ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಕಳೆದು ಹೋದವರು 

ಸಿ.ಎನ್ ಮುಕ್ತಾರವರ ಕಾದಂಬರಿ

ಕಾದಂಬರಿ : ಕಳೆದು ಹೋದವರು 

ಲೇಖಕಿ :  ಸಿ. ಎನ್. ಮುಕ್ತಾ 

ಪ್ರಥಮ ಮುದ್ರಣ : ೧೯೮೯

ಪ್ರಕಾಶಕರು :ಪಾಂಚಜನ್ಯ ಪಬ್ಲಿಕೇಷನ್ಸ್ 

ಕಥೆ ಕಾದಂಬರಿಗಳನ್ನು ಓದುವ ಪ್ರಾರಂಭದ ಹಂತದಲ್ಲಿ ತ್ರಿವೇಣಿ ಸಾಯಿಸುತೆ ಅನುಪಮಾ ನಿರಂಜನ ಅಶ್ವಿನಿ ಎಂಕೆ ಇಂದಿರಾ ಸಿಎನ್ ಮುಕ್ತ ಮುಂತಾದವರ ಸರಳ ಸಾಮಾಜಿಕ ಕಾದಂಬರಿಗಳು ಕಥೆಗಳು ಹೊರ ಪ್ರಪಂಚದ ಅರಿವನ್ನು ಮೂಡಿಸಿ ಮಾನವ ಜೀವನದ ಸಂಕೀರ್ಣತೆಗಳನ್ನು ಪರಿಚಯಿಸಿ ಮನರಂಜನೆ ನೀಡಲು ಸಫಲವಾಗುತ್ತಿದ್ದವು . ಕೊಂಡು ಓದಲು  ಶಕ್ತಿಯಿಲ್ಲದ ಆ ಸಮಯದಲ್ಲಿ ನಮ್ಮ ಓದುವಿಕೆಯ ಹಸಿವನ್ನು ನೀಗಿಸುತ್ತಿದ್ದದ್ದು  ಸರ್ಕ್ಯುಲೇಟಿಂಗ್ ಲೈಬ್ರರಿಗಳು.  ಸಿ.ಎನ್ ಮುಕ್ತಾರ ಕಥೆಗಳು ಬಹುತೇಕ ಎಲ್ಲ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಧಾರಾವಾಹಿಗಳಾಗಿ ಬರುತ್ತಿದ್ದವು ಸಹ . ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿರುವ ಇವರ ಸಾಹಿತ್ಯ ಕೃಷಿ ಅಗಾಧವಾದದ್ದು. ಎಂಬತ್ತು ಕಾದಂಬರಿಗಳು ಹನ್ನೊಂದು ಕಥಾಸಂಕಲನ ಹಾಗೂ ಒಂದು ಪ್ರಬಂಧ ಸಂಕಲನವನ್ನು ಹೊರತಂದಿದ್ದಾರೆ.  “ಸ್ನೇಹ ಬಳಗ” ಸಂಸ್ಥೆ ಕಟ್ಟಿ ಆ ಮೂಲಕ ಅನೇಕ ಲೇಖಕಿಯರ ಕೃತಿಗಳನ್ನು ಪ್ರಕಟಿಸಿದ್ದಾರೆ .ಇವರ ವಿಮುಕ್ತಿ ಮತ್ತು ಮೇಘ ಮಂದಾರ ಕಾದಂಬರಿಗಳು ಚಲನಚಿತ್ರಗಳಾಗಿವೆ.ಪಾಲು ಮತ್ತು ಮುಖವಾಡ ಕೃತಿಗಳು ಟಿಎನ್ ಸೀತಾರಾಂ ಅವರ ನಿರ್ದೇಶನದಲ್ಲಿ ಕಿರು ಚಿತ್ರಗಳಾಗಿವೆ. ಕ್ಷಮಯಾ ಧರಿತ್ರಿ, ಗೆಲುವಿನ ಹೆಜ್ಜೆ ,ಸುಖದ ಸೋಪಾನಗಳು, ಅಮೃತಮಯಿ, ಮೌನರಾಗ ಹಾಗೂ ಜೀವನ ಚಕ್ರ ಕಾದಂಬರಿಗಳು ದೂರದರ್ಶನ ಧಾರಾವಾಹಿಗಳಾಗಿದೆ. ಇವರ ಸಾಹಿತ್ಯಸೇವೆಗೆ ಆರ್ಯಭಟ ಪ್ರಶಸ್ತಿ ,ಅತ್ತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ,ಬನಶಂಕರಮ್ಮ ಪ್ರಶಸ್ತಿಗಳು ಸಂದಿವೆ .

ಜೀವನಕ್ಕೆ ಹತ್ತಿರವಾದ ವಾಸ್ತವ ಘಟನೆಗಳು ಸರಳ ಸುಲಲಿತ ಸಂಭಾಷಣೆಗಳ ಮೂಲಕ ದೃಶ್ಯಾವಳಿಗಳನ್ನು ಕಣ್ಣಮುಂದೆ ತರುವ ಸಮರ್ಥ ನಿರೂಪಣಾ ಶೈಲಿ ಕಾದಂಬರಿಯೊಳಗೆ ನಾವೂ ಒಂದು ಪಾತ್ರವೇನೋ ಅನ್ನಿಸುವಂತಹ ಆಪ್ತ ವಲಯ ಸೃಷ್ಟಿಸುತ್ತವೆ .ಮನರಂಜನೆಯ ಜೊತೆಗೆ ತೀವ್ರ ಆಲೋಚನೆಗೆ ಹಚ್ಚುವಂತಹ ಕಥಾವಸ್ತುಗಳು ಜೀವನಕ್ಕೆ ಸಂದೇಶವನ್ನು ನೀಡುತ್ತವೆ .

ಕಳೆದುಹೋದವರು ಕಾದಂಬರಿ ವಿಧವಾ ಮರು ವಿವಾಹದ ಕಥಾವಸ್ತುವಿನ ಜೊತೆಗೆ ಮೊದಲ ಗಂಡನ ಮಗುವಿನ ಮನಸ್ಥಿತಿ  ಅವನು ಅನುಭವಿಸುವ ತುಮುಲದ ಬಗೆಗಿನ ಚಿತ್ರಣವನ್ನೂ ಬಿಚ್ಚಿಡುತ್ತದೆ . ಹೇಗಿರಬೇಕು ಹೇಗಿರಬಾರದು ಎಂಬ ಬಗೆಗಿನ ಜಿಜ್ಞಾಸೆ ಮೂಡಿಸುತ್ತದೆ .ಜೀವನದಲ್ಲಿ ವಿಧಿ ವಹಿಸುವ ಪಾತ್ರ ಸಂದರ್ಭಗಳ ಕಾಣದ ಕೈವಾಡದ ಅಗೋಚರತೆಯನ್ನು ತೆರೆದಿಡುತ್ತದೆ. ೧೯೮೮_೮೯ ರಲ್ಲಿ ವನಿತಾ ಪತ್ರಿಕೆಯ ಸ್ಪರ್ಧಾ ವಿಜೇತ ಈ ಕಥೆ ಅದರಲ್ಲೇ ಧಾರಾವಾಹಿಯಾಗಿ ಬಂದಿತ್ತು . ಪ್ರತಿ ತಿಂಗಳು ಪತ್ರಿಕೆಗಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು ಸುಮಾರು ಮೂವತ್ತು ವರ್ಷಗಳ ಹಿಂದಿನ ಕಥೆ ಇಂದಿಗೂ ಪ್ರಸ್ತುತ ಎನಿಸುವುದು ಕಥಾವಸ್ತುವಿನ ವಿಶೇಷ .

ಇಲ್ಲಿಯ ಪಾತ್ರಗಳೆಲ್ಲ ಒಂದೊಂದು ರೀತಿ ಕಳೆದು ಹೋದವರೇ.ನಾಯಕಿ ಸುಜಯ ತನ್ನ ನಡೆಗಳು ಸರಿಯೋ ತಪ್ಪು ನಿರ್ಧರಿಸಲಾಗಿದೆ, ಗಿರೀಶ ತನ್ನ ಅಹಂ ಮತ್ತು ಚಟಗಳಿಗೆ, ಕೇಶವನ ಇಗೋ ಮತ್ತು ಮಗಳ ಕಡೆಯ ಅತಿ ಪ್ರೀತಿ ,ದೀಪು ಪರಿಸ್ಥಿತಿಯ ಶಿಶುವಾಗಿ ಅರಿಯಲಾಗದೆ ಹೊಂದಿಕೊಳ್ಳಲಾಗದೆ ಸೋಲುತ್ತಾರೆ ಕಳೆದು ಹೋಗುತ್ತಾರೆ. ಬಾಳ ಪಗಡೆಯಾಟಕ್ಕೆ ಸಿಕ್ಕಿದ ಕಾಯಿಗಳಾಗುತ್ತಾರೆ. ಇಲ್ಲಿ ಗಟ್ಟಿಯಾಗಿ ನಿಲ್ಲುವ ಪಾತ್ರವೆಂದರೆ ಸುಜಯಾ ತಂದೆ ಶಾಸ್ತ್ರಿಗಳು ಮಾತ್ರವೇ.

ಸುಜಯಾ ಶಾಸ್ತ್ರಿಗಳ ಮನೆತನದ ಹುಡುಗಿ.  ಸಹಪಾಠಿ ಗೌಡರ ಗಿರೀಶನನ್ನು ಎಮ್ ಎ ಓದುವಾಗ ಪ್ರೀತಿಸಿ ಮನೆಯವರ ವಿರುದ್ಧದ ನಡುವೆಯೇ ಮದುವೆಯಾಗುತ್ತಾಳೆ.  ಅವಳ ಎಣಿಕೆಯಂತಾಗದೆ ಮಗುವಾದ ಮೇಲೆ ಹಳ್ಳಿಯಲ್ಲೇ ಉಳಿಯುವ ಪರಿಸ್ಥಿತಿ ಬರುತ್ತದೆ. .ಏತನ್ಮಧ್ಯೆ ಗಿರೀಶ ದುಶ್ಚಟಗಳಿಗೆ ಬಲಿಯಾಗಿ ಆಸ್ತಿ ಕಳೆದುಕೊಳ್ಳುವ ಸಂದರ್ಭ ಬಂದಾಗ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಮಾವನ ಮಗಳೊಂದಿಗೆ ಎರಡನೆಯ ಮದುವೆಗೆ ಒಪ್ಪುತ್ತಾನೆ .ಸ್ವಾಭಿಮಾನಿ ಸುಜಯ ಏನೆಲ್ಲಾ ಅಡ್ಜಸ್ಟ್ಮೆಂಟ್ಗಳಿಗೆ ತಲೆ ಬಾಗಿದ್ದರೂ ಇದನ್ನು ಮಾತ್ರ ಸಹಿಸಲಾಗದೆ ಮಗುವಿನೊಂದಿಗೆ ಗಿರೀಶನಿಂದ ದೂರಾಗಿ ಮತ್ತೆ ತವರಿನಾಸರೆಗೆ ಬರುತ್ತಾಳೆ ನಂತರ ಅಪಘಾತವೊಂದರಲ್ಲಿ ಗಿರೀಶನ ಮರಣದ ಸುದ್ದಿ ಬರುತ್ತದೆ . ಕೆಲಸಕ್ಕೆ ಸೇರಿ ತಂದೆ ಮತ್ತು ಮಗು ದೀಪು ವಿನೊಂದಿಗೆ ನೆಲೆ ನಿಲ್ಲುವಷ್ಟರಲ್ಲಿ ಮೇಲಧಿಕಾರಿ ಕೇಶವರಿಂದ ಮರು ಮದುವೆಯ ಪ್ರಸ್ತಾಪ . ತಂದೆಯ ಒಪ್ಪಿಗೆಯೊಂದಿಗೆ ಮದುವೆ ನಡೆಯುತ್ತದೆ .ಆದರೆ ದೀಪು ಅದನ್ನು ಸ್ವೀಕರಿಸಲು ತಯಾರಿ ಇರುವುದಿಲ್ಲ ಸ್ವಭಾವತಃ ಒಳ್ಳೆಯವನಾದ ಕೇಶವನ ಮನಸ್ಸು ಸಹ ರೋಸಿ ಹೋಗುವಷ್ಟು  ವ್ಯತಿರಿಕ್ತ ನಡೆ ನುಡಿ ದೀಪುವಿನದಾಗುತ್ತದೆ ಇದರ ಮಧ್ಯೆ ಶಾಂತಿ ಎಂಬ ಮಗಳು ಹುಟ್ಟುತ್ತಾಳೆ ಆ ನಂತರವೂ ಗಂಡ ಮತ್ತು ಮಗನ ಘರ್ಷಣೆಯ ಒತ್ತಡ ತಾಳಲಾಗದೆ ದೀಪವನ್ನು ಬೋರ್ಡಿಂಗ್ ಶಾಲೆಗೆ ಬಿಡುವ ನಿರ್ಧಾರಕ್ಕೆ ಬರುತ್ತಾಳೆ ಸುಜಯ . ಅಲ್ಲಿಂದ ತಾಯಿ ಮಗನ ಬಾಂಧವ್ಯದ ಬಿರುಕು ಶುರುವಾಗುತ್ತದೆ. ವಿವಿಧ ಘಟನಾವಳಿಗಳು ಒಂದಕ್ಕೊಂದು ಹೊಸೆಯುತ್ತಾ ಹೋಗಿ ಕೊನೆಗೂ ಮನಗಳು ಸೇರದೆ ಹೋಗುತ್ತಾ ದೊಡ್ಡ ಕಂದಕ ವಾಗುತ್ತದೆ.  ತಾಯಿಯಿಂದ ಮಗ ಮಾನಸಿಕವಾಗಿ ದೂರವಾಗುತ್ತಾ ಒಂದು ದಿನ ಮನೆಯಿಂದಲೂ ದೂರಾಗುತ್ತಾನೆ ಮಗನಿಗಾಗಿ ಮರುಮದುವೆಯ ನಿರ್ಧಾರ ತೆಗೆದುಕೊಳ್ಳುವ ಸುಜಯಾಳಿಗೆ ಪುತ್ರನ ಅಸಮಾಧಾನ ದ್ವೇಷಗಳೇ ಕೊಡುಗೆಯಾಗುತ್ತದೆ . 

ಮುಂದೊಂದು ದಿನ ದೀಪುವಿಗೆ ಆಕಸ್ಮಿಕವಾಗಿ ತನ್ನ ತಂದೆಯ ಭೇಟಿಯಾಗುತ್ತದೆ.  ಸತ್ತನೆಂದುಕೊಂಡ ಗಿರೀಶ ಬದುಕಿಯೇ  ಇದ್ದು ಮರಳಿ ಬಂದಿರುತ್ತಾನೆ. ದೀಪುವಿಗೆ ಅವನು ತಂದೆ ಎಂದು ತಿಳಿಯುತ್ತಾ?  ಗಿರೀಶನಿಗೆ ಸುಜಯಳ ಬಗ್ಗೆ ಇರುವ ಅಭಿಪ್ರಾಯವೇನು? ದೀಪುವಿನ  ವಿಮುಖತೆ ಅಳಿದು ತಾಯಿಯನ್ನು ಒಪ್ಪಿಕೊಳ್ಳುತ್ತಾನಾ ? ಇದೆಲ್ಲಾ ತಿಳಿಯಬೇಕೆಂದರೆ ದಯವಿಟ್ಟು ಕಾದಂಬರಿ ಓದಿ.

ಇಲ್ಲಿ ಚಿತ್ರಿತವಾದ ಪಾತ್ರಗಳಲ್ಲಿ ನನಗೆ ತುಂಬಾ ಮನ ತಟ್ಟಿದ್ದು ಸುಜಯಳ ತಂದೆ ಶಾಸ್ತ್ರಿಗಳ ಪಾತ್ರ . ಮಗಳು ವಿಜಾತಿಯವನ ಜೊತೆ ಮದುವೆಯಾದಾಗ ಅವಳೊಂದಿಗೆ ಸಂಬಂಧ ಕಡಿದುಕೊಂಡಿದ್ದರೂ ಗಂಡನನ್ನು ಪರಿತ್ಯಜಿಸಿ ನಿರಾಶ್ರಿತಳಾಗಿ ನಿಂತಾಗ ಮಗನನ್ನು ಒಪ್ಪಿಸಿ ಆಶ್ರಯ ನೀಡುತ್ತಾರೆ. ಮಗಳೊಂದಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವಳ ಎರಡನೆಯ ಮದುವೆಗೂ ಒಪ್ಪುತ್ತಾರೆ. ನಂತರವೂ ಮಗಳಿಗೆ ಮೊಮ್ಮಗನಿಗೆ ಮಾನಸಿಕವಾಗಿ ಆಸರೆ ನೀಡುತ್ತಾ ತಾಯಿ ಮಗನ ಸಂಘರ್ಷ ಬೆಳೆಯದಂತೆ ವಾತ್ಸಲ್ಯದ ಗಂಟು ಮುರಿಯದಂತೆ ಕೊಂಡಿಯಾಗುತ್ತಾ ಹೋಗುತ್ತಾರೆ. ಅವರ ನೆರವಿರದಿದ್ದರೆ ದೀಪು ಅವನ ತುಮುಲ ಮಾನಸಿಕ ಸಂಘರ್ಷದಿಂದ ಏನಾಗುತ್ತಿದ್ದೆನೋ ತಿಳಿಯದು. 

ಸುಜಯಳ ಎರಡನೆಯ ಮದುವೆ ಸಂದರ್ಭದಿಂದ ಆರಂಭವಾಗುವ ಕಥೆ ಅವಳ ಹಿಂದಿನ ವಿಚಾರಗಳನ್ನು ಸ್ವಲ್ಪ ಸ್ವಲ್ಪವೇ ಮಧ್ಯೆ ಮಧ್ಯೆ ಬಿಚ್ಚಿಡುತ್ತಾ ಹೋಗುವ ಶೈಲಿ ಇಷ್ಟವಾಯಿತು.  ಆದರೆ ಕೇಶವನೊಡನಿನ ಮದುವೆಗೆ ಮುಂಚೆ ದೀಪುವನ್ನು ಮಾನಸಿಕವಾಗಿ ತಯಾರಿ ಮಾಡಿಸಿದ್ದಿದ್ದರೆ ಈ ಎಲ್ಲಾ ಸಮಸ್ಯೆಗಳು ಹುಟ್ಟುತ್ತಿರಲಿಲ್ಲವೇನೋ! ಎಂಟು ವರ್ಷದ ದೀಪು ವಿನೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು . ಈ ಸಂದರ್ಭದಲ್ಲಿ ಒಂದು ವಿಷಯ ಹಂಚಿಕೊಳ್ಳ ಬಯಸುತ್ತೇನೆ.  ನನ್ನ ಗೆಳತಿಯ ಎಂಟು ವರ್ಷದ ಮಗಳನ್ನು ಕೌನ್ಸೆಲಿಂಗ್ ಗಾಗಿ ಕರೆದೊಯ್ಯುತ್ತೇನೆ ಎಂದಾಗ ಆಶ್ಚರ್ಯವಾಯಿತು.  ಅವಳು ಇನ್ನೇನು ಡೈವರ್ಸ್ ಪಡೆಯುವ ಅಂತಿಮ ಹಂತದಲ್ಲಿದ್ದು ಆಕೆಯ ಮಗಳ ಮಾನಸಿಕ ಆರೋಗ್ಯಕ್ಕಾಗಿ ಈ ನಡೆ ಎಂದಾಗ ನಿಜಕ್ಕೂ ಒಂದು ರೀತಿಯ ಸಮಾಧಾನವಾಯಿತು. ನ್ಯೂಕ್ಲಿಯರ್ ಸಂಸಾರಗಳು ಮತ್ತು ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಇದೊಂದು ಒಳ್ಳೆಯ ಸಾಮಾಜಿಕ ಪ್ರಗತಿ ಎನ್ನಬಹುದಲ್ಲವೇ. ಡೈವೋರ್ಸ್ ಮರುಮದುವೆ ಇವುಗಳಿಂದ ಹೆಚ್ಚು ಎಫೆಕ್ಟ್ ಮತ್ತು ಅಫೆಕ್ಟ್ ಆಗುವುದು ಮಕ್ಕಳಿಗೆ.  ಹಾಗಾಗಿ ಪ್ರಮುಖ ನಿರ್ಧಾರಗಳಿಗೆ ಅವರ ಅಭಿಪ್ರಾಯವೂ ಇರಲಿ ಅಥವಾ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅವರ ಮನಸ್ಸು ಪೂರ್ವಭಾವಿಯಾಗಿ ತಯಾರಾಗಿರಲಿ. ಅನಿರೀಕ್ಷಿತ ಆಘಾತಗಳಿಂದ ಮನ ಮುರಿಯದಿರಲಿ ಬಾಳು ಬಲಿಯಾಗದಿರಲಿ.


                                  ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top