ಅಂಕಣ ಸಂಗಾತಿ

ಗಜಲ್ ಲೋಕ

ಜ್ಯೋತಿಯವರ ಗಜಲ್ ಗಳಲ್ಲಿ ಮನುಜ ಪ್ರೀತಿ….

ಅದೆನೋ ಕಾತುರ, ನಿಮ್ಮೊಂದಿಗೆ ಮಾತನಾಡಲು. ಅಂತೆಯೇ ನೇಸರನನ್ನು ಓವರ್ ಟೇಕ್ ಮಾಡಿ ಇಂದು ಭಾಷಾ ವೈಶಿಷ್ಟ್ಯದ ಗಜಲ್ ಗೋ ಒಬ್ಬರೊಂದಿಗೆ ಬಂದಿದ್ದೇನೆ, ನಿಮ್ಮೊಂದಿಗೆ ಅನುಸಂಧಾನಗೈಯಲು. …. ಏನಾಯ್ತು, ಯಾಕೆ ಈ ತೀಕ್ಷ್ಣ ನೋಟ… ಓಹೋ..! ಇನ್ನೂ ವಿಶ್ ಮಾಡಿಲ್ಲವೆಂದು ಯೋಚಿಸುತ್ತಿರುವಿರಾ.. ಅದ್ಹೇಗೆ ಮರೆಯುವೆ ಹೇಳಿ ನಿಮ್ಮನ್ನು.. ನನ್ನ ಎಲ್ಲ ಗಜಲ್ ಪ್ರೇಮಿಗಳಿಗೆ ಗಜಲ್ ಮಧುಶಾಲೆಯ ದ್ವಾರಪಾಲಕನ ಶುಭ ದಿನ…!!

ಸೌಂದರ್ಯದ ಖನಿಯಿಂದ ರಂಗಿನ ವಸಂತವನ್ನು ತಂದಿರುವೆ

ಕಣ್ಣೋಟದಿಂದ ತೆಗೆದ ಪ್ರೇಮಿಯ ಭಾವಚಿತ್ರವನ್ನು ತಂದಿರುವೆ”

ಮಂಜರ್ ತಿಮ್ಮಾಪುರಿ

       ‘ಕಾಲ ಬದಲಾಗಿದೆ’, ‘ಕಾಲ ಸದಾ ಹರಿಯುವ ಪ್ರವಾಹದಂತೆ’, ‘ಕಾಲ ಯಾವತ್ತೂ, ಯಾರಿಗಾಗಿ ನಿಲ್ಲುವುದಿಲ್ಲ’,… ಎನ್ನುವ ಇಂಥಹ ಹಲವಾರು ಹೇಳಿಕೆ, ಸೂಕ್ತಿ, ಲೋಕಾರೂಢಿ ಮಾತುಗಳು ಒಂದೆಡೆಯಾದರೆ ಇದರ ಸಮಾನ ತೂಕ ತೂಗುವ ‘ಮನುಷ್ಯ’ ಮತ್ತೊಂದೆಡೆ. ಮನುಷ್ಯನನ್ನು ಹೊರತುಪಡಿಸಿ ಆ ಎಲ್ಲ ಮಾತುಗಳು, ನೀತಿಗಳು, ತಂತ್ರಗಳು… ಎಲ್ಲವೂ ನಿರರ್ಥಕ. ಚಿಂತನೆ, ಆಲೋಚನಾ ಕ್ರಮ, ಕ್ರಿಯೆ-ಪ್ರತಿಕ್ರಿಯೆ ಎಲ್ಲದಕ್ಕೂ ಮೂಲ ಮನುಷ್ಯನೇ….!! ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನಮಗೆ ಸಂಯಮ ಹಾಗೂ ವಿಲಾಸಮಯ ಎಂಬ ಎರಡು ಕವಲೊಡೆದ ಮಾರ್ಗಗಳು ಗೋಚರಿಸುತ್ತವೆ. ಈ ‘ವಿಲಾಸಮಯ’ ಎನ್ನುವ ಪದ ಕಿವಿಗೆ ಬೀಳುತ್ತಲೇ ಹೆಚ್ಚಿನ ಹೃದಯಗಳ ಬಡಿತ ತೀವ್ರಗೊಳ್ಳುತ್ತದೆ. ವಿಲಾಸ ಜೀವನದ ವಿಷಾಣುಗಳಿಂದ ತುಂಬಿ ತುಳುಕಾಡುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳು ಭಾಗಶಃ ಪಾಶ್ಚಾತ್ಯ ರಾಷ್ಟ್ರಗಳಿಂದ ಆಕರ್ಷಕ ರೂಪದಲ್ಲಿ ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿವೆ. ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮೋತ್ಸವದ ಗಳಿಗೆಯಲ್ಲಿ ನಾವಿದ್ದರೂ ಸಂಭ್ರಮಿಸುವ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಿದೆಯಾ ಎಂದು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಕ್ರಮಣ ಕಾಲದಲ್ಲಿ ನಾವು ಉಸಿರಾಡುತಿದ್ದೇವೆ. ಇನ್ನೂ ಮುಂದುವರೆದು ಹೇಳಬೇಕೆಂದರೆ ಇದು ಆದರ್ಶಗಳ ಮತ್ತು ಕಠಿಣ ಪರೀಕ್ಷೆಗಳ ಪರಿವರ್ತನೆಯ ಯುಗವಾಗಿದೆ. ಈ ದಿಸೆಯಲ್ಲಿ ನಮ್ಮ ಆತ್ಮಸಾಕ್ಷಿಯನ್ನು ಬಡಿದಾಗ ಅಲ್ಲಿ ಗೋಚರಿಸುವುದು ನಮಗೆ ಅಡಚಣೆಯನ್ನು ಒಡ್ಡುತ್ತಿರುವುದು ಬಾಹ್ಯ ಶಕ್ತಿಗಳಲ್ಲ, ಬದಲಿಗೆ ನಮ್ಮೊಳಗೆ ಸದ್ದಿಲ್ಲದಂತೆ ಮರಿ ಹಾಕುತ್ತಿರುವ ಆಲಸ್ಯ, ಜಡ ಸ್ವಭಾವ, ತಾತ್ಸಾರ ಭಾವ, ಸಾಮಾಜಿಕ ದುರುಪಯೋಗ ಎಂಬ ವಿಷಜಂತುಗಳು! ಇದರಿಂದ ನಾವು ಹೊರಬರಬೇಕಾದರೆ ನಮ್ಮ ಮುಂದಿರುವ ಏಕೈಕ ದಾರಿ ಎಂದರೆ ಆತ್ಮಸಂಯಮ. ಗುರಿ ಯಾವತ್ತೂ ಸರಳವಾಗಿ ಇರಲಾರದು, ಇರಬಾರದು ಕೂಡ. ಅದು ಎಡರು ತೊಡರುಗಳಿಂದ, ತಗ್ಗು-ದಿಣ್ಣೆಗಳಿಂದ, ಕಠಿಣ ಪರೀಕ್ಷೆಗಳಿಂದ ಕೂಡಿರುತ್ತದೆ, ಕೂಡಿರಬೇಕು; ಕೂಡಿದೆ ಸಹ! ಇಂಥಹ ಗುರಿಯನ್ನು ತಲುಪಲು ನಮಗೆ ಸಾಹಿತ್ಯ ಬಹುಮುಖ್ಯ ಸಾಧನವಾಗುತ್ತದೆ.‌ ಕಾರಣ, ಸಾಹಿತ್ಯ ಎನ್ನುವುದು ಇಡೀ ಮನುಕುಲದ ಜೊತೆಗೆ ಅಸಂಖ್ಯಾತ ಜೀವಸಂಕುಲಗಳ ಸಂವೇದನೆಯನ್ನು ಹೊಂದಿರುತ್ತದೆ. ಇಂಥಹ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದ್ದು, ಪಾಮರರಿಂದ ಹಿಡಿದು ಪಂಡಿತರವರೆಗೂ ಎಲ್ಲರ ಅಚ್ಚುಮೆಚ್ಚಿನ ಪ್ರಕಾರವೆಂದರೆ ಕಾವ್ಯ. ಕಾವ್ಯದ ವಿವಿಧ ಮಗ್ಗುಲಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗೆ ‘ಗಜಲ್’ ಎಂಬ ಜ್ಯೋತಿ ಬಾಳಿಗೆ ಬೆಳಕು ಚೆಲ್ಲುತ್ತದೆ. ಇದರ ಆರಂಭ ಪ್ರೀತಿ, ಪ್ರೇಮ, ಪ್ರಣಯ..ಎಂದೆಲ್ಲ ಸ್ತ್ರೀ ಸಂಬಂಧಿ ವಿಷಯವಸ್ತುವಿನ ಸುತ್ತ ಗಿರಕಿ ಹೊಡೆಯುತ್ತ, ಮುಂದೆ ಮಿರ್ಜಾ ಗಾಲಿಬ್ ಎಂಬ ದಂತಕತೆಯ ಅಶಅರ್ ಇಡೀ ಮನುಜಮತವನ್ನು ವ್ಯಾಪಿಸಿರುವುದು ಇಂದು ಇತಿಹಾಸವಾಗಿದೆ. ಇಂದು ಕನ್ನಡದಲ್ಲಿ ಗಜಲ್ ಫಸಲು ಹುಲುಸಾಗಿ ಬೆಳೆಯುತ್ತಿದೆ, ಅದೂ ವಿವಿಧ ವಿಷಯಗಳ ಸೆಲೆಯಲ್ಲಿ! ಇಂಥಹ ಬತ್ತದ ಚಿಲುವೆಯಲ್ಲಿ ಗಜಲ್ ಗೋ ಶ್ರೀಮತಿ ಜ್ಯೋತಿ ದೇವಣಗಾವ್ ಅವರೂ ಒಬ್ಬರು.

          ಜ್ಯೋತಿಯವರು ಸುಭಾಷರಡ್ಡಿ ದೇಸಾಯಿ ಮತ್ತು ಮೀನಾಕ್ಷಿ ದೇಸಾಯಿಯವರ ಮುದ್ದಿನ ಮಗಳಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರಿನಲ್ಲಿ ಜನಿಸಿದ್ದಾರೆ. ಶಾಲೆಯ ದಿನಗಳಿಂದಲೆ ಓದಿನ ಗೀಳು ಹಚ್ಚಿಕೊಂಡ ಇವರು ಕ್ರಮೇಣವಾಗಿ ದಟ್ಟವಾದ ಅನುಭವದೊಂದಿಗೆ ತಮ್ಮ ಲೇಖನಿಗೆ ಚಾಲ್ತಿಯನ್ನು ನೀಡಿದರು. ಕವಿತೆ, ಹನಿಗವನ, ವಚನಗಳು, ವಿಮರ್ಶಾ ಬರವಣಿಗೆಯೊಂದಿಗೆ ಸಾಮಾಜಿಕ ಸಂವೇದನೆಯ ಗಜಲ್ ಗಳನ್ನು ಬರೆಯುತ್ತಿದ್ದಾರೆ. ಇವರು ಹೆಚ್ಚಿನ ಬರಹಗಳು ಸಂಗಾತ, ಸುರಹೊನ್ನೆ, ಬುಕ್ ಬ್ರಹ್ಮ, ಅವಧಿ, ಹಾಯ್ ಸಂಡೂರು, ಪ್ರತಿಲಿಪಿ, ವೆಬ್ ಆಧಾರಿತ ಆನ್ಲೈನ್ ಪತ್ರಿಕೆ….ಮುಂತಾದ ನಾಡಿನ ಆನ್ಲೈನ್, ಆಫ್ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. “ಅತ್ತರಿನ ಭರಣಿ” ಎನ್ನುವ ಗಜಲ್ ಸಂಕಲನ, “ವಿಹಗ ವಿಹಾರ” ಎಂಬ ವಿಮರ್ಶಾ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಾಡಿನಾದ್ಯಂತ ಜರುಗಿದ ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ಉತ್ತಮ ವಾಚನ ಮಾಡಿದ್ದಾರೆ. ಸದಾ ಬರಹದ ಯಾವುದಾದರೂ ಒಂದು ರೂಪದಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ, ಗೌರವಿಸಿ ಸತ್ಕರಿಸಿವೆ.

“Can wisdom be put silver rod?

or love in a golden bowl?” ಎನ್ನುವ ವಿಲಿಯಂ ಬ್ಲೇಕ್ ಅವರ ಸಾಲುಗಳು ನಿರ್ಮಲವಾದ ಪ್ರೀತಿಯನ್ನು ಪ್ರತಿಪಾದಿಸುತ್ತವೆ. ಇಂಥಹ ಪಾಕೀಜಾದಂತಹ ಪ್ರೇಮವನ್ನು ಮೈಗೂಡಿಸಿಕೊಂಡಿರುವ ‘ಗಜಲ್’ ಒಲವಿನ ಓಲೆ ಬರೆಯುತ್ತಲೆ ಇದೆ. ಇದು ಅನ್ಯಾಯವನ್ನೂ ಪ್ರೀತಿಯಿಂದಲೇ ಎದುರಿಸುತ್ತಿದೆ. ಈ ನೆಲೆಯಲ್ಲಿ ವ್ಯಕ್ತಿಯ ಅಸ್ತಿತ್ವವನ್ನೇ ಕುರೂಪಗೊಳಿಸಲು ಬಯಸುವ ದುಷ್ಟಶಕ್ತಿಗಳ ವಿರುದ್ಧದ ಹೋರಾಟವನ್ನು ಕಾಲಕಾಲದ ಎಲ್ಲ ಸಾಹಿತ್ಯ ರೂಪಗಳು ಅದರಲ್ಲಿ ‘ಗಜಲ್’ ಮಾಡುತ್ತ ಬಂದಿದೆ. ಯುದ್ಧವಿರಬಹುದು, ರಾಜಕೀಯ-ಸಾಮಾಜಿಕ-ಧಾರ್ಮಿಕ-ಆರ್ಥಿಕ-ಬೌದ್ಧಿಕ ಪ್ರಭುತ್ವವಿರಬಹುದು; ಹೀಗೆ ಅತ್ಯಂತ ಮೂರ್ತರೂಪದಲ್ಲಿ ವ್ಯಕ್ತಿಯನ್ನು ಕಬಳಿಸುವ ಈ ಶಕ್ತಿಗಳನ್ನು ದಾಟುವ, ಮೀರುವ ಪ್ರಯತ್ನಗಳನ್ನು ‘ಗಜಲ್’ ಪ್ರೀತಿಯಿಂದಲೇ ಮಾಡುತ್ತಿದೆ. ಯಾವತ್ತೂ ‘ಗಜಲ್’ ದ್ವೇಷವನ್ನು ಸಾಧಿಸದು. ಒಂದುವೇಳೆ ಯಾವುದಾದರೂ ದ್ವೇಷವನ್ನು ಸಾಧಿಸುತಿದ್ದರೆ ಅದು ‘ಗಜಲ್’ ಅಸ್ಥಿಪಂಜರವಾಗಿಯಷ್ಟೇ ಉಳಿಯಬಲ್ಲದು. ಈ ಮಾರ್ಗದಲ್ಲಿ ಸುಖನವರ್ ಶ್ರೀಮತಿ ಜ್ಯೋತಿ ದೇವಣಗಾವ್ ಅವರ ‘ಗಜಲ್’ ಗಳನ್ನು ಗಮನಿಸಿದಾಗ ಮನುಷ ಪ್ರೀತಿ, ಮೌಲ್ಯಗಳ ಶೋಧನೆ, ಕಂಬನಿಯೊರೆಸುವ ಕಾಳಜಿ, ಅಸಹಾಯಕತೆಗೆ ಮಿಡಿಯುವ ಜೀವತಂತು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅಡಗಿರುವ ಸಮಾಜ ಸುಧಾರಣೆಯ ಮುಖವಾಡದ ತಾಕಲಾಟ, ಸ್ತ್ರೀ ಸಂವೇದನೆಯ ಕಕ್ಕುಲಾತಿ, ರಾಜಕೀಯ ಗದ್ದುಗೆಯ ರಕ್ತದೋಕುಳಿ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ… ಎಲ್ಲವೂ ಹದವಾಗಿ ಬೆರೆತಿವೆ. ಇದಕ್ಕೊಂದು ಉದಾಹರಣೆಯೆಂದರೆ ಈ ಕೆಳಗಿನ ಷೇರ್. ಇದು ಮನುಷ್ಯನ ದೂರಾಲೋಚನೆಯ ಬದಲಿಗೆ ಅವನ ‘ದುರಾಲೋಚನೆ’ಯ ಸಂಕೇತವಾಗಿದೆ. ‘ಮರ’ ಮನುಷ್ಯನಿಗೆ ಏನೆಲ್ಲ ಕೊಟ್ಟಿದೆ, ಕೊಡುತ್ತಿದೆ ಎಂಬುದರ ಪ್ರಜ್ಞೆ ನಮಗಿದ್ದರೂ ಅದರ ಬೇರುಗಳಿಗೆ ಯಮಪಾಶ ಹಾಕುವ ಕೊಡಲಿಯ ‘ಕಾವು’ ಆ ಮರದಲ್ಲಿಯೆ ಹುಡುಕುತ್ತಿರುವುದು ಮನುಷ್ಯನ ಬುದ್ಧಿವಂತಿಕೆಯ ಪರಿ ಕಳಚುವ ಸಮಯವನ್ನು ಪ್ರತಿಧ್ವನಿಸುತ್ತಿದೆ.‌ ಇನ್ನೂ ಸೌಂದರ್ಯದಲ್ಲಿ ಟ್ರಾಯ್ ನ ಹೆಲೆನ್, ಈಜಿಫ್ತಿನ ಕ್ಲಿಯೋಪಾತ್ರ, ಇಟಲಿಯ ಮೊನಾಲಿಸಾರನ್ನು ಪ್ರಮುಖವಾಗಿ ಹೆಸರಿಸುತ್ತೇವೆ. ಆದರೆ ಎಟರ್ನಲ್ ಬ್ಯೂಟಿ ಎಂದಾಗ ನಮಗೆ ತಟ್ಟನೆ ನೆನಪಾಗೋದು ಶಶಿ, ಶಶಿಯ ಬೆಳದಿಂಗಳು. ಆದರೆ… ಆ ಶಶಿಯಲ್ಲೂ ಕಲೆಯನ್ನು ಹುಡುಕುತ್ತಿರುವ ನಾವುಗಳು ನಿಜವಾಗಲೂ ಪ್ರಳಯಾಂತಕರೆ ಸರಿ! ಇಂದು ಸಂಸ್ಕೃತಿ ಹಿನ್ನೆಲೆಗೆ ಸರಿದು ವಿಕೃತಿ ಮುನ್ನೆಲೆಗೆ ಬರುತಿರುತ್ತಿರುವುದು ದುರಂತವೇ ಸರಿ. ಇದಕ್ಕೆ ಗಜಲ್ ಗೋ ಅವರು ವಿಶಾದವನ್ನು ವ್ಯಕ್ತಪಡಿಸುತ್ತ ಅಪಸ್ವರದ ವಿರುದ್ಧ ಸ್ವರ ಎತ್ತಿದ್ದಾರೆ.

ನೆರಳು ಕೊಡುವ ಮರದಲಿ ಕೊಡಲಿಕಾವು ಹುಡುಕುವವರು ಹೆಚ್ಚು

ಕೊರಳು ಉಲಿಯುವ ಪದಗಳಲಿ ಅಪಸ್ವರ ಬೆದುಕುವವರು ಹೆಚ್ಚು”

       “No politics please…” ಎನ್ನುವ ಸೂಕ್ತಿಯು ರಾಜಕೀಯದ ಕಬಂಧ ಬಾಹುಗಳಿಗೆ ಮೌನ ಸಾಕ್ಷಿಯಾಗಿದೆ. ರಾಜಕೀಯ ನಡೆ-ನುಡಿಗಳು ಯಾವಾಗಲೂ ಶಾಂತಿಯನ್ನು ಕದಡುತ್ತಿವೆ. ಹಬ್ಬದ ಸಂಭ್ರಮವಾದರೂ ಅಷ್ಟೇ ಮಸಣದ ಸೂತಕವಾದರೂ ಸರಿಯೆ… ಎಲ್ಲೆಡೆಯೂ ತಮ್ಮ ಹಣಬಲ, ತೋಳ್ಬಲ, ಅಧಿಕಾರ ಬಲ… ಪ್ರಯೋಗಿಸುತ್ತಿರುವ ರಾಜಕೀಯ ನೇತಾರರನ್ನು ಗಜಲ್ ಗೋ ಜ್ಯೋತಿಯವರು ಖಂಡಿಸಿರುವುದಕ್ಕೆ ಈ ಷೇರ್ ಜೀವಂತ ಸಾಕ್ಷಿಯಾಗಿದೆ.

ಆಮಿಷಗಳಿಗೆ ಸಂತ್ರಸ್ತರ ಮನವೊಲಿಸುವರು

ಸಂಕಟವನ್ನೂ ದರ್ಪದಿಂದ ಕೊಳ್ಳುವರು ಇಲ್ಲಿ”

       ಸಾಹಿತ್ಯವೂ ಸಮಾಜ ಪರಿವರ್ತನೆಯ ಒಂದು ಭಾಗವಾಗಿದ್ದು, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಸಾವಿರಾರು ವಸಂತಗಳಿಂದ ವರ್ಗ-ಜಾತಿ ತಾರತಮ್ಯ ನಡೆಯುತ್ತಲೇ ಬಂದಿರುವುದರ ನಡುವೆ ಇಂದು ಸಮಾಜದಲ್ಲಿ ಮೇಲು ಕೀಳು ಭಾವನೆಗಳು ಇನ್ನೂ ಹೆಚ್ಚಾಗುತ್ತಿವೆ. ಶೋಷಿತರಲ್ಲಿ ಸ್ವಲ್ಪ ಮಟ್ಟಿನ ಜಾಗೃತ ಪ್ರಜ್ಞೆ ಬಂದಿದ್ದರೂ ಶೋಷಕ ವರ್ಗ ಮಾತ್ರ ಯಾವ ಪಾಪ ಪ್ರಜ್ಞೆಯ ಲವಲೇಶವನ್ನೂ ಬೆಳಸಿಕೊಳ್ಳುತ್ತಿಲ್ಲ. ಇಂಥಹ ಸಂದರ್ಭದಲ್ಲಿ ಪ್ರತಿ ಬರಹಗಾರರ ಮೇಲೆ ಅತೀವ ಗುರುತರವಾದ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ಸುಖನವರ್ ಶ್ರೀಮತಿ ಜ್ಯೋತಿ ದೇವಣಗಾವ್ ಅವರಿಂದ ‘ಗಜಲ್ ಲೋಕ’ ಜ್ಯೋತಿಯಂತೆ ಪ್ರಕಾಶಿಸಲಿ ಎಂದು ಶುಭ ಹಾರೈಸುತ್ತೇನೆ. 

ನಗರದ ಖಾಲಿ ರೈಲು ನಿಲ್ದಾಣದಲ್ಲಿ ಅಲೆಮಾರಿಯೊಬ್ಬ ಇಳಿದಿರಬಹುದು

ನಮ್ಮ ಮನೆಯ ಗೋಡೆಗಳ ಮೇಲೆ ನಾಸಿರ್ ನಿರ್ವಿಣ್ಣತೆ ಮೈಚೆಲ್ಲಿ ಮಲಗಿಬಿಟ್ಟಿದೆ”

ನಾಸಿರ್ ಕಾಜ್ಮಿ

      ಗಜಲ್ ಕಾರವಾನ್ ನಲ್ಲಿ ಸುತ್ತಾಡುತ್ತಿದ್ದರೆ ಗಜಲ್ ಪ್ರೇಮಿಗಳಿಗೆ ಆಯಾಸವಾಗುವುದೆ ಇಲ್ಲ. ಅಶಅರ್ ನ ಜೋಕಾಲಿ ಜಗತ್ತಿಗೆ ತಂಬೆರಲನ್ನು ನೀಡುತ್ತಿದೆ. ಅದರ ಸೊಂಪಿನಲ್ಲಿ ಮೈಮರೆತವರಿಗ ವಕ್ತ್ ಎಚ್ಚರಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿಯಾರದ ಮುಳ್ಳುಗಳ ಮುಂದೆ ಮಂಡಿಯೂರುತ್ತ ಇಲ್ಲಿಂದ ನಿರ್ಗಮಿಸುವೆ. ಮುಂದಿನ ಗುರುವಾರ ಮತ್ತೊಬ್ಬ ಗಜಲ್ ಗೋ ಒಬ್ಬರ ಗಜಲ್ ಗೊಂಚಲಿ ನೊಂದಿಗೆ ಮತ್ತೆ ಬರುತ್ತೇನೆ. ಅಲ್ಲಿಯವರೆಗೆ ಅಲ್ವಿದಾ ದೋಸ್ತೋ..


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top