ಗಣಪತಿ ಹಬ್ಬ, ಚಂದ್ರಗೌಡ ಕುಲಕರ್ಣಿ ಯವರ ಲೇಖನ

ಲೇಖನ ಸಂಗಾತಿ

ಗಣಪತಿ ಹಬ್ಬ

ಚಂದ್ರಗೌಡ ಕುಲಕರ್ಣಿ

ನಾ ಹುಟ್ಟಿದ ಊರು ಕಡದಳ್ಳಿ ಬಾಳ ಸಣ್ಣದು. ಆಗ ಇಡೀ ಊರಾಗ ೬೦ ಮನೆ ಇದ್ವು. ಊರಾಗ ಒಟ್ಟು ಐದು ಕಡೆ ಗಣಪತಿ ಕೂಡಸತಿದ್ರು. ಅದರಾಗ ನಮ್ಮ ಸಾಲೀನೂ ಒಂದು. ಗಣಪತಿ ತಯಾರಿ ಕಡದಳ್ಳಿಯಲ್ಲಿಯೇ. ಕೇವಲ ಐದು ಮಾತ್ರ.  ಕೆರೆ ಇಲ್ಲ ಹಳ್ಳದಿಂದ ಅರಲು (ಹಸಿಮಣ್ಣು)

ತಂದು, ಹದಮಾಡಿ, ಅದರಾಗ ಅರಳಿ ಸೇರಿಸಿ ಜಜ್ಜಿದ ಕೆಸರನಿಂದ ಬಡಿಗೇರ ನಾಗಪ್ಪಜ್ಜ ಗಣಪತಿ ಮಾಡತಿದ್ದ. ಗಣಪತಿ ಬೇಕಾದವರು ನಾಗಪ್ಪಜ್ಜನಿಗೆ ಎಲೆ,ಅಡಿಕಿ, ಪಂಚಫಳಾರ ಕೊಟ್ಟು ನಮಗ ಗಣಪತಿ ಮಾಡಿಕೊಡ್ರಿ ಅಂತ ವೀಳ್ಯಕೊಡಬೇಕಾಗತಿತ್ತು.

ಕೈಯಲ್ಲಿ ತಿದ್ದಿ ತೀಡಿ ಮಾಡೋದನ್ನ ನಾವು ಬಾಳ ಕುತೂಹಲದಿಂದ ನೋಡತಿದ್ವಿ. ನಮ್ಮ ಸಾಲಿದ ಯಾವುದು ಅಂತ. ನರಗುಂದದಿಂದ ಬಣ್ಣ ತಂದು ಹಚ್ಚಿ ಸಿಂಗಾರ ಮಾಡತಿದ್ದ. ಎಲ್ಲವೂ ಸಹಜ ಬಣ್ಣ. ಸುನೇರಿ, ಮಿಂಚಿನ ಬಣ್ಣ ಬಳಸತಿದ್ದಿಲ್ಲ. ಎಲ್ಲ ಗಣಪತಿಗಳು ೮ ರಿಂದ ೧೦ ಇಂಚ ಎತ್ತರ ಇರತಿದ್ವು. ಮುಂದೊಂದು ಪುಟ್ಡ ಇಲಿ. ಗಣಪತಿಗೆ ೧೧ ಆಣೆ ಬೆಲೆ. ೬೯ ಪೈಸೆ. ಮೊದಲು ೫ ಆಣೆ ಇತ್ತು, ಆಮೇಲೆ ೧ ರೂ.೪ ಆಣೆ ಆದದ್ದು ನನಗೆ ಗೊತ್ತಿದೆ.

ಸಾಲಿಯೊಳಗ ಎಲ್ಲ ಮಕ್ಕಳಿಗೂ ಪಟ್ಟಿ ಹಾಕತಿದ್ರು. ೧ ಮತ್ತು ೨ ನೆಯ ಎತ್ತದವರಿಗೆ ೨ ಆಣೆ. ೩ ಮತ್ತು ೪ ನೆಯ ಎತ್ತದವರಿಗೆ ೪ ಆಣೆ. ಎಲ್ಲ ಹಣ ಸೇರಿದರೂ ೫ ರೂ. ಒಳಗೆ. ದ್ಯಾಮವ್ವನ ಗುಡಿನ ಹಿಂದಿನ ದಿವಸ ತೊಳದು, ಗಣಪತಿ ಮಾಡದ ಅಂಕಣಕ ಸುಣ್ಣ ಹಚ್ಚಿ ತಯಾರಿ ಮಾಡಸತಿದ್ರು. ಚತುರ್ಥಿ ದಿವಸ ಮುಂಜಾನೆ ತಮ್ಮೂರು ಬನಹಟ್ಟಿಯಿಂದ  ಸಾಲಿಗಿ ಬರೂ ಮುಂದ ಬ್ಯಾಂಕಿನವರ  ಹೊಲಕ್ಕೆ ಹೋಗಿ, ಮಾವಿನ ತಳಿರು, ಪೇರು, ಹುಣಸಿಕಾಯಿ, ಮುಖ್ಯವಾಗಿ ಕರಕಿ  ತರತಿದ್ರು. ಬಂದ ಮ್ಯಾಲ ಮಾಡದ ಸುತ್ತಲೂ ಮಿಂಚಿನ ಹಾಳಿಯ ಚೌಕಟ್ಟು ಹಾಕಿ, ಗಣಪತಿ ಇಡುವ ಅಂಕಣಕ ಇಲ್ಲಾ ಇಡೀ ಸಾಲಿಗೆ ಬಣ್ಣದ ಹಾಳೆಯ (ಬುರಬುರಿ) ಝಾಲರಿ ಹಚ್ಚಸತಿದ್ರು. ಅವನ್ನ ಜೋಗಿ ಹನಮಪ್ಪನ ಕಡಿಂದ , ಇಲ್ಲ ಹುಬ್ಬಳ್ಳಿ ಹನಮಪ್ಪನ ಕಡಿಂದ ಕತ್ತರಿಸಿ ಇಟ್ಟಿರತಿದ್ರು.  ಜರೀ ಸೀರಿ ಕಟ್ಟಿ ಮಂಟಪ ಅಲಂಕಾರ ಮಾಡಸತಿದ್ರು. ಮಾವಿನ ತಳಲನ್ನು ಕಂಬ ತೊಲೆಗಳಿಗೆ ಕಟ್ಟಿಸುತ್ತಿದ್ದರು. ತಂದ ಹಣ್ಣುಗಳನ್ನು ತೊಲಿಗಿ ಚಟ್ಟ ಕಟ್ಟಿ ಜೋಲು ಬಿಡತಿದ್ರು. ಯಾರಿಗಾದರು ಎಡೆ ತಯಾರಿಗೆ ಹೇಳಿರತಿದ್ರು. ಇಷ್ಟ ತಯಾರಿ ಆದಮ್ಯಾಲ ಎಲ್ಲ ಮಕ್ಕಳನ್ನು ಎರಡು ಸಾಲಿನಲ್ಲಿ ನಿಲ್ಲಿಸಿ, ಸಲಹೆ ಸೂಚನೆ ಕೊಟ್ಟು ಬಡಿಗೇರ ಮನಿಗೆ ಕರಕೊಂಡ ಹೊಕ್ಕಿದ್ರು. ಅಲ್ಲಿ ಹೋಗಿ, ಎಲೆ-ಅಡಿಕೆ,ಪಂಚಫಳಾರ, ಸಂಭಾವನೆ ಕೊಟ್ಟು ದೊಡ್ಡ ಹುಡುಗನ ಹೆಗಲ ಮೇಲೆ ಇರಿಸಿ, ” ಗಣಪತಿ ಗಣಪತಿ ಮೋರಯ್ಯ, ಪುಂಡಿಪಲ್ಲೆ ಸೋರಯ್ಯ…” ಎಂದು ಘೋಷಣೆ ಹಾಕಿಸುತ್ತಿದ್ದರು. ಸಂಗಪ್ಪಜ್ಜ, ಸಣ್ಣ ರುದ್ರಗೌಡ ಮತ್ತು ಅಂಗಡಿ ಅಂದಾನಯ್ಯ ಅವರ ಮನೆಯವರು ಸಾಲಿ ಮಕ್ಕಳ ಜೊತೆಯೇ ಗಣಪತಿ ತರಲು ಬರುತ್ತಿದ್ದರು.

ಮೆರವಣಿಗೆಯಲ್ಲಿ ಸಾಲಿಗಿ ಬಂದು, ಮಾಡದಲ್ಲಿ ಇರಿಸಿ, ಮಕ್ಕಳಿಂದ, ಗಂಡುಮಕ್ಕಳಿಂದ ಪೂಜೆ ಮಾಡಿಸತಿದ್ರು. ದೀಪ ಹಚ್ಚಿ, ವಿಭೂತಿ, ಕುಂಕುಮ ಹಚ್ಚಿ, ತೆಂಗಿನ ಕಾಯಿ ಒಡದು, ಎಡಿ ಹಿಡದು, ಊದಿನಕಡ್ಡಿ ಬೆಳಗಿ , ಚುರಮರಿ, ಕೊಬ್ಬರಿ ಪ್ರಸಾದ ಎಲ್ಲರಿಗೂ ಹಂಚತಿದ್ರು. ” ಗಣಪತಿ ಗಣಪತಿ ಮೋರಯ್ಯ, ಪುಂಡಿಪಲ್ಲೆ ಸೋರಯ್ಯ” ಘೋಷಣೆ ಊರತುಂಬ ಕೇಳೂ ಹಂಗ ಪೂಜೆ ನಡಿತಿತ್ತು. ಗಣಪತಿ ಎಡಿಯನ್ನು ಗಂಡುಮಕ್ಕಳು ಮಾತ್ರ ಉಣ್ಣಬೇಕು ಅಂತ ಮಾಸ್ತರ ಮತ್ತು ಊರವರೆಲ್ಲರೂ ಹೇಳತಿದ್ರು. ಎಡಿ ತಂದವರು ಮನೆಗೆ ಒಯ್ಯುತ್ತಿದ್ದರು. ಎಡಿಯನ್ನು ಪ್ರಸಾದ ರೂಪದಲ್ಲಿ ಹಂಚುತ್ತಿರಲಿಲ್ಲ.ಸಂಜೆ ಊರವರೆಲ್ಲರೂ ಗಣಪತಿ ನೋಡಲು ಮನೆ ಮನೆ ಸುತ್ತುತ್ತಿದ್ದರು. ಸಾಲಿಗೂ ಬರತಿದ್ರು. ಅಕ್ಕಿ ಕಾಳು ಹಾಕಿ, ಕೈಮುಗಿದು ಸಾಗುತ್ತಿದ್ದರು. ಆ ಗಣಪತಿ ಚಂದ ಐತಿ, ಗಣಪತಿ ಕಳಾ ಐತಿ ಅಂತ ಮಾತಾಡ್ತ ಹೋಗತಿದ್ರು. ಮಕ್ಕಳೆಲ್ಲ ಕೈಯಲ್ಲಿ ಅಕ್ಕಿ ಕಾಳು ಹಿಡಿದು, ಸಣ್ಣರುದ್ರಗೌಡರ ಮನೆ, ಸಂಗಪ್ಪಜ್ಜನ ಅಂಗಡಿ, ಬಡಿಗೇರ ಮನೆ, ಅಂಗಡಿ ಅಂದಾನಯ್ಯ ಅವರ ಮನೆಗೆ ಹೋಗಿ ಅಕ್ಕಿ ಕಾಳು ಹಾಕಿ ಕೊನೆಗೆ ಸಾಲಿಗೆ ಬರುತ್ತಿದ್ದೆವು. ಗಣಪತಿ ನೋಡಲು ತಿರುಗಾಡುವಾಗ ನಾವು ಯಾರೂ ಮುಗಿಲ ಕಡೆ ನೋಡದೆ, ನೆಲದಲ್ಲಿ ಚಂಡು ಇಟ್ಟೇ ಸಾಗುತ್ತಿದ್ದೆವು. ಏಕೆಂದರೆ ಗಣಪತಿ ನೋಡುವ ಮೊದಲು ಚಂದ್ರನನ್ನು ನೋಡು ವಂತಿಲ್ಲ. ಗಣಪತಿ ಶಾಪ ಕೊಟ್ಟರೆ ಎಂಬ ಭಯ ಭಕ್ತಿ ಇರುತ್ತಿತ್ತು.

ಗಣಪತಿ ಹೊಳೆಗೆ ಹೋಗು ಐದನೆಯ ದಿನ ಮಾಸ್ತರ ಸಾಲಿಯ ಎಲ್ಲ ಮಕ್ಕಳಿಗೂ, ಚಿಕ್ಕಪಟಾಕಿ, ಮದ್ದಿನ ಕುಡಕಿ, ಸುರಸುರ ಬತ್ತಿ, ಕಿರಕಿರ ಕಡ್ಡಿ, ಚಕ್ರ…ತಂದ ಕೊಡತಿದ್ರು.

ರಾತ್ರಿ ಭಜನೆ ಮೇಳ ಬಂದು, ಅಂಗಡಿ ಅಂದಾನಯ್ಯ, ಸಾಲಿ ಗಣಪತಿಗಳನ್ನು, ಅನಂತರ ಸಣ್ಣರುದ್ರಗೌಡ, ಸಂಗಪ್ಪಜ್ಜ, ಬಡಿಗೇರ ಮನೆ  ಗಣಪತಿಗಳನ್ನು ಮೆರವಣಿಗೆ ಮಾಡುತ್ತ ಕೆರೆಗೆ, ಇಲ್ಲವೆ ಹಳ್ಳಕ್ಕೆ ಕರೆದೊಯ್ಯುತ್ತಿದ್ದರು. ಭಜನೆಯ ಹಾಡು, ಗಣಪತಿ ಘೋಷಣೆ, ಪಟಾಕಿ ಸದ್ದು..ಊರಿನ ಹಿರಿಯರೆಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಮಕ್ಕಳೆಲ್ಲರ ಕೈಯಲ್ಲೂ ಊದಿಕನಡ್ಡಿ..ಪಟಾಕಿ ಸುರಸುರ ಬತ್ತಿ..ಬಾಯಿತುಂಬ ಘೋಷಣೆ…!!

ಸ್ವಾತಂತ್ರ್ಯ ಹೋರಾಟಗಾರರೂ, ಕಲ್ಮೇಶ್ವರ, ಹನಮಪ್ಪನ ಪೂಜಾರಿಗಳೂ ಆದ ಕರಿಗೌಡ ಪಾಟೀಲ ಅವರು ಕಡದಳ್ಳಿಗೆ ಬಂದ ವರುಷದಿಂದಲೇ ತಾವು ಗಣಪತಿ ಇರಿಸಲು ಪ್ರಾರಂಭಿಸಿದ್ದರು. ಅವರು ತಾವು ವಾಸಿಸುವ ಕಲ್ಮೇಶ್ವರ ಉಗ್ರಾಣ ಖೋಲಿಯಲ್ಲಿಯೇ ಇರಿಸುತ್ತಿದ್ದರು.ಅವರು ಕಲಾವಿದರಾದುದರಿಂದ ಗಣಪತಿಯನ್ನು ಸುಂದರವಾಗಿ ಸಿಂಗರಿಸುತ್ತಿದ್ದರು.

ಹಳ್ಳದ ದಡದಲ್ಲಿ ಎಲ್ಲ ಗಣಪತಿಗಳನಿಟ್ಟು ಪೂಜೆ ಮಾಡಿ, ಮಂಗಳಾರತಿ ಹಾಡಿ, ಪನಿವಾರ ಹಂಚಿ, ಘೋಷಣೆ ಕೂಗುತ್ತ ಐದು ಬಾರಿ ನೀರಲ್ಲಿ ಮುಳುಗಿಸೆಬ್ಬಿಸಿ ಬೆಣ್ಣಿ ಹಳ್ಳದ ಮಡುವಿನಲ್ಲಿ ಬಿಟ್ಟುಬಿಡುತ್ತಿದ್ದರು. ಅಷ್ಟೊತ್ತಿಗೆ ಎಲ್ಲರ ಹತ್ತಿರ ಇರುವ ಪಟಾಕಿ, ಮದ್ದಿನ ಕುಡಿಕೆ, ಸುರಸುರ ಬತ್ತಿ, ಚಕ್ರ…ಎಲ್ಲವೂ ಮುಗಿದಿರುತ್ತಿದ್ದವು. ಭಜನೆ ಮಾಡುತ್ತ ಮನೆಗೆ ಮರಳುತ್ತಿದ್ದರು.

ಗಣಪತಿ ಬರುವುದಕ್ಕಿಂತ ನಾಲ್ಕಾರು ದಿನ ಮುಂಚಿತವಾಗಿ ನಾವು ಹಳೆಯ ರಂದ್ರವಿರು ಕೀಲಿ ಕೈ ಮತ್ತು ಮೊಳೆ ಬಳಸಿ ಒಂದು ಗನ್ ತಯಾರಿಸುತ್ತಿದ್ದೆವು.ಮೊಳ ಉದ್ದದ ಬಿದಿರಿನ ತುಂಡಿಗೆ ತುದಿಯಲ್ಲಿ ಕೀ ಅನ್ನು ದಾರದಿಂದ ಬಿಗಿಯಾಗಿ ಕಟ್ಟುತ್ತಿದ್ದೆವು, ರಂದ್ರದ ಮುಖ ಮೇಲಕ್ಕೆ (ಲಂಬಕೋನ) ಬರುವಂತೆ. ರಂದ್ರಕ್ಕೆ ತಕ್ಕ ಕಬ್ಬಿಣ ಮೊಳೆ ತಂದು, ಅದರ ಚೂಪಾದ ತುದಿಯನ್ನು ಮೊಂಡ (ಸಮ)ಮಾಡಿ, ಕೀ ರಂದ್ರಕ್ಕೆ ಹೊಂದುವಂತೆ ಮಾಡುತ್ತಿದ್ದೆವು. ಬಿದಿರಿನ ಹಿಂಭಾಗಕ್ಕೆ ದಾರ ಕಟ್ಟಿ, ಆ ದಾರದ ತುದಿಗೆ ಮೊಳೆ ಕಟ್ಡುತ್ತಿದ್ದೆವು. ಅಂಗಡಿಯಿಂದ ಐದು ಪೈಸೆ ಕೊಟ್ಟು ಒಂದು ಕಡ್ಡಿ (ಬೆಂಕಿ) ಪೊಟ್ಟಣ ತಂದು, ಒಂದೊಂದೆ ಕಡ್ಡಿಯ ತುದಿಯ ಕಪ್ಪು ಮೊಕ್ಕನ್ನು ರಂದ್ರದಲ್ಲಿ ಹಾಕಿ, ಅದರಲ್ಲಿ ಮೊಳೆ ಇಟ್ಟು, ಮೊಳೆಯ ತಲೆಯನ್ನು ಕೆಳಮುಖ ಮಾಡಿ, ಕಲ್ಲು ಬಂಡೆಗೆ ಬಿರುಸಿನಿಂದ ಹೊಡೆದರೆ ಕೇಪಿನಂತೆ ಪಟಾಕಿಯಂಥ ಸದ್ದು ಬರುತ್ತಿತ್ತು. ದೀಪದ ಕಡ್ಡಿಯ ಮೊಕ್ಕಿಗೆ ಸಿಡಿಯುವ ಗುಣ ಇದೆ ಎಂದು ತಿಳಿದು ಬೆರಗು ಉಂಟಾಗು ತ್ತಿತ್ತು. ಕಡಿಮೆ ರೊಕ್ಕದಲ್ಲಿ ಪಟಾಕಿ ಸಿಡಿಸುವ ತಂತ್ರ ಇದು. ಕೆಂಪು ಮುಖದ ದುಂಡನೆಯ ಕೇಪನ್ನು ಸಹ ಬಳಸುತ್ತಿ ದ್ದೆವು. ಕೇಪಿನ ಮಧ್ಯಭಾಗದ ಕಪ್ಪು ಗುಡ್ಡೆಗೆ ಕಲ್ಲಿನಿಂದ ಜಜ್ಜುವುದು, ದುಂಡನೆ ಕೇಪನ್ನು ಅರ್ಧಕ್ಕೆ ಮಡಚಿ ಗಡುಸಾದ ಕಲ್ಲಿಗೆ ತಿಕ್ಕಿ ಚಟ್ ಎನಿಸುತ್ತಿದ್ದೆವು. ಒಮ್ಮೊಮ್ಮೆ ಎಚ್ಚರಿಕೆ ವಹಿಸದೆ ಕಲ್ಲಿಗೆ ತಿಕ್ಕಿದಾಗ ಬೆರಳ ತುದಿಗೆ ಸುಟ್ಟು ಕೆಂಪಗಾದ ಗಾಯ ಆಗುತ್ತಿತ್ತು. ಚಿಕ್ಕ ಪಟಾಕಿಗಳನ್ನು ಕೈಯಲ್ಲಿ ಹಿಡಿದೇ ಹಾರಿಸುವಾಗ ಕೈ ಸುಟ್ಟುಕೊಂಡ ಪ್ರಸಂಗಗಳೂ ಉಂಟು.

ಒಂದು ಸಾರೆ ಮಿಲಿಟರಿಯಲ್ಲಿದ್ದ ಜೋಗಿ ಹನಮಪ್ಪನ ಮಗ ಎಲ್ಲಪ್ಪ ಮಿಲಿಟರಿ ರಜೆಯಲ್ಲಿ ಊರಿಗೆ ಬಂದಾಗ ಕಂದು ಬಣ್ಣದ ಅಟಂ ಬಾಂಬ ತಂದಿದ್ದ. ಅದನ್ನು ಹಾರಿಸುವಾಗ ಕೈಯಲ್ಲಿ ಡಂ ಎಂದಿದ್ದರಿಂದ ಕೈ ಬೆರಳುಗಳು ಸುಟ್ಡು ಗಾಯವಾಗಿತ್ತು. ರಾತ್ರೋ ರಾತ್ರಿ ಬನಹಟ್ಟಿಯ ತಮ್ಮನಗೌಡ ಡಾಕ್ಟರ್ ಹತ್ತಿರ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದರು. ಅಂದಿನ ಆ ಘಟನೆಯನ್ನು ಕಣ್ಣಾರೆ ಕಂಡಿರದಿದ್ದರೂ ನಮ್ಮಂತಹ ಚಿಕ್ಕ ಮಕ್ಕಳಿಗೆ ಅಂದಿನಿಂದ ಒಂದು ಹೆದರಿಕೆ ಉಂಟಾಗಿತ್ತು.

ಗಣಪತಿ ಹಬ್ಬ ಮುಗಿದ ನಾಲ್ಕಾರು ದಿನಕ್ಕೆ ಸಾಲಿಯಲ್ಲಿ ಮಣ್ಣಿನ ಕಲಾಕೃತಿಗಳನ್ನು  ಮಾಡಲು ಹೇಳುತ್ತಿದ್ದರು. ಮಾಸ್ತರೇ ಹದವಾದ ಕೆಸರು ಮಣ್ಣನ್ನು ಕೊಡುತ್ತಿದ್ದರು. ಅದರಲ್ಲಿ, ಕುಂಬಳಕಾಯಿ, ಬದನೆಕಾಯಿ, ಬೆಂಡೆಕಾಯಿ, ಮಾವಿನ ಹಣ್ಣು..ಮುಂತಾದ ಕಲಾಕೃತಿ ಮಾಡಿ ಅವುಗಳಿಗೆ ಬಣ್ಣ ಕೊಡುತ್ತಿದ್ದೆವು. ಸಾಲಿಗೆ ಮೇಲಾಧಿಕಾರಿಗಳು ಬಂದಾಗ ಮಾಸ್ತರ ಅವುಗಳನ್ನು ತೋರಿಸುತ್ತಿದ್ದರು. ನಾವು ಕೆರೆಯಲ್ಲಿಯ ಕೆಸರಿನಿಂದ ಮಾಡಿದ ಕಲಾಕೃತಿಗಳು ನಾಲ್ಕಾರು ದಿನಗಳ ಅನಂತರ ಬಿರುಕು ಬಿಟ್ಟು ಹಾಳಾಗುತ್ತಿದ್ದವು. ಆದರೆ ಮಾಸ್ತರ ಸಾಲಿಯಲ್ಲಿ ಮಾಸ್ತರು ಕೊಟ್ಟ ಕೆಸರಿನಿಂದ ಮಾಡಿದ ಕಲಾಕೃತಿಗಳು ವರುಷವಿ ಟ್ಟರೂ ಹಾಳಾಗುತ್ತಿರಲಿಲ್ಲ. ಯಾಕೆ ಎಂದು ನಮಗೆ ಕುತೂಹಲ. ಅದರ ಗುಟ್ಟು ನಮಗಿಂತ ಹಿರಿಯ ವಿದ್ಯಾರ್ಥಿಗಳಿಂದ ತಿಳಿಯಿತು. ಕೆರೆಯಲ್ಲಿ ಬಿಟ್ಟ ಗಣಪತಿಗಳನ್ನು ಮಾಸ್ತರ ಯಾರಿಗೂ ಗೊತ್ತಾಗದಂತೆ ವಿಸರ್ಜನೆ ಮಾಡಿದ ಅರ್ಧ ತಾಸಿನಲ್ಲಿ ಗಣಪತಿ ಮೂರ್ತಿಗಳನ್ನು ಸಾಲಿಗೆ ತರಿಸುತ್ತಿದ್ದರು,ಆಪ್ತವಾದ ಕೆಲ ಯುವಕರಿಂದ. ಅದೇ ಗಣಪತಿಯ ಕೆಸರನ್ನು ನಮಗೆ ಕಲಾಕೃತಿ ಮಾಡಲು ಕೊಡುತ್ತಿದ್ದರು.ಬಡಿಗೇರ ನಾಗಪ್ಪಜ್ಜ  ಬೆಣ್ಣಿ ಹಳ್ಳದ ದಡದ ಹದವಾದ ಕೆಸರು ತಂದು, ಆ ಕೆಸರಿನಲ್ಲಿ ಅರಳೆ ಹಾಕಿ ಜಜ್ಜಿ ಹದಗೊಳಿಸಿ ಗಣಪತಿ ಮೂರ್ತಿ ಮಾಡಿರುತ್ತಿದ್ದ. ಅರಳೆಯ ಎಳೆಗಳು ಕೆಸರನ್ನು ಬಿರಿಯದಂತೆ ತಡೆಯುತ್ತವೆ. ಗಣಪತಿಗೆ ಸಹಜ ಬಣ್ಣಗಳನ್ನು ಬಳಸಿದ್ದರಿಂದ ಅವು ನೀರಿನಲ್ಲಿ ತೊಳೆದು ಹೋಗಿರುತ್ತಿ ದ್ದವು. ಹೀಗಾಗಿ ನಮಗೆ ಆ ಕೆಸರು ಗಣಪತಿ ಮೂರ್ತಿಯದು ಎಂದು ಗೊತ್ತಾಗುತ್ತಲೇ ಇರಲಿಲ್ಲ.


ಚಂದ್ರಗೌಡ ಕುಲಕರ್ಣಿ

One thought on “ಗಣಪತಿ ಹಬ್ಬ, ಚಂದ್ರಗೌಡ ಕುಲಕರ್ಣಿ ಯವರ ಲೇಖನ

Leave a Reply

Back To Top