ಸಿನಿ ಸಂಗಾತಿ

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ….

ಶರಾವತಿಯ ಹಿನ್ನೀರಿನಲ್ಲಿ ಪುಟ್ಟದೊಂದು ದ್ವೀಪ ದಂಥ ಊರು .ಮಲೆನಾಡಿನ ಸುಂದರ ಪರಿಸರದ ಹಳ್ಳಿಯಲ್ಲಿ  ಶಂಕರ (ದಿಗಂತ್ )ನಮ್ಮ ಚಿತ್ರದ ಕಥಾನಾಯಕ.

ಗೊಬ್ಬರ ಮಾರುವುದು ಅವನ ವ್ಯಾಪಾರ .ಅವನೊಬ್ಬ ರೈತನೂ ಸಹ .ಅವನು ಮತ್ತು ಅವನ ತಾಯಿ (ಶಾರದಾ ಮೂರ್ತಿ) ಇವರಿಬ್ಬರದೇ ಪುಟ್ಟ ಸಂಸಾರ.

        ಶಂಕರನಿಗೆ ಒಬ್ಬ ಪ್ರೇಯಸಿ ಸೌಮ್ಯ( ರಂಜನಿ ರಾಘವನ್). ಮಧ್ಯಮ ವರ್ಗದ ರೈತಾಪಿ ಕುಟುಂಬದ ಹಿನ್ನೆಲೆ ಶಂಕರನದು. ಅವನದು ಭಾರಿ ಲೆಕ್ಕಾಚಾರದ ಸ್ವಭಾವ .

              ತಿಂಗಳ ಸಂಬಳವಿಲ್ಲದ ಅವನ ದುಡಿಮೆಯಲ್ಲಿ ಪೈಸೆ ಪೈಸೆಯನ್ನು ಅಳೆದು ಸುರಿದು ಅವನು ಖರ್ಚು ಮಾಡುತ್ತಾನೆ. ಹಿಂದು ಮುಂದು ಯೋಚಿಸಿ ಖರ್ಚು ಮಾಡುವ ಶಂಕರ ಪ್ರತಿಯೊಂದು ಪೈಸೆಗೂ ಲೆಕ್ಕ ಬರೆಯುತ್ತಾನೆ.

            ಹೀಗಿರುವ ಶಂಕರ ಗಾಡಿಗೆ ಪೆಟ್ರೋಲ್ ಹಾಕಿಸಲು ಹೋಗಿ ಹಣಕ್ಕಾಗಿ ತನ್ನ ಎಟಿಎಂ ಕಾರ್ಡಿನಿಂದ ಎರಡು ಬಾರಿ ಸ್ವೈಪ್ ಮಾಡುತ್ತಾನೆ. ಅಲ್ಲಿ ಅವನು ತನ್ನ ಬ್ಯಾಂಕ್ ನ ಖಾತೆಯಿಂದ ಹಣ ಕಳೆದುಕೊಳ್ಳುತ್ತಾನೆ.

             ತಾನು ಕಳೆದುಕೊಳ್ಳುವ 2300 ರೂಗಳನ್ನು ವಾಪಸ್ಸು ಪಡೆಯಲು ಬ್ಯಾಂಕ್ ನ ಮ್ಯಾನೇಜರ್ ರನ್ನು ಭೇಟಿಯಾಗಿ ವಿಷಯತಿಳಿಸುತ್ತಾನೆ. ಅಲ್ಲಿ ಅವನಿಗೆ ನ್ಯಾಯ ದೊರೆಯದಿದ್ದಾಗ ಬೆಂಗಳೂರಿನ ಮುಖ್ಯ ಕಚೇರಿಗೆ ದೂರು ನೀಡಲು ಬರುತ್ತಾನೆ.

           ಅಲ್ಲಿಯೂ ಅವನಿಗೆ ಸರಿಯಾದ ಉತ್ತರ ದೊರೆಯುವುದಿಲ್ಲ. ವಕೀಲೆ ಪದ್ಮಾಳನ್ನು ಅವನು ಸಂಪರ್ಕಿಸುತ್ತಾನೆ.

         ತಾನು ಕಳೆದುಕೊಂಡ ಹಣವನ್ನು ಹಿಂಪಡೆಯಲು ಬ್ಯಾಂಕಿನ ವಿರುದ್ಧ ಕೇಸ್ ಹಾಕುತ್ತಾನೆ, ಈ ನಡುವೆ ತನ್ನ ಪ್ರೇಯಸಿಗಾಗಿ ಅವಳ ಆಸೆಯಂತೆ ೩ ಗ್ರಾಂ ನ ಚಿನ್ನದ ಮೂಗುತಿಯನ್ನು ಮಾಡಿಸಿಕೊಡಲಾಗದೇ ಅವಳು ಅವನಿಂದ ದೂರವಾಗುತ್ತಾಳೆ.

        ಶಂಕರ ಬೆವರು ಸುರಿಸಿ ದುಡಿದ ಹಣವನ್ನು ಪಡೆಯಲು ಹಾಕಿದ್ದ ಕೇಸು ಗೆಲ್ಲುವನೇ? ಆ ಹಾದಿಯಲ್ಲಿ ಅವನಿಗೆ ಬರುವ ಅಡ್ಡಿಗಳೇನು? ಹೊಸದಾಗಿ ವಕೀಲ ವೃತ್ತಿ ಆರಂಭಿಸಿರುವ ಪದ್ಮ ಯಶಸ್ವಿಯಾಗಿ ವಾದ ಮಂಡಿಸಿ ಕೇಸ್ ಗೆಲ್ಲುವಂತೆ ಮಾಡಿದಳೇ ? ಎಂಬುದು ಚಿತ್ರದ ಕುತೂಹಲಕಾರಿ ಘಟ್ಟ.

         ಚಿತ್ರದ ಮೊದಲ ಅರ್ಧ ಭಾಗ ನಿಧಾನವಾಗಿ ಸಾಗುತ್ತದೆ. ಚಿತ್ರವು ಎರಡನೆಯ ಭಾಗದಲ್ಲಿ ಬಿರುಸನ್ನು ಪಡೆಯುತ್ತದೆ. ಸಾಮಾನ್ಯವಾದ ಸಿನಿಮಾದ ಕಥೆಗಳಿಗಿಂತ ಭಿನ್ನಕಥಾವಸ್ತುವನ್ನು ಹೊಂದಿರುವುದು ಚಿತ್ರದ ವೈಶಿಷ್ಟ್ಯ .ಆದ್ದರಿಂದ ಚಿತ್ರದ ನಿರ್ದೇಶಕ ವಿನಾಯಕ ಕೊಡ್ಸರ ಅವರಿಗೆ ಮೆಚ್ಚುಗೆ ಸೂಚಿಸಲೇಬೇಕು. ಚಿತ್ರವು ಲಘು ಹಾಸ್ಯದ ವಿಡಂಬನಾತ್ಮಕ ಚಿತ್ರವಾಗಿದ್ದರೂ ಹಾಸ್ಯದ ಸನ್ನಿವೇಶಗಳು ಕಡಿಮೆ. ಕಥೆ ವಿಶೇಷವಾಗಿದ್ದರೂ ಹೇಳುವಾಗ ಮತ್ತಷ್ಟು ಸೊಗಸಿರಬೇಕಿತ್ತು ಎನಿಸುವುದು.

      ಶಂಕರ್ ಹಾಗೂ ಸೌಮ್ಯರ ಪ್ರೀತಿಯಲ್ಲಿ ಗಟ್ಟಿತನವಿಲ್ಲ, ಚಿತ್ರದ ಕ್ಲೈಮಾಕ್ಸ್ ನಲ್ಲಿ ಬರುವ ಕೋರ್ಟ್ ಸನ್ನಿವೇಶಗಳು ಮತ್ತಷ್ಟು ಗಂಭೀರವಾಗಿದ್ದರೆ ಚೆನ್ನಾಗಿರುತ್ತಿತ್ತು. ಅವುಗಳ ಚಿತ್ರೀಕರಣ ಮತ್ತಷ್ಟು ಬಿಗಿಯಾಗಿರಬೇಕಿತ್ತು.

           ಲಘು ಲಹರಿಯಲ್ಲಿ ಸಾಗುವ ಸಿನಿಮಾ ಹೊಸತನದಿಂದ ಕೂಡಿದೆ. ಚಿತ್ರವು ಗ್ರಾಹಕರಲ್ಲಿ ಬ್ಯಾಂಕ್ ಗಳ ಆನ್ಲೈನ್ ವ್ಯವಹಾರದಲ್ಲಿ ಉಂಟಾಗುವ ವಂಚನೆಗಳ ಕುರಿತಾದ ಒಂದು ಅರಿವು ಮೂಡಿಸುವಂತಹದ್ದಾಗಿದೆ.ಅದು ಜಾಗೃತಿಯನ್ನು ಗ್ರಾಹಕರಲ್ಲಿ ಮೂಡಿಸುತ್ತದೆ. ಆದ್ದರಿಂದ ಇದೊಂದು ಡಾಕ್ಯುಮೆಂಟರಿ ಚಿತ್ರದಂತೆ ಭಾಸವಾಗುತ್ತದೆ.

              ಮಲೆನಾಡಿನ ರೈತಾಪಿ ಹುಡುಗರಿಗೆ ಮದುವೆಗೆ ಹೆಣ್ಣು ದೊರೆಯುವುದು ಹೇಗೆ ಕಷ್ಟವಾಗಿದೆ  ಎಂಬುದರ ಎಳೆಯೊಂದು ಇಲ್ಲಿದೆ. ಚಿತ್ರದ ನಾಯಕ ದಿಗಂತ್ ರನ್ನು ತಿರಸ್ಕರಿಸಿ ದುಬೈ ವರನನ್ನು ನಾಯಕಿ ವರಿಸುವುದು ಇದಕ್ಕೆ ಸಾಕ್ಷಿಯಾಗಿದೆ.

                       ಮಲೆನಾಡಿನ ಹಿನ್ನೆಲೆಯವರೇ ಆದ ದಿಗಂತ್ ಅವರು ಮಲೆನಾಡಿನ ಈ ಕತೆಯಲ್ಲಿ ನಾಯಕರಾಗಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ .ರಂಜನಿ ರಾಘವನ್ ರವರಿಗೆ 10 -15 ನಿಮಿಷದ ಪಾತ್ರ. ಅದನ್ನು ಅವರು ಯಥೋಚಿತವಾಗಿ ನಿರ್ವಹಿಸಿದ್ದಾರೆ.. ವಕೀಲೆಯ ಪಾತ್ರದಲ್ಲಿ ಐಂದ್ರಿತಾ ರೇ ಮಿಂಚಿದ್ದಾರೆ. ಪಾತ್ರವನ್ನು ಅರಿತು ನಟಿಸಿದ್ದಾರೆ .

ಉಮಾಶ್ರೀ ಅವರು ವಕೀಲೆಯಾಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

            ಬ್ಯಾಂಕಿನ ಮ್ಯಾನೇಜರ್ ,ಹಿರಿಯ ಅಧಿಕಾರಿಗಳು ,ಊರಿನ ಸಮಾಜ ಸೇವಕ ಸೀತಣ್ಣ ,ಶೇಷಪ್ಪ ಇವರೆಲ್ಲ ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ.

             ವಿಶ್ವಜಿತ್ ರಾವ್ ಅವರು ಬರೆದಿರುವ ಎರಡು ಹಾಡಿನ ಸಾಹಿತ್ಯ ಆಪ್ತವೆನಿಸುತ್ತದೆ. ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ವೇಣು ಹಸ್ರಾಳಿ ಬರೆದಿರುವ ಮಲೆನಾಡಿನ ಸೊಗಡಿನ ಸಂಭಾಷಣೆ ಗಮನಸೆಳೆಯುತ್ತದೆ.

             ಸಿಗಂದೂರು ಸಾಗರ ಸುತ್ತಮುತ್ತಲ ಹಸಿರ ಪರಿಸರ, ನಂದ ಕಿಶೋರ್ ರಾವ್ ಅವರ ಛಾಯಾಗ್ರಹಣದಲ್ಲಿ ಸುಂದರವಾಗಿ ಸೆರೆಯಾಗಿದೆ.

         ವಿನಾಯಕ ಕೊಡಸರ ಅವರ ಸಿನಿಮಾದ ನಿರ್ದೇಶನದಲ್ಲಿ ನಾವೀನ್ಯತೆ ಇದೆ . ಅವರು ಭರವಸೆಯ ನಿರ್ದೇಶಕರೆನಿಸಿಕೊಂಡಿದ್ದಾರೆ.

          ಹಾಗೆ ಹೀಗೆ ಬಂದು ಹೋಗುವ ಸಿನಿಮಾಗಳ ನಡುವೆ ಇದೊಂದು ಹೊಸ ಪ್ರಯೋಗವೆನಿಸಿದೆ.

            ಎರಡು ಗಂಟೆಗಳ ಈ ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.


                              ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top