್ಟೆ ಆತ್ಮವಿಶ್ವಾಸ ಕಸಿಯಬಲ್ಲದು. ತಲೆತುಂಬಾ ಜೊಂಪೆಯಾಗಿದ್ದ ಕೂದಲು ಉದುರುವಾಗ ಮನ ಆತಂಕಕ್ಕೊಳಗಾಗುತ್ತದೆ.ಕೆಲ ಕ್ಯಾನ್ಸರ್ ನಂತಹ ರೋಗಗಳು ಚಿಕಿತ್ಸೆ ಯ ಪ್ರತಿಕೂಲ ಪರಿಣಾಮದಿಂದ ತಲೆಪೂರ್ತಿ ಬೋಳಾಗುವ ಸಂದರ್ಬ ಅವರು ಅನುಭವಿಸುವ ಮಾನಸಿಕ ಯಾತನೆ ಅನುಭವಕ್ಕೆ ನಿಲುಕದು. ಈಗ ಇಂತಹ ಮಜುಗುರ ತಪ್ಪಿಸಲು ಅನೇಕ ರೀತಿಯ ವಿಗ್ ಗಳು ಲಭ್ಯವಿವೆ.
ಈಗ ಎಲ್ಲರಿಗೂ ದೇಹದ ಇತರ ಅಂಗಗಳಂತೆ ಕೂದಲು ಕೂಡ ಅತ್ಯಮೂಲ್ಯ ವಾಗಿವೆ.
ಜ್ಯೋತಿ ಡಿ , ಬೊಮ್ಮಾ.