ಕಥಾ ಸಂಗಾತಿ
ಆದರ್ಶ ದಂಪತಿಗಳು
ಬಿ.ಟಿ.ನಾಯಕ್
ಅದೇ ಆರು ತಿಂಗಳ ಹಿಂದೆ ಮದುವೆಯಾಗಿರುವ ದೀಪಾ ಮತ್ತು ಧನುಷ್ ಎಂಬ ಅನ್ನೋನ್ಯ
ದಂಪತಿಗಳಿದ್ದರು. ಅವರಿಬ್ಬರೂ ಇಲ್ಲಿಯವರೆಗೆ ಎಂದೆಂದೂ ಜಗಳವಾಡಿರಲಿಲ್ಲ. ಅಂಥಹ ಸಾಮರಸ್ಯ ಅವರಲ್ಲಿ ಇತ್ತು. ಅವರ ಒಲವು ಮತ್ತು ಗೆಲುವು ನೋಡಿ ಪಕ್ಕದ ಮನೆಯ ಸೀತಕ್ಕಗೆ ಸಹಿಸಲಾಗಲಿಲ್ಲ. ಏಕೆಂದರೇ, ಅವಳು ಹುಟ್ಟು ಜಗಳಗಂಟಿಯಾಗಿದ್ದಳು. ತನ್ನ ಗಂಡನೊಡನೆ ಯಾವುದೇ ವಿಷಯವಿರಲಿ, ಏನೇ ಇರಲಿ ಆಕೆ ಆಕ್ರಮಣ ಮಾಡುತ್ತಿದ್ದಳು. ಅವಳ ಗಂಡ ಬಹಳೇ ಮೃದು ವ್ಯಕ್ತಿಯಾಗಿದ್ದು ಅವಳಿಗೆ ಸೋತುಬಿಡುತ್ತಿದ್ದ. ಹೀಗಾಗಿ, ಅವಳ ವರ್ತನೆಗೆ ಕಡಿವಾಣವೇ ಇರಲಿಲ್ಲ. ಈಗ ದೀಪಾ ಮತ್ತು ಧನುಷ್ ಇಬ್ಬರೂ ಖುಷಿ ಖುಷಿಯಾಗಿದ್ದುದು ಆಕೆಗೆ ಸಂಕಟ ತರಿಸುತ್ತಿತ್ತು. ಅವಳು ಒಂದು ಯೋಜನೆ ಮಾಡಿ ಅವರ ಸಂಸಾರದಲ್ಲಿ ಹುಳಿ ಹಿಂಡಲು ಕಾಯುತ್ತಿದ್ದಳು.
ಒಂದು ದಿನ ಧನುಷನ್ನು ಕಂಡು ಮಾತಾಡಿಸಿದಳು. ಅವಳ ಮಾತಿನ ವರಸೆ ಹೀಗೆ ಇತ್ತು ;
‘ಅಣ್ಣಾ, ನೀವು ಎಷ್ಟು ಒಳ್ಳೆಯವರು, ಇಲ್ಲಿಯವರೆಗೆ ನಿಮ್ಮ ಬಗ್ಗೆ ಯಾರೂ ‘ತುಟಿ ಪಿಟಿಕ್’’ ಅಂದಿಲ್ಲ. ಅಂಥಹ ಸೌಮ್ಯ ಸ್ವಭಾದವರು ಮತ್ತು ಯಾರ ಗೋಜಿಗೆ ಹೋಗದವರು ನೀವು’ ಎಂದಳು.
‘ಸೀತಕ್ಕ ನನ್ನದೆಷ್ಟು ಕೆಲಸ, ಅಷ್ಟರಲ್ಲೇ ನಾನು ಇರೋದು, ಬೇರೆಯವರ ಉಸಾಬರಿ ನನಗೆ ಯಾಕೆ ?’
‘ಹೌದಣ್ಣ ಸತ್ಯ, ಬೇರೆಯವರ ಉಸಾಬರಿ ಬೇಡ. ಆದರೆ, ನಿನ್ನ ಜೀವನ ಸರಿಯಾಗಿ ನೋಡಬೇಕಲ್ವೇ ?’
‘ಏನು ಸೀತಕ್ಕ ನೀವು ಹೇಳುವುದು. ನನ್ನ ಜೀವನ ಸರಿ ಇಲ್ವಾ ? ಅದೇನು ಹಾಗೆ ಹೇಳುತ್ತಿದ್ದೀರಿ ?’
ಎಂದು ಧನುಷ್ ಕೇಳಿದ.
‘ಏನಣ್ಣ ನೀವು, ಇಷ್ಟು ಮುಗ್ಧತೆ ನಿಮಗೆ ತರವಲ್ಲ.’ ಎಂದು ಮರು ಪ್ರಶ್ನೆ ಹಾಕಿದಳು ಸೀತಕ್ಕ.
‘ನನಗೇನೂ ಅರ್ಥವಾಗುತ್ತಿಲ್ಲ ಬಿಡಿಸಿ ಹೇಳು ಸೀತಕ್ಕ’ ಎಂದು ಕೇಳಿದ.
‘ಆಯಿತು.. ಏನೋ ನನ್ನ ಸಹೋದರ ಅಂತ ತಿಳಿದು ಹೇಳುತ್ತಿದ್ದೇನೆ.. ಸ್ವಲ್ಪ ಲಕ್ಷಗೊಟ್ಟು ಕೇಳು, ಮತ್ತು ನಿಮ್ಮ ಸಂಸಾರದಲ್ಲಿ ಮೂಗು ತೂರಿಸುತ್ತೇನೆಂದು ನನ್ನನ್ನು ದೂಷಿಸಬೇಡ ‘ ಎಂದಳು.
‘ಅದೇನು ಹೇಳು ಸೀತಕ್ಕ’ ಎಂದು ಆತ ಕೇಳಿದ.
‘ಅದೇ, ನಿನ್ನ ಹೆಂಡ್ತಿ ಮೂದೇವಿ ದೀಪಾ ಇದ್ದಾಳಲ್ಲ, ಅವಳು ಬಹಳೇ ಚೂಟಿ ಹೆಂಗಸು ಮತ್ತು ನಿನಗೆ ಮರುಳು ಮಾಡಿದ್ದಾಳೆ. ನಿನಗೆ ಏನೂ ಅರ್ಥವಾಗುತ್ತಿಲ್ಲ. ಅಷ್ಟು ಮುಗ್ಧತೆ ನಿನ್ನಲ್ಲಿ ಇರೋದು
ಒಳ್ಳೆಯದಲ್ಲಣ್ಣ’ ಮೆಲ್ಲಗೆ ರಾಗ ಎಳೆದಳು.
ಆತನಿಗೋ ಸಹನೆಯ ಕಟ್ಟೆ ಒಡೆದು ಹೋಯಿತು.
‘ಏನಮ್ಮ ನೀನು ನನ್ನ ಹೆಂಡ್ತಿ ಮೇಲೆ ದೂರು ಹೇಳುತ್ತೀಯಾ ?’
‘ಅಯ್ಯೋ ನಿನಗೆ ಒಳ್ಳೆಯದನ್ನು ಬಯಸಿದರೆ, ನೀನು ಹಾಗೆಯೇ ಏಂದು ತಿಳಿದುಕೋ ತಪ್ಪೇನು ‘
ಎಂದಳು.
‘ನಾನು ನನ್ನ ಹೆಂಡತಿಯಲ್ಲಿ ಕಾಣದ್ದನ್ನು ಅದೇನು ನೀನು ಕಂಡೀದ್ದೀಯಾ ? ಅದೇನು ಹೇಳುತ್ತೀ ಸರಿಯಾಗಿ ಹೇಳು.’ ಎಂದು ಆಕೆಯ ಕಡೆಗೆ ತೀಕ್ಷ್ಣವಾಗಿ ನೋಡಿದನು.
‘ಅದೇ…ಅವಳು ನಿನಗೆ ಮರುಳು ಮಾಡಿದ್ದು ನಿನಗೆ ಅರ್ಥವಾಗಿಲ್ಲ ‘ ಎಂದಳು.
‘ಬಿಡಮ್ಮ, ನನಗೆ ಮತ್ತು ಅವಳ ನಡುವೆ ಇಲ್ಲಿಯವರೆಗೆ ಏನೂ ವ್ಯತ್ಯಾಸ ಬಂದಿಲ್ಲ. ಅದೇನು ನೀನು ಅವಳ ಬಗ್ಗೆ ಹೇಳೋದು ?. ಏನಾದ್ರೂ ನೀವಿಬ್ರೂ ಜಗಳ ಮಾಡಿಕೊಂಡಿರಾ ಹೇಗೆ ?’ ಎಂದು ಆಕೆಗೆಯೇ ಪ್ರಶ್ನೆ ಹಾಕಿದ.
‘ಏನಣ್ಣ, ನಾನೇನು ಹೊಸಬಳಾ. ನಿನ್ನ ಮದುವೆಗೆ ಬಂದು ಸಂತೋಷ ವ್ಯಕ್ತ ಪಡಿಸಿದವಳು ನಾನೇ ಮೊದಲಿಗಳು ತಾನೇ ?’
‘ಹೌದು, ಅದರಲ್ಲೇನೂ ಅನುಮಾನವಿಲ್ಲ. ಮುಂದಿನ ವಿಷ್ಯ ಹೇಳು ಸೀತಕ್ಕ ನನ್ನ ಕಾಡಬೇಡ ‘ ಎಂದ.
‘ಅಣ್ಣ, ನೀನು ಸಂಸಾರದಲ್ಲಿ ಮುಸುಕು ಹಾಕಿಕೊಂಡೀಯ. ನಿನಗೆ ತಿಳಿಯದ ಹಾಗೆ ನಿನ್ನ ಸಂಸಾರದಲ್ಲಿ ಏನೋ ನಡೆಯುತ್ತಿದೆ, ಅದನ್ನು ನೀನು ಗಮನಿಸುತ್ತಿಲ್ಲ. ಅದು… ವಿಷಯ ‘
‘ಅಯ್ಯೋ ಬಿಡಿಸಿ ಹೇಳಮ್ಮ ‘ ಎಂದು ಜೋರಾಗಿಯೇ ಸಿಟ್ಟಿನಿಂದ ಹೇಳಿದ.
‘ಅದೋ, ನನ್ನ ಮೇಲೆ ಸಿಟ್ಟು ಬೇಡ. ನಾನು ಹೇಳುವದನ್ನು ಸರಿಯಾಗಿ ಕೇಳಿಸಿಕೋ ‘ ಎಂದು ಹೇಳಿಕೆ ಮುಂದುವರೆಸಿದಳು ;
‘ಅವಳಿಗೆ ನೀನು ರಾತ್ರಿ ಮಲಗಿರುವಾಗ ನಿನ್ನ ದೇಹವನ್ನು ತನ್ನ ನಾಲಗೆಯಿಂದ ನೆಕ್ಕುವ ಸ್ವಭಾವ ಇದೆ. ಇದು ನಿನಗೆ ಗೊತ್ತಾ ? ‘ ಎಂದು ಕೇಳಿದಳು.
‘ಇಲ್ಲ…..ಬಿಡು ಸೀತಕ್ಕ ನೀನು ತಪ್ಪು ತಿಳಿರಬಹುದು. ನನ್ನ ಹೆಂಡತಿ ಹಾಗಿಲ್ಲ, ಇಷ್ಟಕ್ಕೆ
ಸುಮ್ಮನಾಗಿಬಿಡು ‘ ಎಂದ.
‘ಬಿಡಪ್ಪ, ಒಂದು ಸಾರಿ ನೀನು ದೀಪಾಳನ್ನು ಪರೀಕ್ಷಿಸಿ ನೋಡು, ನಿನ್ನ ಗಂಟೇನೂ ಹೋಗೋದಿಲ್ಲ.
ನಿಜ ಅರಿಯಬೇಕಾದರೆ, ಪರೀಕ್ಷಿಸಲೇಬೇಕು. ಒಮ್ಮೆ ಹಾಗೆ ಮಾಡಿ ನೋಡು ‘ ಎಂದಳು.
ಅವನಿಗೆ ಭ್ರಮೆ ಹುಟ್ಟಿಸಿದಳು. ಒಂದು ಕ್ಷಣ ಆತ ವಿಚಲಿತನಾದ. ಹೇಗೋ ಸಾವರಿಸಿಕೊಂಡು ಹೇಳಿದ;
‘ಆಯಿತು ಬಿಡು ಸೀತಕ್ಕ. ನೀನು ನನ್ನ ಹಿತೈಷಿ, ನಿನ್ನ ಮಾತನ್ನು ಕೇಳುತ್ತೇನೆ. ಅವಳ ಪರೀಕ್ಷೆ
ಮಾಡಿಯೇ ಬಿಡುತ್ತೇನೆ ‘ ಎಂದು ಹೇಳಿ ಅಲ್ಲಿಂದ ಹೊರಟು ಹೋದ. ಅವಳು ಮುಂದಿನ ಕೆಲಸಕ್ಕಾಗಿ ಅಂದೇ ಯೋಜಿಸಿದಳು. ಅವಳ ಯೋಜನೆಯಂತೆ ದೀಪಾ
ಒಂಟಿಯಾಗಿ ಸಿಕ್ಕಾಗ ಅವಳ ಕಿವಿಯಲ್ಲಿ ಪಿಸು ಮಾತು ಹೀಗೆ ಹೇಳಿದಳು;
‘ದೀಪಮ್ಮ, ನೀನೆಷ್ಟು ಒಳ್ಳೆಯವಳು ಮತ್ತು ಏನೂ ಅರಿಯದವಳು. ಪ್ರಪಂಚದ ಜ್ಞಾನ ಇನ್ನೂ ಕಲಿಯ
ಬೇಕಾಗಿದೆ ‘ ಎಂದಳು.
‘ಅಕ್ಕಾ, ನೀವು ನನಗೆ ಏನು ಹೇಳಬೇಕಾಗಿದೆ ?’
‘ನಿನ್ನ ಗಂಡನ ಬಗ್ಗೆ ಏನೋ ವಿಷ್ಯ ಇದೆ. ಅದನ್ನು ಕೇಳುವ ಧೈರ್ಯ ನೀನು ಮಾಡಬೇಕು ‘ ಎಂದಳು.
‘ನನ್ನ ಗಂಡನ ಬಗ್ಗೆ ನನಗೆ ಸರಿಯಾಗಿ ತಿಳಿದಿದೆ, ನೀವು ಹೇಳುವ ಅವಶ್ಯಕತೆ ಇಲ್ಲ…ಬರ‍್ತೀನಿ’ ಎಂದು ಹೊರಡಲು ಅಣಿಯಾದಳು.
‘ಏಯ್, ನಿಲ್ಲೇ…..ನೀನು ನನಗೆ ಮಗಳ ಸಮಾನ. ನಿನ್ನ ಬಗ್ಗೆ ನಾನು ತಪ್ಪು ಯೋಚನೆ
ಮಾಡ್ತೇನೆಯೇ ?’ಎಂದು ಪ್ರಶ್ನೆ ಹಾಕಿದಳು ಸೀತಕ್ಕ.
‘ಬೇಡ ಸೀತಕ್ಕ ಏನೂ ಹೇಳಬೇಡಿ. ನನ್ನ ಗಂಡ ಅಂದ್ರೆ ನನಗೆ ಪ್ರಾಣ. ಅವರು ಹೇಗೆಯೇ ಇರಲಿ ನನ್ನ
ಪಾಲಿಗೆ ದೇವ್ರು ‘ ಎಂದಳು ದೀಪ.
‘ನಿನ್ನ ಹುಚ್ಚುತನಕ್ಕೆ ಕೊನೆಯೇ ಇಲ್ಲ. ನನ್ನಿಂದ ಸ್ವಲ್ಪವಾದರೂ ವಿಷಯ ತಿಳಿದುಕೋ , ನಿನಗೆಯೇ ಗೊತ್ತಾಗುತ್ತದೆ ‘ ಎಂದ ಸೀತಕ್ಕಗೆ;
‘ಅಕ್ಕಾ, ಅದೇನು ಹೇಳಿ. ನನಗೆ ಗೊತ್ತಿರಲಾರದ್ದು ನಿಮಗೆ ಹೇಗೆ ಗೊತ್ತು ?’
‘ಬೇಡ, ನನಗೆ ಪ್ರಶ್ನೆ ಹಾಕುವ ಬದಲು, ನಿನಗೆ ನೀನೆ ಹಾಕಿಕೋ ‘ ಎಂದಳು.
‘ಆಯಿತು ಅದೇನು ಹೇಳಿ ಬಿಡಿ ಸೀತಕ್ಕ ‘ ಎಂದಳು ಗಟ್ಟಿ ಮನಸ್ಸಿನಿಂದ.
‘ನನಗೆ ನಿನ್ನ ಗಂಡನ ಬಗ್ಗೆ ಒಂದು ವಿಷ್ಯ ತಿಳಿದಿದೆ. ಅದು ನಿಜವೋ ಇಲ್ಲವೋ ನನಗೆ ಗೊತ್ತಿಲ್ಲ. ನೀನೇ ಪರೀಕ್ಷೆ ಮಾಡಿ ಹೇಳಬೇಕು ‘ ಎಂದಳು.
‘ಅದೇನದು ?’
‘ನಿನ್ನ ಗಂಡನ ಮೈಯೆಲ್ಲಾ ಉಪ್ಪುಪ್ಪು ಎಂದು ನನಗೆ ತಿಳಿದಿದೆ ‘
‘ಅದು ಹೇಗೆ ?’
‘ಅದು ಹೇಗೆ ಎನ್ನುವದು ಮುಖ್ಯವಲ್ಲ. ಹಾಗೆ ಇದೆಯೋ ಇಲ್ಲವೋ ಎಂದು ತಿಳಿಯುವದು ಮುಖ್ಯ ‘ ಎಂದಳು.
‘ಈಗ ನಾನೇನು ಮಾಡಬೇಕು ?’
‘ನೋಡು ಗುಟ್ಟಾಗಿ, ನಿನ್ನ ಗಂಡ ಮಲಗಿದ ಮೇಲೆ ಅವನ ಮೈಯನ್ನು ನಿನ್ನ ನಾಲಗೆಯಿಂದ ನೆಕ್ಕಿ ನೋಡು. ಆಗ ತಿಳಿಯುತ್ತೆ. ‘ ಎಂದಳು.
‘ಬೇಡಕ್ಕ, ಹಾಗೆ ಮಾಡುವದು ಅಸಹ್ಯವಲ್ವೇ ?’
‘ಏನೋ ಒಂದು, ನಮಗೆ ನಿಜ ತಿಳಿಯಬೇಕಾದ್ರೆ ಹಾಗೆ ಮಾಡಲೇಬೇಕು. ಇದು ನೀನು ಮಾಡಿದರೆ
ನನಗೆ ಮತ್ತು ನಿನಗೂ ಸಮಾಧಾನ ಅಲ್ವ ?’
‘ಸರಿ, ಸೀತಕ್ಕ ಇಂದು ಪರೀಕ್ಷೆ ಮಾಡುತ್ತೇನೆ ‘ ಎಂದು ಅರೆ ಮನಸ್ಸಿನಿಂದ ಅಲ್ಲಿಂದ ಹೊರಟು ಹೋದಳು.
ಅಂದು ರಾತ್ರಿ ದಂಪತಿಯರಿಬ್ಬರೂ ವಿಷಯ ತಿಳಿದುಕೊಳ್ಳಲು ಪರಸ್ಪರ ಹೊಂಚು ಹಾಕತೊಡಗಿದರು. ಇಬ್ಬರ ಊಟವಾಯಿತು,
ಆಮೇಲೆ ಮಲಗಲು ಅಣಿಯಾದರು. ಜಾಣ ಧನುಷ್ ಆಕಳಿಕೆಯ ಆಕಾರ ತೋರಿಸಿದ. ಇವಳೂ ನಿದ್ದೆ
ಬಂದವಳಂತೆ ನಟಿಸಿದಳು. ಇಬ್ಬರೂ ಶಯ್ಯನ ಗೃಹಕ್ಕೆ ಹೋಗಿ ಮಲಗಿಕೊಂಡರು. ಸ್ವಲ್ಪ
ಹೊತ್ತಿನಲ್ಲಿಯೇ, ಧನುಷನಿಗೆ ಗೊರಕೆ ಪ್ರಾರಂಭವಾಯಿತು. ಇದನ್ನು ಅರಿತ ದೀಪಾ ಮೆಲ್ಲಗೆ ಅವನ ಮುಖದ ಹತ್ತಿರ ಹೋದಳು. ಆತನು ನಿದ್ದೆಯಲ್ಲಿ ಮಗ್ನನಾಗಿದ್ದಾ ನೆಂದು ಭರವಸೆ ಮಾಡಿಕೊಂಡಳು.
ಮೆಲ್ಲಗೆ ತನ್ನ ಕಾರ್ಯ ಪ್ರಾರಂಭಿಸಲು ಅಣಿಯಾದಳು. ಆದರೆ, ಧೈರ್ಯವಾಗಲಿಲ್ಲ. ಎರಡು ಮೂರು
ಬಾರಿ ಹತ್ತಿರಕ್ಕೆ ಹೋಗಿ, ಹಿಂದಕ್ಕೆ ಸರಿಯುತ್ತಿದ್ದಳು. ಆದರೇ, ಧನುಷ್ನ ಗೊರಕೆ ನಿಲ್ಲಲಿಲ್ಲ. ಧನುಷ ಮುಖ
ತಿರುವಿಕೊಂಡು ಮಲಗಿದ್ದ. ಹಾಗಾಗಿ, ಏನೋ, ಮೊಂಡು ಧೈರ್ಯ ಮಾಡಿ, ಅವಳು ಅವನ ಬೆನ್ನ ಹತ್ತಿರ ಹೋಗಿ , ತನ್ನ ನಾಲಗೆಯಿಂದ ಸವರಿಯೇ ಬಿಟ್ಟಳು ! ಅಷ್ಟರಲ್ಲಿ ಧನುಷ್ ಎಚ್ಚರವಾದವನಂತೆ ನಟಿಸಿ;
‘ಏನೇ ದೀಪಾ, ಈ ಕೆಲಸ ಎಷ್ಟು ದಿನದಿಂದ ನಡೆದಿದೆ. ಥೂ ! ನಿನ್ನ ಜನ್ಮಕ್ಕೆ ಬೇಕಿ ಹಾಕ ‘ ಎಂದ.
ಅದಕ್ಕವಳು;
‘ಥೂ ! ಅದೇನು ನಿಮ್ಮ ಮೈ ಎಲ್ಲಾ ಹೊಲಸು ಮತ್ತು ಉಪ್ಪುಪ್ಪು. ಏನು ರೋಗ ಇದೆ ನಿಮಗೆ ?’ ಎಂದಳು.
‘ಏನೇ, ನನಗೇನು ರೋಗ, ನಿನಗೆ ಹುಚ್ಚು ರೋಗ. ನಾಯಿಯ ತರಹ ನನ್ನ ಮೈಯನ್ನು ನೆಕ್ಕುತ್ತೀಯಲ್ಲ ನಾಚಿಕೆ ಯಾಗೋದಿಲ್ವ ? ನೀನು ಮನುಷ್ಯ ಜಾತಿಯವಳೇ ಅಲ್ಲ ‘ ಏಂದು ಆತ ಅಂದಾಗ;
‘ಏನ್ರೀ, ನಾನು ನಾಯಿ ಜ್ಯಾತಿಯವಳಾ, ಹಾಗಾದ್ರೇ ಮೈಯೆಲ್ಲಾ ಉಪ್ಪು ತುಂಬಿರುವ ನಿಮ್ಮ ಜ್ಯಾತಿ ಯಾವುದ್ರೀ ?’
ಪಾಪ ಇಬ್ಬರೂ ಒಬ್ಬರಿಗೊಬ್ಬರನ್ನು ದೂಷಿಸುತ್ತಲೇ ಮಲಗಿಕೊಂಡರು. ಮಧ್ಯರಾತ್ರಿಯಲ್ಲಿ ಇಬ್ಬರಿಗೂ
ಎಚ್ಚರವಾಯಿತು. ನೀರು ಕುಡಿಯುವ ನೆಪದಲ್ಲಿ ಎದ್ದು, ನೀರು ಕುಡಿದು ಇಬ್ಬರೂ ಕುಳಿತು ಕೊಂಡರು. ಆಗ ಧನುಷ್ ಕೇಳಿದ ;
‘ಲೇಯ್ ದೀಪಾ, ನನ್ನ ಮೇಲೆ ನಿನಗೆ ಅನುಮಾನ ಹೇಗೆ ಬಂತೇ ?’
‘ಹೌದು, ನಾನು ನಾಯಿ ಜಾತಿಯವಳು ಎಂದು ನಿಮಗೆ ಯಾಕೆ ಅನ್ನಿಸಿತು ?’
‘ನೀನು ಮಾಡಿದ್ದೇ ಹಾಗೆ ಅಲ್ವ ? ಯಾವ ಮನುಷ್ಯರು ತಾನೇ ಹಾಗೆ ಮಾಡ್ತಾರೆ ಹೇಳು ?’
‘ಸೀತಕ್ಕ ಹೇಳಿದ್ಲು ನಿಮ್ಮ ಮೈ ಉಪ್ಪುಪ್ಪು’ ಹಾಗಂದು ಮೆಲ್ಲಗೇ ನಾಲಗೆ ಕಚ್ಚಿದಳು.
‘ಒಹ್ ! ನಿನಗೂ ಅದೇ ಸೀತಕ್ಕನಾ ತಲೆ ಕೆಡಿಸಿರೋದು ?’ ಎಂದ ಆಶ್ಚರ್ಯದಿಂದ.
‘ಅಂದ್ರೇ, ಅದೇ ಸೀತಕ್ಕ ನಿಮಗೂ ತಲೆ ಕೆಡಿಸಿದಳಾ ?’
‘ಹೌದು ಕಣೇ, ನಾವಿಬ್ಬರೂ ಮೋಸ ಹೋಗಿದ್ದೇವೇಂತ ಅನ್ನಿಸುತ್ತದೆ. ಈಗ ಮಲಗೋಣ, ನಾಳೆ ಈ
ಬಗ್ಗೆ ವಿಚಾರಿಸೋಣ ‘ ಎಂದ. ಇಬ್ಬರೂ ಶಾಂತವಾಗಿ ಮಲಗಿದರು.
ಮಾರನೇ ದಿನ ಮುಂಜಾನೆ ಸೀತಕ್ಕ ಇಬ್ಬರನ್ನು ಮಾತಾಡಿಸಿಕೊಂಡು ಹೋಗಲು ಬಂದಳು.
ಇವರಿಬ್ಬರಿಗೂ ಅದೇ ಬೇಕಾಗಿತ್ತು !
‘ಏನು ಸೀತಕ್ಕ, ಕಾಫಿ ಆಯ್ತಾ ?’ ಎಂದ ಧನುಷ್.
‘ಅಕ್ಕ ಏನು ಆಗಲೇ ಮುಗಿಸಿ ಬಂದಿರ‍್ತಾಳೆ ‘ ಎಂದಳು ದೀಪ.
ಇವರ ಅನನ್ಯೋನ್ಯತೆಯನ್ನು ಕಂಡು ಸೀತಕ್ಕಗೆ ತನ್ನ ಯೋಜನೆ ಕೈಗೂಡಿಲ್ಲ ಅಂತ ಅನಿಸಿತು. ಒಬ್ಬರೇ ಯಾರಾದ್ರೂ ಸಿಕ್ಕರೆ ಕೇಳಬೇಕೆಂದಿದ್ದವಳಿಗೆ ಇಬ್ಬರೂ ಜೊತೆಯಾಗಿಯೇ ಇದ್ದುದು ಆಕೆಗೆ ಹಿನ್ನಡೆಯಾಯಿತು. ಹಾಗಾಗಿ ಅವಳು ಇವರಿಗೆ ಪ್ರಶ್ನೆ ಮಾಡಲೇ ಇಲ್ಲ. ಆದರೇ, ಧನುಷ್ ಸುಮ್ಮನೆ ಬಿಡಲಿಲ್ಲ. ಆತ ಸೀತಕ್ಕಗೆ
ಕೇಳಿಯೇ ಬಿಟ್ಟ;
‘ಸೀತಕ್ಕ, ನೀನು ಹೇಳಿದ್ದು ಸರಿ, ದೀಪ ನಾಯಿ ಜಾತಿಯವಳೇ ‘ ಎಂದ.
‘ಹೌದೌದು ಸೀತಕ್ಕ, ನೀನು ಹೇಳಿದ್ದೇ ಸರಿ, ನನ್ನ ಗಂಡನ ಮೈಯೆಲ್ಲಾ ಉಪ್ಪುಪ್ಪು.’ ಎಂದಳು ದೀಪ.
ಇಬ್ಬರೂ ಒಂದೇ ಧ್ವನಿಯಲ್ಲಿ ಹೇಳಿದಂತೆ ಆಕೆಗೆ ಮುಜುಗರವಾಯಿತು. ಅವಳ ಕೆಟ್ಟ ಯೋಜನೆಗೆ ಅವರು ಮೊದಲು
ವಿಚಲಿತರಾದರೂ ಈಗ ಬಲಿಯಾಗಲಿಲ್ಲ. ಆಗ ಸೀತಕ್ಕನ ಕಣ್ಣಲ್ಲಿ ನೀರು ತುಂಬಿತು ಮತ್ತು ಹೀಗೆ ಹೇಳಿದಳು.
‘ಕ್ಷಮಿಸಿ ಬಿಡಿ ನೀವಿಬ್ಬರೂ ಬಹಳೇ ಅನ್ಯೋನ್ಯವಾಗಿ ಇದ್ದುದು ನನಗೆ ಸಹಿಸಲಾಗಲಿಲ್ಲ. ಏನೋ ಸಂಸಾರದಲ್ಲಿ ಒಂದು ಕಿಚ್ಚು ಹಚ್ಚಬೇಕೆಂದು ನಿಮ್ಮಲ್ಲಿ ಪ್ರಯತ್ನಿಸಿದೆ’ ಎಂದಳು
ಬಿಕ್ಕುತ್ತಾ.
‘ಅಕ್ಕಾ ಅಳಬೇಡಿ, ನಿಮ್ಮ ಒಂದು ತಪ್ಪು ನಮ್ಮನ್ನು ಇನ್ನೂ ಹತ್ತಿರಕ್ಕೆ ತಂದಿದೆ. ಏನೂ ಬೇಜಾರಿಲ್ಲ ‘
ಎಂದು ಹೇಳಿ ಆಕೆಗೆ ಬಿಸಿ ಬಿಸಿ ಉಪ್ಪಿಟ್ಟು ಹಾಕಿ, ಕಾಫಿ ಕುಡಿಸಿ ಕಳಿಸಿಕೊಟ್ಟರು. ಹೋಗುವಾಗ ಸೀತಕ್ಕ ಅವರಿಗೆ ಹೀಗೆ ಹೇಳಿದಳು;
‘ನೀವು ಬರೀ ದಂಪತಿಗಳಲ್ಲ,’ ಆದರ್ಷ ದಂಪತಿಗಳು ‘ ಎಂದಳು.
ಹಾಗೆಯೇ, ದೀಪಾ ಮತ್ತು ಧನುಷ್ ಮುಂದೆ ಸುಖವಾಗಿಯೇ ಇದ್ದರು.
,
ಪುಟ್ಟ ಕಥೆ ನಿಜಕ್ಕೂ ಆದರ್ಶಮಯವಾಗಿದೆ. ಅಭಿನಂದನೆಗಳು ಸಾರ್
Thanq sir.,
ಧನ್ಯವಾದಗಳು ಸರ್
ಧನ್ಯವಾದಗಳು ರಾಘವೇಂದ್ರ ಸರ್.