ಅಂಕಣ ಸಂಗಾತಿ

ಪ್ರಸ್ತುತ

ಗಣೇಶೋತ್ಸವ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ

ನಿರ‍್ವಿಘ್ನಂ ಕುರುಮೇದೇವ ಸರ್ವಕರ‍್ಯೇಸು ಸರ್ವಧಾ

     ಶ್ರೀ ಗಣೇಶ ಬುದ್ಧಿವಂತಿಕೆ, ಜ್ಞಾನ, ಹೊಸ ಆರಂಭಗಳ ದೈವ. ಈ ಗಣೇಶನ ಪರಿಕಲ್ಪನೆಗೆ ಶತಮಾನದ ಇತಿಹಾಸವಿದೆ. ಕಿರುಗಣ್ಣಿನ ಕರಿವದನ ಮೊರದಗಲದ ಕಿವಿಯ ಕರುಣಾಸಾಗರ, ವಿಘ್ನವಿನಾಶಕ ವಿನಾಯಕನು ಸಕಲಕರ‍್ಯಕೂ ಪ್ರಥಮ ಪೂಜಿಪನಾಗಿರುವ ವಿಚಿತ್ರಮೋರೆಯ ಗಣೇಶ ಎಂಬ ದೈವ ಜ್ಯಾತಾತೀತನು.

   ಶಿವ ಪಾರ್ವತಿಯರ ಮಗನೆನ್ನಲಾದ ಗಣೇಶನ ಬಗ್ಗೆ ನೂರಾರು ದಂತಕಥೆಗಳಿವೆ, ಸಾವಿರಾರು ಹಾಡುಗಳಿವೆ . ಬಹುತೇಕ ಎಲ್ಲರ ಮೆಚ್ಚಿನ ದೈವವಾಗಿರುವುದು ಗಣೇಶನ ಹೆಗ್ಗಳಿಕೆ. ಭಾದ್ರಪದಮಾಸದ ಶುಕ್ಲಪಕ್ಷ ಚೌತಿಯ ದಿನ ಆರಂಭವಾಗುವ ಗಣೇಶೋತ್ಸವವು ನಾಡಹಬ್ಬದಂತಾಗಿ ಇಷ್ಟು ಪ್ರಚಲಿತವಾಗಬೇಕಾದರೆ ೧೮೯೩ ರಲ್ಲಿ ಲೋಕಮಾನ್ಯ ತಿಲಕರು ಸಾಮೂಹಿಕ ಸಂಘಟನೆಯಾಗಿ ಈ ಹಬ್ಬವನ್ನು ಪರಿವರ್ತಿಸಿದರು. ಜಾತಿ ಪದ್ಧತಿ ನಿರ್ಮೂಲನೆ ಮತ್ತು ಬ್ರಿಟಿಷರ ವಿರುದ್ಧ ಚಳುವಳಿ ಉತ್ತೇಜಿಸಲು ಈ ನರ‍್ಧಾರ ಕೈಗೊಳ್ಳುತ್ತಾರೆ. ಆಗಲೇ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿ ಮುಟ್ಟಿದ್ದು.  ೧೮೯೪ ರಲ್ಲಿ ಪ್ರಥಮ ಗಣೇಶೋತ್ಸವ ಪುಣೆಯಲ್ಲಿ ನಡೆಯಿತು.

    ದೇವರಿಗೆ ಹೆಸರಿಡುವುದು ಅಪಚಾರವೆನಿಸೀತು.  ಆದರೆ ಗಣೇಶನ ಆಕಾರಕ್ಕೇ ಒಂದು ವೈಚಾರಿಕ ಅರ್ಥವೇ ಇದೆ .ತುಂಬಾ ಕೇಳಿಸಿಕೊಳ್ಳಬೇಕು ಎಂಬ ಸೂಚ್ಯವಾಗಿ ಮತ್ತು ನೆರವು ಕೋರುವ ಜನರ ಮೊರೆಯನಾಲಿಸಲೆಂದೇ ಮೊರದಗಲದ ಕಿವಿಯಂತೆ ಅದಕ್ಕೇ ಅವನು ಮಹಾಕರ್ಣ. ಹಣೆಯ ಮೇಲಿನ ತ್ರಿಶೂಲ ಭೂತ, ವರ್ತಮಾನ, ಭವಿಷ್ಯತ್ ಗಳ ಸಂಕೇತ. ಕಿರುಗಣ್ಣು ಕರುಣೆಯ ಮಹಾಪೂರ. ಆನೆಯ ತಲೆ ನಂಬಿಕೆ, ವಿವೇಚನೆಗಳ ಸೂಚಕ. ಏಕದಂತ ಎಲ್ಲ ದ್ವಂದ್ವಗಳ ಮೀರುವ ಸಾಮರ್ಥ್ಯದ ಸೂಚಕ. ಇನ್ನಬ್ಬರ ದೂರು ಆರೋಪ, ಚಾಡಿ ಗುಟ್ಟುಗಳನ್ನು ಹೊಟ್ಟೆಯಲ್ಲಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ದೊಡ್ಡ ಹೊಟ್ಟೆಯ ಲಂಬೋದರ ಎಂತಹ ಭಾರವನ್ನೂ ಹೊರಬಹುದು ಎಂಬ ಸಂಕೇತವಾಗಿ ಮೂಷಿಕ. ಹೀಗೆ ತನ್ನ ದೇಹಾಕಾರದಲ್ಲೇ ಜೀವನದರ್ಥ ಸಾರುವ ಶ್ರೀ ಗಣೇಶೋತ್ಸವವನ್ನು  ಛತ್ರಪತಿ ಶಿವಾಜಿ ಆಚರಿಸಲು ಆರಂಭಿಸಿದನೆAದು ಇತಿಹಾಸದಲ್ಲಿದೆ.

B

   ಶ್ರೀ ಸಿದ್ಧಿವಿನಾಯಕ ವಿಘ್ನೇಶ್ವರನ ಪೂಜೆ ಸುಮಾರು ೩೫೦೦ ವರ್ಷಕ್ಕೂ ಹಿಂದೆಯೇ ಋಗ್ವೇದದಲ್ಲಿ ಗಣೇಶ ಸ್ತುತಿಯ ಪ್ರಸ್ತಾಪವಿದೆ. ಕ್ರಿ, ಶ ೨ ನೇ ಶತಮಾನದಲ್ಲಿ ಗಣೇಶ ಪೂಜೆ ಆರಂಭವಾಗಿರಬೇಕೆAಬುದು ಇತಿಹಾಸಕಾರರ ಅಭಿಪ್ರಾಯ. ವಿದೇಶದಲ್ಲೂ ಗಣಪತಿ ಪೂಜೆ ಪ್ರಚಲಿತದಲ್ಲಿದೆ. ಜಾವಾ, ಕಂಬೋಡಿಯ, ಬೋರ್ನಿಯ ಮುಂತಾದ ಆಗ್ನೇಯ ಏಷ್ಯಾ ರಾಷ್ಟçಗಳಲ್ಲಿ ಹಿಂದೂ ಸಂಪ್ರದಾಯದ ಗಣಪತಿ ಇದ್ದರೆ  ಚೀನಾ, ಜಪಾನ್ ಶ್ರೀಲಂಕಾಗಳಲ್ಲಿ ಬೌದ್ಧರ ಪ್ರಭಾವದಿಂದ  ಮಾರ್ಪಟ್ಟ ಗಣೇಶ ವಿಗ್ರಹಗಳು ಕಾಣಸಿಗುತ್ತವೆ. ಜಪಾನ್ ನಲ್ಲಿ ಗಣಪತಿ ‘ಕಂಗಿಟೆನ್’ ಎಂದು ಕರೆಸಿಕೊಳ್ಳುತ್ತಾನೆ. ಉತ್ತರಭಾರತದಲ್ಲಿ ವೇದವ್ಯಾಸರು ಗಣೇಶನಿಂದ ಮಹಾಭಾರತವನ್ನು ಬರೆಸಿದರೆಂದು ಹೇಳಲಾಗುತ್ತದೆ. ಮೊದಲನೇ ಗಣೇಶ ಭಕ್ತ ಮೊರೋಬಾ ಎಂಬ ಉಲ್ಲೇಖವಿದೆ .

    ಶ್ರೀ ಗಣೇಶೋತ್ಸವ ಆಚರಣೆ ಇಂದು ಸರಳತೆಯ ಮೇರೆ ಮೀರಿ ಆಡಂಬರದ ಅಂಬಾರಿ ಏರಿ ಆಚರಿಸಲಾಗುತ್ತದೆ. ಮನೆ ಆಪೀಸು, ರಾಜಕಾರಣಿಗಳನ್ನು ಕಾಡಿ ಬೇಡಿ ಚಂದಾಸAಗ್ರಹಿಸಿ ಮೋಜು ಮಸ್ತಿ, ಕಿವಿ ಗಡಿಚಿಕ್ಕುವ ಡಿ ಜೆ ಕುಣಿತಗಳಿಂದ ಅಬ್ಬರಿಸುತ್ತಿದೆ. ಮಾಧ್ಯಮಗಳು ಸಾವಯವ ಗಣೇಶ ಮೂರ್ತಿಗೆ ಅದೆಷ್ಟೇ ರೀತಿಯಲ್ಲಿ ಅರಿವು ಮೂಡಿಸುತ್ತಿದ್ದರೂ ಪಿ ಓ ಪಿ ಗಳಿಂದ ಮಾಡಿದ ರಾಸಾಯನಿಕ ಬಣ್ಣ ಬಳಿದ ಮೂರ್ತಿಗಳ ರಾರಾಜಿಸುವಿಕೆ ವಿಷಾದನೀಯ.

     ಇದರಿಂದ ಎಷ್ಟೋ ನದಿಗಳು ಕಲುಷಿತಗೊಂಡು ಅಲ್ಲಿನ ಜಲಚರಗಳು ಸಾವನ್ನಪ್ಪಿ  ಜಾಗತಿಕ ಅಸಮತೋಲನ ಉಂಟಾಗುವುದರ ಬಗ್ಗೆ ಸಾಮಾನ್ಯರಿಗೆ ಸಾಮಾನ್ಯ ಅರಿವೂ ಇಲ್ಲದಿರುವುದು ದುರ್ದೈವ. ಗಣೇಶೋತ್ಸವ ಸಮಯದಲ್ಲಿ ಸುಡುವ ಸಾವಿರಾರು ರೂಪಾಯಿಗಳ ಪಟಾಕಿಗಳಿಂದ ವಾಯು ಮಾಲಿನ್ಯ ಉಂಟಾಗಿ ಆ ವಿಷ ಗಾಳ ಸೇವಿಸಿ ಅನಾರೋಗ್ಯ ಉಂಟಾಗುವುದು. ಭಯಂಕರ ಪಟಾಕಿ ಸದ್ದಿಗೆ ಪಕ್ಷಿಗಳು ಗಲಿಬಿಲಿಗೊಂಡು  ದಿಕ್ಕಾಪಾಲಾಗಿ ಹೋಗುವ ಭರದಲ್ಲಿ ಅವುಗಳ ಮೊಟ್ಟೆಗಳು ಬಿದ್ದು ಒಡೆದು  ಅನೇಕ ಪಕ್ಷಿಗಳ ಸಂತತಿ ವಿನಾಶದ ಅಂಚಿನಲ್ಲಿದೆ.

   ಕಳೆದ ವರ್ಷದಿಂದ ಕರೋನ ಮಹಾಮಾರಿ ಕಾಣಿಸಿಕೊಂಡು ಎಲ್ಲಾಹಬ್ಬಗಳೂ ಬಹಳೇ ಸರಳವಾಗಿರುವುದು ಒಂದು ರೀತಿ ಸಮಾಧಾನ. ಪುಟ್ಟ ಮಣ್ಣಿನ ಮೂರ್ತಿ ಮಾಡಿ ಪೂಜಿಸಿ ಮನೆಯ ಟ್ಯಾಂಕಿನಲ್ಲೋ ಬಕೆಟ್ ನಲ್ಲೋ ವಿಸರ್ಜಿಸಿ ಅದೇ ನೀರನ್ನು ಕೈ ತೋಟಕ್ಕೆ ಬಳಸಿದಾಗ ಅದು ಸಾರ್ಥಕ ಹಬ್ಬ ಎಂಬ ಮಟ್ಟಿಗೆ ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಅದರಲ್ಲೂ ಈ  ಸಂದಿಗ್ಧ ಪರಿಸ್ಥಿತಿಯಲ್ಲಿ ಈ ತರಹದ ಆಚರಣೆ ಅವಶ್ಯವೂ ಆಗಿದೆ. ಹೇಗೆ ಹರಡುವುದೆಂಬ ಕಲ್ಪನೆಯೇ ಇಲ್ಲದ ಸಾಂಕ್ರಾಮಿಕ ಸರಪಳಿ ತುಂಡರಿಸಬೇಕಾಗಿದೆ. ಕಾಯವೇ ನಿನದು ನಿನಗರ್ಪಿತವಾಗಲಿ ಎಂದು ಸಾಂಕೇತಿಕವಾಗಿ ಕಾಯಿ ಒಡೆಯುತ್ತೇವೆ. ಹಾಗೇ ದೇವರು ಕೊಟ್ಟ ಈ ಜೀವ ಜೀವನ ಬದುಕು ಭಾಗ್ಯಗಳ ಉಡುಗೊರೆಗೆ ಬದಲಾಗಿ  ಶುದ್ಧಭಾವದ ಸರಳ ಪೂಜೆಯೇ ಧನ್ಯವಾದ, ಕೃತಜ್ಙತೆಯಲ್ಲದೇ ಇನ್ನೇನು ಕೊಡಲು ಸಾಧ್ಯ?

   ಹೀಗಾಗಿ ಸಂದರ್ಭಕ್ಕೆ ತಕ್ಕಂತೆ ಬದಲಾಗಬೇಕಾದುದು ಅವಶ್ಯವಾಗಿದೆ. ನಾವೇ ಪ್ರತಿಷ್ಢಾಪಕರು ನಾವೇ ಪೂಜಿಪರು, ನಾವೇ ಸೇವಿಪರು ಹಾಗೆ ಬದಲಾಗದಿದ್ದಲ್ಲಿ ನಾವೇ ಆಚರಿಪರು ನಾವೇ ಅನುಭವಿಪರು ಎಂದಾಗಬಹುದು. ಹಾಗಾಗುವುದು ಬೇಡವಾದಲ್ಲಿ ಈ ಗುಂಪು, ಗದ್ದಲ ಕುಣಿತಗಳು ಸಧ್ಯದ ಮಟ್ಟಿಗಾದರೂ  ಸರಳ ಆರಾಧನೆ ಉಪಾಸನೆ ಗಳಾದರೆ ಹಬ್ಬ ಆರೋಗ್ಯಪೂರ್ಣವಾದೀತು. ಬದಲಾವಣೆಗೆ ನಾವೇ ಮುನ್ನುಡಿ ಬರೆಯೋಣ.


                                                                                                    ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ

Leave a Reply

Back To Top